ಡಿಸೆಂಬರ್ 11 ರಂದು 6ನೇ ವಂದೇ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು, ಈ ಬೆಳವಣಿಗೆಗಳ ಮಧ್ಯೆ ವಂದೇ ಭಾರತ್ ರೈಲಿನದ್ದು ಎನ್ನಲಾದ ವಿಡಿಯೊವೊಂದು ವೈರಲ್ ಆಗಿದೆ. ರೈಲಿನಲ್ಲಿರುವ ಏರ್ ಕಂಡಿಷನರ್ನ ಕಿಂಡಿಗಳಿಂದ ನೀರು ಸೋರುತ್ತಿದ್ದು, ಅದು ಪ್ರಯಾಣಿಕರ ಬೆಡ್ ಮೇಲೆ ಸುರಿಯುತ್ತಿರುವ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದು. ಪ್ರಯಾಣಿಕರ ಲಗೇಜ್ಗಳೆಲ್ಲ ನೀರಿನಲ್ಲಿ ಸಂಪೂರ್ಣ ನೆನೆದು ಹೋಗಿದ್ದೂ ‘ಇದು ರೈಲಿನ ಬಾತ್ ರೂಮಿನಿಂದ ಬರುತ್ತಿರುವ ನೀರು. ಪ್ರಯಾಣಿಕರಿಗೆ ತುಂಬ ಕಿರಿಕಿರಿ ಆಗುತ್ತಿದೆ. ಇದನ್ನು ಟಿಟಿ ಪರಿಶೀಲನೆ ಮಾಡಿದ್ದಾರೆ. ಆದರೆ ಯಾವುದೇ ಮೆಕ್ಯಾನಿಕ್ನನ್ನು ಕರೆಸಿ, ರಿಪೇರಿ ಮಾಡಿಸಿಲ್ಲ’ ಎಂದು ಈ ವಿಡಿಯೊ ರೆಕಾರ್ಡ್ ಮಾಡಿದಾತ ಹೇಳುವುದೂ ಕೇಳಿಸುತ್ತದೆ. ಇದೇ ನೋಡಿ ನಮ್ಮ ಪ್ರಧಾನಿಗಳು ಉದ್ಘಾಟಿಸಿದ ವಂದೇ ಭಾರತ್ ರೈಲಿನ ದುಃಸ್ಥಿತಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ, ವಂದೇ ಭಾರತ್ ರೈಲಿನಲ್ಲಿ ನಡೆದ ಘಟನೆಯೇ ಎಂದು ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ವಂದೇ ಭಾರತ್ ರೈಲಿನಲ್ಲಿ ನೀರು ಸೋರುತ್ತಿರುವ ವಿಡಿಯೋ.
ನಿಜಾಂಶ: ಈ ಘಟನೆಯು 29 ಜೂನ್ 2019 ರಂದು ದಾನಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಸಂಘಮಿತ್ರ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ. ನಾಗ್ಪುರದ ಬಳಿ ಭಾರೀ ಮಳೆಯಿಂದಾಗಿ, ಹವಾನಿಯಂತ್ರಣ ಘಟಕದ ಡ್ರೈನ್ ಹೋಲ್‌ನಲ್ಲಿ ಎಲೆಗಳು ಮತ್ತು ಅವಶೇಷಗಳು ಸಂಗ್ರಹವಾಗಿದ್ದು, ನೀರು ‘ರಿಟರ್ನ್ ಏರ್ ಡಕ್ಟ್’ ಮೇಲೆ ಬಿದ್ದು ಕಂಪಾರ್ಟ್‌ಮೆಂಟ್‌ಗೆ ಸೋರಿಕೆಯಾಗಿದೆ. ಇದನ್ನು ರೈಲ್ವೆ ಸಿಬ್ಬಂದಿ 90 ನಿಮಿಷಗಳಲ್ಲಿ ಸರಿಪಡಿಸಿದರು. ಇದಲ್ಲದೆ, ವಂದೇ ಭಾರತ್ ಎಕ್ಸ್‌ಪ್ರೆಸ್ ಇಲ್ಲಿಯವರೆಗೆ ಕುಳಿತಿರುವಾಗ ಪ್ರಯಾಣಿಸಲು ಬಳಸಬಹುದಾದ ಆಸನಗಳನ್ನು ಮಾತ್ರ ಹೊಂದಿದೆ. ವೀಡಿಯೊದಲ್ಲಿ ತೋರಿಸಿರುವಂತೆ ಯಾವುದೇ ಮಲಗುವ ಬರ್ತ್‌ಗಳಿಲ್ಲ. ಹಾಗಾಗಿ ಪೋಸ್ಟ್ ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ‘ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನೀರು ಸೋರುತ್ತಿರುವ ದೃಶ್ಯವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 29 ಜೂನ್ 2019 ರಂದು ‘ಸುಯಜ್ಞ ರಾಯ್’ ಎಂಬ ವ್ಯಕ್ತಿ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊ ನಮಗೆ ಕಂಡುಬಂದಿದೆ. ಸಂಘಮಿತ್ರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ ‘ಎ1’ ಬೋಗಿಯಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಆದರೆ ರೈಲ್ವೇ ಇಲಾಖೆ ತಕ್ಷಣವೇ ಸ್ಪಂದಿಸಿ ದೋಷ ಸರಿಪಡಿಸಿದೆ ಎಂದು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
IndiaTV, Times of India ದ ವರದಿಗಳ ಪ್ರಕಾರ, ಈ ಘಟನೆಯು 29 ಜೂನ್ 2019 ರಂದು ದಾನಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಸಂಘಮಿತ್ರ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ. ನಾಗ್ಪುರದ ಬಳಿ ಭಾರೀ ಮಳೆಯಿಂದಾಗಿ, ಹವಾನಿಯಂತ್ರಣ ಘಟಕದ ಡ್ರೈನ್ ಹೋಲ್‌ನಲ್ಲಿ ಎಲೆಗಳು ಮತ್ತು ಕಸ ಸಂಗ್ರಹವಾಗಿದ್ದು, ನೀರು ‘ರಿಟರ್ನ್ ಏರ್ ಡಕ್ಟ್’ ಮೇಲೆ ಬಿದ್ದು ಕಂಪಾರ್ಟ್‌ಮೆಂಟ್‌ಗೆ ಸೋರಿಕೆಯಾಗಿದೆ. ಇದನ್ನು ರೈಲ್ವೆ ಸಿಬ್ಬಂದಿ 90 ನಿಮಿಷಗಳಲ್ಲಿ ಸರಿಪಡಿಸಿದರು ಎಂದೂ ವರದಿಯಲ್ಲಿ ಉಲ್ಲೇಖಿಸಿದ್ದವು. ಹೀಗಾಗಿ ಅದು ವಂದೇ ಭಾರತ್ ರೈಲಿನದ್ದು ಅಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಇಂಡಿಯಾ ಟುಡೆ ಹೇಳಿದೆ. ಇದಲ್ಲದೆ, ವಂದೇ ಭಾರತ್ ಎಕ್ಸ್‌ಪ್ರೆಸ್ ಇಲ್ಲಿಯವರೆಗೆ ಕುಳಿತು ಪ್ರಯಾಣಿಸುವ ಸೌಲಭ್ಯವನ್ನು ಮಾತ್ರ ಹೊಂದಿದ್ದು, ವಿಡಿಯೊದಲ್ಲಿ ತೋರಿಸಿರುವಂತೆ ಯಾವುದೇ ಮಲಗುವ ಬರ್ತ್‌ಗಳಿಲ್ಲ. ವಂದೇ ಭಾರತ್ ರೈಲುಗಳಲ್ಲಿ ಶೀಘ್ರದಲ್ಲೇ ಸ್ಲೀಪರ್‌ಗಳನ್ನು ಪರಿಚಯಿಸಲು ಸರ್ಕಾರ ಆಶಿಸುತ್ತಿದೆ ಎಂದು ವರದಿ ಆಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2019 ರಲ್ಲಿ ಸಂಘಮಿತ್ರ ಎಕ್ಸ್‌ಪ್ರೆಸ್‌ನಲ್ಲಿ ನಡೆದ ಘಟನೆಯನ್ನು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಎಂದು ತಪ್ಪಾಗಿ ಲಿಂಕ್ ಮಾಡುವ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.