ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸ್ನೇಹಿತರೊಂದಿಗೆ ಕುಳಿತಿರುವ ಹಳೆಯ ಫೋಟೊ ಇರುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಭಗವಂತ್ ಮಾನ್ ಮತ್ತು ಅವರ ಸ್ನೇಹಿತರನ್ನು ಬೈಕ್ ಕಳ್ಳತನ ಮಾಡಿದ ಕಾರಣಕ್ಕೆ ಬಂಧಿಸಿದಲಾಗಿತ್ತು ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಈ ಹಿಂದೆ ಬೈಕ್ ಕಳ್ಳತನ ಮಾಡಿದ್ದಕ್ಕಾಗಿ ಭಗವಂತ್ ಮಾನ್ ಮತ್ತು ಆತನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದರು ಎಂದು ಹೇಳಲಾಗಿರುವ ಫೋಟೋ.
ನಿಜಾಂಶ: ಭಗವಂತ್ ಮಾನ್ ಅವರ ಸ್ನೇಹಿತರೊಂದಿಗೆ ಇರುವ ಈ ಚಿತ್ರವನ್ನು ಹೋಳಿ ಸಂದರ್ಭದಲ್ಲಿ ಸೆರೆಹಿಡಿಯಲಾಗಿದೆ. ವೈರಲ್ ಚಿತ್ರವು ಹೋಳಿ ಹಬ್ಬಕ್ಕೆ ಸಂಬಂಧಿಸಿದೆ ಎಂಬ ವಿವರಣೆಯೊಂದಿಗೆ ಪಂಜಾಬಿ ಗಾಯಕ ಮತ್ತು ನಟ ಕರಮ್‌ಜಿತ್ ಅನ್ಮೋಲ್ ಅದೇ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಪಂಜಾಬಿ ಗಾಯಕ ಮತ್ತು ನಟ ಕರಮ್‌ಜಿತ್ ಅನ್ಮೋಲ್ ಅವರ ಫೇಸ್‌ಬುಕ್ ನಲ್ಲಿ ನಲ್ಲಿ ಸಹ ಇದೇ ಫೋಟೊ ಒಳಗೊಂಡ ಪೋಸ್ಟ್ ಲಭ್ಯವಾಗಿದೆ. ಫೋಟೋದೊಂದಿಗೆ ಇರುವ ವಿವರಣೆಯಲ್ಲಿ ‘ಭಗವಂತ್ ಮಾನ್ ಮತ್ತು @ಮಂಜಿತ್ ಸಿಧು ಅವರೊಂದಿಗೆ ‘ಹೋಳಿ ನೆನಪುಗಳು’ ಎಂದು ಬರೆಯಲಾಗಿದೆ. ವರದಿಗಳ ಪ್ರಕಾರ, ಕರಮ್ಜಿತ್ ಅನ್ಮೋಲ್ ಮತ್ತು ಭಗವಂತ್ ಮಾನ್ ಇಬ್ಬರು ಬಾಲ್ಯ ಸ್ನೇಹಿತರು ಎಂದು ಹೇಳಲಾಗಿದೆ.
ಇದಲ್ಲದೆ, ಪೋಸ್ಟ್‌ನಲ್ಲಿ ಕರಮ್‌ಜಿತ್ ಅನ್ಮೋಲ್ ಉಲ್ಲೇಖಿಸಿದ್ದ ಮಂಜಿತ್ ಸಿಧು ಅವರನ್ನು ನ್ಯೂಸ್‌ಚೆಕರ್ ಎಂಬ ಫ್ಯಾಕ್ಟ್‍ಚೆಕ್ ತಂಡವು ಸಂಪರ್ಕಿಸಿದ್ದು, ಅದು ಹೋಳಿ ಹಬ್ಬದ ಸಂದರ್ಭದಲ್ಲಿ ತೆಗೆದಿರುವ ಫೋಟೊವಾಗಿದ್ದು, ಭಗವಂತ್ ಮಾನ್ ಪಕ್ಕದಲ್ಲಿ ಕಪ್ಪು ಟಿ-ಶರ್ಟ್‌ನಲ್ಲಿ ಕುಳಿತಿರುವ ವ್ಯಕ್ತಿಯು ನಾನೆ ಎಂದು ಸಿಧು ಖಚಿತಪಡಿಸಿದ್ದಾರೆ.
ನ್ಯೂಸ್ ಚೆಕರ್ ವರದಿ ಮತ್ತು, ಸಿಧು ನೀಡಿರುವ ಮಾಹಿತಿಯ ಪ್ರಕಾರ, ವೈರಲ್ ಆಗುತ್ತಿರುವ ಪೋಟೋಗಳನ್ನು 1994 ಅಥವಾ 1995 ರ ಸಂದರ್ಭದಲ್ಲಿ ಪಟಿಯಾಲಾದಲ್ಲಿ ಸೆರೆ ಹಿಡಿಯಲಾಗಿದೆ. ಆ ವೇಳೆ ಕೆನಡಾದ ಗಾಯಕ ಹರ್ಭಜನ್ ಮಾನ್ ಭಾರತಕ್ಕೆ ಬಂದಿದ್ದರು. ಹೋಳಿ ಹಬ್ಬದಂದು ಅವರ ಮನೆಯ ಛಾವಣಿಯ ಮೇಲೆ ಪೋಟೋ ತೆಗೆದಿದ್ದು, ಈ ಸಂದರ್ಭದಲ್ಲಿ, ಭಗವಂತ್ ಮಾನ್, ಕರಮ್‌ಜಿತ್ ಅನ್ಮೋಲ್ ಮತ್ತು ಹರ್ಭಜನ್ ಮಾನ್ ಸಹ ಉಪಸ್ಥಿತರಿದ್ದರು. ಭಗವಂತ್ ಮಾನ್ ನನ್ನ ಕಾಲೇಜು ಕಾಲದ ಗೆಳೆಯ ಎಂದು ಸಿಧು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಭಗವಂತ್ ಮಾನ್ ಮತ್ತು ಸ್ನೇಹಿತರು ಯುವಕರಾಗಿದ್ದ ಸಂದರ್ಭದಲ್ಲಿ ಹೋಳಿಯನ್ನು ಆಚರಿಸುವಾಗ ಸೆರೆಹಿಡಿಲಾದ ಫೋಟೋವನ್ನು ಭಗವಂತ್ ಮಾನ್ ತನ್ನ ಸ್ನೇಹಿತರೊಂದಿಗೆ ಬೈಕ್ ಕದಿಯುವಾಗ ಸಿಕ್ಕಿಬಿದ್ದಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.