ಮಾಸ್ಕ್ ಧರಿಸದ ಮೇಕೆ ಒಂದನ್ನು ಉತ್ತರಪ್ರದೇಶದ ಕಾನ್ಪುರ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿಯ ಇಮೇಜ್ ಇರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಲೇಖನದ ಮೂಲಕ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಮಾಸ್ಕ್ ಧರಿಸದ ಮೇಕೆ ಒಂದನ್ನು ಉತ್ತರಪ್ರದೇಶದ ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.
ನಿಜಾಂಶ: ಮಾಲೀಕರಿಲ್ಲದ ಮೇಕೆಯೊಂದು ಸುತ್ತಾಡುತ್ತಿದ್ದಾಗ ಪೊಲೀಸರು ಠಾಣೆಗೆ ಕರೆತಂದಿದ್ದು, ನಂತರ ಅದರ ಮಾಲೀಕರು ಬಂದು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಕಾನ್ಪುರ ಪೊಲೀಸರು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಆದರೆ ಅನ್ವರ್ ಗಂಜ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸೈಫುದ್ದಿನ್ ಬೇಗ್ “ಮಾಸ್ಕ್ ಧರಿಸದ ಯುವಕನೊಬ್ಬ ಮೇಕೆ ಹಿಡಿದು ಹೋಗುತ್ತಿದ್ದ. ಪೊಲೀಸರನ್ನು ನೋಡಿದ ತಕ್ಷಣ ಮೇಕೆ ಬಿಟ್ಟು ಓಡಿಹೋಗಿದ್ದಾನೆ. ಹಾಗಾಗಿ ಮೇಕೆಯನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು” ಎಂದು ಹೇಳಿದ್ದಾರೆ. ಪೊಲೀಸರ ಎರಡೂ ಆವೃತ್ತಿಗಳು ವಿಭಿನ್ನವಾಗಿದ್ದರೂ ಸಹ ಮೇಕೆ ಮಾಸ್ಕ್ ಧರಿಸದ ಕಾರಣಕ್ಕೆ ಬಂಧನವಾಗಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಾಡಿದಾಗ ಕಾನ್ಪುರ ಪೊಲೀಸರ ಟ್ವೀಟ್ ಕಂಡುಬಂದಿದೆ. ಲಾಕ್ ಡೌನ್ ಸಮಯದಲ್ಲಿ ದಾದಾಮಿಯಾನ್ ಎಂಬ ಪ್ರದೇಶದಲ್ಲಿ ಮಾಲೀಕರಿಲ್ಲದ ಮೇಕೆಯೊಂದು ತಿರುಗಾಡುತ್ತಿದೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಕಾರಣ ಬೇಕನ್ ಗಂಜ್ ಪೊಲೀಸರು ಅದನ್ನು ಠಾಣೆಗೆ ಕರೆತಂದಿದ್ದಾರೆ. ಸ್ವಲ್ಪ ಸಮಯದ ಬಳಿಕ ಅದರ ಮಾಲೀಕ ಮೊಹಮ್ಮದ್ ಅಲಿಯ ಮಗ ಖನಿಕುಜ್ಮಾ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಕಾನ್ಪುರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಕಾನ್ಪುರ ಪೊಲೀಸರು ಟ್ವೀಟ್ ಮಾಡಿದ್ದಕ್ಕೆ ವಿರುದ್ಧವಾಗಿ, ಅನ್ವರ್ ಗಂಜ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸೈಫುದ್ದೀನ್ ಬೇಗ್ “ಮಾಸ್ಕ್ ಧರಿಸದ ಯುವಕನೊಬ್ಬ ಮೇಕೆ ಹಿಡಿದು ಹೋಗುತ್ತಿದ್ದ. ಪೊಲೀಸರನ್ನು ನೋಡಿದ ತಕ್ಷಣ ಮೇಕೆ ಬಿಟ್ಟು ಓಡಿಹೋಗಿದ್ದಾನೆ. ಹಾಗಾಗಿ ಮೇಕೆಯನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು” ಎಂದು ಹೇಳಿದ್ದಾರೆ. ಈ ಕುರಿತು ಸುದ್ದಿಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಈ ಕುರಿತು ಅನ್ವರ್ ಗಂಜ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸೈಫುದ್ದಿನ್ ಬೇಗ್ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ “ಮೇಕೆ ಜೊತೆಗಿದ್ದ ಯುವಕ ಮಾಸ್ಕ್ ಧರಿಸಿರದ ಕಾರಣ ಓಡಿ ಹೋದ. ಹಾಗಾಗಿ ಮೇಕೆಯನ್ನು ಠಾಣೆಗೆ ಕರೆತರಲಾಗಿತ್ತು. ನಂತರ ಮೇಕೆಯ ಮಾಲೀಕರು ಬಂದು ಅವರು ಮಾಸ್ಕ್ ಧರಿಸದ ಕಾರಣಕ್ಕೆ ದಂಡ ಕಟ್ಟಿ ಮೇಕೆಯನ್ನು ಬಿಡಿಸಿಕೊಂಡು ಹೋದರು” ಎಂದಿದ್ದಾರೆ. ಮಾಸ್ಕ್ ಧರಿಸದ ಮೇಕೆ ಬಂಧನ ಎಂಬ ಸುದ್ದಿಯನ್ನು ತಮಾಷೆ ಎಂದು ಕರೆದ ಅವರು, ಐಪಿಸಿ ಅಥವಾ ಸಿ ಆರ್ ಪಿ ಸಿ ಅಡಿಯಲ್ಲಿ ಪ್ರಾಣಿಗಳನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಮಾಸ್ಕ್ ಧರಿಸದ ಕಾರಣಕ್ಕೆ ಕಾನ್ಪುರ ಪೊಲೀಸರು ಮೇಕೆಯನ್ನು ಬಂಧಿಸಿಲ್ಲ.