Fake News - Kannada
 

ಗಲ್ಫ್ ಕಂಪನಿಗಳು ಭಾರತೀಯ ಕಾರ್ಮಿಕರನ್ನು ವಾಪಸ್ ಕಳುಹಿಸುತ್ತಿದ್ದಾರೆ ಎಂಬುದು ಸುಳ್ಳು

0

ಗಲ್ಫ್ ಕಂಪನಿಗಳು ತಮ್ಮ ದೇಶಕ್ಕೆ ವಲಸೆ ಬಂದ ಭಾರತೀಯ ಉದ್ಯೋಗಿಗಳನ್ನು(ಕಾರ್ಮಿಕರನ್ನು) ವಾಪಸ್ ಕಳುಹಿಸುತ್ತಿರುವ ಇತ್ತೀಚಿನ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿದ ನಿಂದನಾತ್ಮಕ ಹೇಳಿಕೆ ಬಗ್ಗೆ ಹಲವಾರು ಇಸ್ಲಾಮಿಕ್ ದೇಶಗಳು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಗಲ್ಫ್ ದೇಶಗಳ ಕಂಪನಿಗಳು ತಮ್ಮ ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿ ಭಾರತಕ್ಕೆ ಕಳುಹಿಸಲು ಪ್ರಾರಂಭಿಸಿವೆ ಎಂದು ಈ ಪೋಸ್ಟ್ ಹೇಳುತ್ತದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಗಲ್ಫ್ ಕಂಪನಿಗಳು ತಮ್ಮ ದೇಶಗಳಿಂದ ವಲಸೆ ಬಂದ ಭಾರತೀಯ ಉದ್ಯೋಗಿಗಳನ್ನು ವಾಪಸ್ ಕಳುಹಿಸುತ್ತಿರುವ ಇತ್ತೀಚಿನ ವೀಡಿಯೊ.

ನಿಜಾಂಶ: ಕತಾರ್‌ನ ದೋಹಾದಲ್ಲಿರುವ ‘ರೆಡ್‌ಕೋ ಇಂಟರ್‌ನ್ಯಾಶನಲ್’ ಕಂಪನಿಯನ್ನು ತೊರೆದ ವಲಸೆ ಕಾರ್ಮಿಕರ ಮೂರು ತಿಂಗಳ ಹಳೆಯ ವೀಡಿಯೊವನ್ನು ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಮಾರ್ಚ್ 2022 ರಲ್ಲಿ, ‘ರೆಡ್ಕೋ ಇಂಟರ್ನ್ಯಾಷನಲ್’ ಕಂಪನಿಯ ಕಾರ್ಮಿಕರು ತಮ್ಮ ತಡೆಹಿಡಿಯಲಾದ ಸಂಬಳವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಮುಷ್ಕರವನ್ನು ಆಯೋಜಿಸಿದರು. ಪ್ರತಿಭಟನೆಯ ನಂತರ, ‘ರೆಡ್ಕೋ ಇಂಟರ್ನ್ಯಾಷನಲ್’ ಅವರು ತಮ್ಮ ದೇಶಗಳಿಗೆ ತೆರಳಲು ಟಿಕೆಟ್‌ಗಳನ್ನು ಒದಗಿಸಿದರು. ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಅವರನ್ನು ನಿಂದಿಸಿದ ಘಟನೆಗೂ ಈ ವೀಡಿಯೊಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೀಡಿಯೊದಲ್ಲಿ ಮಾತನಾಡುವ ವ್ಯಕ್ತಿ ‘ರೆಡ್ಕೋ ಇಂಟರ್ನ್ಯಾಷನಲ್’ ಹೆಸರನ್ನು ಉಲ್ಲೇಖಿಸಿರುವುದನ್ನು ಕೇಳಬಹುದು. ಗೂಗಲ್‍ನಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಈ ವೀಡಿಯೊವನ್ನು ಸರ್ಚ್ ಮಾಡಿದಾಗ, ಕತಾರ್‌ನ ದೋಹಾದಲ್ಲಿರುವ ರೆಡ್‌ಕೋ ಇಂಟರ್‌ನ್ಯಾಶನಲ್ ಕಂಪನಿಯಲ್ಲಿ ನಡೆದ ಮೂರು ತಿಂಗಳ ಹಿಂದಿನ ಘಟನೆ ಎಂದು ತಿಳಿಸುವ ಅದೇ ವೀಡಿಯೊವನ್ನು ಹಂಚಿಕೊಂಡ ಇತ್ತೀಚಿನ ಫೇಸ್‌ಬುಕ್ ಪೋಸ್ಟ್ ಲಭ್ಯವಾಗಿದೆ. ಕಂಪನಿಯು ನಷ್ಟದಲ್ಲಿ ನಡೆಯುತ್ತಿರುವುದರಿಂದ ಕಾರ್ಮಿಕರು ಕಂಪನಿಯನ್ನು ತೊರೆಯುತ್ತಿದ್ದಾರೆ ಎಂದು ಈ ಫೇಸ್‌ಬುಕ್ ಬಳಕೆದಾರರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಗೂಗಲ್ ರಿವರ್ಸ್ ಸರ್ಚ್ ಮಾಡಿದ್ದು, ‘ಕ್ಯೂಎನ್ ಕತಾರ್’ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ಅದೇ ವೀಡಿಯೊವನ್ನು ಲಭ್ಯವಾಗಿದೆ. ಈ YouTube ಚಾನೆಲ್ ನಲ್ಲಿ 29 ಮಾರ್ಚ್ 2022 ರಂದು ಕತಾರ್‌ನಲ್ಲಿರುವ ‘ರೆಡ್‌ಕೋ ಇಂಟರ್‌ನ್ಯಾಶನಲ್’ ತಮ್ಮ ಉದ್ಯೋಗಿಗಳಿಗೆ ಅವರ ದೇಶಗಳಿಗೆ ತೆರಳಲು ಉಚಿತ ಟಿಕೆಟ್‌ಗಳನ್ನು ಒದಗಿಸಿದೆ ಎಂಬ ವಿವರಣೆಯೊಂದಿಗೆ ಈ ವೀಡಿಯೊವನ್ನು ಪ್ರಕಟಿಸಿದೆ. ಮಾರ್ಚ್ 2022 ರಲ್ಲಿ, ‘ರೆಡ್ಕೋ ಇಂಟರ್ನ್ಯಾಷನಲ್’ ನಲ್ಲಿನ ಕಾರ್ಮಿಕರು ತಮ್ಮ ಮೂರು ತಿಂಗಳ ತಡೆಹಿಡಿಯಲಾದ ಸಂಬಳವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಮುಷ್ಕರವನ್ನು ನಡೆಸಿದರು. ಪ್ರತಿಭಟನೆಯ ನಂತರ, ‘ರೆಡ್ಕೋ ಇಂಟರ್ನ್ಯಾಷನಲ್’ ತಮ್ಮ ದೇಶಗಳಿಗೆ ತೆರಳಲು ಟಿಕೆಟ್‌ಗಳನ್ನು ಒದಗಿಸಿತು. ‘ರೆಡ್ಕೋ ಇಂಟರ್‌ನ್ಯಾಶನಲ್’ ನಲ್ಲಿ ಕಾರ್ಮಿಕರು ಮುಷ್ಕರ ಮಾಡುತ್ತಿರುವುದನ್ನು ತೋರಿಸುವ ಕೆಲವು ಹಳೆಯ ವೀಡಿಯೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇತ್ತೀಚೆಗಷ್ಟೇ ಅರಬ್ ರಾಷ್ಟ್ರಗಳ ಸೂಪರ್‌ಮಾರ್ಕೆಟ್‌ಗಳು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ ಬಿಜೆಪಿ ವಕ್ತಾರರು ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಸೌತ್ ಏಷ್ಯನ್ ಜರ್ನಲ್ ಮತ್ತು ಇತರ ಕೆಲವು ಮಾಧ್ಯಮ ವೆಬ್‌ಸೈಟ್‌ಗಳು ಅರಬ್ಬರು ಭಾರತೀಯ ಹಿಂದೂ ವಲಸೆ ಕಾರ್ಮಿಕರನ್ನು ತಮ್ಮ ಕಂಪನಿಗಳಿಂದ ತೆಗೆದುಹಾಕಲು ಪ್ರಾರಂಭಿಸಿದ್ದಾರೆ ಎಂದು ವರದಿ ಮಾಡಿದೆ. ಆದರೆ ಈ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಗಲ್ಫ್ ಕಂಪನಿಗಳು ಭಾರತೀಯ ವಲಸೆ ಕಾರ್ಮಿಕರನ್ನು ವಾಪಸ್ ಕಳುಹಿಸುತ್ತಿರುವ ವಿಡಿಯೋವನ್ನು ಇತ್ತೀಚಿನ ದೃಶ್ಯಗಳಂತೆ ಸಂಬಂಧವಿಲ್ಲದ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದೆ.

Share.

Comments are closed.

scroll