Fake News - Kannada
 

‘ಸ್ಕ್ರೀಮ್ ಆಫ್ ದಿ ಮೆರ್ಮೇಯ್ಡ್’ ಕಿರುಚಿತ್ರದ ದೃಶ್ಯಗಳನ್ನು ಸಮುದ್ರದಲ್ಲಿ ಸಿಕ್ಕ ಮತ್ಸ್ಯಕನ್ಯೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಮಂಗಳೂರು ಎಂಬಲ್ಲಿ ಮೀನುಗಾರರ ಬಲೆಯಲ್ಲಿ ಮತ್ಸ್ಯಕನ್ಯೆಯೊಂದು ಸಿಕ್ಕಿಕೊಂಡು ದಡಕ್ಕೆ ಬಂದಿರುವ ದೃಶ್ಯ ಎಂದೂ ಹಾಗೂ ಮಂಗಳೂರಿನ ಸಮುದ್ರದಲ್ಲಿ ಕಂಡುಬಂದ ಮತ್ಸ್ಯಕನ್ಯೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಬಲೆಗೆ ಸಿಕ್ಕಿಬಿದ್ದಿದ್ದ ಮತ್ಸ್ಯಕನ್ಯೆಯನ್ನು ಕೆಲವರು ಬಿಡಿಸುವ ದೃಶ್ಯಗಳನ್ನು ನೋಡಬಹುದು. ಆ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ. 

ಪ್ರತಿಪಾದನೆ: ಮಂಗಳೂರು ಎಂಬಲ್ಲಿ ಮತ್ಸ್ಯಕನ್ಯೆಯೊಂದು ಬಲೆಯಲ್ಲಿ ಸಿಲುಕಿ ದಡಕ್ಕೆ ಬರುವ ದೃಶ್ಯಗಳು.

ಸತ್ಯ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ‘ಸ್ಕ್ರೀಮ್ ಆಫ್ ದಿ ಮೆರ್ಮೇಯ್ಡ್’ ಎಂಬ ಕಿರುಚಿತ್ರದ ದೃಶ್ಯಗಳನ್ನು ತೋರಿಸುತ್ತದೆ. ಈ ಚಿತ್ರವನ್ನು ಶ್ರೀಲಂಕಾದ ಟ್ರಾವೆಲ್ ವ್ಲೋಗರ್ ಚಾನೆಲ್ ‘ಟ್ರಿಪ್ ಪಿಸ್ಸೊ’ ನಿರ್ಮಿಸಿದೆ. ಸಮುದ್ರ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 08 ಜೂನ್ 2021 ರಂದು ‘ವಿಶ್ವ ಸಾಗರ ದಿನ’ ಆಚರಣೆಯ ಸಂದರ್ಭದಲ್ಲಿ ಈ ವೀಡಿಯೊವನ್ನು ಪ್ರಕಟಿಸಲಾಗಿದೆ. ಈ ವೀಡಿಯೋದಲ್ಲಿ ಕಾಣಿಸುತ್ತಿರುವುದು ನಿಜವಾಗಿಯೂ ನಡೆದ ಘಟನೆಯಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನುರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ ಶ್ರೀಲಂಕಾದ ಟ್ರಾವೆಲ್ ವ್ಲೋಗರ್ ಚಾನೆಲ್ ‘ಟ್ರಿಪ್ ಪಿಸ್ಸೊ’ 07 ಜೂನ್ 2021 ರಂದು ತಮ್ಮ ಯೂಟ್ಯೂಬ್‌ನಲ್ಲಿ ಇದೇ ರೀತಿಯ ದೃಶ್ಯಗಳಿರುವ ವೀಡಿಯೊವನ್ನು ಪ್ರಕಟಿಸಿರುವುದು ಕಂಡುಬಂದಿದೆ. ‘Real Mermaid caught in Sri Lanka | TRIP PISSO’ ( ಶ್ರೀಲಂಕಾದಲ್ಲಿ ಸಿಕ್ಕಿಬಿದ್ದ ನಿಜವಾದ  ಮತ್ಸ್ಯಕನ್ಯೆ | ಟ್ರಿಪ್ ಪಿಸ್ಸೋ)  ಶೀರ್ಷಿಕೆಯಡಿಯಲ್ಲಿ ಈ ವೀಡಿಯೊವನ್ನು ಪ್ರಕಟಿಸಲಾಗಿದೆ. ವೈರಲ್‌ ಆದ ವೀಡಿಯೋದಲ್ಲಿ ಕಾಣುತ್ತಿರುವ ದೃಶ್ಯಗಳು ಕಿರುಚಿತ್ರದ ತುಣುಕುಗಳು ಎಂದು ಕಿರುಚಿತ್ರದ ವಿವರಣೆಯಿಂದ ಗೊತ್ತಾಗಿದೆ. ಸಾಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ‘ವಿಶ್ವ ಸಾಗರ ದಿನ’ದ ಸಂದರ್ಭದಲ್ಲಿ 08 ಜೂನ್ 2021 ರಂದು ಈ ವೀಡಿಯೊವನ್ನು ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಕಿರುಚಿತ್ರ ಮೇಕಿಂಗ್ ವೀಡಿಯೋವನ್ನು 25 ಜೂನ್ 2021 ರಂದು ‘ಬಿಹೈಂಡ್ ಪಿಸ್ಸೋ’ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಲಾಗಿದೆ. ‘ಸ್ಕ್ರೀಮ್ ಆಫ್ ದಿ ಮೆರ್ಮೇಯ್ಡ್’ ಕಿರುಚಿತ್ರದ ಚಿತ್ರೀಕರಣವನ್ನು ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ. ಈ ಮೇಕಿಂಗ್ ವೀಡಿಯೋದಲ್ಲಿ, ಮತ್ಸ್ಯಕನ್ಯೆಯ ಪಾತ್ರವನ್ನು ನಿರ್ವಹಿಸುವ ಹುಡುಗಿ ಮತ್ತು ಆಕೆಗೆ ಇತರರು ಮೇಕಪ್ ಮಾಡುವುದನ್ನು ಸಹ ನಾವು ನೋಡಬಹುದು. ಇದೇ ವೀಡಿಯೋವನ್ನು ‘ಟ್ರಿಪ್ ಪಿಸ್ಸೋ’ ಫೇಸ್‌ಬುಕ್ ಪುಟದಲ್ಲೂ ಪ್ರಕಟಿಸಲಾಗಿದೆ. ಈ ವಿವರಗಳ ಆಧಾರದ ಮೇಲೆ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ‘ಸ್ಕ್ರೀಮ್ ಆಫ್ ದಿ ಮೆರ್ಮೇಯ್ಡ್’ ಕಿರುಚಿತ್ರದ ದೃಶ್ಯಗಳನ್ನು ತೋರಿಸುತ್ತಿವೆ ಎಂಬುದು ಖಚಿತ.

ಒಟ್ಟಾರೆಯಾಗಿ‘ಸ್ಕ್ರೀಮ್ ಆಫ್ ದಿ ಮೆರ್ಮೇಯ್ಡ್’ ಕಿರುಚಿತ್ರದ ದೃಶ್ಯಗಳನ್ನು ಕರ್ನಾಟಕದಲ್ಲಿ ಮಂಗಳೂರಿನ ಸಮುದ್ರದಲ್ಲಿ ಕಂಡುಬಂದ ಮತ್ಸ್ಯಕನ್ಯೆ ಎಂದೂ ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll