FIFA ವಿಶ್ವಕಪ್ 2022 ರ ಅಂತಿಮ ಪಂದ್ಯದಲ್ಲಿ ಅರ್ಜೆಂಟೀನಾ ವಿಜಯದ ನಂತರ, ನಾಯಕ ಲಿಯೋನೆಲ್ ಮೆಸ್ಸಿ ಓರ್ವ ಮಹಿಳೆಯನ್ನು ತಬ್ಬಿಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬಿತ್ತು. ಇದರಲ್ಲಿ ಆಕೆಯನ್ನು ಆತನ ತಾಯಿ ಎಂದು ಹೇಳಲಾಗಿತ್ತು. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.
ಕ್ಲೈಮ್ : FIFA ವಿಶ್ವಕಪ್ 2022 ರ ಫೈನಲ್ ಪಂದ್ಯವನ್ನು ಗೆದ್ದ ನಂತರ ಮೆಸ್ಸಿ ತನ್ನ ತಾಯಿಯನ್ನು ತಬ್ಬಿಕೊಂಡಿರುವ ವೀಡಿಯೊ.
ಫ್ಯಾಕ್ಟ್ : ವೈರಲ್ ವೀಡಿಯೊದಲ್ಲಿರುವ ಮಹಿಳೆ ಮೆಸ್ಸಿಯ ತಾಯಿ ಸಿಲಿಯಾ ಅಲ್ಲ. ಅವರು ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡದ ಅಡುಗೆಯವರಾದ ಆಂಟೋನಿಯಾ ಫರಿಯಾಸ್. ಆದಾಗ್ಯೂ, ವಿಜಯದ ನಂತರ, ಮೆಸ್ಸಿ ನೇರಳೆ ಬಣ್ಣದ ಜರ್ಸಿಯನ್ನು ಧರಿಸಿರುವ ತನ್ನ ತಾಯಿ ಸಿಲಿಯಾಳನ್ನು ಸಹ ಅಪ್ಪಿಕೊಂಡರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪುದಾರಿಗೆಳೆಯುತ್ತಿದೆ.
ಮೊದಲಿಗೆ, ನಾವು ವೈರಲ್ ವೀಡಿಯೊದಲ್ಲಿ ಮಹಿಳೆಯ ದೃಶ್ಯಗಳನ್ನು ಮೆಸ್ಸಿಯ ತಾಯಿ ಸಿಲಿಯಾ ಮರಿಯಾ ಕುಸಿಟ್ಟಿನಿಯ ಚಿತ್ರಗಳೊಂದಿಗೆ ಹೋಲಿಸಿದ್ದೇವೆ ಈ ಮೂಲಕ ವೀಡಿಯೊದಲ್ಲಿರುವ ಮಹಿಳೆ ಅವನ ತಾಯಿ ಸೆಲಿಯಾ ಅಲ್ಲ ಎಂದು ಕಂಡುಕೊಂಡಿದ್ದೇವೆ. ತದನಂತರ ಸಂಬಂಧಿತ ಕೀವರ್ಡ್‌ಗಳೊಂದಿಗೆ ಇಂಟರ್ನೆಟ್ ನಲ್ಲಿ ಪರಿಶೀಲಿಸಿದಾಗ ಅರ್ಜೆಂಟೀನಾದ ಮಾಧ್ಯಮ ವೆಬ್‌ಸೈಟ್‌ಗಳಾದ ಲಾಸ್ ಆಂಡಿಸ್ ಮತ್ತು ಕ್ಲಾರಿನ್‌ನಲ್ಲಿ ವರದಿಗಳನ್ನು ಕಂಡುಕೊಂಡಿದ್ದೇವೆ. ಅವರು ಈ ಮಹಿಳೆಯನ್ನು ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡದ ಅಡುಗೆಯವರಾದ ಆಂಟೋನಿಯಾ ಫರಿಯಾಸ್ ಎಂದು ಗುರುತಿಸಿದ್ದಾರೆ.
ನಾವು ನಂತರ ವೈರಲ್ ವೀಡಿಯೊದಲ್ಲಿರುವ ಆಂಟೋನಿಯಾ ಫರಿಯಾಸ್ ಅವರ ದೃಶ್ಯಗಳನ್ನು ಅವರ ಇತರ ಸಾಮಾಜಿಕ ಮಾಧ್ಯಮ ಚಿತ್ರಗಳೊಂದಿಗೆ ಹೋಲಿಸಿದ್ದೇವೆ ಮತ್ತು ವೈರಲ್ ವೀಡಿಯೊದಲ್ಲಿರುವ ಮಹಿಳೆ ತಂಡದ ಅಡುಗೆಯವರಾದ ಆಂಟೋನಿಯಾ ಫರಿಯಾಸ್ ಎಂದು ಖಚಿತಪಡಿಸಿದ್ದೇವೆ. ಮಾಧ್ಯಮ ವರದಿಗಳ ಪ್ರಕಾರ, ಅವರು 10 ವರ್ಷಗಳಿಂದ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ ಹಾಗಾಗಿ ತಂಡದೊಂದಿಗೆ ಅವಿನಾಭಾವ ನಂಟಿದೆ ಎಂದು ತಿಳಿದು ಬಂದಿದೆ.
ಅವರು 2021 ರ ಕೋಪಾ ಅಮೇರಿಕಾ ವಿಜಯದ ಸಮಯದಲ್ಲಿ ಅರ್ಜೆಂಟೀನಾ ತಂಡದೊಂದಿಗೆ ಆಚರಿಸುತ್ತಿರುವ ಚಿತ್ರಗಳನ್ನು ಸಹ ಶೇರ್ ಮಾಡಿದ್ದಾರೆ.
ಇದಲ್ಲದೆ, ರಾಯಿಟರ್ಸ್ ಮತ್ತು ಗೆಟ್ಟಿ ಇಮೇಜಸ್ ಮೆಸ್ಸಿಯ ತಾಯಿ ಸೆಲಿಯಾ ಪಂದ್ಯದ ಸಮಯದಲ್ಲಿ ನೇರಳೆ ಬಣ್ಣದ ಜರ್ಸಿಯನ್ನು ಧರಿಸಿರುವುದನ್ನು ತೋರಿಸಿದ್ದವು ಮತ್ತು ಅವಳ ಎಡ ಮುಂದೋಳಿನಲ್ಲಿ ಯಾವುದೇ ರೀತಿಯ ಟ್ಯಾಟೂಗಳಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ವಿಜಯದ ನಂತರ ಮೆಸ್ಸಿ ತನ್ನ ತಾಯಿ ಸಿಲಿಯಾಳನ್ನು ಅಪ್ಪಿಕೊಂಡರೂ, ವೈರಲ್ ವೀಡಿಯೊದಲ್ಲಿರುವ ಮಹಿಳೆ ಅವನ ತಾಯಿಯಲ್ಲ. ಆಕೆ ಅರ್ಜೆಂಟೀನಾ ತಂಡದ ಅಡುಗೆಯವರಾದ ಆಂಟೋನಿಯಾ ಫರಿಯಾಸ್.