Fake News - Kannada
 

ಮ್ಯಾನ್ಮಾರ್‌ನಲ್ಲಿ ವಶಪಡಿಸಿಕೊಂಡ ಸೇನಾ ನೆಲೆಯ ವೀಡಿಯೊವನ್ನು ಮಣಿಪುರದ ಕುಕಿ ಉಗ್ರಗಾಮಿಗಳಿಂದ ಭಾರತೀಯ ಸೇನೆಯು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವ ದೃಶ್ಯಗಳೆಂದು ತಪ್ಪಾಗಿ ಶೇರ್ ಮಾಡಲಾಗಿದೆ

0

ಮೇ 14, 2025 ರಂದು, ಭಾರತ-ಮ್ಯಾನ್ಮಾರ್ ಗಡಿಯ ಬಳಿಯ ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹತ್ತು ಸಶಸ್ತ್ರ ಉಗ್ರರನ್ನು ಕೊಂದು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ (ಇಲ್ಲಿ ಮತ್ತು ಇಲ್ಲಿ). ತದನಂತರ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ದೊಡ್ಡ ಸಂಗ್ರಹವನ್ನು ತೋರಿಸುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮಣಿಪುರದಲ್ಲಿ ಉಗ್ರರಿಂದ ಭಾರತೀಯ ಸೇನೆಯು ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಹಣವನ್ನು ವಶಪಡಿಸಿಕೊಳ್ಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ವೈರಲ್ ವೀಡಿಯೊವು ಮಣಿಪುರದ ಕುಕಿ ಭಯೋತ್ಪಾದಕರಿಂದ ಭಾರತೀಯ ಸೇನೆಯು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ವಶಪಡಿಸಿಕೊಂಡಿರುವುದನ್ನು ತೋರಿಸುತ್ತದೆ.

ಫ್ಯಾಕ್ಟ್: ವೈರಲ್ ವೀಡಿಯೊ ಭಾರತ ಅಥವಾ ಮಣಿಪುರದ್ದಲ್ಲ. ಇದು ಏಪ್ರಿಲ್ 2025 ರಲ್ಲಿ ಮ್ಯಾನ್ಮಾರ್‌ನ ಫಲಮ್ ಪಟ್ಟಣವನ್ನು ಚಿನ್ ಬ್ರದರ್‌ಹುಡ್ ಬಂಡುಕೋರರು ವಶಪಡಿಸಿಕೊಂಡದ್ದನ್ನು ತೋರಿಸುತ್ತದೆ, ಅವರು ಅಲ್ಲಿನ ಕೊನೆಯ ಮ್ಯಾನ್ಮಾರ್ ಸೇನಾ ನೆಲೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಆದ್ದರಿಂದ, ಈ ಕ್ಲೇಮ್ ಸುಳ್ಳು. 

ಈ ಕುರಿತಾದ ಸತ್ಯ  ಪರಿಶೀಲನೆಗಾಗಿ , ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ವಶಪಡಿಸಿಕೊಂಡ ಆಸ್ತಿಯ ಬಳಿ ಇರುವ ಸಶಸ್ತ್ರ ಸಿಬ್ಬಂದಿಯ ಸಮವಸ್ತ್ರದ ಮೇಲೆ ‘BNRA’ ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ. ಭಾರತದಲ್ಲಿ ಈ ಹೆಸರಿನ ಯಾವುದೇ ರೆಜಿಮೆಂಟ್ ಇಲ್ಲ. ಇನ್ನು BNRA ಎಂದರೆ ಬರ್ಮಾ ನ್ಯಾಷನಲ್ ರೆವೊಲ್ಯೂಷನ್ ಆರ್ಮಿ, ಇದು ಮ್ಯಾನ್ಮಾರ್‌ನ ಸಾಗೈಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಶಸ್ತ್ರ ದಂಗೆಕೋರ ಗುಂಪು (ಇಲ್ಲಿ ಮತ್ತು ಇಲ್ಲಿ), ಹಾಗಾಗಿ ಈ ಇದು  ಭಾರತದ್ದಲ್ಲ ಎಂಬುದು ಸ್ಪಷ್ಟವಾಗಿದೆ. 

ವೀಡಿಯೊದ ಮೂಲವನ್ನು ಕಂಡುಹಿಡಿಯಲು, ನಾವು ದೃಶ್ಯಗಳಲ್ಲಿನ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಏಪ್ರಿಲ್ 2025 ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಇದೇ ರೀತಿಯ ವೀಡಿಯೊಗಳಿಗೆ ನಮ್ಮನ್ನು ಕರೆದೊಯ್ಯಿತು. ಅನೇಕ ಪೋಸ್ಟ್‌ಗಳು ವೀಡಿಯೊವನ್ನು BNRA ಮತ್ತು ಚಿನ್ ಬ್ರದರ್‌ಹುಡ್ ಚಳುವಳಿಗೆ ಲಿಂಕ್ ಮಾಡಿವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಹೆಚ್ಚುವರಿಯಾಗಿ, ಮ್ಯಾನ್ಮಾರ್‌ನ ಹಲವಾರು ಯೂಸರ್ಸ್ ಅದೇ ದೃಶ್ಯಗಳನ್ನು ಶೇರ್ ಮಾಡಿದ್ದಾರೆ. ಮ್ಯಾನ್ಮಾರ್‌ನಲ್ಲಿರುವ ಪ್ರಸ್ತುತ ಮಿಲಿಟರಿ ಸರ್ಕಾರವನ್ನು ವಿರೋಧಿಸುವ ವಿವಿಧ ಬಂಡಾಯ ಗುಂಪುಗಳೊಂದಿಗೆ, ವಿಶೇಷವಾಗಿ ಚಿನ್ ಬ್ರದರ್‌ಹುಡ್‌ನ ಬ್ಯಾನರ್ ಅಡಿಯಲ್ಲಿ ಈ ದೃಶ್ಯಗಳನ್ನು ಸೇರಿಸಲಾಗಿದೆ. 

ಹೆಚ್ಚಿನ ಸಂಶೋಧನೆಯು ಮ್ಯಾನ್ಮಾರ್‌ನಿಂದ ಇದೇ ರೀತಿಯ ದೃಶ್ಯಗಳನ್ನು ತೋರಿಸುವ ಹಲವಾರು ಸುದ್ದಿ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ಈ ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ ಮತ್ತು ಇಲ್ಲಿ), ಸುಮಾರು ಐದು ತಿಂಗಳ ಹೋರಾಟದ ನಂತರ, ಏಪ್ರಿಲ್ 9, 2025 ರಂದು, ಚಿನ್ ಬ್ರದರ್‌ಹುಡ್ ಬಂಡಾಯ ಪಡೆಗಳು ಫಲಮ್ ಪಟ್ಟಣ, ಚಿನ್ ಸ್ಟೇಟ್‌ನಲ್ಲಿ ಉಳಿದಿರುವ ಕೊನೆಯ ಮ್ಯಾನ್ಮಾರ್ ಸೇನಾ ನೆಲೆಯನ್ನು ವಶಪಡಿಸಿಕೊಂಡಿರುವುದಾಗಿ ಘೋಷಿಸಿದವು. ಸೇನೆಯ ಪದಾತಿ ದಳ (IB) 268 ಗೆ ಸೇರಿದ ಈ ನೆಲೆಯನ್ನು ವಶಪಡಿಸಿಕೊಂಡ ಮೂಲಕ, ಚಿನ್ ಬ್ರದರ್‌ಹುಡ್ ಉತ್ತರ ಚಿನ್ ರಾಜ್ಯದ ಫಲಮ್ ಪಟ್ಟಣದ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿತು.

ಹೆಚ್ಚುವರಿಯಾಗಿ, ಏಪ್ರಿಲ್ 2025 ರಲ್ಲಿ ಮ್ಯಾನ್ಮಾರ್ ಮಾಧ್ಯಮಗಳು ಪ್ರಕಟಿಸಿದ ಹಲವಾರು ವರದಿಗಳು, ಚಿನ್ ಬ್ರದರ್‌ಹುಡ್ ಪಡೆಗಳು ಮ್ಯಾನ್ಮಾರ್ ಸೈನ್ಯದಿಂದ ಫಲಮ್ ಪಟ್ಟಣವನ್ನು ವಶಪಡಿಸಿಕೊಂಡದ್ದನ್ನು ದಾಖಲಿಸಿದ್ದನ್ನು, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಪುರಾವೆಗಳ ಆಧಾರದ ಮೇಲೆ, ವೈರಲ್ ವೀಡಿಯೊ ಏಪ್ರಿಲ್ 2025 ರಲ್ಲಿ ಚಿನ್ ಬ್ರದರ್‌ಹುಡ್ ಬಂಡುಕೋರ ಪಡೆಗಳು ಫಲಮ್ ಪಟ್ಟಣದ ಮೇಲೆ ಹಿಡಿತ ಸಾಧಿಸಿದ ಘಟನೆಯನ್ನು ತೋರಿಸುತ್ತದೆ ಎಂದು ನಾವು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಮ್ಯಾನ್ಮಾರ್‌ನಲ್ಲಿ ವಶಪಡಿಸಿಕೊಂಡ ಸೇನಾ ನೆಲೆಯ ವೀಡಿಯೊವನ್ನು ಮಣಿಪುರದ ಕುಕಿ ಉಗ್ರಗಾಮಿಗಳಿಂದ ಭಾರತೀಯ ಸೇನೆಯು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll