Fake News - Kannada
 

ಬ್ರೆಜಿಲ್‌ನ ಮೋಟಾರ್‌ಬೈಕ್ ಪರೇಡ್ ವೀಡಿಯೊವನ್ನು ಕ್ಯಾನ್ಸರ್ ಪೀಡಿತ ಜರ್ಮನ್ ಹುಡುಗನಿಗಾಗಿ 20,000 ಬೈಕರ್‌ಗಳು ಸವಾರಿ ಮಾಡುವ ದೃಶ್ಯಗಳೆಂದು ಹಂಚಿಕೊಳ್ಳಲಾಗಿದೆ

0

ಜರ್ಮನಿಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ 6 ವರ್ಷದ ಬಾಲಕನನ್ನು ಹುರಿದುಂಬಿಸಲು ಮೋಟಾರ್‌ಬೈಕ್ ಮೆರವಣಿಗೆಯಲ್ಲಿ 20,000 ಬೈಕರ್‌ಗಳು ಭಾಗವಹಿಸಿದ್ದಾರೆ ಎಂಬ ಪೋಸ್ಟ್ ಹರಿದಾಡುತ್ತಿದೆ. “ಜರ್ಮನಿಯ ಆರು ವರ್ಷದ ಹುಡುಗನಿಗೆ ಬೈಕು ಅಂದರೆ ಪಂಚಪ್ರಾಣ. ಕ್ರೂರ ವಿಧಿಯಾಟದಿಂದ ಈ ಹಸುಳೆಗೆ ಕ್ಯಾನ್ಸರ್ ತಗುಲಿತು. ತಾಯಿ ಆನ್ಲೈನಲ್ಲಿ “ಮನೆ ಮುಂದೆ ಬೈಕು ಓಡಿಸಿ ಅವನನ್ನು ಖುಷಿಪಡಿಸುತ್ತೀರಾ?” ಅಂತ ಕೋರಿದರು. ಅವರು ಅಂದ್ಕೊಂಡಿದ್ದು 20-30 ಜನ ಬರಬಹುದು ಅಂತ. ಆದರೆ ಬರೋಬ್ಬರಿ 20,000 ಬೈಕು ಸವಾರರು ಗಾಡಿ ಓಡಿಸಿ ಆ ಮಗುವನ್ನು ಖುಷಿ ಪಡಿಸಿದರು… ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೆ ಪರಿಶೀಲಿಸೋಣ.

ಪ್ರತಿಪಾದನೆ: ಜರ್ಮನಿಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ 6 ವರ್ಷದ ಬಾಲಕನಿಗೆ 20,000 ಬೈಕ್‌ ಸವಾರರು ಮೋಟಾರ್‌ ಬೈಕ್‌ ಪರೇಡ್‌ ನಡೆಸುತ್ತಿರುವ ವಿಡಿಯೋ.

ಸತ್ಯಾಂಶ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಎರಡು ವಿಭಿನ್ನ ಮೋಟಾರ್‌ಬೈಕ್ ಮೆರವಣಿಗೆಗಳ ಜೋಡಣೆಯಮತೆ ಕಾಣುತ್ತದೆ. ವೀಡಿಯೊದ ಮೊದಲ ಭಾಗವು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ಅವರ ಬೆಂಬಲಿಗರು ಬ್ರೆಜಿಲ್‌ನ ಸ್ಯಾನ್ ಪಾಲೊದಲ್ಲಿ ಆಯೋಜಿಸಿದ ಹಳೆಯ ಮೋಟಾರ್‌ಬೈಕ್ ಮೆರವಣಿಗೆಯನ್ನು ತೋರಿಸುತ್ತದೆ. ದೇಶದಲ್ಲಿ COVID-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಲಾಕ್‌ಡೌನ್‌ಗಳನ್ನು ಹೇರಿದ್ದಕ್ಕಾಗಿ ಬ್ರೆಜಿಲ್‌ನ ರಾಜ್ಯ ಗವರ್ನರ್‌ಗಳು ಮತ್ತು ಮೇಯರ್‌ಗಳ ವಿರುದ್ಧ ಜೈರ್ ಬೋಲ್ಸನಾರೊ ಈ ಪ್ರತಿಭಟನೆಯನ್ನು ನಡೆಸಿದ್ದರು. ಜುಲೈ 2021 ರಲ್ಲಿ, ಸುಮಾರು 15,000 ಬೈಕರ್‌ಗಳು ಜರ್ಮನಿಯ ಪೂರ್ವ ಫ್ರಿಸಿಯನ್ ಪಟ್ಟಣದ ಮೂಲಕ ಕ್ಯಾನ್ಸರ್ ರೋಗ ಭಾದಿತ 6 ವರ್ಷದ ಹುಡುಗನನ್ನು ಖುಷಿಪಡಿಸಲು ಪರೇಡ್ ಮಾಡಿದ್ದಾರೆ. ವೀಡಿಯೊದ ಕೊನೆಯ ಭಾಗವು ತನಗಾಗಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಮೋಟಾರ್‌ ಬೈಕ್ ನೋಡಿ ಆ ಹುಡುಗ ಸಂತಸ ವ್ಯಕ್ತಪಡಿಸುತ್ತಿರುವುದನ್ನು ನೋಡಬಹುದು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡದಾಗ14 ಜೂನ್ 2021 ರಂದು YouTube ಚಾನೆಲ್ ಪ್ರಕಟಿಸಿದ ವೀಡಿಯೊದಲ್ಲಿ ಮೋಟಾರ್‌ಸೈಕಲ್ ಮೆರವಣಿಗೆಯ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಈ YouTube ಚಾನೆಲ್ ಇದನ್ನು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ನೇತೃತ್ವದಲ್ಲಿ ಬ್ರೆಜಿಲ್‌ನ ಸ್ಯಾನ್ ಪಾಲೊದಲ್ಲಿ ನಡೆದ ಮೋಟಾರ್‌ಬೈಕ್ ಮೆರವಣಿಗೆಯ ದೃಶ್ಯಗಳು ಎಂದು ವರದಿ ಮಾಡಿದೆ.

ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮಾಹಿತಿಗಾಗಿ ಸರ್ಚ್ ಮಾಡಿದಾಗ, ಜೂನ್ 2021 ರಲ್ಲಿ ವಿವಿಧ ಸುದ್ದಿ ವೆಬ್‌ಸೈಟ್‌ಗಳು ಪ್ರಕಟಿಸಿದ ವೀಡಿಯೊಗಳಲ್ಲಿ ಇದೇ ರೀತಿಯ ಮೋಟಾರ್‌ ಬೈಕ್ ಪರೇಡ್ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ವರದಿಗಳ ಪ್ರಕಾರ, ದೇಶದಲ್ಲಿ COVID-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಲಾಕ್‌ಡೌನ್‌ಗಳನ್ನು ಹೇರಿದ್ದಕ್ಕಾಗಿ ಬ್ರೆಜಿಲ್‌ನ ರಾಜ್ಯ ಗವರ್ನರ್‌ಗಳು ಮತ್ತು ಮೇಯರ್‌ಗಳ ವಿರುದ್ಧ ಪ್ರತಿಭಟಿಸಲು ಜೈರ್ ಬೋಲ್ಸನಾರೊ ಮತ್ತು ಅವರ ಬೆಂಬಲಿಗರು ಜೂನ್ 2021 ರಲ್ಲಿ ಈ ಮೆರವಣಿಗೆಯನ್ನು ಆಯೋಜಿಸಿದರು.

ವೀಡಿಯೊದ ಎರಡನೇ ಭಾಗದ ವಿವರಗಳನ್ನು ಹುಡುಕಿದಾಗ, ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊ ಯೂಟ್ಯೂಬ್‌ನಲ್ಲಿ ವಿವರಣೆಯೊಂದಿಗೆ ಲಭ್ಯವಾಗಿದೆ, ಹೆಚ್ಚಿನ ವಿವರಗಳಿಗಾಗಿ ಹುಡುಕಿದಾಗ, ಜುಲೈ 2021 ರಲ್ಲಿ, ಸುಮಾರು 15,000 ಬೈಕರ್‌ಗಳು ಜರ್ಮನಿಯ ಪೂರ್ವ ಫ್ರಿಸಿಯನ್ ಪಟ್ಟಣದ ಮೂಲಕ ಕ್ಯಾನ್ಸರ್ ನಿಂದ ಬಳಲುತ್ತಿದ್ದ 6 ವರ್ಷದ ಹುಡುಗನನ್ನು ಹುರಿದುಂಬಿಸಲು ಮೆರವಣಿಗೆ ನಡೆಸಿದರು ಎಂದು ತಿಳಿದುಬಂದಿದೆ. ಹಲವಾರು ಸುದ್ದಿ ವೆಬ್‌ಸೈಟ್‌ಗಳು ಈ ಮಾಹಿತಿಯನ್ನು ವರದಿ ಮಾಡುವ ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವೀಡಿಯೊದ ಎರಡನೇ ಭಾಗವು ಕ್ಯಾನ್ಸರ್‌ನಿಂದ ಬಳಲುತ್ತಿರುವ ಹುಡುಗ ತನಗಾಗಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಮೋಟಾರ್‌ಸೈಕ್ಲಿಸ್ಟ್‌ಗಳನ್ನು ಹುರಿದುಂಬಿಸುವುದನ್ನು ತೋರಿಸುತ್ತದೆ. ಈ ಎಲ್ಲಾ ಆಧಾರಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊವು ಎರಡು ವಿಭಿನ್ನ ಮೋಟಾರ್‌ಬೈಕ್ ಮೆರವಣಿಗೆಗಳಿಂದ ವೀಡಿಯೊ ಕ್ಲಿಪ್‌ಗಳನ್ನು ತೋರಿಸುತ್ತದೆ ಎಂದು ತೀರ್ಮಾನಿಸಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಬ್ರೆಜಿಲ್‌ನಲ್ಲಿ ಮೋಟಾರ್‌ಬೈಕ್ ಮೆರವಣಿಗೆಯ ಹಳೆಯ ವೀಡಿಯೊವನ್ನು ಜರ್ಮನಿಯಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹುಡುಗನಿಗೆ 20,000 ಬೈಕರ್‌ಗಳು ಸವಾರಿ ಮಾಡುವ ದೃಶ್ಯಗಳಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll