Fake News - Kannada
 

ಭಾರತ ಮಾತೆ ಪಾತ್ರಧಾರಿಯು ನಮಾಝ್ ಮಾಡಿದ ದೃಶ್ಯ ನಾಟಕವೊಂದರ ಎಡಿಟ್ ಮಾಡಿದ ವಿಡಿಯೊವಾಗಿದೆ

0

“ಭಾರತ ಮಾತೆಗೆ”ತೊಡಿಸಿದ್ದ ಕಿರೀಟ ತೆಗೆದು ಹಿಜಾಬ್ ತೊಡಿಸಿ ನಮಾಝ್ ಮಾಡಿಸುವ ಶಾಲಾ ಮಕ್ಕಳು ಪ್ರದರ್ಶಿಸಿದ ನಾಟಕದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಲಕ್ನೋದ ಮಾಳವೀಯ ನಗರದಲ್ಲಿರುವ ಶಿಶು ಭಾರತೀಯ ವಿದ್ಯಾಲಯದಲ್ಲಿ ವೇದಿಕೆಯ ನಾಟಕವನ್ನು ಪ್ರದರ್ಶಿಸಲಾಗಿದೆ ಎಂದು ಪ್ರತಿಪಾದಿಸಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ‘ಭಾರತ ಮಾತೆಯ’ ವೇಷ ಧರಿಸಿದ ಶಾಲೆಯ ವಿದ್ಯಾರ್ಥಿನಿಯಿಂದ ವೇದಿಕೆಯಲ್ಲಿ ನಮಾಝ್ ಮಾಡಲಾದ ನಾಟಕದ ವಿಡಿಯೋ.

ನಿಜಾಂಶ : ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ಎಡಿಟ್ ಮಾಡಲಾಗಿದೆ. ನಾಟಕದ ಪೂರ್ಣ ವಿಡಿಯೋದಲ್ಲಿ ಶಾಲಾ ಮಕ್ಕಳು ಧರ್ಮದ ಹೆಸರಿನಲ್ಲಿ ಜಗಳವಾಡಬೇಡಿ ಮತ್ತು ಸಾಮಾಜಿಕ ಸೌಹಾರ್ದತೆ ಕಾಪಾಡಿ ಎಂಬ ಸಂದೇಶವನ್ನು ಹೇಳಿದ್ದಾರೆ. ಈ ನಾಟಕದ ಭಾಗವಾಗಿ, ಸೀರೆಯುಟ್ಟ ಹುಡುಗಿಯನ್ನು ಆಯಾ ಧಾರ್ಮಿಕ ಪದ್ಧತಿಗಳಲ್ಲಿ (ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಧರ್ಮ) ವಿವಿಧ ಧಾರ್ಮಿಕ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಲಕ್ನೋ ಪೊಲೀಸ್ ಕಮಿಷನರೇಟ್ ಟ್ವೀಟ್ ಮೂಲಕ ವೀಡಿಯೋ ಎಡಿಟ್ ಆಗಿರುವುದನ್ನು ಖಚಿತಪಡಿಸಿದ್ದು, ಕ್ಲಿಪ್ ಮಾಡಿದ ವಿಡಿಯೋವನ್ನು ಟ್ವೀಟ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು 15 ಆಗಸ್ಟ್ 2022 ರಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಇದೇ ರೀತಿಯ ಪ್ರತಿಪಾದನೆಯೊಂದಿಗೆ ವಿಡಿಯೋ ಟ್ವೀಟ್ ಮಾಡಿರುವುದು ಕಂಡುಬಂದಿದೆ. ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅರವಿಂದ್ ಚೌಹಾಣ್, ‘ಟೈಮ್ಸ್ ಆಫ್ ಇಂಡಿಯಾ’ ಗುಂಪಿನಲ್ಲಿ ಕೆಲಸ ಮಾಡುವ ಪತ್ರಕರ್ತ, ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ರಂಗ ನಾಟಕದ ಪೂರ್ಣ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಸಂಪೂರ್ಣ ವೀಡಿಯೊವು ವಿವಿಧ ಗುಂಪುಗಳ ವಿದ್ಯಾರ್ಥಿಗಳು ಮತ್ತು ಭಾರತ ಮಾತೆಯ ಉಡುಪು ಧರಿಸಿದ ಹುಡುಗಿ ವಿವಿಧ ಧಾರ್ಮಿಕ ಪ್ರಾರ್ಥನೆಯನ್ನು ಮಾಡಿರುವುದು ಸ್ಪಷ್ಟವಾಗಿ ತೋರಿಸುತ್ತದೆ. ಹಿಂದೂ, ಕ್ರಿಶ್ಚಿಯನ್, ಸಿಖ್ ಮತ್ತು ಮುಸ್ಲಿಂ ಪ್ರಕಾರದ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ.

ಲಕ್ನೋದ ಶಿಶು ಭಾರತೀಯ ವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ ಈ ಪೂರ್ಣ ವೀಡಿಯೊವನ್ನು ಲಕ್ನೋ ಪೊಲೀಸ್ ಕಮಿಷನರೇಟ್ ಟ್ವೀಟ್ ಮಾಡಿದೆ. ಸಂಪೂರ್ಣ ವೀಡಿಯೊವನ್ನು ಹಂಚಿಕೊಂಡ ಲಕ್ನೋ ಪೊಲೀಸ್ ಕಮಿಷನರೇಟ್, ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನದಲ್ಲಿ ಕೆಲವು ಸಮಾಜ ವಿರೋಧಿಗಳು ಈ ನಾಟಕದ ವಿಡಿಯೊವನ್ನು ಎಡಿಟ್ ಮಾಡಿ ಹಂಚಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಲಕ್ನೋ ಪೊಲೀಸ್ ಕಮಿಷನರೇಟ್ ಮತ್ತೊಂದು ಟ್ವೀಟ್ ಮೂಲಕ ವೇದಿಕೆ ನಾಟಕದ ಸಂಪೂರ್ಣ ವಿಡಿಯೋದಲ್ಲಿ ಶಾಲಾ ಮಕ್ಕಳು ಧರ್ಮದ ಹೆಸರಿನಲ್ಲಿ ಜಗಳವಾಡಬೇಡಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಿ ಎಂಬ ಸಂದೇಶವನ್ನು ಪ್ರಸ್ತುತಪಡಿಸುವುದನ್ನು ತೋರಿಸುತ್ತದೆ ಎಂದು ಸ್ಪಷ್ಟಪಡಿಸಿದೆ. ಈ ಕ್ಲಿಪ್ ಮಾಡಿದ ವೀಡಿಯೊವನ್ನು ಟ್ವೀಟ್ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಲಕ್ನೋ ಪೊಲೀಸ್ ಕಮಿಷನರೇಟ್ ತಿಳಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ವೈರಲ್ ಕ್ಲಿಪ್ಡ್ ವೀಡಿಯೋ ಕುರಿತು ಲಕ್ನೋ ಪೊಲೀಸ್ ಕಮಿಷನರೇಟ್ ನೀಡಿದ ಸ್ಪಷ್ಟನೆಯನ್ನು ವರದಿ ಮಾಡುವ ಲೇಖನಗಳನ್ನು ಹಲವು ಸುದ್ದಿ ವೆಬ್‌ಸೈಟ್‌ಗಳು ಪ್ರಕಟಿಸಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಶಾಲೆಯಲ್ಲಿ ನಡೆದ ನಾಟಕದ ದೃಶ್ಯಗಳನ್ನು ಎಡಿಟ್ ಮಾಡಿ ತಪ್ಪು ಸಂದೇಶ ಬರುವಂತೆ ಹಂಚಿಕೊಳ್ಳಲಾಗಿದೆ, “ ಭಾರತ ಮಾತೆಯ” ಉಡುಪಿನಲ್ಲಿರುವ ಪಾತ್ರವನ್ನು ಬರೀ ನಮಾಝ್ ಮಾಡಿದಂತೆ ತೋರಿಸಲಾಗಿದೆ. ಆದರೆ ಪೂರ್ಣ ವಿಡಿಯೋದಲ್ಲಿ ಸರ್ವ ಧರ್ಮ ಸಮನ್ವಯವನ್ನು ಸಾರುವ ಸಂದೇಶವನ್ನು ಶಾಲಾ ಮಕ್ಕಳು ತಮ್ಮ ನಾಟಕದ ಪ್ರದರ್ಶನದಲ್ಲಿ ಅಭಿನಯಿಸಿರುವುದು ಸಾಭೀತಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll