“ಭಾರತೀಯ ರೈಲ್ವೇಯ ಸರಕು ಸಾಗಣೆ ರೈಲು ತನ್ನ ನಿಗದಿತ ಸ್ಥಳವನ್ನು ತಲುಪಲು 3 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ” ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ (ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ). ಹಲವಾರು ಪ್ರಮುಖ ಮಾಧ್ಯಮಗಳು ಅದೇ ರೀತಿ (ಇಲ್ಲಿ) ಲೇಖನಗಳನ್ನು ಪ್ರಕಟಿಸಿವೆ. “ವಿಶಾಖಪಟ್ಟಣದಿಂದ ಸರಕು ಸಾಗಣೆ ರೈಲು ಉತ್ತರ ಪ್ರದೇಶದ ಬಸ್ತಿಯನ್ನು ತಲುಪಲು 3 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ” ಎಂದು ಈ ಲೇಖನಗಳು ಹೇಳಿವೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಭಾರತೀಯ ರೈಲ್ವೆಯ ಸರಕು ಸಾಗಾಟನೆಯ ರೈಲು ತನ್ನ ನಿಗದಿತ ಸ್ಥಾನವನ್ನು ತಲುಪಲು 3 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ.
ಫ್ಯಾಕ್ಟ್: ಭಾರತೀಯ ರೈಲ್ವೆಯ ಗೂಡ್ಸ್ ರೈಲು ತನ್ನ ನಿಗದಿತ ಸ್ಥಳವನ್ನು ತಲುಪಲು ಮೂರು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ. ನಿಜವಾಗಿಯೂ, ಗೂಡ್ಸ್ ರೈಲಿನ ಒಂದು ಬೋಗಿ/ವ್ಯಾಗನ್ ಮಾತ್ರ ಸುಮಾರು ಮೂರೂವರೆ ವರ್ಷಗಳಷ್ಟು ತಡವಾಗಿ ತಲುಪಿದೆ ಹೊರತು ಸಂಪೂರ್ಣ ರೈಲು ಅಲ್ಲ. ಹಾಗಾಗಿ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದಂತೆ ಭಾರತೀಯ ರೈಲ್ವೆಯ ಸರಕು ರೈಲು ತನ್ನ ನಿಗದಿತ ಸ್ಥಳವನ್ನು ತಲುಪಲು 3 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆಯೇ? ಎಂದು ಸೂಕ್ತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ಹುಡುಕಿದಾಗ, ಜುಲೈ 2018 ರಲ್ಲಿ ಪ್ರಕಟವಾದ ‘ದಿ ಎಕನಾಮಿಕ್ ಟೈಮ್ಸ್’ ಸುದ್ದಿ ಲೇಖನ ಕಂಡುಬಂದಿದೆ. ಈ ಲೇಖನದ ಪ್ರಕಾರ, ಗೂಡ್ಸ್ ರೈಲಿನಿಂದ ಒಂದು ವ್ಯಾಗನ್ ಕಾಣೆಯಾಗಿದೆಯೇ ಹೊರತು ಸಂಪೂರ್ಣ ಸರಕು ರೈಲು ಅಲ್ಲ. “2014 ರಲ್ಲಿ, ಉತ್ತರ ಪ್ರದೇಶದ ಬಸ್ತಿಯಿಂದ ರಾಮಚಂದ್ರ ಗುಪ್ತಾ ಎಂಬ ಉದ್ಯಮಿ ವಿಶಾಖಪಟ್ಟಣದಿಂದ ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ (ಐಪಿಎಲ್) ಮೂಲಕ ತಮ್ಮ ಹೆಸರಿನಲ್ಲಿ ರಸಗೊಬ್ಬರವನ್ನು ಬುಕ್ ಮಾಡಿದ್ದರು. (ಐಪಿಎಲ್) ಕಂಪನಿಯು ಬಸ್ತಿಗೆ 1,316 ಚೀಲಗಳ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ರಸಗೊಬ್ಬರವನ್ನು ಸಾಗಿಸಲು ವ್ಯಾಗನ್ ಅನ್ನು ಬುಕ್ ಮಾಡಿದ್ದರು. ಸಾಮಾನ್ಯವಾಗಿ, 1,400 ಕಿಮೀಗಳ ಸಂಪೂರ್ಣ ಪ್ರಯಾಣವು 42 ಗಂಟೆಗಳು ಮತ್ತು 13 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಈ ಬಂಡಿ/ವ್ಯಾಗನ್ ಮೂರು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ.
ಇನ್ನು ಕೆಲ ಮಾಧ್ಯಮಗಳು ಜುಲೈ 2018 ರಲ್ಲಿ ಈ ಘಟನೆಯನ್ನು ವರದಿ ಮಾಡುವ ಲೇಖನಗಳನ್ನು ಪ್ರಕಟಿಸಿದ್ದವು (ಇಲ್ಲಿ, ಇಲ್ಲಿ). ಈ ಲೇಖನಗಳ ಪ್ರಕಾರ, ಉತ್ತರ ಪ್ರದೇಶದ ಬಸ್ತಿಯ ಎಂ/ಎಸ್ ರಾಮಚಂದ್ರ ಗುಪ್ತ ಎಂಬುವವರ ಹೆಸರಿನಲ್ಲಿ ಇಂಡಿಯನ್ ಪೊಟಾಷ್ ಕಂಪನಿಯು ವಿಶಾಖಪಟ್ಟಣಂ ಬಂದರಿನಿಂದ ಉತ್ತರ ಪ್ರದೇಶದ ಬಸ್ತಿಗೆ ರಸಗೊಬ್ಬರಗಳೊಂದಿಗೆ ವ್ಯಾಗನ್ ನಂ. 107462 ಅನ್ನು 2014 ರಲ್ಲಿ ಲೋಡ್ ಮಾಡಿ ಕಳುಹಿಸಲಾಗಿದೆ. ಕೆಲವು ತಿಂಗಳು ಕಳೆದರೂ ವ್ಯಾಗನ್ ತನ್ನ ನಿರ್ದಿಷ್ಟ ಸ್ಥಳವನ್ನು ತಲುಪದ ಕಾರಣ ಗುಪ್ತಾ ರೈಲ್ವೆ ಇಲಾಖೆಗೆ ದೂರು ನೀಡಿದ್ದರು. ರಸಗೊಬ್ಬರಗಳನ್ನು ತುಂಬಿದ ವ್ಯಾಗನ್ ಅಂತಿಮವಾಗಿ ಜುಲೈ 2018 ರಲ್ಲಿ ಬಸ್ತಿ ರೈಲು ನಿಲ್ದಾಣವನ್ನು ತಲುಪಿತು.
ಘಟನೆಯ ಕುರಿತು ಮಾತನಾಡಿದ ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಸಂಜಯ್ ಯಾದವ್, “ಕೆಲವೊಮ್ಮೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಸರಕು ರೈಲಿನಿಂದ ವ್ಯಾಗನ್‌ಗಳು ಬೇರ್ಪಡುತ್ತವೆ. ಬಹುಶಃ, ಈ ಬಂಡಿಯು ಹಾಗೆ ಆಗಿರುವಂತೆ ಕಾಣುತ್ತದೆ. ಆದರೆ ಘಟನೆಯಲ್ಲಿ ಸಂಪೂರ್ಣವಾಗಿ ಏನಾಗಿದೆ ಎಂದು ತನಿಖೆ ಮಾಡಿ ಹೇಳಲು ಸಾಧ್ಯವಿಲ್ಲ” ಎಂದು ಈ ಆರ್ಟಿಕಲ್ಸ್ ನಲ್ಲಿ ತಿಳಿಸಲಾಗಿದೆ. ಇದರಿಂದ ಇಡೀ ರೈಲು ತಡವಾಗಿಲ್ಲ ಬದಲಾಗಿ ಗೂಡ್ಸ್ ರೈಲಿನ ಒಂದು ಬೋಗಿ/ವ್ಯಾಗನ್ ಮಾತ್ರ ತಡವಾಗಿ ತನ್ನ ಸ್ಥಳವನ್ನು ತಲುಪಿದೆ ಎಂದು ಹೇಳಬಹುದು.
ಇದಲ್ಲದೆ, ಈ ವೈರಲ್ ಪೋಸ್ಟ್ ಮತ್ತು ಸುದ್ದಿಗಳಿಗೆ ಪ್ರತಿಕ್ರಿಯಿಸಿದ, ಭಾರತ ಸರ್ಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) 10 ಡಿಸೆಂಬರ್ 2024 ರಂದು ತನ್ನ ಅಧಿಕೃತ ಫ್ಯಾಕ್ಟ್ ಚೆಕಿಂಗ್ X (ಟ್ವಿಟರ್) ಹ್ಯಾಂಡಲ್‌ನಲ್ಲಿ ಈ ಸುದ್ದಿಗಳು ಸುಳ್ಳಾಗಿದ್ದು, ಯಾವುದೇ ಭಾರತೀಯ ರೈಲ್ವೇ ತನ್ನ ನಿಗದಿತ ಸ್ಥಳವನ್ನು ತಲುಪಲು ಇಷ್ಟೊಂದು ಸಮಯ ತೆಗೆದುಕೊಂಡಿಲ್ಲ ಎಂದು ತಿಳಿಸಿದೆ.
ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ರನ್ನು ಸಹ ಸಂಪರ್ಕಿಸಿದ್ದೇವೆ. ಈ ಮೂಲಕ ನಾವು ಅವರಿಂದ ಮಾಹಿತಿಯನ್ನು ಪಡೆದ ತಕ್ಷಣ ಈ ಫ್ಯಾಕ್ಟ್ ಚೆಕಿಂಗ್ ಅನ್ನು ಅಪ್ಡೇಟ್ ಮಾಡಿದ್ದೇವೆ.
ಕೊನೆಯದಾಗಿ ಹೇಳುವುದಾದರೆ, ಭಾರತೀಯ ರೈಲ್ವೆಯ ಸರಕು ರೈಲು ತನ್ನ ನಿಗದಿತ ಸ್ಥಳವನ್ನು ತಲುಪಲು ಮೂರು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ. ನಿಜವಾಗಿಯೂ, ಗೂಡ್ಸ್ ರೈಲಿನ ಒಂದು ಬೋಗಿ/ವ್ಯಾಗನ್ ಮಾತ್ರ ಕಾಣೆಯಾಗಿ ಮತ್ತು ಸುಮಾರು ಮೂರೂವರೆ ವರ್ಷಗಳ ನಂತರ ತನ್ನ ನಿಗದಿತ ಸ್ಥಾನವನ್ನು ತಲುಪಿದೆಯೇ ಹೊರತು, ಇಡೀ ರೈಲು ಅಲ್ಲ.