ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಇಸ್ಕಾನ್ ದೇವಾಲಯದ ಮೇಲೆ ಮುಸ್ಲಿಂ ಗುಂಪು ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ, ಮುಸ್ಲಿಮರಿಗೆ ಸನ್ಯಾಸಿಯೊಬ್ಬರು ಊಟ ಬಡಿಸುತ್ತಿರುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮದದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಪೋಸ್ಟ್‌ನಲ್ಲಿ ಸನ್ಯಾಸಿ ಸ್ವಾಮಿ ನಿತಾಯಿ ದಾಸ್ ಅವರನ್ನು ದೇವಾಲಯದ ಮೇಲೆ ನಡೆದ ದಾಳಿಯ ವೇಳೆ ಹತ್ಯೆ ಮಾಡಲಾಗಿದೆ ಎಂದು ಪ್ರತಿಪಾದಿಸಿ ವೈರಲ್ ಮಾಡಲಾಗಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ದಾಳಿಯಲ್ಲಿ ಮೃತಪಟ್ಟ ಬಾಂಗ್ಲಾದೇಶದ ಇಸ್ಕಾನ್ ಸನ್ಯಾಸಿಯ ಚಿತ್ರ.
ನಿಜಾಂಶ: ಬಾಂಗ್ಲಾದೇಶದಲ್ಲಿ ನಡೆದ ದಾಳಿಗಳಿಗೆ ಸಂಬಂಧಿಸಿದಂತೆ ಇಸ್ಕಾನ್‌ನ ವರದಿಯಲ್ಲಿ ಸ್ವಾಮಿ ನಿತಾಯಿ ದಾಸ್ ಎಂಬ ಹೆಸರಿನಲ್ಲಿ ಯಾವುದೇ ಮೃತರ ಹೆಸರನ್ನು ಹೆಸರಿಸಿಲ್ಲ. ಈ ಚಿತ್ರವು 2016 ರಲ್ಲಿ ಪಶ್ಚಿಮ ಬಂಗಾಳದ ಇಸ್ಕಾನ್ ಮಾಯಾಪುರಿನ್ ಆಯೋಜಿಸಿದ್ದ ಇಫ್ತಾರ್ ಕೂಟದ್ದು ಎಂದು ಕಂಡುಬಂದಿದೆ. ಈ ಬಗ್ಗೆ ಇಸ್ಕಾನ್ ಮಾಯಾಪುರ್ ಕೂಡ ದೃಢಪಡಿಸಿದೆ. ಚಿತ್ರದಲ್ಲಿರುವ ಸನ್ಯಾಸಿ ಇವಾನ್ ಆಂಟಿಕ್ ಎಂಬುವವರಾಗಿದ್ದು, ಅವರು ತುಂಬಾ ಸುರಕ್ಷಿತವಾಗಿದ್ದಾರೆ ಮತ್ತು ಜೀವಂತವಾಗಿದ್ದಾರೆ ಎಂದು ಇಸ್ಕಾನ್ ಮಾಯಾಪುರ್ ಹೇಳಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ದಾಳಿಗಳ ಕುರಿತು ಇಸ್ಕಾನ್ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಇಸ್ಕಾನ್ ಚೌಮೋನಿ ಮೇಲಿನ ದಾಳಿಯಲ್ಲಿ ಪ್ರಾಂತ ಚಂದ್ರ ದಾಸ್ ಮತ್ತು ಜತನ್ ಚಂದ್ರ ಸಹಾ ಎಂಬ ಇಬ್ಬರು ಭಕ್ತರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಭಕ್ತ ನಿಮೈ ಚಂದ್ರ ದಾಸ್ ಎಂಬುವವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಈ ವರದಿಯಲ್ಲಿ ಸ್ವಾಮಿ ನಿತಾಯಿ ದಾಸ್ ಎಂಬ ಹೆಸರಿನ ಯಾವುದೇ ಮೃತರ ಹೆಸರನ್ನು ಉಲ್ಲೇಖಿಸಿಲ್ಲ. ಇದಲ್ಲದೆ, ಇತ್ತೀಚಿನ ದಾಳಿಗಳಲ್ಲಿ ಸ್ವಾಮಿ ನಿತಾಯಿ ದಾಸ್ ಎಂಬ ಹೆಸರಿನ ಸನ್ಯಾಸಿಯ ಮರಣವನ್ನು ತಿಳಿಸುವ ಯಾವುದೇ ಸುದ್ದಿ ವರದಿಗಳು ಕಂಡುಬಂದಿಲ್ಲ.
ಮತ್ತೊಂದೆಡೆ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಚಿತ್ರವು 2016ರ ಹಿಂದಿನದ್ದಾಗಿದ್ದು, ಈ ಚಿತ್ರವು ಬಾಂಗ್ಲಾದೇಶದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಈ ಫೋಟೋವನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ಇದೇ ಚಿತ್ರವನ್ನು ಹೊಂದಿರುವ ಲೇಖನವೊಂದು ದೊರೆತಿದೆ. ಆ ಲೇಖನದ ಪ್ರಕಾರ, ಕೃಷ್ಣ ಪ್ರಜ್ಞೆಯ ಅಂತರರಾಷ್ಟ್ರೀಯ ಸೊಸೈಟಿಯ 50ನೇ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿ ಪಶ್ಚಿಮ ಬಂಗಾಳದ ಇಸ್ಕಾನ್ ಮಾಯಪುರ್ ಮುಸ್ಲಿಮರಿಗೆ ಇಫ್ತಾರ್ ಆಯೋಜಿಸಿತ್ತು. ಇಫ್ತಾರ್ ನಂತರ, ಆ ಮುಸ್ಲಿಮರು ದೇವಾಲಯದ ಒಳಗೆ ತಮ್ಮ ಸಂಜೆ ಪ್ರಾರ್ಥನೆಯನ್ನು ಸಲ್ಲಿಸಿದ್ದರು.
ಚಿತ್ರದ ವಿವರಣೆಯು ‘ಮಾಯಾಪುರದಲ್ಲಿರುವ ಹಿಂದೂ ಗುಂಪಿನ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಸಮಯದಲ್ಲಿ ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್‌ನ ಸನ್ಯಾಸಿಯು ಮುಸ್ಲಿಮರಿಗೆ ಸಿಹಿತಿಂಡಿಗಳನ್ನು ಹಂಚಿದರು’ ಎಂದು ತಿಳಿಸಿದೆ. ಪೋಸ್ಟ್‌ನಲ್ಲಿ ಹೇಳಿರುವಂತೆ ಚಿತ್ರವು ಬಾಂಗ್ಲಾದೇಶ ಇಸ್ಕಾನ್‌ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಇದು ಸೂಚಿಸುತ್ತದೆ.
ಇದಲ್ಲದೆ, ಸತ್ಯ-ಪರಿಶೀಲನಾ ಸಂಸ್ಥೆಯಾದ BOOM ನೊಂದಿಗೆ ತಮ್ಮ ಪತ್ರವ್ಯವಹಾರದಲ್ಲಿ, ಇಸ್ಕಾನ್ ರಾಷ್ಟ್ರೀಯ ಸಂವಹನ ನಿರ್ದೇಶಕ ಯುಧಿಷ್ಠಿರ್ ಗೋವಿಂದ್ ದಾಸ್ ಅವರು ಚಿತ್ರವು ಇಸ್ಕಾನ್ ಮಾಯಾಪುರ್ (ಪಶ್ಚಿಮ ಬಂಗಾಳ)ಗೆ ಸಂಬಂಧಿಸಿದ್ದಾಗಿದೆ ಎಂದು ದೃಢಪಡಿಸಿದ್ದಾರೆ.
ಗೋವಿಂದ್ ದಾಸ್ ಅವರು 2016ರಲ್ಲಿ ಇಸ್ಕಾನ್ ಮಾಯಾಪುರ ಸಂಕೀರ್ಣದಲ್ಲಿ ಆಯೋಜಿಸಿದ್ದ ಇಫ್ತಾರ್‌ನಲ್ಲಿ ಭಾಗವಹಿಸಿದ್ದರು. ವೈರಲ್ ಚಿತ್ರದಲ್ಲಿರುವ ವ್ಯಕ್ತಿಯನ್ನು ಕ್ರೊಯೇಷಿಯಾದ ಪುಲಾ ಮೂಲದ ಇವಾನ್ ಆಂಟಿಕ್ ಎಂಬುವವರು ಎಂದು ದಾಸ್ ಗುರುತಿಸಿದ್ದಾರೆ. ಇವಾನ್ ಅವರ ದೀಕ್ಷಾ ಹೆಸರು ನಿತಾಯಿ ದಾಸ್ ಮತ್ತು ಅವರು ಕೊರೊನಾ ವೈರಸ್ ಹರಡುವ ಮುನ್ನವೇ ಕ್ರೊಯೇಷಿಯಾಕ್ಕೆ ಮರಳಿದ್ದರು. ಅವರು ಸುರಕ್ಷಿತವಾಗಿ ಮತ್ತು ಜೀವಂತವಾಗಿದ್ದಾರೆ ಎಂದು ಗೋವಿಂದ್ ದಾಸ್ ತಿಳಿಸಿದ್ದಾರೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಇತ್ತೀಚೆಗೆ ಬಾಂಗ್ಲಾದೇಶದ ಕೋಮು ಘರ್ಷಣೆಯಲ್ಲಿ ಕೊಲ್ಲಲ್ಪಟ್ಟ ಇಸ್ಕಾನ್ ಸನ್ಯಾಸಿಯೆಂದು ಮುಸ್ಲಿಮರಿಗೆ ಊಟ ಬಡಿಸುವ ಸನ್ಯಾಸಿಯ ಹಳೆಯ ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.