Fake News - Kannada
 

ಸೆಪ್ಟೆಂಬರ್ 2024 ರಲ್ಲಿ ಶಶಿ ತರೂರ್ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸಿದ ವೀಡಿಯೊವನ್ನು ಸರ್ವಪಕ್ಷ ನಿಯೋಗ ಅಮೆರಿಕಕ್ಕೆ ಭೇಟಿಯ ವಿಡಿಯೋ ಎಂದು ಶೇರ್ ಮಾಡಲಾಗಿದೆ

0

ಆಪರೇಷನ್ ಸಿಂಧೂರ್ ನಂತರ ಭಾರತದ ಕಾರ್ಯತಂತ್ರದ ರಾಜತಾಂತ್ರಿಕ ಸಂಪರ್ಕದ ಭಾಗವಾಗಿ, ಭಯೋತ್ಪಾದನೆಯ ಬಗ್ಗೆ ಜೀರೋ ಟೊಲೆರೆನ್ಸ್  ಮತ್ತು ಏಕೀಕೃತ ರಾಷ್ಟ್ರೀಯ ಸಂದೇಶವನ್ನು ತಿಳಿಸಲು ಸರ್ವಪಕ್ಷ ನಿಯೋಗವನ್ನು ಹಲವಾರು ದೇಶಗಳಿಗೆ ಕಳುಹಿಸಲಾಗಿದೆ. ಈ ನಿಯೋಗಗಳು ರಷ್ಯಾ, ಫ್ರಾನ್ಸ್, ಜಪಾನ್, ಜರ್ಮನಿ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳಲ್ಲಿನ ನೀತಿ ನಿರೂಪಕರು ಮತ್ತು ರಾಜತಾಂತ್ರಿಕರೊಂದಿಗೆ ತೊಡಗಿಸಿಕೊಂಡಿದ್ದು, ಭಯೋತ್ಪಾದನೆ, ವಿಶೇಷವಾಗಿ ರಾಜ್ಯ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಾರ್ವತ್ರಿಕವಾಗಿ ಖಂಡಿಸಬೇಕು ಮತ್ತು ನಿರ್ಣಾಯಕವಾಗಿ ಎದುರಿಸಬೇಕು ಎಂಬ ಭಾರತದ ನಿಲುವನ್ನು ಒತ್ತಿಹೇಳುತ್ತವೆ. ಈ ಸರ್ವಪಕ್ಷ ನಿಯೋಗದ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

22 ಏಪ್ರಿಲ್ 2025 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆ ಮತ್ತು ಭಯೋತ್ಪಾದನೆಯ ವಿರುದ್ಧದ ಅದರ ವಿಶಾಲ ಹೋರಾಟದ ಕುರಿತು ಅಂತರರಾಷ್ಟ್ರೀಯ ಸಮುದಾಯಕ್ಕೆ ತಿಳಿಸಲು ಐದು ದೇಶಗಳಿಗೆ (ಯುನೈಟೆಡ್ ಸ್ಟೇಟ್ಸ್, ಗಯಾನಾ, ಪನಾಮ, ಬ್ರೆಜಿಲ್ ಮತ್ತು ಕೊಲಂಬಿಯಾ) ಈ ಸರ್ವಪಕ್ಷ ಸಂಸದೀಯ ನಿಯೋಗಗಳಲ್ಲಿ ಒಂದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಮುನ್ನಡೆಸುತ್ತಿದ್ದಾರೆ. ನಿಯೋಗವು ಈಗಾಗಲೇ ಅಮೆರಿಕ ಮತ್ತು ಗಯಾನಾಗೆ ಭೇಟಿ ನೀಡಿದ್ದು, ಮೇ 27, 2025 ರಂದು ಪನಾಮಕ್ಕೆ ಪ್ರಯಾಣಿಸಲಿದೆ, ನಂತರ ಬ್ರೆಜಿಲ್ ಮತ್ತು ಕೊಲಂಬಿಯಾಕ್ಕೆ ಭೇಟಿ ನೀಡಲಿದೆ.

ಈ ಸಂದರ್ಭದಲ್ಲಿ, ಶಶಿ ತರೂರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸುತ್ತಿರುವುದನ್ನು ತೋರಿಸುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಕಾಂಗ್ರೆಸ್ ಸಂಸದರು ಟ್ರಂಪ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷರ ನಡುವೆ ಹೋಲಿಕೆ ಮಾಡುತ್ತಾ, ಅವರನ್ನು ಒಪ್ಪುವ ಅಥವಾ ಆಹ್ಲಾದಕರ ನಾಯಕನಲ್ಲ ಎಂದು ತಿಳಿಸುತ್ತಾರೆ. ಸರ್ವಪಕ್ಷ ನಿಯೋಗದ ಅಮೆರಿಕ ಭೇಟಿಯ ಸಮಯದಲ್ಲಿ ತರೂರ್ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಪ್ರಸಾರ ಮಾಡಲಾಗುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಭಾರತದ ಇತ್ತೀಚಿನ ಸರ್ವಪಕ್ಷ ನಿಯೋಗ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಶಿ ತರೂರ್ ಈ ಹೇಳಿಕೆಗಳನ್ನು ನೀಡಿದ್ದಾರೆಯೇ ಎಂದು ಕೇಳುವ ಹಲವಾರು ಪ್ರಶ್ನೆಗಳು ನಮ್ಮ ವಾಟ್ಸಾಪ್ ಸಲಹೆವಾಣಿಯಲ್ಲಿ (+91 92470 52470) ಬಂದಿವೆ. ಹಾಗಾದರೆ ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು  ಪರಿಶೀಲಿಸೋಣ.

ಕ್ಲೇಮ್: ಆಪರೇಷನ್ ಸಿಂಧೂರ್ ಕುರಿತು ಭಾರತದ ಜಾಗತಿಕ ಸಂಪರ್ಕ ಅಭಿಯಾನದ ಭಾಗವಾಗಿ, ಭಾರತೀಯ ನಿಯೋಗ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸುತ್ತಿರುವ ವೀಡಿಯೊ.

ಫ್ಯಾಕ್ಟ್: ಈ ವೈರಲ್ ವೀಡಿಯೊವು ಇತ್ತೀಚಿನ ಅಮೆರಿಕಕ್ಕೆ ಭೇಟಿ ನೀಡಿದ ಭಾರತದ ಸರ್ವಪಕ್ಷ ನಿಯೋಗಕ್ಕೂ ಸಂಬಂಧಿಸಿಲ್ಲ. ಈ ವೀಡಿಯೊ ಸೆಪ್ಟೆಂಬರ್ 2024 ರದ್ದು, ಸೆಪ್ಟೆಂಬರ್ 10, 2024 ರಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಜೈಪುರ ಸಾಹಿತ್ಯ ಉತ್ಸವದಲ್ಲಿ ಸಂಸದ ಶಶಿ ತರೂರ್ ಅವರು ಡೊನಾಲ್ಡ್ ಟ್ರಂಪ್ ಬಗ್ಗೆ ಮಾತನಾಡುತ್ತಿರುವುದನ್ನು ತೋರಿಸುತ್ತದೆ. ಆ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷರಾಗಿರಲಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್  ದಾರಿತಪ್ಪಿಸುವಂತಿದೆ.

ವೈರಲ್ ವೀಡಿಯೊದ ಕುರಿತು ವಿವರಗಳನ್ನು ಪಡೆಯಲು, ನಾವು ಕ್ಲಿಪ್‌ನಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಸೆಪ್ಟೆಂಬರ್ 24, 2024 ರಂದು ‘ಏಷ್ಯಾ ಸೊಸೈಟಿ’ಯ ಇನ್‌ಸ್ಟಾಗ್ರಾಮ್ ಅಕೌಂಟ್ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊವನ್ನು ನಮಗೆ ತೋರಿಸಿದೆ. ಈ ಮೂಲಕ, ಪ್ರಸ್ತುತ ಚಾಲ್ತಿಯಲ್ಲಿರುವ ವೀಡಿಯೊ ಶಶಿ ತರೂರ್ ನೇತೃತ್ವದ ಇತ್ತೀಚಿನ ನಿಯೋಗದಿಂದ ಬಂದದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದು ಭಯೋತ್ಪಾದನೆಯ ಕುರಿತು ಭಾರತದ ನಿಲುವನ್ನು ಪ್ರಸ್ತುತಪಡಿಸುವ ಗುರಿಯನ್ನು ಹೊಂದಿದ್ದು,  ವೈರಲ್ ವೀಡಿಯೊ ಸರ್ವಪಕ್ಷ ನಿಯೋಗದ ಯುಎಸ್ ಭೇಟಿಗಿಂತ ಹಿಂದಿನದಾಗಿದೆ. 

ಇನ್‌ಸ್ಟಾಗ್ರಾಮ್ ಪೋಸ್ಟ್‌ನ ವಿವರಣೆಯ ಪ್ರಕಾರ, ಈ ವೀಡಿಯೊ ಜೈಪುರ ಸಾಹಿತ್ಯ ಉತ್ಸವ (ಜೆಎಲ್‌ಎಫ್) 2024 ರಲ್ಲಿ ಶಶಿ ತರೂರ್ ಭಾಗವಹಿಸಿದಾಗಿದೆ. ವಿವರಣೆಯಲ್ಲಿ ಪೂರ್ಣ ವೀಡಿಯೊ ಏಷ್ಯಾ ಸೊಸೈಟಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ ಎಂದು ಉಲ್ಲೇಖಿಸಲಾಗಿದೆ. ನಾವು ನಂತರ ಏಷ್ಯಾ ಸೊಸೈಟಿಯ ಯೂಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿದಾಗ, ಸೆಪ್ಟೆಂಬರ್ 12, 2024 ರಂದು ಪ್ರಕಟವಾದ “Jaipur Literature Festival 2024 | Shashi Tharoor: A Man for All Seasons.” ಎಂಬ ಶೀರ್ಷಿಕೆಯ ವೈರಲ್ ವೀಡಿಯೊದ ವಿಸ್ತೃತ ಆವೃತ್ತಿಯನ್ನು ಕಂಡುಕೊಂಡೆವು. ಈ ವೀಡಿಯೊದಲ್ಲಿ ತರೂರ್, ಇಂಡಿಯಾ ಟುಡೇ ಗ್ರೂಪ್‌ನ ಅಧ್ಯಕ್ಷ ಮತ್ತು ಪ್ರಧಾನ ಸಂಪಾದಕ ಅರೂನ್ ಪುರಿ ಅವರೊಂದಿಗೆ ಭಾರತೀಯ ಮತ್ತು ಅಮೇರಿಕನ್ ರಾಜಕೀಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಚರ್ಚಿಸುತ್ತಿರುವುದನ್ನು ತೋರಿಸಲಾಗಿದೆ. ಏಷ್ಯಾ ಸೊಸೈಟಿ ಪೋಸ್ಟ್ ಮಾಡಿದ ವೀಡಿಯೊ ವಿವರಣೆಯ ಪ್ರಕಾರ, ತರೂರ್ ಸೆಪ್ಟೆಂಬರ್ 10, 2024 ರಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಜೈಪುರ ಸಾಹಿತ್ಯ ಉತ್ಸವದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ. ವೈರಲ್ ಕ್ಲಿಪ್ 12:36 ರ ಟೈಂಸ್ಟಮ್ಪ್ ಆಸುಪಾಸಲಿದ್ದು, ಅರೂನ್ ಪುರಿ ತರೂರ್ ಅವರನ್ನು “ಟ್ರಂಪ್ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದಾಗ ತರೂರ್ ಈ ಮಾತನ್ನು ಹೇಳಿದ್ದಾರೆ. 

ಈ ವೀಡಿಯೊವನ್ನು ಏಷ್ಯಾ ಸೊಸೈಟಿಯ ಅಫೀಷಿಯಲ್ ವೆಬ್‌ಸೈಟ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ. ಸೆಪ್ಟೆಂಬರ್ 11, 2024 ರಂದು, ಜೈಪುರ ಸಾಹಿತ್ಯ ಉತ್ಸವ, ಏಷ್ಯಾ ಸೊಸೈಟಿ ಮತ್ತು ಶಶಿ ತರೂರ್‌ನ ಅಫೀಷಿಯಲ್ ಇನ್‌ಸ್ಟಾಗ್ರಾಮ್ ಅಕೌಂಟ್ಸ್ ತರೂರ್ ಮತ್ತು ಪುರಿ ನಡುವಿನ ಸಂಭಾಷಣೆಯ ವಿವಿಧ ಫೋಟೋಗಳನ್ನು ಹಂಚಿಕೊಂಡಿವೆ (ಇಲ್ಲಿ).

ಸೆಪ್ಟೆಂಬರ್ 15, 2024 ರಂದು, ಶಶಿ ತರೂರ್ ತಮ್ಮ ಅಫೀಷಿಯಲ್  X (ಹಿಂದೆ ಟ್ವಿಟರ್) ಹ್ಯಾಂಡಲ್‌ನಲ್ಲಿ ಪೂರ್ಣ ವೀಡಿಯೊದ ಲಿಂಕ್ ಅನ್ನು  ”The full video of my conversation with @AroonPurie of @IndiaToday in New York.” ಎಂದು ಪೋಸ್ಟ್ ಮಾಡಿದ್ದಾರೆ. 

ಆ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಅವರು ಜನವರಿ 20, 2025 ರಂದು ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದರು (ಇಲ್ಲಿ, ಇಲ್ಲಿ).

ಪಹಲ್ಗಾಮ್‌ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳು, ಪ್ರಧಾನ ಕಚೇರಿಗಳು ಮತ್ತು ಲಾಂಚ್‌ಪ್ಯಾಡ್‌ಗಳಿಗೆ ಭಾರತದ ನಿಖರ ಮತ್ತು ಮಾಪನಾಂಕ ನಿರ್ಣಯಿತ ಪ್ರತಿಕ್ರಿಯೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಅಮೆರಿಕಕ್ಕೆ ತೆರಳಿದ್ದ ಸರ್ವಪಕ್ಷ ನಿಯೋಗವು ಎತ್ತಿ ತೋರಿಸಿದೆ.

ಮೇ 24, 2025 ರಂದು, ನ್ಯೂಯಾರ್ಕ್‌ನಲ್ಲಿ ಭಾರತದ ಕಾನ್ಸುಲೇಟ್ ಜನರಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತರೂರ್ ಮಾತನಾಡಿದರು. ಸಂವಾದದ ಸಮಯದಲ್ಲಿ, ಪಹಲ್ಗಾಮ್ ದಾಳಿಗೆ ಭಾರತದ ಸರಿಯಾದ ಪ್ರತಿಕ್ರಿಯೆ ಮತ್ತು ಪಾಕಿಸ್ತಾನದ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸಲು ರಾಷ್ಟ್ರವು ಹೇಗೆ ಒಗ್ಗಟ್ಟಿನಿಂದ ನಿಂತಿದೆ ಎಂಬುದರ ಕುರಿತು ಅವರು ಚರ್ಚಿಸಿದರು. ಭಾರತವು ಪಾಕಿಸ್ತಾನದೊಂದಿಗೆ ಯುದ್ಧದಲ್ಲಿ ತೊಡಗಿಸಿಕೊಳ್ಳಲು ಯಾವುದೇ ಆಸಕ್ತಿಯನ್ನು ಹೊಂದಿಲ್ಲ ಎಂದು ತರೂರ್ ಒತ್ತಿ ಹೇಳಿದರು. 21 ನೇ ಶತಮಾನದ ಸವಾಲುಗಳನ್ನು ಎದುರಿಸಲು ದೇಶವು ಸಿದ್ಧವಾಗುತ್ತಿದ್ದಂತೆ ಆರ್ಥಿಕ ಬೆಳವಣಿಗೆ ಮತ್ತು ಅದರ ಜನರ ಉನ್ನತಿಯ ಮೇಲೆ ಗಮನಹರಿಸುವುದು ಹೆಚ್ಚು ಉತ್ತಮ ಎಂದು ಒತ್ತಿ ಹೇಳಿದರು (ಇಲ್ಲಿ, ಇಲ್ಲಿ ಮತ್ತು ಇಲ್ಲಿ).

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಇತ್ತೀಚಿನ ಸರ್ವಪಕ್ಷ ನಿಯೋಗ ಅಮೆರಿಕಕ್ಕೆ ಭೇಟಿ ನೀಡಿದ್ದಕ್ಕೆ ಸಂಬಂಧಿಸಿದಂತೆ ಶಶಿ ತರೂರ್ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸುತ್ತಿರುವ ಸೆಪ್ಟೆಂಬರ್ 2024 ರ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

 

Share.

Comments are closed.

scroll