Fake News - Kannada
 

ಆಂಧ್ರ ಪ್ರದೇಶದ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರದ ವಿರುದ್ದ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕ ಆರೋಪ ಮಾಡಿದ್ದಾರೆ ಎಂಬುದು ಸುಳ್ಳು

0

ತಿರುಮಲ ತಿರುಪತಿ ದೇವಸ್ಥಾನದ ಪ್ರಧಾನ ಅರ್ಚಕರು ಇತ್ತೀಚೆಗೆ ಭಕ್ತರು ದೇವಸ್ಥಾನದ ಹುಂಡಿಗಳಿಗೆ ಹಣ ಹಾಕಬಾರದೆಂದು ಒತ್ತಾಯಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ತಿರುಮಲ ದೇವಸ್ಥಾನದ ಆದಾಯವನ್ನು ರಾಜ್ಯದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳ ಕಲ್ಯಾಣಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮುಖ್ಯ ಅರ್ಚಕರು ಆರೋಪಿಸಿದ್ದಾರೆ ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕ ವೈ ಎಸ್. ಜಗನ್ ಮೋಹನ್ ರೆಡ್ಡಿ ಅವರು ದೇವಸ್ಥಾನದ ಆದಾಯವನ್ನು ರಾಜ್ಯದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳ ಕಲ್ಯಾಣಕ್ಕಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ನಿಜಾಂಶ: ಮಾರ್ಚ್ 2019 ರಲ್ಲಿ, ಸಂದರ್ಶನವೊಂದರಲ್ಲಿ, ಆಗಿನ ವಜಾಗೊಂಡ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕ ರಮಣ ದೀಕ್ಷಿತುಲು ಅವರು ದೇವಸ್ಥಾನದ ಹುಂಡಿಗೆ ಹಣವನ್ನು ದೇಣಿಗೆ ನೀಡದಂತೆ ಭಕ್ತರನ್ನು ಒತ್ತಾಯಿಸಿದರು. ದೇವಸ್ಥಾನದ ಆದಾಯದಲ್ಲಿ ಶೇ.95ರಷ್ಟು ಸರ್ಕಾರವೇ ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ರಮಣ ದೀಕ್ಷಿತುಲು, ಹುಂಡಿಯಲ್ಲಿ ಬಂದ ಆದಾಯದಿಂದ ಒಂದು ರೂಪಾಯಿಯೂ ಶ್ರೀಗಳ ಸೇವೆಗೆ ಬಳಕೆಯಾಗಿಲ್ಲ ಎಂದು ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರ ರಚನೆಗೂ ಮುನ್ನ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಹುಂಡಿ ಆದಾಯವನ್ನು ರಾಜ್ಯದಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದ ಕಲ್ಯಾಣಕ್ಕೆ ಬಳಸಲಾಗಿದೆ ಎಂದು ಅವರು ಹೇಳಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.

ಫೋಟೋದಲ್ಲಿ ಕಾಣುವ ಅರ್ಚಕರು ಈಗಿನ ತಿರುಮಲ ತಿರುಪತಿ ದೇವಸ್ಥಾನದ ಪ್ರಧಾನ ಅರ್ಚಕ ರಮಣ ದೀಕ್ಷಿತುಲು. ತಿರುಮಲ ದೇವಸ್ಥಾನದ ಹುಂಡಿ ಆದಾಯದ ಬಳಕೆ ಬಗ್ಗೆ ರಮಣ ದೀಕ್ಷಿತುಲು ಈ ರೀತಿಯ ಹೇಳಿಕೆ ನೀಡಿದ್ದಾರೆಯೇ ಎಂದು ಪರಿಶೀಲಿಸಿದಾಗ, ಮಾರ್ಚ್ 2019 ರಲ್ಲಿ ಸಂದರ್ಶನವೊಂದರಲ್ಲಿ ರಮಣ ದೀಕ್ಷಿತುಲು ತಿರುಮಲ ದೇವಸ್ಥಾನದ ಹುಂಡಿ ಆದಾಯದ ಬಳಕೆಯ ಬಗ್ಗೆ ಮಾತನಾಡಿರುವುದು  ಕಂಡುಬಂದಿದೆ. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುವಾಗ, ದೇವಸ್ಥಾನದ ಆದಾಯದ ಬಳಕೆ ಬಗ್ಗೆ, ದೇವಸ್ಥಾನದ ಹುಂಡಿ ಆದಾಯದ 95% ಅನ್ನು ಸರ್ಕಾರವು ಬಳಸಿಕೊಳ್ಳುತ್ತಿದೆ ಎಂದು ಅಂದಿನ ವಜಾಗೊಂಡಿದ್ದ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕ ರಮಣ ದೀಕ್ಷಿತುಲು ಆರೋಪಿಸಿದ್ದಾರೆ.

ಸಂದರ್ಶನದ ವೇಳೆ ರಮಣ ದೀಕ್ಷಿತುಲು ಅವರು ತಿರುಮಲ ದೇವಸ್ಥಾನದ ಹುಂಡಿಗೆ ಭಕ್ತರು ಹಣ ನೀಡದಂತೆ ಒತ್ತಾಯಿಸಿ, ಹುಂಡಿ ಆದಾಯದಿಂದ ಒಂದು ರೂಪಾಯಿಯೂ ವೆಂಕಟೇಶ್ವರ ಸ್ವಾಮಿಯ ಸೇವೆಗೆ ಬಳಕೆಯಾಗುತ್ತಿಲ್ಲ ಎಂದು ಆರೋಪಿಸಿದರು. ರಮಣ ದೀಕ್ಷಿತುಲು ಮಾತನಾಡಿ, “ಯಾವುದೇ ದೇವಸ್ಥಾನದ ಹುಂಡಿಯಲ್ಲಿ ಒಂದು ರೂಪಾಯಿ ಕಾಣಿಕೆ ನೀಡದಂತೆ ಎಲ್ಲ ಭಕ್ತರಲ್ಲಿ ವಿನಂತಿಸುತ್ತೇನೆ. ತಿರುಮಲ ದೇವಸ್ಥಾನಕ್ಕೆ ಪ್ರತಿದಿನ ಸುಮಾರು 2.5 ರಿಂದ 3 ಕೋಟಿ ಆದಾಯ ಬರಲಿದೆ. ಆದರೆ ಶ್ರೀಗಳ ಸೇವೆಗೆ ಒಂದು ರೂಪಾಯಿಯೂ ಬಳಕೆಯಾಗಿಲ್ಲ. ಭಗವಂತನ ಸೇವೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ದಾನಿಗಳಿಂದ ಒದಗಿಸಲಾಗುತ್ತದೆ. ದೇವಸ್ಥಾನದ ಹುಂಡಿ ಆದಾಯವನ್ನು ನೌಕರರ ವೇತನಕ್ಕೆ, ಹಿಂದೂ ಧರ್ಮ ಪ್ರಚಾರ ಪರಿಷತ್ತಿಗೆ ಮತ್ತು ಎಂಜಿನಿಯರಿಂಗ್ ವಿಭಾಗ ಮತ್ತು ಗುತ್ತಿಗೆದಾರರಿಗೆ ಆದಾಯವನ್ನು ಒದಗಿಸಲು ಬಳಸಲಾಗುತ್ತಿತ್ತು. ಹಾಗಾಗಿ ಎಲ್ಲಾ ಭಕ್ತರು ದೇವಸ್ಥಾನದ ಹುಂಡಿಗೆ ಹಣ ನೀಡದಂತೆ ಮನವಿ ಮಾಡಿಕೊಳ್ಳುತ್ತೇನೆ” ಎಂದಿದ್ದರು. ಇದಲ್ಲದೆ, ರಮಣ ದೀಕ್ಷಿತುಲು ಭಕ್ತರು ನೇರ ಸೇವೆಯಲ್ಲಿ ಭಾಗವಹಿಸಲು, ಕಡಿಮೆ ಆದಾಯದ ದೇವಾಲಯಗಳಿಗೆ ಹಣವನ್ನು ದೇಣಿಗೆ ನೀಡಲು ಶಿಫಾರಸು ಮಾಡಿದ್ದರು. ಆದ್ದರಿಂದ ಅದನ್ನು ಬಡ ಅರ್ಚಕರ ಸಂಬಳ ಮತ್ತು ದೇವಾಲಯಕ್ಕೆ ಅಗತ್ಯವಿರುವ ಸರಕುಗಳಿಗೆ ಬಳಸಿಕೊಳ್ಳಬಹುದು ಎಂದು ಮಾರ್ಚ್ 2019 ರಲ್ಲಿ ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆಯ ಮೊದಲು ಈ ಮಾತುಗಳನ್ನಾಡಿದ್ದರು.

ಆಂಧ್ರಪ್ರದೇಶದ ವೈಎಸ್ ಜಗನ್ ಸರ್ಕಾರದ ಅಡಿಯಲ್ಲಿ 2021 ರಲ್ಲಿ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಮರು ಆಯ್ಕೆಯಾಗುವ ಮೊದಲು ರಮಣ ದೀಕ್ಷಿತುಲು ಅವರು ತಿರುಮಲ ದೇವಸ್ಥಾನದ ಅಧಿಕಾರಿಗಳ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು. ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ವೈರಲ್ ಸಂದೇಶದ ಬಗ್ಗೆ ಸ್ಪಷ್ಟನೆಗಾಗಿ ‘ದಿ ಕ್ವಿಂಟ್’ ಫ್ಯಾಕ್ಟ್-ಚೆಕ್ ತಂಡ ರಮಣ ದೀಕ್ಷಿತುಲು ಅವರನ್ನು ಸಂಪರ್ಕಿಸಿದಾಗ, ಕ್ವಿಂಟ್‌ನೊಂದಿಗೆ ಮಾತನಾಡಿದ ರಮಣ ದೀಕ್ಷಿತುಲು, ಪ್ರಧಾನ ಅರ್ಚಕನಾಗಿ ದೇಣಿಗೆಯ ಹಣವನ್ನು ಸದ್ಬಳಕೆಯಾಗುವಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ನನ್ನ ಅಭಿಪ್ರಾಯದಲ್ಲಿ, ಸಂಬಳ ವಿತರಣೆ, ಸಮಿತಿಗಳನ್ನು ರಚಿಸುವುದು ಅಥವಾ ನಿರ್ಮಾಣವು ಉತ್ತಮ ಬಳಕೆಯಲ್ಲ. ಅದಕ್ಕಾಗಿಯೇ ನಾನು ಭಕ್ತರಿಗೆ ಯಾವುದೇ ಹಣವನ್ನು ದೇಣಿಗೆ ನೀಡದಂತೆ ಕೇಳಿದ್ದೆ. ಹಣವನ್ನು ಮುಸ್ಲಿಮರು, ಕ್ರಿಶ್ಚಿಯನ್ನರು ಅಥವಾ ಬೇರೆಯವರಿಗೆ ಬಳಸಲಾಗುತ್ತಿದೆ ಎಂದು ನಾನು ಎಂದಿಗೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕ ರಮಣ ದೀಕ್ಷಿತುಲು ವೈಎಸ್ ಜಗನ್ ಸರ್ಕಾರವು ದೇವಾಲಯದ ಆದಾಯವನ್ನು ರಾಜ್ಯದಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ಕಲ್ಯಾಣಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದೆ.

Share.

Comments are closed.

scroll