ಅಮೆರಿಕದ ಬಸ್ ಮೇಲೆ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರ ಪತ್ನಿಯ ಚಿತ್ರ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದು ನಿಜವೇ ಪರಿಶೀಲಿಸೋಣ ಬನ್ನಿ.
ಪ್ರತಿಪಾದನೆ: ಅಮೆರಿಕದ ಬಸ್ ಮೇಲೆ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರ ಪತ್ನಿಯ ಚಿತ್ರವನ್ನು ಮೂಡಿಸಲಾಗಿದೆ.
ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಚಿತ್ರ ಫೋಟೋಶಾಪ್ ನಿಂದ ಎಡಿಟ್ ಮಾಡಿರುವುದಾಗಿದೆ. ಮೂಲ ಚಿತ್ರವಾದ ಇಂಗ್ಲೆಂಡ್‌ನ ಬಾತ್ ಸಿಟಿಯ ‘Hop on Hop off’ (ಹತ್ತು ಇಳಿ) ಎಂಬ ಪ್ರವಾಸಿ ಬಸ್‌ನ ಮೇಲೆ ಅಂಬೇಡ್ಕರ್ ಮತ್ತು ಅವರ ಪತ್ನಿಯ ಚಿತ್ರವನ್ನು ಮುದ್ರಿಸಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿನ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ‘ವಿಕಿಮೀಡಿಯ ಕಾಮನ್ಸ್’ ಎಂಬ ವೆಬ್‌ಸೈಟ್‌ನಲ್ಲಿ ಬಸ್‌ನ ಮೂಲ ಚಿತ್ರ ಸಿಕ್ಕಿದೆ. ಇಂಗ್ಲೆಂಡ್‌ನ ಬಾತ್ ಸಿಟಿಯ ಪ್ರವಾಸಿಗರಿಗಾಗಿ ಇರುವ ಬಸ್ ಎಂದು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ‘Hop on Hop off’ ಎಂಬ ಪ್ರವಾಸಿ ಬಸ್‌ನ ಮೂಲ ಚಿತ್ರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರ ಪತ್ನಿಯ ಫೋಟೊವನ್ನು ಮುದ್ರಿಸಿಲ್ಲ. ಅದೇ ರೀತಿಯ ಬಸ್‌ನ ಮತ್ತೊಂದು ಚಿತ್ರ ಬಾತ್ ಸಿಟಿಯ ‘Alamy’ ಎಂಬ ವೆಬ್‌ಸೈಟ್‌ನಲ್ಲಿಯೂ ಕಂಡುಬಂದಿದೆ. ಅಲ್ಲಿಯೂ ಕೂಡ ಅಂಬೇಡ್ಕರ್ ಮತ್ತು ಅವರ ಪತ್ನಿಯ ಚಿತ್ರವಿಲ್ಲ.
ಬಸ್ ಮೇಲೆ ಮುದ್ರಿಸಲಾದ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರ ಪತ್ನಿಯ ಚಿತ್ರದ ಕುರಿತು ಹುಡುಕಿದಾಗ, ಫಾರ್ವಾಡ್ ಪ್ರೆಸ್ ಎಂಬ ವೆಬ್‌ಸೈಟ್‌ನಲ್ಲಿ ಆ ಚಿತ್ರ ಪ್ರಕಟವಾಗಿದೆ.
ಒಟ್ಟಿನಲ್ಲಿ ಇಂಗ್ಲೆಂಡ್‌ನ ಪ್ರವಾಸಿ ಬಸ್‌ನ ಮೇಲೆ ಫೋಟೊಶಾಪ್ ನಿಂದ ಎಡಿಟ್ ಮಾಡಲಾದ ಚಿತ್ರವನ್ನು ಅಮೆರಿಕದ ಬಸ್ ಮೇಲೆ ಅಂಬೇಡ್ಕರ್ ಮತ್ತು ಅವರ ಪತ್ನಿಯ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.