Fake News - Kannada
 

ಬಿಹಾರದ ರಸ್ತೆಯ ಹಳೆಯ ಫೋಟೋವೊಂದನ್ನು ರಾಹುಲ್ ಗಾಂಧಿ ಕ್ಷೇತ್ರ ವಯನಾಡಿನ ರಸ್ತೆಗಳ ಕರುಣಾಜನಕ ಸ್ಥಿತಿ ಎಂದು ಹಂಚಿಕೊಳ್ಳಲಾಗಿದೆ

0

ರಾಹುಲ್ ಗಾಂಧಿಯ ಲೋಕಸಭಾ ಕ್ಷೇತ್ರದ ವಯನಾಡಿನ ಶೋಚನೀಯ ರಸ್ತೆ ಮತ್ತು ಸಾರಿಗೆ ಸ್ಥಿತಿ ಎಂದು ಹೇಳಿಕೊಂಡು ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಹಾಳಾಗಿರುವ ರಸ್ತೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ರಾಹುಲ್ ಗಾಂಧಿ ಕ್ಷೇತ್ರ ವಯನಾಡಿನಲ್ಲಿ ಗುಂಡಿಗಳಿಂದ ತುಂಬಿದ ರಸ್ತೆಯ ಫೋಟೋ.

ನಿಜಾಂಶ: ಬಿಹಾರದ ಭಗಲ್ಪುರ್ ಜಿಲ್ಲೆಯಲ್ಲಿ ಭಗಲ್ಪುರ್- ಪಿರ್‌ ಪೈಂತಿ – ಮಿರ್ಜಾಚೌಕಿ ರಾಷ್ಟ್ರೀಯ ಹೆದ್ದಾರಿ- 80ರ (ಎನ್ ಎಚ್ -80) ಸ್ಥಿತಿಯನ್ನು ಪೋಸ್ಟ್ ನಲ್ಲಿರುವ ಚಿತ್ರ ತೋರಿಸುತ್ತದೆ. ಅದು ರಾಹುಲ್ ಗಾಂಧಿ ಕ್ಷೇತ್ರವಾದ ವಯನಾಡಿನ ರಸ್ತೆಯಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಾವು ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಫೋಟೋದ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ ಮತ್ತು ಟ್ವಿಟರ್‌ನಲ್ಲಿ ಯಾರೋ ಒಬ್ಬ ಬಳಕೆದಾರರು ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ ಇದೇ ರೀತಿಯ ಫೋಟೋವನ್ನು ನಾವು ಕಂಡುಕೊಂಡಿದ್ದೇವೆ. ಆ ಟ್ವೀಟ್‌ನಲ್ಲಿ ಇದನ್ನು ಬಿಹಾರದ ಭಾಗಲ್‌ಪುರ-ಪಿರ್‌ ಪೈಂತಿ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ಎಂದು ವಿವರಿಸಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ ನಾವು ಕೀವರ್ಡ್ ಗಳನ್ನು ಬಳಸಿಕೊಂಡು ಹೆಚ್ಚುವರಿ ಮಾಹಿತಿಗಾಗಿ ಹುಡುಕಿದ್ದೇವೆ. ‘ಭಗಲ್ಪುರ್ ಎನ್ ಎಚ್-80  ಕೆಟ್ಟ ಪರಿಸ್ಥಿತಿಯಲ್ಲಿದೆ’ ಎಂಬ ಶೀರ್ಷಿಕೆಯೊಂದಿಗೆ 2017 ರಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ಸುದ್ದಿ ಜಾಲತಾಣ ಪ್ರಕಟಿಸಿದ ಲೇಖನದಲ್ಲಿ ಅದೇ ಫೋಟೋವನ್ನು ನಾವು ಕಂಡುಕೊಂಡಿದ್ದೇವೆ. ಆ ಲೇಖನದಲ್ಲಿ, ಫೋಟೋ ಬಿಹಾರದ ಭಗಲ್ಪುರದಲ್ಲಿ ಭಗಲ್ಪುರ್- ಪಿರ್‌ ಪೈಂತಿ – ಮಿರ್ಜಾಚೌಕಿ ರಾಷ್ಟ್ರೀಯ ಹೆದ್ದಾರಿ -80 ರ ಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಲಾಗಿದೆ.

2017 ರಲ್ಲಿ ಅದೇ ಚಿತ್ರ ವೈರಲ್ ಆದಾಗ, ಆಗಿನ ಬಿಹಾರ ರಸ್ತೆ ಮತ್ತು ಸಾರಿಗೆ ಸಚಿವ ತೇಜಸ್ವಿ ಯಾದವ್ ಈ ಚಿತ್ರವು ಅಲ್ಲಿನ ವಾಸ್ತವತೆಯನ್ನು ತೋರಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ‘ಎಬಿಪಿ ಲೈವ್’ ನ್ಯೂಸ್ ಚಾನೆಲ್ ನಡೆಸಿದ ತನಿಖೆಯ ಪ್ರಕಾರ ಈ ಫೋಟೋ ಬಿಹಾರದ ಭಗಲ್ಪುರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿದೆ ಆದರೆ ಅದು ಈ ಚಿತ್ರ ವೈರಲ್ ಆಗುವ ಎರಡು ತಿಂಗಳ ಮೊದಲಿನ ಸ್ಥಿತಿಯನ್ನು ತೋರಿಸುತ್ತದೆ ಮತ್ತು ಅವರ ಭೇಟಿಯ ಹೊತ್ತಿಗೆ ಹೊಸ ರಸ್ತೆಯನ್ನು ಹಾಕಲಾಗಿದೆ ಎಂದು ಬೆಳಕಿಗೆ ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಹಾರದ ಭಗಲ್ಪುರ್ ಜಿಲ್ಲೆಯ ರಸ್ತೆಯ ಹಳೆಯ ಫೋಟೋವನ್ನು ರಾಹುಲ್ ಗಾಂಧಿ ಕ್ಷೇತ್ರದ ವಯನಾಡಿನ ರಸ್ತೆಗಳ ಸ್ಥಿತಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll