Fake News - Kannada
 

ವಿವಿಧ ದೇಶಗಳಲ್ಲಿನ ಪೆಟ್ರೋಲ್ ಬೆಲೆಯ ತಪ್ಪಾದ ದರಪಟ್ಟಿಯನ್ನು ಭಾರತದ ಬೆಲೆಗೆ ಹೋಲಿಸಲಾಗುತ್ತಿದೆ

0

ಭಾರತಕ್ಕೆ ಹೋಲಿಸಿದರೆ ಇತರ ದೇಶಗಳಲ್ಲಿ ಪೆಟ್ರೋಲ್ ಬೆಲೆ ತೀರಾ ಕಡಿಮೆ ಎಂದು ಹೇಳುವ ವೈರಲ್ ಪೋಸ್ಟ್ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಲೇಖನದ ಮೂಲಕ  ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ ಬನ್ನಿ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಭಾರತಕ್ಕೆ ಹೋಲಿಸಿದರೆ ಇತರ ದೇಶಗಳಲ್ಲಿ ಪೆಟ್ರೋಲ್ ಬೆಲೆ ತುಂಬಾ ಕಡಿಮೆ.

ನಿಜಾಂಶ: ಪಟ್ಟಿಯಲ್ಲಿ ಇರುವ ಬೆಲೆ ಮತ್ತು ಆಯಾ ದೇಶದಲ್ಲಿನ ನಿಜವಾದ ಬೆಲೆಯ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಭಾರತಕ್ಕೆ ಹೋಲಿಸಿದರೆ ಕೆಲವು ದೇಶಗಳಲ್ಲಿ ಪ್ರತಿ ಲೀಟರ್ ಗೆ ದರ ಹೆಚ್ಚಿದೆ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್ ನಲ್ಲಿ ಹೇಳಲಾದ ಪ್ರತಿಯೊಂದು ದೇಶಗಳಲ್ಲಿ ನಾವು ಪೆಟ್ರೋಲ್ ಬೆಲೆಯನ್ನು ಪರಿಶೀಲಿಸಲು ಪ್ರಯತ್ನಿಸಿದಾಗ, ಪಾಕಿಸ್ತಾನದಲ್ಲಿ ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರ, ಪಾಕಿಸ್ತಾನದ 26 ಜೂನ್ 2020 ರ ದಿನಾಂಕದ ಸುತ್ತೋಲೆಯಲ್ಲಿ ಪೆಟ್ರೋಲ್ ಬೆಲೆಯನ್ನು ಪರಿಷ್ಕರಿಸುವ ಬಗ್ಗೆ ಮಾಹಿತಿಯನ್ನು ನಾವು ಕಂಡುಕೊಂಡಿದ್ದೇವೆ. ಅದು, ಪ್ರತಿ ಲೀಟರ್‍ ಗೆ ಪಿಕೆಆರ್ 100.11. ಇದು ಭಾರತೀಯ ರುಪಾಯಿಯಲ್ಲಿ ₹ 45.35 ಆಗಿದೆ. ಶೆಲ್ ಆಯಿಲ್ ಮತ್ತು ಗ್ಯಾಸ್ ಕಂಪನಿ ಪಾಕಿಸ್ತಾನವು ಮೇಲೆ ತಿಳಿಸಿದ ಅದೇ ಮೊತ್ತಕ್ಕೆ ಪೆಟ್ರೋಲ್ ಅನ್ನು ಮಾರಾಟ ಮಾಡುತ್ತಿದೆ, ಅದನ್ನು ಕಂಪನಿಯ ವೆಬ್‍ಸೈಟ್‍ನಲ್ಲಿ ನೋಡಬಹುದು. ಆದರೆ ಬಾಂಗ್ಲಾದೇಶ ಪೆಟ್ರೋಲಿಯಂ ನಿಗಮದ ಪ್ರಕಾರ ಅಲ್ಲಿ ಪ್ರತಿ ಲೀಟರ್‍ ಗೆ ತಕಾ 86 ದರವಿದ್ದರೆ, ಭಾರತದ ರುಪಾಯಿಯಲ್ಲಿ ಅದು ₹76.26 ಆಗಿದೆ. ಶ್ರೀಲಂಕಾದಲ್ಲಿ, ಪೆಟ್ರೋಲಿಯಂ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪ್ರಕಾರ, ಪ್ರತಿ ಲೀಟರ್‍ ಗೆ ಎಲ್‍ಕೆಆರ್ 161 ಬೆಲೆ ಇದ್ದರೆ, ಅದು ಭಾರತದ ರುಪಾಯಿಯಲ್ಲಿ ₹ 65.20 ಆಗಿದೆ. ಆದರೆ, ಪೋಸ್ಟ್ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಪೆಟ್ರೋಲ್ ಬೆಲೆ ಕ್ರಮವಾಗಿ ₹ 26, ₹ 22 ಮತ್ತು ₹ 34 ಆಗಿದೆ.

ಗ್ಲೋಬಲ್ ಪೆಟ್ರೋಲ್ ಪ್ರೈಸಸ್ ಜಾಲತಾಣದ ಪ್ರಕಾರ, 2020 ರ ಜೂನ್ 06 ರ ಹೊತ್ತಿಗೆ, ಇಟಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‍ನ ಬೆಲೆ ₹ 120.50, ಕ್ಯೂಬಾದಲ್ಲಿ ಇದು ₹ 89.64 ಮತ್ತು ನೇಪಾಳದಲ್ಲಿ ₹ 60.23 ಆಗಿದೆ. ಈ ಬೆಲೆಗಳನ್ನು ನಾವು ಪೋಸ್ಟ್ ನಲ್ಲಿ ಕೊಟ್ಟಿರುವ ಸಂಖ್ಯೆಗಳೊಂದಿಗೆ ಹೋಲಿಸಿದಾಗ, ಬಹಳ ವ್ಯತ್ಯಾಸವಿದೆ. ಪೋಸ್ಟ್ ನ ಪಟ್ಟಿಯ ಪ್ರಕಾರ, ಇಟಲಿ, ಕ್ಯೂಬಾ ಮತ್ತು ನೇಪಾಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಕ್ರಮವಾಗಿ ₹ 14, ₹ 19 ಮತ್ತು ₹ 34 ಆಗಿದೆ. ಹಾಗೆಯೇ, ಅಫ್ಘಾನಿಸ್ತಾನದಲ್ಲಿ ಬೆಲೆ ₹ 33.01 ಆಗಿದ್ದರೆ, ಪೋಸ್ಟ್ ನಲ್ಲಿ ಅದು ₹ 36 ಎಂದಿದೆ. ಬರ್ಮಾದಲ್ಲಿ, ಬೆಲೆ ₹ 38.24 ಆಗಿದ್ದು, ಅದು ಪೋಸ್ಟ್ ನಲ್ಲಿ ₹ 30 ಇದೆ. ಜೂನ್ 06 2020 ರಂದು ಭಾರತದಲ್ಲಿ ಪೆಟ್ರೋಲ್‍ನ ನಿಜವಾದ ಬೆಲೆಯನ್ನು ನಾವು ಪರಿಶೀಲಿಸಿದಾಗ ಅದು ಪಟ್ಟಿಯಲ್ಲಿ ಇರುವಷ್ಟೇ ಇದೆ.

ಕೆಲವು ದೇಶಗಳಲ್ಲಿ ಪ್ರತಿ ಲೀಟರ್ ಗೆ ಪೆಟ್ರೋಲ್ ಬೆಲೆ ಭಾರತಕ್ಕಿಂತ ಹೆಚ್ಚಾಗಿದೆ ಮತ್ತು ಕೆಲವು ದೇಶಗಳಲ್ಲಿ ಇದು ಕಡಿಮೆ ಇದೆ ಎಂದು ನಾವು ತೀರ್ಮಾನಿಸಬಹುದು. ಆದರೆ ನಿಜವಾದ ಸಂಖ್ಯೆಗಳು ಪೋಸ್ಟ್ ನಲ್ಲಿ ನೀಡಿರುವುದಕ್ಕಿಂತ ಬಹಳ ಬೇರೆಯಾಗಿವೆ. ಆದ್ದರಿಂದ ಪೋಸ್ಟ್ ತಪ್ಪುದಾರಿಗೆಳೆಯುವಂತಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ವಿವಿಧ ದೇಶಗಳ ಪೆಟ್ರೋಲಿನ ತಪ್ಪಾದ ಬೆಲೆಗಳನ್ನು ಭಾರತದ ದರಕ್ಕೆ ಹೋಲಿಸಲಾಗಿದೆ.

Share.

About Author

Comments are closed.

scroll