Fake News - Kannada
 

ಈ ಕೊಲೆಗಾರ ವೈದ್ಯನ 125 ಅಕ್ರಮ ಮೂತ್ರಪಿಂಡ ಕಸಿಯನ್ನು ಕೋವಿಡ್-19ಗೆ ತಪ್ಪಾಗಿ ಜೋಡಿಸಲಾಗಿದೆ

0

ಕೋವಿಡ್ -19 ನೆಪವೊಡ್ಡಿ ಮೂತ್ರಪಿಂಡಗಳ ಕಳವು ಮಾಡಲು 125 ರೋಗಿಗಳನ್ನು ಕೊಂದ ವೈದ್ಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ‘ಟೈಮ್ಸ್ ಆಫ್ ಇಂಡಿಯಾ’ ಲೇಖನದ ಲೋಗೋ ಇರುವ ಸುದ್ದಿಯ ಸಣ್ಣ ವಿವರದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದೆ. ಅದರಲ್ಲಿ, ವೈದ್ಯರು ರೋಗಿಗಳನ್ನು ಕೊಂದು ಮೊಸಳೆಗಳಿಗೆ ಆಹಾರ ನೀಡಿದ್ದಾರೆ ಎಂದು ಸಹ ಉಲ್ಲೇಖಿಸಲಾಗಿದೆ. ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಮೂತ್ರಪಿಂಡಗಳ ಕಳವಿಗಾಗಿ ಕೋವಿಡ್-19 ನೆಪದಲ್ಲಿ 125 ರೋಗಿಗಳನ್ನು ಕೊಂದು ಮೊಸಳೆಗಳಿಗೆ ಆಹಾರ ನೀಡಿದ ವೈದ್ಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ನಿಜಾಂಶ: ಚಿತ್ರದಲ್ಲಿ ತೋರಿಸಲಾಗಿರುವ ವೈದ್ಯನನ್ನು (ದೇವೇಂದ್ರ ಶರ್ಮಾ) ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂಬುದು ನಿಜ. ವೈದ್ಯರು ಸರಣಿ ಕೊಲೆಗಾರರಾಗಿದ್ದರು. ಅವರು 1994-2004ರ ಅವಧಿಯಲ್ಲಿ ಸುಮಾರು 125 ಅಕ್ರಮ ಮೂತ್ರಪಿಂಡ ಕಸಿ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಅವರನ್ನು 2004 ರಲ್ಲಿ ಬಂಧಿಸಲಾಗಿತ್ತು. ಅವರು, 2020 ರ ಜನವರಿ ತನಕ ಜೈಪುರ ಜೈಲಿನಲ್ಲಿದ್ದರು. ಅವರಿಗೆ ಕೋರ್ಟ್‌ 2020ರ ಫೆಬ್ರವರಿ ಅಂತ್ಯದವರೆಗೆ ಪೆರೋಲ್ ನೀಡಿತ್ತು. ಆದರೆ, ಅವರು ತಮ್ಮ ಪೆರೋಲ್‌ ಮುಗಿಯುವ ಕೊನೆ ದಿನಗಳಲ್ಲಿ ಪರಾರಿಯಾಗಿದ್ದರು. ನಂತರ ಅವರನ್ನು ಜುಲೈ 2020 ರಲ್ಲಿ ದೆಹಲಿ ಪೊಲೀಸರು ಬಂಧಿಸಿದರು. ಕೊರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕೂ 16 ವರ್ಷಗಳ ಮೊದಲೇ, 1994-2004ರ ಅವಧಿಯಲ್ಲಿ 125 ಅಕ್ರಮ ಮೂತ್ರಪಿಂಡ ಕಸಿ ನಡೆಸಿದ್ದ ಆತನ ಅಪರಾಧಗಳಿಗೆ ಈಗ ಕೋವಿಡ್ -19 ದೃಷ್ಟಿಕೋನವನ್ನು ಸೇರಿಸಲಾಗಿದೆ. ಆದ್ದರಿಂದ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಫೋಟೋದಲ್ಲಿ ಉಲ್ಲೇಖಿಸಲಾದ ಲೇಖನವನ್ನು ಹುಡುಕಿದಾಗ, ‘ಟೈಮ್ಸ್ ಆಫ್ ಇಂಡಿಯಾ’ ಇತ್ತೀಚೆಗೆ ದೇವೇಂದ್ರ ಶರ್ಮಾ ಬಗೆಗಿನ ಲೇಖನವನ್ನು ಪ್ರಕಟಿಸಿದೆ ಎಂದು ತಿಳಿದುಬಂದಿದೆ. ಫೋಟೋದಲ್ಲಿರುವ ವ್ಯಕ್ತಿ ಆಯುರ್ವೇದ ವೈದ್ಯ ದೇವೇಂದ್ರ ಶರ್ಮಾ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಅವರು ಸರಣಿ ಕೊಲೆಗಾರರಾಗಿದ್ದರು ಮತ್ತು 1994-2004ರ ಅವಧಿಯಲ್ಲಿ ಸುಮಾರು 125 ಅಕ್ರಮ ಮೂತ್ರಪಿಂಡ ಕಸಿ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಸಹ ಓದಬಹುದು. ಅವರನ್ನು 2004 ರಲ್ಲಿ ಬಂಧಿಸಲಾಯಿತು ಮತ್ತು 2020 ರ ಜನವರಿ ತನಕ ಜೈಪುರ ಜೈಲಿನಲ್ಲಿದ್ದರು. ಅವರಿಗೆ ಪೆರೋಲ್ ನೀಡಲಾಯಿತು. ಆದರೆ ಅವರು ಫೆಬ್ರವರಿ 2020 ರಲ್ಲಿ ತಮ್ಮ ಪೆರೋಲ್‌ನ ಮುಗಿಯುವ ಕೊನೆಯಲ್ಲಿ ಪರಾರಿಯಾಗಿದ್ದರು. ನಂತರ ಅವರನ್ನು ಜುಲೈ 2020 ರಲ್ಲಿ ದೆಹಲಿ ಪೊಲೀಸರು ಬಂಧಿಸಿದರು. ಅವರ ಜೀವನ ಘಟನೆಗಳ ಸಾರಾಂಶವನ್ನು ‘ಟೈಮ್ಸ್ ಆಫ್ ಇಂಡಿಯಾ’ ಲೇಖನದಲ್ಲಿ ಕಾಣಬಹುದು. ಆದರೆ, ಕೋವಿಡ್-19 ಕೋನವನ್ನು ಲೇಖನದಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.

‘ಇಂಡಿಯನ್ ಎಕ್ಸ್‌ಪ್ರೆಸ್’ ಲೇಖನದಲ್ಲಿ, ಪೊಲೀಸ್ ಅಧಿಕಾರಿಗಳು ವಿಚಾರಣೆಯ ಸಮಯದಲ್ಲಿ ಅಪರಾಧಿ ಒಪ್ಪಿಕೊಂಡ ಮಾಹಿತಿಯ ಬಗ್ಗೆ ಓದಬಹುದು. ‘1994-2004ರ ನಡುವೆ ಆತ 125 ಕ್ಕೂ ಹೆಚ್ಚು ಮೂತ್ರಪಿಂಡ ಕಸಿಗಳನ್ನು ಅಕ್ರಮವಾಗಿ ಮಾಡಿದ್ದಾನೆ. ಇದಕ್ಕಾಗಿ ಆತ ತಲಾ 5-7 ಲಕ್ಷ ರೂ. ಪಡೆಯುತ್ತಿದ್ದ. ವೈದ್ಯ ಮತ್ತು ಆತನ ಸಹಚರರು ಟ್ಯಾಕ್ಸಿಗಳನ್ನು ಬಾಡಿಗೆಗೆ ತೆಗೆದುಕೊಂಡು ಚಾಲಕರನ್ನು ಜನಸಂಚಾರವಿಲ್ಲದ ಏಕಾಂತ ಸ್ಥಳದಲ್ಲಿ ಕೊಲ್ಲುತ್ತಿದ್ದರು. ಅವರ ಶವಗಳನ್ನು ಮೊಸಳೆಗಳಿದ್ದ ಕಸ್‌ಗಂಜ್‌ನ ಹಜಾರಾ ಕಾಲುವೆಯಲ್ಲಿರುವ ಎಸೆಯುತ್ತಿದ್ದರು. ಆದ್ದರಿಂದ ಶವಗಳನ್ನು ಪತ್ತೆಹಚ್ಚುವ ಯಾವುದೇ ಅವಕಾಶವಿರಲಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.  ಆದ್ದರಿಂದ, 125 ಅಕ್ರಂ ಮೂತ್ರಪಿಂಡ ಕಸಿ ಕೋವಿಡ್-19 ಸಂದರ್ಭದಲ್ಲಿ ನಡೆದಿಲ್ಲ. ಆತನ ಕೊಲೆಗಳಿಗೂ ಕೋವಿಡ್-19ಗೂ ಸಂಬಂಧವಿಲ್ಲ. ದೇವೇಂದ್ರ ಶರ್ಮಾ ಅವರ ಕೊಲೆಗಳ ಬಗ್ಗೆ ಅನೇಕ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, 1994-2004ರ ಅವಧಿಯಲ್ಲಿ ಈ ಕೊಲೆಗಾರ ವೈದ್ಯರ 125 ಅಕ್ರಮ ಮೂತ್ರಪಿಂಡ ಕಸಿ ಪ್ರಕರಣವನ್ನು ಕೋವಿಡ್-19ಗೆ ಸುಳ್ಳುಸುಳ್ಳೇ ಜೋಡಿಸಿ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll