ಉತ್ತರ ಪ್ರದೇಶದ ಸಂಭಾಲ್ ಮಸೀದಿಯ ಸಮೀಕ್ಷೆಯ ಸಂದರ್ಭದಲ್ಲಿ ಕ್ರಿ.ಶ. 1500 ರ ವಿಷ್ಣುವಿನ ಪ್ರತಿಮೆ, ಸುದರ್ಶನ ಚಕ್ರ ಮತ್ತು ಹಿಂದೂ ಸಂಕೇತದ ವಿಗ್ರಹಗಳು ಪತ್ತೆಯಾಗಿವೆ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಎರಡು ವಿಷ್ಣು ಪ್ರತಿಮೆಗಳು, ಶಿವಲಿಂಗ ಮತ್ತು ಸುದರ್ಶನ ಚಕ್ರವನ್ನು ತೋರಿಸುವ ನಾಲ್ಕು ಫೋಟೋಗಳಿವೆ. ನವೆಂಬರ್ 24, 2024 ರಂದು ಸಮೀಕ್ಷೆಯ ಸಮಯದಲ್ಲಿ ಸಂಭವಿಸಿದ ಹಿಂಸಾತ್ಮಕ ಘರ್ಷಣೆಗಳಿಗೆ ಸಂಬಂಧಿಸಿದಂತೆ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ, ಇದರ ಪರಿಣಾಮವಾಗಿ ನಾಲ್ಕು ಜನರು ಅಸುನೀಗಿದ್ದು, ಇಪ್ಪತ್ತು ಪೊಲೀಸರು ಗಾಯಗೊಂಡಿದ್ದಾರೆ (ಇಲ್ಲಿ ಮತ್ತು ಇಲ್ಲಿ) ಎಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಉತ್ತರ ಪ್ರದೇಶದ ಸಂಭಾಲ್ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಸಿಕ್ಕ ಕ್ರಿ.ಶ. 1500 ರ ವಿಷ್ಣುವಿನ ಪ್ರತಿಮೆ, ಶಿವಲಿಂಗ ಮತ್ತು ಸುದರ್ಶನ ಚಕ್ರದ ಚಿತ್ರ.
ಫ್ಯಾಕ್ಟ್: ಫೆಬ್ರವರಿ 2024 ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಸೇತುವೆ ನಿರ್ಮಾಣದ ಸಮಯದಲ್ಲಿ ವಿಷ್ಣು ಪ್ರತಿಮೆ ಮತ್ತು ಶಿವಲಿಂಗದ ವೈರಲ್ ಫೋಟೋಗಳು ಪತ್ತೆಯಾಗಿವೆ. ಈ ಲೇಖನವನ್ನು ಬರೆಯುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಸಂಭಾಲ್ ಮಸೀದಿಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಕಂಡುಬಂದಿರುವ ಬಗ್ಗೆ ಯಾವುದೇ ಪುರಾವೆಗಳು ಅಥವಾ ವರದಿಗಳಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ಈ ಹೇಳಿಕೆಯನ್ನು ಪರಿಶೀಲಿಸಲು, ನಾವು ಗೂಗಲ್ನಲ್ಲಿ ಕೀವರ್ಡ್ ಹುಡುಕಾಟ ನಡೆಸಿದ್ದೇವೆ. ಸಂಭಾಲ್ ಮಸೀದಿ ಸಮೀಕ್ಷೆಯ ಸಮಯದಲ್ಲಿ ಯಾವುದಾದರು ಪ್ರಾಚೀನ ಹಿಂದೂ ವಿಗ್ರಹಗಳು ಪತ್ತೆಯಾಗಿವೆ ಎನ್ನುವ ಕುರಿತು ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಅಲಹಾಬಾದ್ ಹೈಕೋರ್ಟ್ ಪ್ರಕರಣವನ್ನು ವಿಚಾರಣೆ ಮಾಡುವವರೆಗೆ ಸುಪ್ರೀಂ ಕೋರ್ಟ್ ಅದನ್ನು ಗೌಪ್ಯವಾಗಿಡಲು ನಿರ್ದೇಶಿಸಿರುವುದರಿಂದ, ಸಮೀಕ್ಷಾ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂದು ತಿಳಿದುಬಂದಿದೆ.
ತದನಂತರ ನಾವು ಫೋಟೋಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ನಮ್ಮನ್ನು ಫೆಬ್ರವರಿ 07, 2024 ರಂದು ಪ್ರಕಟವಾದ ಅದೇ ವೈರಲ್ ಚಿತ್ರಗಳನ್ನು ಒಳಗೊಂಡ NDTV ಯ X ಪೋಸ್ಟ್ (ಆರ್ಕೈವ್) ಗೆ ಕರೆದೊಯ್ಯಿತು. ಈ ಪೋಸ್ಟ್ ಕರ್ನಾಟಕದ ನದಿಕಿನಾರೆಯಲ್ಲಿ ಈ ವಿಗ್ರಹಗಳು ಕಂಡುಬಂದಿವೆ ಎಂದು ಹೇಳುವ ನ್ಯೂಸ್ ಆರ್ಟಿಕಲ್ ಲಿಂಕ್ ಅನ್ನು ನೀಡಿದೆ.
ಈ NDTV ಲೇಖನದ ಪ್ರಕಾರ, ಕರ್ನಾಟಕದ ರಾಯಚೂರು ಜಿಲ್ಲೆಯ ತೆಲಂಗಾಣ-ಕರ್ನಾಟಕ ಗಡಿಯ ಪ್ರದೇಶದಲ್ಲಿ ಕೃಷ್ಣಾ ನದಿಗೆ ಸೇತುವೆ ನಿರ್ಮಾಣದ ಮಾಡುವ ಸಮಯದಲ್ಲಿ ಈ ವಿಗ್ರಹಗಳು ಪತ್ತೆಯಾಗಿವೆ. ವಿಷ್ಣು ವಿಗ್ರಹ ಮತ್ತು ಶಿವಲಿಂಗವು ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI)ಯ ವಶದಲ್ಲಿದೆ. ಫೆಬ್ರವರಿ 2024 ರಲ್ಲಿ ಪ್ರಕಟವಾದ ಹೆಚ್ಚುವರಿ ಸುದ್ದಿ ಲೇಖನಗಳು, ಈ ವಿಗ್ರಹಗಳ ಫೋಟೋಗಳನ್ನು ಒಳಗೊಂಡಿವೆ ಮತ್ತು ಇದೇ ರೀತಿಯ ವಿವರಗಳನ್ನು ನೀಡಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ವೈರಲ್ ಪೋಸ್ಟ್‌ನಲ್ಲಿ ಚಿತ್ರಿಸಲಾದ ಸುದರ್ಶನ ಚಕ್ರದ ನಿರ್ದಿಷ್ಟತೆಗಳು ಸ್ಪಷ್ಟವಾಗಿಲ್ಲವಾದರೂ, ಇದು ಸಂಭಾಲ್ ಮಸೀದಿ ಸಮೀಕ್ಷೆಗೆ ಸಂಬಂಧವಿಲ್ಲದ, ಬದಲಾಗಿ ಸ್ಟಾಕ್ ಚಿತ್ರ ಎಂದು ದೃಢಪಡಿಸಲಾಗಿದೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ, ವಕೀಲ ಹರಿಶಂಕರ್ ಜೈನ್ ಮತ್ತು ಮಹಂತ್ ರಿಷಿರಾಜ್ ಗಿರಿ ಸೇರಿದಂತೆ ಎಂಟು ಮಂದಿ ಅರ್ಜಿ ಸಲ್ಲಿಸಿದ್ದು, ಚಂದೌಸಿಯಲ್ಲಿರುವ ಶಾಹಿ ಜಾಮಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಬಾಬರ್ 1526 ರಲ್ಲಿ ಆ ಸ್ಥಳದಲ್ಲಿದ್ದ ದೇವಾಲಯವನ್ನು ಕೆಡವಿ ನಿರ್ಮಿಸಿದನೆಂದು ಪ್ರತಿಪಾದಿಸಿದ್ದಾರೆ. ಸಂಭಾಲ್ ಜಿಲ್ಲಾ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರು (ಹಿರಿಯ ವಿಭಾಗ) 19 ನವೆಂಬರ್ 2024 ರಂದು ಏಕಪಕ್ಷೀಯ ಆದೇಶವನ್ನು ಹೊರಡಿಸಿದ್ದು, ಮೊಘಲ್ ಕಾಲದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯನ್ನು ವಕೀಲ ಆಯುಕ್ತರ ಮೂಲಕ (ಇಲ್ಲಿ) ನಡೆಸಲು ಅನುಮತಿ ನೀಡಿದ್ದಾರೆ. ಸಮೀಕ್ಷೆಗಾಗಿ ವಕೀಲ ರಮೇಶ್ ಚಂದ್ ರಾಘವ್ ಅವರನ್ನು ವಕೀಲ ಆಯುಕ್ತರನ್ನಾಗಿ ನೇಮಿಸಲಾಯಿತು. ಸಮೀಕ್ಷೆಯ ಮೊದಲ ಹಂತವನ್ನು 19 ನವೆಂಬರ್ 2024 ರಂದು ನಡೆಸಲಾಗಿದ್ದು, ನಂತರ ಎರಡನೇ ಹಂತವನ್ನು 24 ನವೆಂಬರ್ 2024 ರಂದು ನಡೆಸಲಾಯಿತು.
2024 ರ ನವೆಂಬರ್ 19 ರಂದು ಮಸೀದಿಯ ಸಮೀಕ್ಷೆಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಂಭಾಲ್ ಶಾಹಿ ಜಾಮಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ನವೆಂಬರ್ 29, 2024 ರಂದು ವಿಚಾರಣೆ ನಡೆಸಿತು. ಸಮಿತಿಯನ್ನು ಪ್ರತಿನಿಧಿಸುವ ಹಿರಿಯ ವಕೀಲ ಹುಜೇಫಾ ಅಹ್ಮದ್ ಅವರು ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದರು. ಆದರೆ ಪೀಠ ಅದನ್ನು ತಿರಸ್ಕರಿಸಿತು. ಸಮಿತಿಯು ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸಲು ಸೂಚಿಸಲಾಯಿತು. ನ್ಯಾಯಮೂರ್ತಿ ಖನ್ನಾ ಶಾಂತಿಯನ್ನು ಕಾಪಾಡಿಕೊಳ್ಳುವ ಮತ್ತು ಅನಗತ್ಯ ಘಟನೆಗಳನ್ನು ತಡೆಯುವ ಅಗತ್ಯವನ್ನು ಒತ್ತಿ ಹೇಳಿದರು. ಹೈಕೋರ್ಟ್ ಪರಿಶೀಲನೆ ಮಾಡುವವರೆಗೆ ಮುಂದಿನ ವಿಚಾರಣೆಗಳನ್ನು ಮುಂದುವರಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಲಾಯಿತು. ಪ್ರಕರಣವನ್ನು ಜನವರಿ 6, 2025 ಕ್ಕೆ ಮುಂದೂಡಲಾಯಿತು ಮತ್ತು ವಕೀಲ ಆಯುಕ್ತರಿಂದ ಮುಚ್ಚಿದ ಕವರ್‌ನಲ್ಲಿ ವರದಿಗಳನ್ನು ಇಡುವಂತೆ ಸೂಚಿಸಲಾಯಿತು. ಸುಪ್ರೀಂ ಕೋರ್ಟ್‌ನ ನವೆಂಬರ್ 29, 2024 ರ ಆದೇಶಗಳ ಪ್ರತಿಯನ್ನು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಫೆಬ್ರವರಿ 2024 ರಲ್ಲಿ ಕರ್ನಾಟಕದಲ್ಲಿ ಪತ್ತೆಯಾದ ವಿಗ್ರಹಗಳ ಫೋಟೋಗಳನ್ನು ಸಂಭಾಲ್ ಮಸೀದಿ ಸಮೀಕ್ಷೆಯ ಸಮಯದಲ್ಲಿ ದೊರೆತ ಪ್ರಾಚೀನ ಹಿಂದೂ ವಿಗ್ರಹಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.