Fake News - Kannada
 

ಡ್ರೋಣ್ ಬಾಯ್ ಪ್ರತಾಪ್‌ನನ್ನು ವಿಜ್ಞಾನಿಯಾಗಿ DRDOಗೆ ಪ್ರಧಾನಿ ಮೋದಿಯವರು ನೇಮಿಸಿಲ್ಲ

0

“ಜಗತ್ತಿನ ಅತೀ ಕಿರಿಯ ಡ್ರೋನ್ ವಿಜ್ಞಾನಿ, 22 ವರ್ಷದ ಪ್ರತಾಪ್‌ನನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆದು ಶಭಾಶ್ ಎಂದು ಹೇಳಿ ಸನ್ಮಾನ ಮಾಡಿದ್ದಾರೆ. ಸಂಶೋಧನಾ ಸಂಸ್ಥೆ DRDO ಜೊತೆಗೆ ಕೆಲಸ ಮಾಡಲು ಸೂಚನೆ ನೀಡಿದ್ದಾರೆ” ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಿಜವೇ ಪರಿಶೀಲಿಸೋಣ,

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಡ್ರೋಣ್ ಬಾಯ್ ಪ್ರತಾಪ್‌ನನ್ನು ವಿಜ್ಞಾನಿಯಾಗಿ DRDOಗೆ ಪ್ರಧಾನಿ ಮೋದಿಯವರು ನೇಮಿಸಿದ್ದಾರೆ.

ನಿಜಾಂಶ: ವಿಡಿಯೋ ಸಂದೇಶವೊಂದರಲ್ಲಿ ಸ್ವತಃ ಪ್ರತಾಪ್ ತನ್ನನ್ನು ವಿಜ್ಞಾನಿಯನ್ನಾಗಿ DRDOಗೆ ಪ್ರಧಾನಿ ಮೋದಿಯವರು ನೇಮಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಪ್ರತಾಪ್ ಹಲವಾರು ಸಾಧನೆಗಳನ್ನು ಮಾಡಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಗಳು ಲಭ್ಯವಿಲ್ಲ. ಹಾಗಾಗಿ ಮೇಲಿನ ಮಂಡನೆ ತಪ್ಪಾಗಿದೆ.

DRDOಗೆ ನೇಮಕ ಎಂಬುದರ ಕುರಿತು ಗೂಗಲ್‌ನಲ್ಲಿ ಹುಡುಕಾಡಿದಾಗ ಸ್ವತಃ ಪ್ರತಾಪ್ ಮಾತನಾಡಿರುವ ವಿಡಿಯೋ ಯೂಟ್ಯೂಬ್‌ನಲ್ಲಿ ಸಿಕ್ಕಿದೆ. ವಿಡಿಯೋದಲ್ಲಿ ಪ್ರತಾಪ್ ತನ್ನನ್ನು ವಿಜ್ಞಾನಿಯಾಗಿ DRDOಗೆ ಪ್ರಧಾನಿ ಮೋದಿಯವರು ನೇಮಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬೂಮ್ ಲೈವ್‌ನೊಂದಿಗಿನ ಸಂಭಾಷಣೆಯಲ್ಲಿಯೂ ಸಹ ಇದೇ ಸ್ಪಷ್ಟನೆ ನೀಡಿದ್ದಾರೆ. DRDO ವೆಬ್‌ಸೈಟ್‌ನಲ್ಲಿ ಸೈಂಟಿಸ್ಟ್ ಬಿ ವಿಭಾಗದ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆ ‘ವಿಜ್ಞಾನ ವಿಷಯಗಳು, ಗಣಿತ ಅಥವಾ ಮನೋವಿಜ್ಞಾನದಲ್ಲಿ ಕನಿಷ್ಠ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ ಅಥವಾ ಲೋಹಶಾಸ್ತ್ರದಲ್ಲಿ ಕನಿಷ್ಠ ಪ್ರಥಮ ದರ್ಜೆಯಲ್ಲಿ ಪದವಿ ಪಡೆದಿರಬೇಕು ಎಂದಿದೆ. ಆದರೆ ಪ್ರತಾಪ್ ಇನ್ನು ಪದವಿ ಸಹ ಪೂರೈಸಿಲ್ಲ.

ಮಾಧ್ಯಮ ಮತ್ತು ಸೆಲೆಬ್ರೆಟಿಗಳು:

ಪ್ರತಾಪ್‌ಗೆ ಸಂಬಂಧಿಸಿದಂತೆ ಮೇಲಿನ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಇತರ ವಿಷಯಗಳ ಬಗ್ಗೆ ಹುಡುಕಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಅವರ ಸಾಧನೆಗಳಿಗೆ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ತಿಳಿದುಬಂದಿದೆ. ಆದರೆ ಈ ಹಿಂದೆ ಅವರ ಸಾಧನೆಗಳಿಗಾಗಿ ‘ಡಿಡಿ ಚಂದನ’ (ವಿಡಿಯೋ ಈಗ ಲಭ್ಯವಿಲ್ಲ) ಸೇರಿದಂತೆ ವಿವಿಧ ಕನ್ನಡ ಚಾನೆಲ್‌ಗಳು ಪ್ರತಾಪ್‌ರವರ ಸಂದರ್ಶನ ಮಾಡಿದ್ದವು. ಅಲ್ಲದೆ, ‘ದಿಗ್ವಿಜಯ 24X7 ನ್ಯೂಸ್’ಚಾನೆಲ್‌ನ ವಿಡಿಯೋದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೆಚ್. ಡಿ. ಕುಮಾರಸ್ವಾಮಿ (ಆಗ ಕರ್ನಾಟಕದ ಸಿಎಂ) ಮತ್ತು ಇತರ ಗಣ್ಯರು ಪ್ರತಾಪ್ ಅವರ ಸಾಧನೆಗಳ ಬಗ್ಗೆ ಶುಭ ಹಾರೈಸಿದ್ದಾರೆ. ಮಲ್ಟಿ-ಡ್ರೋನ್ ಸಂಶೋಧನೆಯಲ್ಲಿ ಸಾಧನೆ ಮಾಡಿದ್ದಕ್ಕಾಗಿ ಅವರು ‘ಟಿವಿ 9 ಕನ್ನಡ ಚಾನೆಲ್‌ನಿಂದ ಪ್ರಶಸ್ತಿಯನ್ನೂ ಪಡೆದಿದ್ದಾರೆ. ವಿವಿಧ ರಾಜಕೀಯ ಮುಖಂಡರು ಮತ್ತು ಸೆಲೆಬ್ರಿಟಿಗಳೊಂದಿಗಿನ ಪ್ರತಾಪ್ ಇರುವ ಅನೇಕ ಫೋಟೋಗಳನ್ನು ‘droneprathap’ ಹೆಸರಿನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಕಾಣಬಹುದಾಗಿದೆ. (ಪ್ರೊಫೈಲ್ ಮತ್ತು ಫೋಟೋಗಳ ಸತ್ಯಾಸತ್ಯತೆಯನ್ನು ಫ್ಯಾಕ್ಟ್ಲಿ ಪರಿಶೀಲಿಸಲು ಸಾಧ್ಯವಾಗಿಲ್ಲ.)

ಡ್ರೋನ್‌ಗಳೊಂದಿಗಿನ ಫೋಟೋಗಳು:

ಪ್ರತಾಪ್ 600 ಕ್ಕೂ ಹೆಚ್ಚು ಡ್ರೋನ್‌ಗಳನ್ನು ನಿರ್ಮಿಸಿದ್ದಾರೆ ಎಂಬುದಕ್ಕೆ ಯಾವುದೇ ಚಿತ್ರಗಳು ಅಥವಾ ವಿಡಿಯೋಗಳು ಆನ್‌ಲೈನ್‌ನಲ್ಲಿ ಲಭ್ಯವಿಲ್ಲ. ಕೆಲವು ಡ್ರೋನ್‌ಗಳ ಪಕ್ಕದಲ್ಲಿ ಪ್ರತಾಪ್ ನಿಂತಿರುವ ಕೆಲವು ಫೋಟೋಗಳಿವೆಯಾದರೂ ಅವು ಆತನ ನಿರ್ಮಿಸಿದ್ದಲ್ಲ. ಬದಲಿಗೆ ಅವು ಹೆಸರಾಂತ ಡ್ರೋನ್ ಕಂಪನಿಗಳಿಗೆ ಸೇರಿವೆ. ಪೋಸ್ಟ್‌ನಲ್ಲಿ ಹಾಕಿರುವ ಫೋಟೋದಲ್ಲಿ ಪ್ರತಾಪ್ ‘ಎಸಿಎಸ್ಎಲ್’ (Autonomous Control Systems Laboratory Ltd) ಎಂಬ ಕಂಪನಿಗೆ ಸೇರಿದ ಡ್ರೋನ್ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. ರೆಡ್ಡಿಟ್ ಬಳಕೆದಾರರು ಆ ಡ್ರೋನ್‌ ಮತ್ತು ಪ್ರತಾಪ್‌ನೊಂದಿಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ “ಪ್ರತಾಪ್‌ಗೆ ಕಂಪನಿ ಅಥವಾ ಡ್ರೋನ್‌ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಎಸಿಎಸ್ಎಲ್ ಇಮೇಲ್ ಮೂಲಕ ಸ್ಪಷ್ಟಪಡಿಸಿದೆ.

ಅಲ್ಲದೆ, ಕರ್ನಾಟಕ ಪ್ರವಾಹದ ಸಂದರ್ಭದಲ್ಲಿ ಪ್ರತಾಪ್ ಬಳಸಿದ ಡ್ರೋನ್‌ನ ರಿಮೋಟ್ ‘ಯುನೆಕ್ ಟೈಫೂನ್ ಎಚ್ +’ ಡ್ರೋನ್ ರಿಮೋಟ್‌ಗೆ ಹೋಲುತ್ತದೆ.

ಯುವ ವಿಜ್ಞಾನಿ ಪ್ರಶಸ್ತಿ – ‘ಐರೆಕ್ಸ್ 2017’ – ಜಪಾನ್:

ಟೋಕಿಯೊದಲ್ಲಿ ನಡೆದ ಎಕ್ಸ್‌ಪೋವೊಂದರಲ್ಲಿ ಅವರು ಪ್ರಥಮ ಬಹುಮಾನವನ್ನು ಗೆದ್ದಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆ ಬಹುಮಾನಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಅನೇಕ ಸುದ್ದಿ ಬ್ಲಾಗ್ ವೆಬ್‌ಸೈಟ್‌ಗಳಲ್ಲಿ ಕಾಣಬಹುದು. ಪ್ರಮಾಣಪತ್ರದಲ್ಲಿ, ‘ಐರೆಕ್ಸ್ 2017’ ಪ್ರದರ್ಶನದಲ್ಲಿ ಪ್ರಶಸ್ತಿ ಗೆದ್ದಿದೆ ಎಂದು ಬರೆಯಲಾಗಿದೆ. ಆದರೆ, ‘ಐರೆಕ್ಸ್ 2017’ ಟ್ರೇಡ್ ಎಕ್ಸ್‌ಪೋ ಆಗಿದ್ದು, ಅಲ್ಲಿ ವಿವಿಧ ಕಂಪನಿಗಳು ತಮ್ಮ ರೋಬೋಟ್‌ಗಳನ್ನು ಪ್ರದರ್ಶಿಸುತ್ತವೆ. ಅಲ್ಲಿ ಯಾವುದೇ ಸ್ಪರ್ಧೆ ನಡೆದ ಮತ್ತು ಪ್ರತಾಪ್ ಬಹುಮಾನ ಗೆದ್ದ ಯಾವುದೇ ವರದಿಗಳು ಲಭ್ಯವಿಲ್ಲ. ಎಕ್ಸ್‌ಪೋ ಸಂಘಟಕರು 2017 ರ ಕಾರ್ಯಕ್ರಮದ ನಂತರ ‘ಪ್ರದರ್ಶನ ನಂತರದ ವರದಿ’ ಬಿಡುಗಡೆ ಮಾಡಿದ್ದಾರೆ. ಆದರೆ ವರದಿಯಲ್ಲಿ ಸ್ಪರ್ಧೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅಲ್ಲದೆ, ಪ್ರತಾಪ್ ಪ್ರಮಾಣಪತ್ರದಲ್ಲಿ ಕಾಣುವ ‘ಏರ್‌ಬಸ್ ಡಿಫೆನ್ಸ್ ಅಂಡ್ ಸ್ಪೇಸ್ ಕಂಪನಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಪದಕ – ‘ಸಿಬಿಟ್ 2018’ – ಜರ್ಮನಿ

ಜರ್ಮನಿಯಲ್ಲಿ ನಡೆದ ‘ಸಿಬಿಐಟಿ ಡ್ರೋನ್ ಎಕ್ಸ್‌ಪೋ 2018’ ನಲ್ಲಿ ಅವರು ‘ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಪದಕ’ಗೆದ್ದಿದ್ದಾರೆ ಎಂಬ ಹೇಳಿಕೆಗೂ ಸಹ ಯಾವುದೇ ಪುರಾವೆಗಳಿಲ್ಲ. ಆ ಪ್ರಶಸ್ತಿಯ ಬಗ್ಗೆ ಹುಡುಕಿದಾಗ, ಪ್ರತಾಪ್‌ಗೆ ಸಂಬಂಧಿಸಿದ ಲೇಖನಗಳನ್ನು ಮಾತ್ರ ಕಾಣಬಹುದು. ಪ್ರಮಾಣಪತ್ರದ ಮೇಲ್ಭಾಗದಲ್ಲಿ ‘ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಮೆಡಲ್’ಎಂದು ಬರೆಯಲಾಗಿದೆ. ಆದರೆ ಅದೇ ಪ್ರಮಾಣ ಪತ್ರದ ಕೆಳಗೆ ‘ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಅವಾರ್ಡ್’ಎಂದು ಬರೆಯಲಾಗಿದೆ. ಅಲ್ಲದೆ, ಪ್ರಮಾಣಪತ್ರದಲ್ಲಿ, ‘ಡಾಯ್ಚ ಮೆಸ್ಸೆ’ ಕಂಪನಿಯ ಸಿಇಒ ಹೆಸರನ್ನು ‘ವೊಲ್ಫ್ರಾಮ್ ವಾನ್ ಫ್ರಿಟ್ಸ್’ಎಂದು ಬರೆಯಲಾಗಿದೆ. ಆದರೆ, ವೊಲ್ಫ್ರಾಮ್ ವಾನ್ ಫ್ರಿಟ್ಸ್ಚ್ ಅವರು ತಮ್ಮ ಸಿಇಓ ಜವಾಬ್ದಾರಿಯನ್ನು ಡಾ. ಜೋಚೆನ್ ಕೊಕ್ಲರ್ ಅವರಿಗೆ 2017 ರಲ್ಲಿಯೇ ಹಸ್ತಾಂತರಿಸಿದ್ದಾರೆ. ಇನ್ನೂ, 2018 ರಲ್ಲಿ ಪ್ರತಾಪ್ ಅವರಿಗೆ ನೀಡಲಾದ ಪ್ರಮಾಣಪತ್ರವು ಸಿಇಒ ಆಗಿ ವೊಲ್ಫ್ರಾಮ್ ವಾನ್ ಫ್ರಿಟ್ಸ್ ಅವರ ಹೆಸರನ್ನು ಹೊಂದಿದೆ. ಅಲ್ಲದೆ, ‘ದಿ ಬೆಟರ್ ಇಂಡಿಯಾ’ಕ್ಕೆ ಪ್ರತಿಕ್ರಿಯಿಸಿದ ಜರ್ಮನಿಯ ಕಾರ್ಯಕ್ರಮಗಳ ಸಂಘಟಕರು ತಾವು ಅಂತಹ ಯಾವುದೇ ಪ್ರಶಸ್ತಿಯನ್ನು ಆಯೋಜಿಸಿಲ್ಲ ಎಂದು ಹೇಳಿದ್ದಾರೆ.

ಜಪಾನ್ ಭೇಟಿ ಮತ್ತು ಬುಲೆಟ್ ರೈಲು:

ಪೋಸ್ಟ್‌ನಲ್ಲಿ, ‘ಐರೆಕ್ಸ್ 2017’ ನಲ್ಲಿ ಭಾಗವಹಿಸಲು ಪ್ರತಾಪ್ ಟೋಕಿಯೊಗೆ ಬಹಳ ಕಷ್ಟಪಟ್ಟು ತಲುಪಿದರು ಎಂದು ಬರೆದಿದೆ. ಪ್ರತಾಪ್ ಮೊದಲ ಬಾರಿಗೆ ವಿಮಾನದಲ್ಲಿ ಟೋಕಿಯೊವನ್ನು ತಲುಪಿದರು ಎಂದು ಉಲ್ಲೇಖಿಸಲಾಗಿದೆ. ಪ್ರತಾಪ್ ಅಲ್ಲಿ ಇಳಿಯುವಾಗ ಆತನ ಬಳಿ ಕೇವಲ 1400 ರೂ. ಇತ್ತು. ಬುಲೆಟ್ ರೈಲು ಪ್ರಯಾಣ ತುಂಬಾ ದುಬಾರಿಯಾಗಿದ್ದರಿಂದ ಅವನು ಲೋಕಲ್ ಟ್ರೈನ್‌ಗಳಲ್ಲಿ 16 ವಿವಿಧ ನಿಲ್ದಾಣಗಳನ್ನು ಬದಲಿಸಿ ತನ್ನ ಸಾಮಾನುಗಳೊಂದಿಗೆ ತನ್ನ ಕೊನೆಯ ನಿಲ್ದಾಣವನ್ನು ತಲುಪಿದನು. ಅಲ್ಲದೇ ತನ್ನ ಸಾಮಾನುಗಳನ್ನು ಹೊತ್ತುಕೊಂಡು ಇನ್ನು 8 ಕಿ.ಮೀ ನಡೆದನು ಎಂದು ತಿಳಿಸಲಾಗಿದೆ. ಆದರೆ, ಗೂಗಲ್ ನಕ್ಷೆಯ ಪ್ರಕಾರ, ಪ್ರದರ್ಶನದ ಸ್ಥಳ ಟೋಕಿಯೊ ಬಿಗ್ ಸೈಟ್‌ಗೆ ಹನೆಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 15 ಕಿ.ಮೀ ದೂರವಿದೆ. ಮತ್ತು ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 65 ಕಿ.ಮೀ ದೂರವಿದೆ.  ಪ್ರದರ್ಶನದ ಸ್ಥಳ ತಲುಪಲು ಬುಲೆಟ್ ರೈಲು ಹತ್ತಬೇಕಾದ ಅಗತ್ಯವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಬುಲೆಟ್ ರೈಲು ಇಂಟರ್ಸಿಟಿ (ಬೇರೆ-ಬೇರೆ ನಗರಗಳಿಗೆ) ಸೇವೆಯಾಗಿದೆ. ಅಂದರೆ ಅದು ಟೋಕಿಯೊ ಒಳಗೆ ಚಲಿಸುವುದಿಲ್ಲ. ಟೋಕಿಯೋದಿಂದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

‘ಒಪಿಇಂಡಿಯಾ’ ಈ ಹಿಂದೆ ಪ್ರತಾಪ್ ಸಾಧನೆಗಳು ಸುಳ್ಳು ಎಂಬ ಲೇಖನವನ್ನು ಪ್ರಕಟಿಸಿದೆ. ಆದರೆ, ಕನ್ನಡ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್, ತಮ್ಮ ಪ್ರಶಸ್ತಿಗಳು ನಿಜವೆಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಮತ್ತು ಮುಂದಿನ ದಿನಗಳಲ್ಲಿ ಸಾಕ್ಷಿಗಳನ್ನಿಟ್ಟು ಪತ್ರಿಕಾಗೋಷ್ಠಿ ನಡೆಸಲಿದ್ದೇನೆ ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಪ್ರತಾಪ್‌ರನ್ನು ಸಂಪರ್ಕಿಸಲು ಫ್ಯಾಕ್ಟ್ಲಿ ಪ್ರಯತ್ನಿಸಿದೆ. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಅವರಿಂದ ಪ್ರತಿಕ್ರಿಯೆ ಪಡೆದ ನಂತರ ಈ ಲೇಖನವನ್ನು ಅಪ್‌ಡೇಟ್‌ ಮಾಡಲಾಗುತ್ತದೆ.

ತಮ್ಮ ಬಗ್ಗೆ ಬಂದ ಪ್ರಶ್ನೆಗಳು ಮತ್ತು ಟ್ರೋಲ್‌ಗಳ ಕುರಿತು ಉತ್ತರಿಸಲು ಜುಲೈ 19, 2020 ರಂದು  ಪ್ರತಾಪ್ ‘ಬಿಟಿವಿ ನ್ಯೂಸ್ ಕನ್ನಡ’ ಚಾನೆಲ್‌ನಲ್ಲಿ ಕಾಣಿಸಿಕೊಂಡರು. ಈ ಕಾರ್ಯಕ್ರಮದಲ್ಲಿ, ಅವರು ತಮ್ಮ ಪ್ರಮಾಣಪತ್ರಗಳನ್ನು ತೋರಿಸಿದರು ಮತ್ತು ಅವು ಅಧಿಕೃತವೆಂದು ಹೇಳಿಕೊಂಡರು. ಅದರ ಸತ್ಯಾಸತ್ಯತೆಯನ್ನು ಸಾಬೀತುಪಡಿಸಲು ಯಾವುದೇ ಹೆಚ್ಚುವರಿ ಪುರಾವೆಗಳನ್ನು ಅವರು ಒದಗಿಸಲಿಲ್ಲ. ಎಲ್ಲಿಯೂ ನಿಮ್ಮ ಡ್ರೋನ್‌ಗಳು ಕಾಣುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರವಾಗಿ ಪ್ರತಾಪ್, ತನ್ನ ಮೊಬೈಲ್‌ನಲ್ಲಿ ಡ್ರೋನ್ ಫೋಟೋವನ್ನು ತೋರಿಸಿ, ಇದನ್ನು ನಾನೇ ನಿರ್ಮಿಸಿದ್ದು ಹೇಳಿಕೊಂಡರು. ಇದೇ ಡ್ರೋನ್‌ಗಾಗಿ ಪ್ರಶಸ್ತಿ ಗೆದ್ದಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಆದರೆ ಅದೇ ಫೋಟೋ ಈಗಾಗಲೇ ಸಾರ್ವಜನಿಕ ವಲಯದಲ್ಲಿದೆ. 2020 ರ ಜನವರಿಯಲ್ಲಿ ಪ್ರತಾಪ್ ಕುರಿತು ‘ದಿ ಬೆಟರ್ ಇಂಡಿಯಾ’ ಪ್ರಕಟಿಸಿದ ಲೇಖನದಲ್ಲಿ ಅದೇ ಫೋಟೋವನ್ನು ಕಾಣಬಹುದು.

ಪ್ರತಾಪ್ ಫೋಟೊದಲ್ಲಿರುವ ಡ್ರೋಣ್‌ ಮೇಲೆ ‘ಬಿಲ್ಜ್ ಐ’ ಎಂದು ಬರೆದಿದೆ. ಆ ಕುರಿತು ಹುಡುಕಿದಾಗ, ‘ಬಿಲ್ಜ್ ಐ’ಜರ್ಮನ್ ಕಂಪನಿಯಾಗಿದ್ದು ಅದು ಮಲ್ಟಿಕಾಪ್ಟರ್ ತಯಾರಿಕೆಯಲ್ಲಿ ಪರಿಣಿತಿ ಪಡೆದಿದೆ.

‘ಬಿಲ್ಜ್ ಐ’ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ತನ್ನ ಡ್ರೋನ್‌ಗಳ ಫೋಟೊಗಳನ್ನು ಅದರಲ್ಲಿ ತೋರಿಸಿದೆ. ವಿಡಿಯೋ ವಿವರಣೆಯಲ್ಲಿ ಫೋಟೊಗಳು ಹ್ಯಾನೋವರ್ (ಜರ್ಮನಿ) ನಲ್ಲಿ ನಡೆದ ‘ಸಿಬಿಟ್’ಕಾರ್ಯಕ್ರಮಕ್ಕೆ ಸಂಬಂಧಿಸಿವೆ ಎಂದು ಬರೆದಿದೆ.  ಅದೇ ಡ್ರೋಣ್ ಫೋಟೊವನ್ನು ಪ್ರತಾಪ್ ಕೂಡ ನಾನೇ ತಯಾರು ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಆ ಡ್ರೋನ್‌ಗಾಗಿಯೇ 2018 ರಲ್ಲಿ ಜರ್ಮನಿಯಲ್ಲಿ ‘ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಮೆಡಲ್’ ಗೆದ್ದಿದ್ದೇನೆ ಎಂದು ಪ್ರತಾಪ್ ಹೇಳಿಕೊಂಡಿದ್ದಾರೆ. ಆದರೆ ‘ಬಿಲ್ಜ್ ಐ’ ಈ ಡ್ರೋನ್‌ಗೆ ಮೆಡಲ್ ಬಂದಿದೆಯೆಂದಾಗಲಿ, ಇದಕ್ಕೂ ಪ್ರತಾಪ್‌ಗೂ ಸಂಬಂಧವಿದೆಯೆಂದಾಗಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಇದೇ ಚಿತ್ರವನ್ನು ಹಲವಾರು ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಅದೇ ಕೆಂಪು ಡ್ರೋನ್‌ನ ಇತರ ಚಿತ್ರಗಳನ್ನು ಮತ್ತು ಪ್ರತಾಪ್ ಫೋಟೋದಲ್ಲಿ ಕಾಣುವ ಮೇಜಿನ ಮೇಲೆ ಇರಿಸಲಾಗಿರುವ ಕೆಲವು ಇತರ ಉಪಕರಣಗಳನ್ನು ‘ಬಿಲ್ಜ್ ಐ’ ವೆಬ್‌ಸೈಟ್‌ನಲ್ಲಿ ಸಹ ಕಾಣಬಹುದು. ಡ್ರೋನ್‌ನ ಹೆಸರನ್ನು ವೆಬ್‌ಸೈಟ್‌ನಲ್ಲಿ ‘ಥರ್ಮೋಗ್ರಾಫಿಕ್ ಕಾಪ್ಟರ್ ಬೆಥ್ -001’ ಎಂದು ಉಲ್ಲೇಖಿಸಲಾಗಿದೆ. ಮೇಜಿನ ಮೇಲಿರುವ ಹೆಡ್‌ಸೆಟ್‌ನಲ್ಲಿ ‘ಫ್ಯಾಟ್ ಶಾರ್ಕ್’ ಹೆಸರು ಇದೆ. ‘ಫ್ಯಾಟ್ ಶಾರ್ಕ್’ಕಂಪನಿಯು ಡ್ರೋನ್ ಪೈಲಟ್‌ಗಳಿಗಾಗಿ ‘ಎಫ್‌ಪಿವಿ’(ಫಸ್ಟ್-ಪರ್ಸನ್ ವ್ಯೂ) ಕನ್ನಡಕಗಳನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ.

ತಮ್ಮ ವೆಬ್‌ಸೈಟ್ ಮತ್ತು ಫೇಸ್‌ಬುಕ್ ಪುಟದಲ್ಲಿ, ‘ಬಿಲ್ಜ್ ಐ’ ಅವರು ‘ಬಿವಿಸಿಪಿ’ (ಬುಂಡೆಸ್‌ವರ್‌ಬ್ಯಾಂಡ್ ಕಾಪ್ಟರ್ ಪೈಲೊಟೆನ್ ಇ.ವಿ.) ಯ ಅಧಿಕೃತ ಸದಸ್ಯರು ಎಂದು ಉಲ್ಲೇಖಿಸಿದ್ದಾರೆ. ಫೋಟೋದಲ್ಲಿ ಪ್ರತಾಪ್ ಅವರ ಹಿಂದಿನ ಗೋಡೆಯ ಮೇಲೆ ಅದೇ ಹೆಸರು ಮತ್ತು ಲೋಗೊವನ್ನು ಕಾಣಬಹುದು.

ಅದು ‘ಸಿಬಿಐಟಿ 2018’ ನಲ್ಲಿರುವ ‘ಬಿವಿಸಿಪಿ’ ಸ್ಟಾಲ್‌ನಲ್ಲಿದ್ದು, ಅಲ್ಲಿ ‘ಬಿಲ್ಜ್ ಐ’ ಡ್ರೋನ್ ಅನ್ನು ಪ್ರದರ್ಶಿಸಿತು. ‘ಬಿವಿಸಿಪಿ’ ವೆಬ್‌ಸೈಟ್‌ನಲ್ಲಿ, ‘ಸಿಬಿಟ್ 2018 ರ ಅನಿಸಿಕೆಗಳು’ (ಜರ್ಮನ್ ಭಾಷೆಯಿಂದ ಗೂಗಲ್ ಅನುವಾದಿಸಿದೆ) ಶೀರ್ಷಿಕೆಯೊಂದಿಗೆ ಲೇಖನವನ್ನು ಕಾಣಬಹುದು. ಲೇಖನದಲ್ಲಿ ‘ಬಿಲ್ಜ್ ಐ’ಮಾಲೀಕ ಬಿಲ್ ಗುಟ್ಬಿಯರ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಆದರೆ ಪ್ರತಾಪ್ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಆ ಡ್ರೋನ್ ಪ್ರಶಸ್ತಿ ಗೆದ್ದ ಬಗ್ಗೆಯೂ ಯಾವುದೇ ವಿವರಗಳಿಲ್ಲ. ಲೇಖನದಲ್ಲಿ ಪೋಸ್ಟ್ ಮಾಡಿದ ಯಾವುದೇ ಫೋಟೋಗಳಲ್ಲಿ ಪ್ರತಾಪ್ ಕಂಡುಬಂದಿಲ್ಲ.

ಒಂದು ವೇಳೆ ಈ ಡ್ರೋನ್‌ಗಾಗಿ ಪ್ರತಾಪ್ ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಮೆಡಲ್’ಗೆದ್ದಿದ್ದೆ ಆದರೆ (ಇನ್ನ ದೃಢವಾಗಿಲ್ಲ) ಕಂಪನಿ ಕೊಟ್ಟ ಪ್ರಮಾಣ ಪತ್ರದಲ್ಲಿ ಪ್ರತಾಪ್ ಹೆಸರಿರಬೇಕಿತ್ತು. ಆದರೆ ಅಲ್ಲಿ ಕಾಲೇಜಿನ ಹೆಸರನ್ನು ನಮೂದಿಸಲಾಗಿದೆ. ಅಲ್ಲದೇ ಪ್ರಶಸ್ತಿ ಪತ್ರದಲ್ಲಿ ಬಿಲ್ಜ್ ಐ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಈ ಕುರಿತು ಹಲವಾರು ಮನವಿಗಳು ಬಂದ ನಂತರ ‘ಬಿಲ್ಜ್ ಐ’ಈ ಕುರಿತು ಹೇಳಿಕೆ ನೀಡಿದೆ. ಪ್ರತಾಪ್ ತಾನು ತಯಾರಿಸಿದ್ದೇನೆಂದು ಹೇಳಿಕೊಂಡ ‘ಮಲ್ಟಿಕಾಪ್ಟರ್ ಸಿಸ್ಟಂ’ ತನ್ನ ಆಸ್ತಿಯೆಂದು ಬಿಲ್ಜ್ ಐ ಸ್ಪಷ್ಟಪಡಿಸಿದೆ. ಆ ಡ್ರೋನ್‌ನ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಅಥವಾ ವಿತರಣೆ ಸೇರಿದಂತೆ ಯಾವುದರಲ್ಲಿಯೂ ಪ್ರತಾಪ್‌ಗೆ ಯಾವುದೇ ಸಂಬಂಧವಿಲ್ಲ ‘ಮಿಸ್ಟರ್ ಪ್ರತಾಪ್ ಹ್ಯಾನೋವರ್‌ನಲ್ಲಿರುವ ಸಿಇಬಿಐಟಿ 2018 ನಲ್ಲಿ ಈ ಡ್ರೋನ್‌ನೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಅಷ್ಟೇ. ಅದು ಬಿಟ್ಟು ಬೇರೆ ಏನೂ ಹೇಳಿದರೂ ಅದು ಸುಳ್ಳು’ ಎಂದು ಬಿಲ್ಜ್ ಐ ಜರ್ಮನ್ ಭಾಷೆಯಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ಡ್ರೋನ್ ಬಾಯ್’ಪ್ರತಾಪ್ ಅವರನ್ನು ಡಿಆರ್‌ಡಿಒದಲ್ಲಿ ವಿಜ್ಞಾನಿಯನ್ನಾಗಿ ಪಿಎಂ ಮೋದಿ ನೇಮಕ ಮಾಡಿಲ್ಲ. ಜೊತೆಗೆ ಪ್ರತಾಪ್ ಹಲವಾರು ಸಾಧನೆಗಳನ್ನು ಮಾಡಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಗಳು ಲಭ್ಯವಿಲ್ಲ

Share.

About Author

Comments are closed.

scroll