Fake News - Kannada
 

ಆಂಧ್ರಪ್ರದೇಶ ಸರ್ಕಾರವು ಅಧಿಕೃತ ಪಡಿತರ ಚೀಟಿಗಳಲ್ಲಿ ಜೀಸಸ್‌ ಫೋಟೋವನ್ನು ಮುದ್ರಿಸಿಲ್ಲ

0

ಆಂಧ್ರಪ್ರದೇಶದಲ್ಲಿ ನೀಡಲಾದ ಪಡಿತರ ಚೀಟಿಗಳಲ್ಲಿ ಯೇಸುವಿನ ಫೋಟೋವನ್ನು ಮುದ್ರಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ವಿಶ್ಲೇಷಿಸಲು ಪ್ರಯತ್ನಿಸೋಣ.

ಪೋಸ್ಟ್ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆ: ಆಂಧ್ರಪ್ರದೇಶದ ಪಡಿತರ ಚೀಟಿಗಳಲ್ಲಿ ಜೀಸಸ್ ಫೋಟೋ ಮುದ್ರಿಸಲಾಗಿದೆ.

ಸತ್ಯ: ಫೋಟೋದಲ್ಲಿರುವ ಕಾರ್ಡ್ ಸರ್ಕಾರದಿಂದ ನೀಡಲಾಗಿರುವ ಪಡಿತರ ಚೀಟಿ ಅಲ್ಲ. ಇದು ಗ್ರಾಹಕರಿಗೆ ನೀಡಲಾಗುವ ಪಡಿತರ ಉತ್ಪನ್ನಗಳನ್ನು ಬರೆದುಕೊಳ್ಳುವುದಕ್ಕಾಗಿ ಸ್ಥಳೀಯ ಪಡಿತರ ವ್ಯಾಪಾರಿ ಮುದ್ರಿಸಿದ ಕಾರ್ಡ್ ಆಗಿದೆ. ಆಂಧ್ರಪ್ರದೇಶದ ವಡ್ಲಮುರು ಗ್ರಾಮದ ಪಡಿತರ ವ್ಯಾಪಾರಿಯೊಬ್ಬರು ಗ್ರಾಹಕರಿಗೆ ನೀಡುವ ಪಡಿತರ ಉತ್ಪನ್ನಗಳನ್ನು ಲೆಕ್ಕ ಇಟ್ಟುಕೊಳ್ಳುವುದಕ್ಕಾಗಿ ಅನಧಿಕೃತ ಕಾರ್ಡ್‌ಗಳನ್ನು ನೀಡಿದ್ದು, ಅದರಲ್ಲಿ ಯೇಸುವಿನ ಫೋಟೋವನ್ನು ಮುದ್ರಿಸಿದ್ದಾರೆ. ಅದೇ ಪಡಿತರ ವ್ಯಾಪಾರಿ ಈ ಹಿಂದೆ ಹಿಂದೂ ದೇವರುಗಳ ಫೋಟೋಗಳನ್ನು ಮುದ್ರಿಸಿದ್ದಾರೆ. ಆದರೆ ಈ ವರ್ಷ ಯೇಸುವಿನ ಫೋಟೋವನ್ನು ಮುದ್ರಿಸಿದ್ದಾನೆ. ಆದ್ದರಿಂದ,  ಪಡಿತರ ಚೀಟಿಯ ಮೇಲೆ ಯೇಸುವಿನ ಫೋಟೋವನ್ನು ಮುದ್ರಿಸಿರುವುದು ರಾಜ್ಯ ಸರ್ಕಾರವಲ್ಲ ಮತ್ತು ಅದು ಅಧಿಕೃತ ಪಡಿತರ ಚೀಟಿಯೂ ಅಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.

ಈ ವಿಷಯದ ಬಗ್ಗೆ ಗೂಗಲ್‌ನಲ್ಲಿ ಹುಡುಕಿದಾಗ, ಯೂಟ್ಯೂಬ್‌ನಲ್ಲಿ ‘ಎಬಿಎನ್ ತೆಲುಗು’ ನ್ಯೂಸ್‌ ಚಾನೆಲ್‌ ಅಪ್‌ಲೋಡ್ ಮಾಡಿದ ವೀಡಿಯೊ ಕಂಡುಬಂದಿದೆ. ಫೋಟೋದಲ್ಲಿರುವ ಕಾರ್ಡ್ ಸರ್ಕಾರವು ನೀಡಿದ ಅಧಿಕೃತ ಪಡಿತರ ಚೀಟಿ ಅಲ್ಲ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ಗ್ರಾಹಕರಿಗೆ ನೀಡಿದ ಪಡಿತರ ಉತ್ಪನ್ನಗಳನ್ನು ಬರೆದಿಡುವ ಉದ್ದೇಶದಿಂದ ಆಂಧ್ರಪ್ರದೇಶದ ವಡ್ಲಮುರು ಗ್ರಾಮದ ಸ್ಥಳೀಯ ಪಡಿತರ ವ್ಯಾಪಾರಿ ಈ ಕಾರ್ಡ್ ಅನ್ನು ಮುದ್ರಿಸಿದ್ದಾರೆ. ಅವರು ಆ ಕಾರ್ಡ್‌ಗಳನ್ನು ಗ್ರಾಹಕರಿಗೆ 5 ರೂಪಾಯಿಗೆ ಮಾರುತ್ತಾರೆ. ‘ಎಬಿಎನ್- ಆಂಧ್ರಜೋತಿ’ ಅವರೊಂದಿಗೆ ಮಾತನಾಡಿರುವ ಸತ್ಯ ಸಾಯಿ ರಾಮ್ (ಪಡಿತರ ವ್ಯಾಪಾರಿಯ ಪತಿ) ಅವರು ಈ ಕಾರ್ಡ್‌ಗಳನ್ನು ಪ್ರತಿವರ್ಷ ದೇವರ ಫೋಟೋದೊಂದಿಗೆ ಮುದ್ರಿಸುತ್ತಾರೆ ಮತ್ತು ಅವು ಸರ್ಕಾರ ನೀಡುವ ಕಾರ್ಡ್‌ಗಳಲ್ಲ ಎಂದು ತಿಳಿಸಿದ್ದಾರೆ. ಹಿಂದಿನ ವರ್ಷಗಳಲ್ಲಿ ಅವರು ಹಿಂದೂ ದೇವರುಗಳ ಫೋಟೋಗಳೊಂದಿಗೆ ಕಾರ್ಡ್‌ಗಳನ್ನು ಮುದ್ರಿಸಿದ್ದರು. ಈ ವರ್ಷ ಯೇಸುವಿನ ಫೋಟೋದೊಂದಿಗೆ ಕಾರ್ಡ್ ಅನ್ನು ಮುದ್ರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

2016, 2017, ಮತ್ತು 2018 ರಲ್ಲಿ ವ್ಯಾಪಾರಿ ಹಿಂದೂ ದೇವರುಗಳ ಫೋಟೋಗಳೊಂದಿಗೆ ಕಾರ್ಡ್‌ಗಳನ್ನು ಮುದ್ರಿಸಿದ್ದಾರೆ. 2016, 2017, 2018 ಮತ್ತು 2019 ರಲ್ಲಿ ವ್ಯಾಪಾರಿ ಮುದ್ರಿಸಿದ ಕಾರ್ಡ್‌ಗಳನ್ನು ಒಳಗೊಂಡಿರುವ ಕೊಲಾಜ್ ಅನ್ನು ‘ಇಂಡಿಯಾ ಟುಡೆ’ ಲೇಖನದಲ್ಲಿ ಕಾಣಬಹುದು.

ಆಂಧ್ರಪ್ರದೇಶ ಸರ್ಕಾರ ಕಳೆದ ವರ್ಷ ನೀಡಿರುವ ಪಡಿತರ ಚೀಟಿಯ ಮಾದರಿ ಫೋಟೋವನ್ನು ‘ಸಾಕ್ಷಿ’ ಲೇಖನದಲ್ಲಿ ಕಾಣಬಹುದು.

ವಿವಾದದ ಬಗ್ಗೆ ಆಂಧ್ರಪ್ರದೇಶ ಸರ್ಕಾರ ಪ್ರತಿಕ್ರಿಯಿಸಿದ್ದು, ಪಡಿತರ ವ್ಯಾಪಾರಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಬೆಂಬಲಿಗನಾಗಿದ್ದು, ಸರ್ಕಾರದ ವಿರುದ್ಧದ ಪ್ರಚಾರವನ್ನು ಉತ್ತೇಜಿಸಲು ಅವರು ಯೇಸುವಿನ ಫೋಟೋವನ್ನು ಉದ್ದೇಶಪೂರ್ವಕವಾಗಿ ಮುದ್ರಿಸಿದ್ದಾರೆ. ಯೇಸುವಿನ ಫೋಟೋವನ್ನು ಮುದ್ರಿಸಿರುವುದು ರಾಜ್ಯ ಸರ್ಕಾರವಲ್ಲ. ಅಲ್ಲದೆ, ಏಸುವಿನ ಫೋಟೋ ಇರುವ ಚೀಟಿ ಅಧಿಕೃತ ಪಡಿತರ ಚೀಟಿಯಲ್ಲ ಎಂದು ಹೇಳಿದೆ.

ಫೋಟೋ ವೈರಲ್ ಆದ ನಂತರ, ಅಧಿಕೃತವಾಗಿ ಸರ್ಕಾರದಿಂದ ನೀಡಲಾಗಿರುವ ಪಡಿತರ ಚೀಟಿಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಪೇಪರ್ ಕಾರ್ಡ್‌ಗಳನ್ನು ಪಡಿತರ ವಿತರಕರು ನೀಡಬಾರದು. ಅಂತಹ ಅನಧಿಕೃತ ಕಾರ್ಡ್‌ಗಳನ್ನು ಮಾರಾಟ ಮಾಡುವ ಪಡಿತರ ವಿತರಕರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ಆಂಧ್ರಜೋತಿ’ ಸುದ್ದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಂಧ್ರಪ್ರದೇಶ ಸರ್ಕಾರವು ಯೇಸುವಿನ ಫೋಟೋವನ್ನು ಪಡಿತರ ಚೀಟಿಗಳಲ್ಲಿ ಮುದ್ರಿಸಿಲ್ಲ. ಅವು ಸ್ಥಳೀಯ ಪಡಿತರ ವ್ಯಾಪಾರಿ ಮುದ್ರಿಸಿದ ಅನಧಿಕೃತ ಕಾರ್ಡ್‌ಗಳಾಗಿವೆ.

Share.

About Author

Comments are closed.

scroll