ಕೋಲ್ಕತ್ತಾದ RG ಕಾರ್ ವೈದ್ಯಕೀಯ ಕಾಲೇಜಿನಲ್ಲಿ 09 ಆಗಸ್ಟ್ 2024 ರಂದು, ಟ್ರೈನಿ ಡಾಕ್ಟರ್ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಯಿತು (ಇಲ್ಲಿ). ಕೋಲ್ಕತಾ ಪೊಲೀಸರು ಆರೋಪಿ ಸಂಜಯ್ ರಾಯ್ ನನ್ನು ಬಂಧಿಸಿದ್ದು, ಪ್ರಸ್ತುತ ಸಿಬಿಐ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಈ ಘಟನೆಯು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಭಾರತದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ (ಇಲ್ಲಿ, ಇಲ್ಲಿ). ಈ ಹಿನ್ನೆಲೆಯಲ್ಲಿ, ಮರಿಯಾನೆ ಬ್ಯಾಚ್ಮಿಯರ್ ಎಂಬ ಜರ್ಮನ್ ಮಹಿಳೆ, ತನ್ನ 7 ವರ್ಷದ ಮಗಳನ್ನು ಅತ್ಯಾಚಾರವೆಸಗಿದ ಆರೋಪಿಯನ್ನು ನ್ಯಾಯಾಲಯದಲ್ಲಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಲೇಖನದ ಮೂಲಕ, ಪೋಸ್ಟ್ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಜರ್ಮನಿನ ಮರಿಯಾನೆ ಬ್ಯಾಚ್ಮಿಯರ್ ತನ್ನ ಏಳು ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ವ್ಯಕ್ತಿಯನ್ನು ನ್ಯಾಯಾಲಯದಲ್ಲಿ ಗುಂಡಿಕ್ಕಿ ಕೊಲ್ಲುವ ವೀಡಿಯೊ.
ಫ್ಯಾಕ್ಟ್: ಮಹಿಳೆಯೊಬ್ಬಳು ತನ್ನ ಮಗಳನ್ನು ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯನ್ನು ನ್ಯಾಯಾಲಯದಲ್ಲಿ ಗುಂಡಿಕ್ಕಿ ಕೊಲ್ಲುವ ಈ ವೈರಲ್ ವೀಡಿಯೊ ಕ್ಲಿಪ್ 1984 ರಲ್ಲಿ ಬಿಡುಗಡೆಯಾದ “Der Fall Bachmeier – Keine Zeit für Tränen ( No Time for Tears: The Bachmeier Case)” ಎಂಬ ಜರ್ಮನ್ ಚಲನಚಿತ್ರದ ದೃಶ್ಯವಾಗಿದೆ. ಈ ಚಿತ್ರವು ಮರಿಯಾನೆ ಬ್ಯಾಚ್ಮಿಯರ್ ಅವರ ನಿಜ ಜೀವನ ಕಥೆಯನ್ನು ಆಧರಿಸಿದೆ. ಮರಿಯಾನೆ ಬ್ಯಾಚ್ಮಿಯರ್ ಪಾತ್ರವನ್ನು ಆಸ್ಟ್ರಿಯಾದ ನಟಿ ಮೇರಿ ಕೋಲ್ಬಿನ್ ಚಿತ್ರಿಸಿದ್ದಾರೆ. ವರದಿಗಳ ಪ್ರಕಾರ, ಪಶ್ಚಿಮ ಜರ್ಮನಿಯ ನಿವಾಸಿ ಮರಿಯಾನೆ ಬ್ಯಾಚ್ಮಿಯರ್ 06 ಮಾರ್ಚ್ 1981 ರಂದು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಕ್ಲಾಸ್ ಗ್ರಾಬೊವ್ಸ್ಕಿಯನ್ನು ಗುಂಡಿಕ್ಕಿ ಕೊಂದರು. ಗ್ರಾಬೊವ್ಸ್ಕಿ, ಅನ್ನಾ ಎನ್ನುವ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ. ಮರಿಯಾನೆ ಬ್ಯಾಚ್ಮಿಯರ್ಗೆ ನಡೆಸಿದ ಹತ್ಯೆಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು ಆದರೆ ಮೂರು ವರ್ಷಗಳ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದಲ್ಲಿನ ನಿಜಾಂಶವನ್ನು ಪರಿಶೀಲಿಸಲು, ನಾವು ವೀಡಿಯೊದಿಂದ ಕೀಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಈ ಮೂಲಕ್ ಈ ವೈರಲ್ ಕ್ಲಿಪ್ “ಡೆರ್ ಫಾಲ್ ಬ್ಯಾಚ್ಮಿಯರ್ – ಕೀನ್ ಝೈಟ್ ಫುರ್ ಟ್ರಾನೆನ್” ಜರ್ಮನ್ ಚಲನಚಿತ್ರದ ದೃಶ್ಯವಾಗಿದೆ ಎಂದು ಹೇಳಲಾದ ಹಲವಾರು ಪೋಸ್ಟ್ಗಳನ್ನುಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಂಡುಕೊಂಡಿದ್ದೇವೆ. “Der Fall Bachmeier – Keine Zeit für Tränen”, ಅಂದರೆ ಇಂಗ್ಲಿಷ್ ನಲ್ಲಿ “No Time for Tears: The Bachmeier Case” ಎಂದರ್ಥ. 1981ರಲ್ಲಿ ಜರ್ಮನಿಯ ಮರಿಯಾನೆ ಬ್ಯಾಚ್ಮಿಯರ್ ಎಂಬ ಮಹಿಳೆ ಅಲ್ಲಿನ ಲುಬೆಕ್ ಜಿಲ್ಲಾ ನ್ಯಾಯಾಲಯದಲ್ಲಿ ತನ್ನ 7 ವರ್ಷದ ಮಗಳು ಅನ್ನಾಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದವನನ್ನು ಗುಂಡಿಕ್ಕಿ ಕೊಂದಳು ಎಂದು ಈ ಪೋಸ್ಟ್ಗಳು ತಿಳಿಸಲಾಗಿದೆ.
ಈ ಕ್ಲೂ ಅನ್ನು ಬಳಸಿಕೊಂಡು, ನಾವು ಸಂಬಂಧಿತ ಕೀವರ್ಡ್ ಉಪಯೋಗಿಸಿ ಹುಡುಕಾಟವನ್ನು ನಡೆಸಿದ್ದೇವೆ ಈ ಮುಖಾಂತರ ನಮಗೆ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿರುವ ಫುಲ್ ಮೂವಿ ಲಭಿಸಿದೆ. 1:19:30 ಟೈಮ್ ಸ್ಟಾಂಪ್ ನಲ್ಲಿ, ವೈರಲ್ ವೀಡಿಯೊ ಕ್ಲಿಪ್ ನ ವಿಭಿನ್ನ ವರ್ಷನ್ ಗಳನ್ನು ಕಾಣಬಹುದು. ಮಹಿಳೆಯೊಬ್ಬರು ಉದ್ದನೆಯ ಬೀಜ್ ಬಣ್ಣದ ಓವರ್ಕೋಟ್ ಧರಿಸಿ ಪಿಸ್ತೂಲ್ನಿಂದ ಗುಂಡು ಹಾರಿಸುವ ದೃಶ್ಯಗಳು ಮತ್ತು ವೈರಲ್ ವೀಡಿಯೊದಲ್ಲಿರುವ ದೃಶ್ಯಗಳು ಒಂದೇ ಆಗಿದೆ.
ವೈರಲ್ ವೀಡಿಯೊ ಕ್ಲಿಪ್ ಅನ್ನು “Der Fall Bachmeier – Keine Zeit für Tränen (No Time for Tears: The Bachmeier Case)” ಮೂವಿಯ ದೃಶ್ಯಗಳೊಂದಿಗೆ ಇರುವ ಹೋಲಿಕೆಯನ್ನುಈ ಕೆಳಗೆ ನೋಡಬಹುದು:
ಮೂವಿ ವೆಬ್ಸೈಟ್ IMDb ಮತ್ತು ಮನರಂಜನಾ ವೆಬ್ಸೈಟ್ letterboxd.com ಪ್ರಕಾರ, ಈ ಚಿತ್ರವು 1984 ರಲ್ಲಿ ಬಿಡುಗಡೆಯಾಗಿದೆ. ಚಿತ್ರದ ಕಥಾವಸ್ತು ಹೀಗಿದೆ: ‘ತಾಯಿಯೊಬ್ಬಳು ತನ್ನ ಮಗಳ ಕೊಲೆಗಾರನನ್ನು ನ್ಯಾಯಾಲಯದಲ್ಲಿ ಗುಂಡಿಕ್ಕಿ ಕೊಲ್ಲುತ್ತಾಳೆ.’ ಈ ಚಿತ್ರವು ಜರ್ಮನ್ ಮಹಿಳೆ ಮರಿಯಾನೆ ಬ್ಯಾಚ್ಮಿಯರ್ 1981 ರಲ್ಲಿ ತನ್ನ ಮಗಳ ಮೇಲೆ ಅತ್ಯಾಚಾವೆಸಗಿ ಕೊಲೆ ಮಾಡಿದ ಹಂತಕನನ್ನು ನ್ಯಾಯಾಲಯದಲ್ಲಿ ಗುಂಡಿಕ್ಕಿ ಕೊಂದ ನೈಜ ಕಥೆಯನ್ನು ಆಧರಿಸಿದೆ. ಮರಿಯಾನೆ ಬ್ಯಾಚ್ಮಿಯರ್ ಪಾತ್ರವನ್ನು ಆಸ್ಟ್ರಿಯಾದ ನಟಿ ಮೇರಿ ಕೋಲ್ಬಿನ್ ನಟಿಸಿದ್ದು, ಈ ಚಿತ್ರವನ್ನು ಹಾರ್ಕ್ ಬೋಹ್ಮ್ ನಿರ್ದೇಶಿಸಿದ್ದಾರೆ.
ದಿ ಸನ್ ಎನ್ನುವ ಇಂಗ್ಲಿಷ್ ಸುದ್ದಿ ವೆಬ್ಸೈಟ್ ಪ್ರಕಟಿಸಿದ ವರದಿಯ ಪ್ರಕಾರ, ಪಶ್ಚಿಮ ಜರ್ಮನಿಯ ನಿವಾಸಿ ಮರಿಯಾನೆ ಬ್ಯಾಚ್ಮಿಯರ್ 06 ಮಾರ್ಚ್ 1981 ರಂದು ನ್ಯಾಯಾಲಯದ ವಿಚಾರಣಾ ಸಮಯದಲ್ಲಿ ಕ್ಲಾಸ್ ಗ್ರಾಬೊವ್ಸ್ಕಿಯನ್ನು ಗುಂಡಿಕ್ಕಿ ಕೊಂದರು. ಗ್ರಾಬೊವ್ಸ್ಕಿ, 7 ವರ್ಷದ ಬಾಲಕಿಯಾದ ಅನ್ನಾಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿ. ಮರಿಯಾನೆ ಬ್ಯಾಚ್ಮಿಯರ್ಗೆ ನಡೆಸಿದ ಈ ಕೊಲೆಗಾಗಿ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು ಆದರೆ ಮೂರು ವರ್ಷಗಳ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅವರು 1996 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ಮರಿಯಾನೆ ಬ್ಯಾಚ್ಮಿಯರ್ ತನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ನಡೆಸಿದ ಆರೋಪಿಗಳನ್ನು ಕೊಂದ ಬಗ್ಗೆ ಇರುವ ಹೆಚ್ಚುವರಿ ಸುದ್ದಿ ವರದಿಗಳನ್ನು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಮಹಿಳೆಯೊಬ್ಬಳು ತನ್ನ ಮಗಳ ಅತ್ಯಾಚಾರಿಯನ್ನು ನ್ಯಾಯಾಲಯದಲ್ಲಿ ಗುಂಡಿಕ್ಕಿ ಕೊಲ್ಲುವ ಈ ವೈರಲ್ ವೀಡಿಯೊ ಕ್ಲಿಪ್ ಮಾರ್ಚ್ 1981 ನಡೆದ ಮರಿಯಾನೆ ಬ್ಯಾಚ್ಮಿಯರ್ ಅವರ ನೈಜ ಕಥೆಯನ್ನು ಆಧರಿಸಿದ ಜರ್ಮನ್ ಮೂವಿ ದೃಶ್ಯವಾಗಿದೆ.