Fake News - Kannada
 

ಪಶ್ಚಿಮ ಬಂಗಾಳದಲ್ಲಿ ಪಿಎಂ ಮೋದಿ ರ್ಯಾಲಿಗೆ ಸೇರಿದ ಜನ ಎಂದು ಹಳೆಯ ಸಂಬಂಧವಿಲ್ಲದ ಫೋಟೊಗಳನ್ನು ಹಂಚಿಕೊಳ್ಳಲಾಗಿದೆ

0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಪ್ರಧಾನಿ ಮೋದಿಯವರು 2021ರ  ಮಾರ್ಚ್ 07 ರಂದು ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಅದೇ ಸಂದರ್ಭದಲ್ಲಿ ಹಲವಾರು ಫೋಟೊಗಳು ಮೋದಿಯವರ ಇತ್ತೀಚಿನ ರ್ಯಾಲಿಯವು ಎಂದು ಹಂಚಿಕೆಯಾಗುತ್ತಿವೆ. ಇದು ನಿಜವೇ ಪರಿಶೀಲಿಸೋಣ.

ಪ್ರತಿಪಾದನೆ: ಇತ್ತೀಚಿಗೆ (2021) ಪಶ್ಚಿಮ ಬಂಗಾಳದಲ್ಲಿ ನಡೆದ ಪಿಎಂ ಮೋದಿಯರವ ರ್ಯಾಲಿಯಲ್ಲಿ ಭಾಗವಹಿಸಿದ್ದ ಬೃಹತ್ ಜನಸ್ತೋಮದ ಫೋಟೊಗಳು.

ನಿಜಾಂಶ: ಪೋಸ್ಟ್‌ನಲ್ಲಿರುವ ಫೋಟೊಗಳು ಇತ್ತೀಚಿನ ಮೋದಿಯವರ ರ್ಯಾಲಿಗೆ ಸಂಬಂಧಿಸಿದವು ಅಲ್ಲ. ಒಂದು ಫೋಟೊ ಇತ್ತೀಚಿಗಿನ ಎಡ-ಕಾಂಗ್ರೆಸ್-ಐಎಸ್‌ಎಫ್ ಮೈತ್ರಿಕೂಟದ್ದಾದರೆ ಇನ್ನೆರೆಡು ಹಳೆಯವು. ಒಂದು ಫೋಟೊ 2019ರದು ಮತ್ತು ಮತ್ತೊಂದು 2014ರದು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪು ದಾರಿಗೆಳೆಯುವಂತಿದೆ.

ಫೋಟೊ 1 (ಆರ್ಕೈವ್‌):

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಇದೇ ರೀತಿಯ ಹಲವಾರು ಫೋಟೊಗಳು ಕಂಡುಬಂದಿವೆ. ಇದನ್ನು ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿನ ರ್ಯಾಲಿಯ ಚಿತ್ರ ಎಂಬ ಶೀರ್ಷಿಕೆಯೊಂದಿಗೆ 2014ರಲ್ಲಿಯೇ ವೆಬ್‌ಸೈಟ್‌ಗೆ ಪೋಸ್ಟ್ ಮಾಡಲಾಗಿದೆ. ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಇದೇ ರೀತಿಯ ಫೋಟೊ ಪ್ರೋಕೇರಳ ವೆಬ್‌ಸೈಟ್‌ನಲ್ಲಿ ಕಂಡುಬಂದಿದೆ.  ಅದಕ್ಕೆ ‘ಕೋಲ್ಕತ್ತದಲ್ಲಿ ಫೆಬ್ರವರಿ 9, 2014ರಂದು  ಎಡಪಕ್ಷಗಳ ಒಕ್ಕೂಟ ಆಯೋಜಿಸಿದ್ದ ರ್ಯಾಲಿಯಲ್ಲಿ ಸೇರಿದ ಜನ (ಫೋಟೊ ಕುಂತಾಲ್ ಚಕ್ರವರ್ತಿ/IANS)’ ಎಂಬ ಶೀರ್ಷಿಕೆ ನೀಡಲಾಗಿದೆ. ಹಾಗಾಗಿ ಇದು ಹಳೆಯ ಚಿತ್ರವಾಗಿದೆ.

ಫೋಟೊ -2 (ಆರ್ಕೈವ್):

ಈ ಫೋಟೊವನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ 2019ರಲ್ಲಿ ಲೇಖನವೊಂದರಲ್ಲಿ ಈ ಫೋಟೊ ಪ್ರಕಟವಾಗಿರುವುದು ಕಂಡುಬಂದಿದೆ. ಲೇಖನದ ಪ್ರಕಾರ ಈ ಚಿತ್ರವು ಎಡಪಕ್ಷಗಳ ವತಿಯಿಂದ ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಸಾರ್ವಜನಿಕ ರ್ಯಾಲಿಗೆ ಸಂಬಂಧಿಸಿದೆ. ಕಳೆದ ವರ್ಷದ ಕೋಲ್ಕತ್ತಾದ ಬ್ರಿಗೇಡ್ ರ್ಯಾಲಿಯ ಪಕ್ಷಿ ನೋಟ ಎಂಬ ಶೀರ್ಷಿಕೆಯೊಂದಿಗೆ ಇದೇ ಚಿತ್ರವನ್ನು CPI (M) West Bengal ಟ್ವೀಟ್ ಮಾಡಿದೆ.

ಇದೇ ರೀತಿಯ ಫೋಟೊವನ್ನು Alamy Stock ವೆಬ್‌ಸೈಟ್‌ನಲ್ಲಿಯೂ ಕಾಣಬಹುದು.

ಫೋಟೋ -3 (ಆರ್ಕೈವ್‌)

ಇದೇ ರೀತಿಯ ಚಿತ್ರವನ್ನು ದಿ ಟೆಲಿಗ್ರಾಫ್ ಮತ್ತು ಇಂಡಿಯಾ ಟುಡೆ ವೆಬ್‌ಸೈಟ್‌ಗಳಲ್ಲಿಯೂ ಸಹ ಕಾಣಬಹುದು. ಈ ಫೋಟೊಗಳಿಗೆ “2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಡ-ಕಾಂಗ್ರೆಸ್-ಐಎಸ್‌ಎಫ್ ಮೈತ್ರಿಕೂಟವು ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮೆಗಾ ರ್ಯಾಲಿಯಲ್ಲಿ ಸೇರಿದ ಬೆಂಬಲಿಗರು” ಎಂಬ ವಿವರಣೆ ನೀಡಲಾಗಿದೆ. ಹಾಗಾಗಿ ಈ ಫೋಟೊ ಮೋದಿ ರ್ಯಾಲಿಯದ್ದಲ್ಲ ಎಂದು ಹೇಳಬಹುದು.

ಮೊದಲ ಮತ್ತು ಎರಡನೇ ಫೋಟೊಗಳನ್ನು ಇತ್ತೀಚಿನ ಕಾಂಗ್ರೆಸ್, ಸಿಪಿಎಂ ಕೋಲ್ಕತ್ತಾ ರ್ಯಾಲಿಯ ಫೋಟೊಗಳೆಂದು ಹಂಚಿಕೊಳ್ಳಲಾಗಿತ್ತು. ಅದು ಸಹ ತಪ್ಪು ಪ್ರತಿಪಾದನೆಯೆಂದು ಫ್ಯಾಕ್ಟಲಿ ತನ್ನ ಹಿಂದಿ ಲೇಖನದಲ್ಲಿ ಫ್ಯಾಕ್ಟ್ ಚೆಕ್ ಮಾಡಿತ್ತು.

ಮೋದಿಯವರ ಇತ್ತೀಚಿನ ಚುನಾವಣಾ ರ್ಯಾಲಿಯ ಅಸಲಿ ಫೋಟೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಪಶ್ಚಿಮ ಬಂಗಾಳದಲ್ಲಿ ಪಿಎಂ ಮೋದಿ ರ್ಯಾಲಿಗೆ ಸೇರಿದ ಜನ ಎಂದು ಹಳೆಯ ಸಂಬಂಧವಿಲ್ಲದ ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll