ಪ್ರಸ್ತುತ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿ, “ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಎನ್ನುವ ಕಾರಣಕ್ಕಾಗಿ ಒಂದು ಸಣ್ಣ ಮಗು ಸೇರಿದಂತೆ ಇಡೀ ಕುಟುಂಬವನ್ನೇ ಕೊಂದಿದ್ದಾರೆ” ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಓರ್ವ ಮಹಿಳೆ, ಪುರುಷ ಮತ್ತು ಇಬ್ಬರು ಮಕ್ಕಳು ನೇಣು ಬಿಗಿದುಕೊಂಡಿರುವುದನ್ನು ನೋಡಬಹುದು. ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಕಂಡುಕೊಳ್ಳೋಣ.

ಕ್ಲೇಮ್: ಬಾಂಗ್ಲಾದೇಶಿ ಮುಸ್ಲಿಮರು, ಹಿಂದೂಗಳು ಎಂಬ ಕಾರಣಕ್ಕೆ ಮಕ್ಕಳು ಸೇರಿದಂತೆ ಇಡೀ ಕುಟುಂಬಗಳನ್ನು ನೇಣಿಗೇರಿಸಿದ್ದಾರೆ.
ಫ್ಯಾಕ್ಟ್ : ಈ ವಿಡಿಯೋದಲ್ಲಿರುವ ದೃಶ್ಯಗಳು ಬಾಂಗ್ಲಾದೇಶದ ಬ್ರಹ್ಮನ್‌ಬಾರಿಯಾ ಜಿಲ್ಲೆಯಲ್ಲಿ ಮುಸ್ಲಿಂ ಕುಟುಂಬವನ್ನು ನೇಣಿಗೇರಿಸಿದ್ದಾಗಿದೆ. ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, 28 ಜುಲೈ 2024 ರಂದು, ಬ್ರಹ್ಮನ್‌ಬಾರಿಯಾ ಜಿಲ್ಲೆಯ ನಬಿನಗರ ಪುರಸಭೆಯ ಪ್ರದೇಶದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಸೊಹಾಗ್ ಮಿಯಾ, ಅವರ ಪತ್ನಿ ಜನ್ನತುಲ್ ಬೇಗಂ ಮತ್ತು ಅವರ ಪುತ್ರಿಯರಾದ ಫರಿಯಾ ಮತ್ತು ಫಾಹಿಮಾ ಎಂದು ಗುರುತಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಚಳವಳಿಗಳು ಭುಗಿಲೆದಿದೆ. 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದವರನ್ನು ಬಾಂಗ್ಲಾದೇಶದಲ್ಲಿ ಯುದ್ಧವೀರರೆಂದು ಕರೆಯಲಾಗುತ್ತದೆ. ಬಾಂಗ್ಲಾದೇಶದ ರಚನೆಯ ನಂತರ, 30% ಸರ್ಕಾರಿ ಉದ್ಯೋಗಗಳನ್ನು ಯುದ್ಧದಲ್ಲಿ ಭಾಗವಹಿಸಿದವರ ಮಕ್ಕಳು ಮತ್ತು ಯುದ್ಧ ಪರಿಣತರ ವಂಶಸ್ಥರಿಗೆ ಮೀಸಲಿಡಲಾಯಿತು. 2018 ರಲ್ಲಿ, ಶೇಖ್ ಹಸೀನಾ ಅವರ ಸರ್ಕಾರವು ಈ ಮೀಸಲಾತಿಯ ವಿರುದ್ಧ ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನುನಡೆಸಿದ ನಂತರ ಈ ಮೀಸಲಾತಿಗಳನ್ನು ರದ್ದುಗೊಳಿಸಿತು. ಆದರೂ, ಈ ಕೋಟಾವನ್ನು ಜೂನ್ 2024 ರ ಆರಂಭದಲ್ಲಿ ಮರುಸ್ಥಾಪಿಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿತು. ಜೂನ್ 2024 ರಲ್ಲಿ, ಶೇಖ್ ಹಸೀನಾ ಸರ್ಕಾರವು ಬಾಂಗ್ಲಾದೇಶದ ವಿಮೋಚನಾ ಹೋರಾಟಗಾರರ ವಂಶಸ್ಥರಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತ ಮೀಸಲಾತಿಯನ್ನು ಮರುಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿ ಹೆಚ್ಚಿನ ಸಂಖ್ಯೆಯ ಯುವಕರು ಮತ್ತು ನಿರುದ್ಯೋಗಿಗಳು ಬೀದಿಗಿಳಿದರು. ಇದರ ಸಲುವಾಗಿ ನಡೆದ ಚಳುವಳಿ, ಪ್ರತಿಭಟನೆ ಮತ್ತು ಘರ್ಷಣೆಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ತದನಂತರ ಅಂತಿಮವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಈ ಮೀಸಲಾತಿಯನ್ನು ಶೇಕಡಾ 5 ಕ್ಕೆ ಇಳಿಸಿತು. ಆದರೆ, 200 ಅಮಾಯಕರ ಸಾವಿಗೆ ಕಾರಣವಾದ ಪ್ರಧಾನಿ ಹಸೀನಾ, ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒಂದು ವಾರದಿಂದ ಮತ್ತೆ ಪ್ರತಿಭಟನೆಗಳು ನಡೆದವು. 03 ಮತ್ತು 04 ಆಗಸ್ಟ್ 2024 ರಂದು, ಬಾಂಗ್ಲಾದೇಶದಲ್ಲಿ ದೇಶಾದ್ಯಂತ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿತ್ತು. 05 ಆಗಸ್ಟ್ 2024 ರಂದು, ಪ್ರತಿಭಟನಾಕಾರರು ‘ಢಾಕಾ ಲಾಂಗ್ ಮಾರ್ಚ್‘ ಗೆ ಕರೆ ನೀಡಿದರು, ಇದರ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಆಗಮಿಸಿದರು. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದಾಗ ಪರಿಸ್ಥಿತಿ ಹದಗೆಟ್ಟಿತು. ಪ್ರತಿಭಟನಾಕಾರರು ಢಾಕಾದಲ್ಲಿನ ಅವರ ಅಧಿಕೃತ ನಿವಾಸಕ್ಕೆ ನುಗ್ಗಿ, ಲೂಟಿ ಮಾಡಿದಲ್ಲದೆ ಅಲ್ಲಿನ ವಸ್ತು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ (ಇಲ್ಲಿ, ಇಲ್ಲಿ).
ವರದಿಗಳ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಗಲಭೆಗಳಲ್ಲಿ ಕೆಲವು ಸ್ಥಳಗಳಲ್ಲಿ ಪ್ರತಿಭಟನಾಕಾರರು ಅಲ್ಪಸಂಖ್ಯಾತರ ಮನೆಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಹಿಂದೂಗಳು ಮತ್ತು ಅವರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಅಲ್ಲದೆ, ಇತರ ಕೆಲವು ವರದಿಗಳು ಹಿಂದೂ ಮನೆಗಳು ಮತ್ತು ದೇವಾಲಯಗಳನ್ನು (ಇಲ್ಲಿ & ಇಲ್ಲಿ) ಧ್ವಂಸ ಮಾಡಿ ಸುಟ್ಟಿದ್ದಾರೆ ಎಂದು ಉಲ್ಲೇಖಿಸಿದೆ.
ಇನ್ನು, ಈ ವೈರಲ್ ಕ್ಲೈಮ್‌ಗೆ ಸಂಬಂಧಿಸಿದ ಮಾಹಿತಿಗಾಗಿ ಸೂಕ್ತ ಬೆಂಗಾಲಿ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ಹುಡುಕಾಟ ನಡೆಸಿದ ನಂತರ, ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳು ಎಂಬ ಕಾರಣಕ್ಕೆ ಮಕ್ಕಳನ್ನು ಒಳಗೊಂಡಂತೆ ಇಡೀ ಕುಟುಂಬಗಳನ್ನು ಕೊಂದ ಯಾವುದೇ ರೀತಿಯ ವರದಿಗಳು ನಮಗೆ ಕಂಡುಬಂದಿಲ್ಲ. ಈ ಸಂದರ್ಭದಲ್ಲಿ, ಬಾಂಗ್ಲಾದೇಶದ “ಸಕಿಲ್ ಅಹ್ಮದ್ ರುಬೆಲ್” (Sakil Ahmed Rubel)” ಎಂಬ ಫೇಸ್‌ಬುಕ್ ಪೇಜ್ ನಲ್ಲಿ ಶೇರ್ ಮಾಡಿದ ಫೋಟೋ 28 ಜುಲೈ 2024 ರಂದು ಕಂಡುಬಂದಿದೆ. ಈ ಫೋಟೋದಲ್ಲಿ ಬರೆದ ವಿವರಣೆಯ ಪ್ರಕಾರ ಬ್ರಹ್ಮನ್‌ಬಾರಿಯಾದ ನಬಿನಗರ ಪುರಸಭೆ ವ್ಯಾಪ್ತಿಯ ವಿಜಯ್ ಪಾರಾ ಪ್ರದೇಶದಲ್ಲಿ ಉದ್ಯಮಿ ಸೊಹಾಗ್ ಮಿಯಾ, ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ನೇಣು ಬಿಗಿದ ಶವಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. (ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ). ಈ ಫೋಟೋದಲ್ಲಿರುವ ಜನರ ಮುಖಗಳನ್ನು ಮತ್ತು ಅವರ ಮೇಲಿರುವ ಬಟ್ಟೆಗಳು ಮತ್ತು ವೈರಲ್ ವೀಡಿಯೊದಲ್ಲಿರುವ ಜನರ ಮುಖ ಮತ್ತು ಬಟ್ಟೆಗಳೊಂದಿಗೆ ಹೋಲಿಸಲಾಗಿದೆ, ವೈರಲ್ ವೀಡಿಯೊ ಮತ್ತು ಈ ಫೋಟೋದಲ್ಲಿ ಅದೇ ಘಟನೆಯನ್ನು ತೋರಿಸಲಾಗಿದೆ ಎಂದು ನಾವು ತೀರ್ಮಾನಿಸಬಹುದು. ಸಕಿಲ್ ಅಹ್ಮದ್ ರುಬೆಲ್ ತನ್ನ ಫೇಸ್‌ಬುಕ್ ಪೇಜ್ ನಲ್ಲಿ ತಾನೊಬ್ಬ ಜರ್ನಲಿಸ್ಟ್ ಮತ್ತು ನಬಿನಗರ ಪ್ರದೇಶದವನು ಎಂದು ಹೇಳಿಕೊಂಡಿದ್ದಾನೆ.

ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸೂಕ್ತ ಬಂಗಾಳಿ ಕೀವರ್ಡ್‌ಗಳನ್ನು ಬಳಸಿಕೊಂಡು ನಂತರದ ಇಂಟರ್ನೆಟ್ ಹುಡುಕಾಡಿದಾಗ, ಈ ಮಾಹಿತಿಯನ್ನು ಆಧರಿಸಿ, 28 ಜುಲೈ 2024 ರಂದು ವಿವಿಧ ಬಾಂಗ್ಲಾದೇಶದ ಮಾಧ್ಯಮಗಳು ಪ್ರಕಟಿಸಿದ ಸುದ್ದಿಗಳನ್ನು ನೀಡಿತು (ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ). ಈ ವರದಿಗಳ ಪ್ರಕಾರ, ಬ್ರಹ್ಮನ್‌ಬಾರಿಯಾ ಜಿಲ್ಲೆಯ ನಬಿನಗರ ಪುರಸಭೆಯ ಪ್ರದೇಶದಲ್ಲಿ 28 ಜುಲೈ 2024 ರಂದು ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಸೊಹಾಗ್ ಮಿಯಾ, ಅವರ ಪತ್ನಿ ಜನ್ನತುಲ್ ಬೇಗಂ ಮತ್ತು ಅವರ ಪುತ್ರಿಯರಾದ ಫರಿಯಾ ಮತ್ತು ಫಾಹಿಮಾ ಎಂದು ಗುರುತಿಸಲಾಗಿದೆ.

ಬ್ರಹ್ಮನ್‌ಬಾರಿಯಾ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಬಿನಗರ ವೃತ್ತ) ಸಿರಾಜುಲ್ ಇಸ್ಲಾಂ ಮಾಧ್ಯಮದೊಂದಿಗೆ ಮಾತನಾಡುತ್ತಾ “ಸೋಹಾಗ್ ನಬಿನಗರ ಸದರ್ ಈ ಪ್ರದೇಶದಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದು, 28 ಜುಲೈ 2024 ರ ಮುಂಜಾನೆ, ಮನೆಯಿಂದ ಯಾವುದೇ ಶಬ್ದ ಕೇಳದ ನೆರೆಹೊರೆಯವರು ಅನುಮಾನಾಸ್ಪದವಾಗಿ ಬಾಗಿಲು ಒಡೆದು ನೋಡಿದಾಗ, ಅವರು ಸೀಲಿಂಗ್‌ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ತದನಂತರ ಮಾಹಿತಿ ಪಡೆದ ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದಾರೆ” ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಇದಲ್ಲದೆ, ಹಲವಾರು ಬಾಂಗ್ಲಾದೇಶದ ಮಾಧ್ಯಮಗಳು ಈ ಘಟನೆಯನ್ನು ವರದಿಯನ್ನು ವೀಡಿಯೊ ಬುಲೆಟಿನ್‌ಗಳನ್ನು ಪ್ರಸಾರ ಮಾಡಿದೆ (ಇಲ್ಲಿ, ಇಲ್ಲಿ, ಇಲ್ಲಿ). ಈ ವೀಡಿಯೊಗಳಲ್ಲಿನ ಮನೆಯು ವೈರಲ್ ವೀಡಿಯೊದಲ್ಲಿ ಕಂಡುಬರುವ ಮನೆಯಂತೆಯೇ ಇರುವುದನ್ನು ನಾವು ಗಮನಿಸಬಹುದು.

ಕೊನೆಯದಾಗಿ ಹೇಳುವುದಾದರೆ, ಈ ವೀಡಿಯೊದಲ್ಲಿನ ದೃಶ್ಯಗಳು ಬಾಂಗ್ಲಾದೇಶದ ಬ್ರಾಹ್ಮಣಬಾರಿಯಾ ಜಿಲ್ಲೆಯಲ್ಲಿ ಮುಸ್ಲಿಂ ಕುಟುಂಬ ನೇಣು ಹಾಕಿಕೊಂಡಿರುವುದಕ್ಕೆ ಸಂಬಂಧಿಸಿದ್ದಾಗಿದೆ.