ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಸಂಘರ್ಷ ನಡೆಯುತ್ತಿದ್ದು, ಇಸ್ರೇಲ್ ಮತ್ತು ಹಮಾಸ್ ನಡುವೆ ವೈಮಾನಿಕ ದಾಳಿಗಳು ವಿನಿಮಯವಾಗುತ್ತಿವೆ. ಈ ಮಧ್ಯೆ ಭಾರಿ ಸ್ಫೋಟದ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಇಸ್ರೇಲ್‌ನಲ್ಲಿ ದೊಡ್ಡ ಸ್ಫೋಟ ಸಂಭವಿಸಿದ್ದು, ಪರಿಣಾಮವಾಗಿ 500 ಕ್ಕೂ ಹೆಚ್ಚು ಯಹೂದಿ ಜನರು ಕೊಲ್ಲಲ್ಪಟ್ಟರು’ ಎಂದು ಬಿಂಬಿಸಿ ವಿಡಿಯೊವನ್ನು ಹರಿಯಬಿಡಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಇಸ್ರೇಲ್‌ನಲ್ಲಿ ನಡೆದ ಭಾರಿ ಸ್ಪೋಟದಿಂದ 500 ಯಹೂದಿಗಳು ಕೊಲ್ಲಲ್ಪಟ್ಟ ವಿಡಿಯೋ.
ಸತ್ಯಾಂಶ: ಇದು 2020 ರಲ್ಲಿ ಈಜಿಪ್ಟ್‌ನ ಕೈರೋ ಉಪನಗರದಲ್ಲಿ ಕಚ್ಚಾ ತೈಲ ಪೈಪ್‌ಲೈನ್ ಸೋರಿಕೆಯಿಂದಾಗಿ ಉಂಟಾದ ಬೆಂಕಿ ಅವಘಡದ ವಿಡಿಯೋವಾಗಿದೆ. ಈ ಘಟನೆಯನ್ನು ಅನೇಕ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಈ ವೀಡಿಯೊಗೆ ಇಸ್ರೇಲ್‌ಗೆ ಅಥವಾ ಪ್ರಸ್ತುತ ನಡೆಯುತ್ತಿರುವ ಸಂಘರ್ಷದೊಂದಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೆ, ಇಸ್ರೇಲ್‌ನಲ್ಲಿ 500 ಯಹೂದಿಗಳು ಮೃತಪಟ್ಟ ಯಾವುದೇ ಸ್ಫೋಟದ ಬಗ್ಗೆ ಇತ್ತೀಚಿಗಿನ ಸುದ್ದಿಗಳಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಈ ವೀಡಿಯೊಗಳ ಸ್ಕ್ರೀನ್ ಶಾಟ್‌ಗಳನ್ನು ಗೂಗಲ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ ದಿ ಟೆಲಿಗ್ರಾಫ್‌ನ 2020 ರ ಸುದ್ದಿ ನಮಗೆ ಸಿಕ್ಕಿದೆ. ಅದರಲ್ಲಿ ಇದೇ ದೃಶ್ಯಗಳನ್ನು ಕಾಣಬಹುದಾಗಿದೆ. ಈ ವರದಿಯ ಪ್ರಕಾರ, ಈ ದೃಶ್ಯಗಳು ಈಜಿಪ್ಟಿನ ಕೈರೋ ಉಪನಗರದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಾಗಿನ ದೃಶ್ಯವಾಗಿದೆ. ವರದಿಯ ಪ್ರಕಾರ, ಕಚ್ಚಾ ತೈಲ ಪೈಪ್‌ಲೈನ್ ಒಡೆದ ಪರಿಣಾಮ ಈ ಅವಘಡ ಉಂಟಾಗಿದೆ.
ಮೇಲಿನ ಸುದ್ದಿ ವೀಡಿಯೊದಿಂದ ಸುಳಿವು ತೆಗೆದುಕೊಂಡು, ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ ನಲ್ಲಿ ಮತ್ತಷ್ಟು ಹುಡುಕಿದಾಗ, ಈ ಘಟನೆಯ ಬಗ್ಗೆ ಅನೇಕ ಸುದ್ದಿ ಸಂಸ್ಥೆಗಳು ಮಾಡಿರುವ ವರದಿಗಳ ವಿಡಿಯೊಗಳನ್ನು ಕಂಡುಕೊಂಡಿದ್ದೇವೆ. ಈ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ವರದಿಗಳ ಪ್ರಕಾರ, ಈಜಿಪ್ಟ್‌ನ ಕೈರೋ ಉಪನಗರದಲ್ಲಿ ಕಚ್ಚಾ ತೈಲ ಪೈಪ್‌ಲೈನ್ ಉದ್ದಕ್ಕೂ ಸೋರಿಕೆಯಾದ ನಂತರ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಈ ಮೂಲಕ ಈ ವೀಡಿಯೊಗೆ ಇಸ್ರೇಲ್‌ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ನಾವು ತೀರ್ಮಾನಿಸಬಹುದು.
ಅಲ್ಲದೆ, ಅಂತಹ ಯಾವುದೇ ಘಟನೆ ನಿಜಕ್ಕೂ ನಡೆದಿದ್ದರೆ, ಇಡೀ ಜಾಗತಿಕ ಮಾಧ್ಯಮಗಳು ಅದನ್ನು ವರದಿ ಮಾಡುತ್ತಿದ್ದವು. ಆದಾಗ್ಯೂ, ಇಸ್ರೇಲ್‌ನಲ್ಲಿ 500 ಯಹೂದಿಗಳು ಸಾವಿಗೀಡಾಗಿರುವ ಸ್ಫೋಟದ ಬಗ್ಗೆ ಇತ್ತೀಚಿನ ಯಾವುದೇ ಸುದ್ದಿ ವರದಿಗಳು ನಮಗೆ ಸಿಗಲಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಈಜಿಪ್ಟ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಳೆಯ ವೀಡಿಯೊವನ್ನು ಇಸ್ರೇಲ್‌ನಲ್ಲಿ ಸ್ಫೋಟವಾಗಿದೆ ಎಂದು ತಪ್ಪಾಗಿ ಹರಿಯಬಿಡಲಾಗುತ್ತಿದೆ.