Fake News - Kannada
 

‘ಜನರಲ್ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಅಪಘಾತದ ವಿಡಿಯೊ’ ಎಂದು ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ

0

ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್  ಅಪಘಾತದಲ್ಲಿ  ಭಾರತದ  ಮೊದಲ  ರಕ್ಷಣಾ  ಸಿಬ್ಬಂದಿ  (ಸಿಡಿಎಸ್)  ಜನರಲ್ ಬಿಪಿನ್ ರಾವತ್ ಅವರು ಮೃತಪಟ್ಟಿದ್ದರು. ಈ ಅಪಘಾತದ ವಿಡಿಯೊ ಮತ್ತು ಫೋಟೊ ಎಂದು ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ವೀಡಿಯೊ ಮತ್ತು ಚಿತ್ರಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಿ) ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ಈ ದೃಶ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: CDS ಜನರಲ್ ಬಿಪಿನ್ ರಾವತ್ ಮೃತಪಟ್ಟ ಹೆಲಿಕಾಪ್ಟರ್ ಅಪಘಾತದ ದೃಶ್ಯಗಳು.

ವಾಸ್ತವ: ಈ ದೃಶ್ಯಗಳಿಗೂ ಜನರಲ್ ರಾವತ್ ಅವರಿಗೆ ಸಂಭವಿಸಿದ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ. ಈ ವೈರಲ್ ವೀಡಿಯೊಗಳಲ್ಲಿ ಒಂದು ಕಳೆದ ತಿಂಗಳು ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಭಾರತೀಯ ವಾಯುಪಡೆಯ ಎಂಐ -17 ಹೆಲಿಕಾಪ್ಟರ್ ಕ್ರ್ಯಾ ಶ್ ಲ್ಯಾಂಡಿಂಗ್ ಘಟನೆಗೆ ಸಂಬಂಧಿಸಿದೆ. ಇನ್ನೊಂದು ಕಳೆದ ವರ್ಷ ಸಿರಿಯಾದಲ್ಲಿ ಬಂಡುಕೋರರು ಸರ್ಕಾರಿ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ ಘಟನೆಗೆ ಸಂಬಂಧಿಸಿದೆ. ವೈರಲ್‌ ಆಗಿರುವ ಚಿತ್ರವು ಭಾರತೀಯ ಸೇನೆಯ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಜಮ್ಮುಕಾಶ್ಮೀರದ ಪೂಂಚ್‌‌ನಲ್ಲಿ ಅಕ್ಟೋಬರ್ 2019 ರಂದು ತುರ್ತು ಭೂಸ್ಪರ್ಶ ಮಾಡಿವುದಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಗಳು ತಪ್ಪಾಗಿದೆ.

ಭಾರತದ ಮೊದಲ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಲ್ಯಾಂಡಿಂಗ್‌ ಆಗುವ ಸಮಯದಲ್ಲಿ ಕ್ರ್ಯಾಶ್‌ ಆಗಿರುವ ವಿಡಿಯೊ ಇದುವರೆಗೆ ವರದಿಯಾಗಿಲ್ಲ. ಅಪಘಾತಕ್ಕೆ ಮುನ್ನ ಹೆಲಿಕಾಪ್ಟರ್‌ನ ವಿಡಿಯೊವನ್ನು ಕೆಲವು ಸ್ಥಳೀಯರು ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ ಮತ್ತು ಇದನ್ನು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

1 ನೇವೀಡಿಯೊ:

ಈ ದೃಶ್ಯಗಳು ಕಳೆದ ತಿಂಗಳು ಸಂಭವಿಸಿದ ಹೆಲಿಕಾಪ್ಟರ್ ಕ್ರ್ಯಾಶ್ ಲ್ಯಾಂಡಿಂಗ್ ಘಟನೆಗೆ ಸಂಬಂಧಿಸಿವೆ. ವೈರಲ್ ವೀಡಿಯೊದ ರಿವರ್ಸ್‌ ಸರ್ಚ್‌ ಹುಡುಕಾಟ ನಡೆಸಿದಾಗ ಅದೇ ದೃಶ್ಯಗಳನ್ನು ವರದಿ ಮಾಡಿದ ಹಲವು ವರದಿಗಳು ನಮಗೆ ಲಭ್ಯವಾಗಿದೆ. ಈ ವರದಿಗಳ ಪ್ರಕಾರ, ಈ ದೃಶ್ಯಗಳು 2021 ರ ನವೆಂಬರ್ 18  ರಂದು ಅರುಣಾಚಲದ ಅಂಜಾವ್ ಜಿಲ್ಲೆಯ ರೋಚಾಮ್ ಹೆಲಿಪ್ಯಾಡ್‌ನಲ್ಲಿ ಭಾರತೀಯ ವಾಯುಪಡೆಯ Mi-17 ಕ್ರಾಶ್ ಲ್ಯಾಂಡಿಂಗ್ ಆಗಿದೆ. ಈ ವಿಡಿಯೊ ಆ ಘಟನೆಯದ್ದಾಗಿದೆ.

ಈ ಘಟನೆಯನ್ನು, ಹಲವು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಅವುಗಳ ವರದಿಯಲ್ಲಿ ವೀಡಿಯೊ ಉಲ್ಲೇಖ ಕೂಡಾ ಇವೆ.  ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಕ್ರಾಶ್ ಲ್ಯಾಂಡಿಂಗ್ ಘಟನೆ ಎಂದು ವರದಿಯಾಗಿರುವ ಮತ್ತೊಂದು ಸುದ್ದಿ ವರದಿಯನ್ನು ಇಲ್ಲಿ ನೋಡಬಹುದು.

2 ನೇವೀಡಿಯೊ:

ಈ ದೃಶ್ಯಗಳಿಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ಈ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ಗಳನ್ನು ರಿವರ್ಸ್ ಇಮೇಜ್ ಸರ್ಚ್‌ ಮೂಲಕ ಹುಡುಕಾಡಿದಾಗ 2020 ರ ಫೆಬ್ರವರಿ ತಿಂಗಳಲ್ಲಿ ಅದೇ ದೃಶ್ಯಗಳನ್ನು ವರದಿ ಮಾಡಿದ ಹಲವು ವರದಿಗಳು ನಮಗೆ ಸಿಕ್ಕಿವೆ. ಈ ವರದಿಗಳ  ಪ್ರಕಾರ,  ಇಡ್ಲಿಬ್  ಪ್ರಾಂತ್ಯದಲ್ಲಿ  ಸಿರಿಯದ ಬಂಡುಕೋರರು ಹೊಡೆದುರುಳಿಸಿದ ಸಿರಿಯನ್ ಸರ್ಕಾರಿ ಹೆಲಿಕಾಪ್ಟರ್‌ನ ಭಗ್ನಾವಶೇಷಗಳ ದೃಶ್ಯವಾಗಿದೆ ಇದು.

ಅನೇಕ ಸುದ್ದಿ ಸಂಸ್ಥೆಗಳು ಆಗ ಈ  ಘಟನೆಯನ್ನು  ವರದಿ  ಮಾಡಿತ್ತು.  ಈ  ವರದಿಗಳನ್ನು  ಇಲ್ಲಿ  ಮತ್ತು  ಇಲ್ಲಿ  ನೋಡಬಹುದು. ಘಟನೆಯ ಇತರ ಕೆಲವು ದೃಶ್ಯಗಳನ್ನು ಇಲ್ಲಿ ನೋಡಬಹುದು.

ಚಿತ್ರ:

ಈ ಚಿತ್ರವು 2019 ರ ಚಿತ್ರವು ಅಕ್ಟೋಬರ್ ತಿಂಗಳಲ್ಲಿ ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ  ತುರ್ತು  ಭೂಸ್ಪರ್ಶ ಮಾಡಿದ ಭಾರತೀಯ ಸೇನೆಯ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ನ ಚಿತ್ರವಾಗಿದೆ.  ಈ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ ಈ ಘಟನೆಯ ಬಗ್ಗೆ ಅನೇಕ ಸುದ್ದಿ ಮಾಧ್ಯಮಗಳ ವರದಿಗಳು ನಮಗೆ ಸಕ್ಕಿದೆ. ಈ ವರದಿಯಲ್ಲಿ  ಅದೇ  ಚಿತ್ರವನ್ನು  ನೀಡಲಾಗಿದೆ.  ಅಂತಹ  ಒಂದು  ಲೇಖನದಲ್ಲಿ, ‘ಉತ್ತರ ಸೇನಾ ಕಮಾಂಡರ್  ಲೆಫ್ಟಿನೆಂಟ್  ಜನರಲ್  ರಣಬೀರ್  ಸಿಂಗ್  ಅವರಿದ್ದ  ಹೆಲಿಕಾಪ್ಟರ್ ಪೂಂಚ್‌ನ ಸಾಮಾನ್ಯ ಪ್ರದೇಶದಲ್ಲಿ ತಾಂತ್ರಿಕ ಅಡಚಣೆಯ ಕಾರಣದಿಂದ ಲ್ಯಾಂಡಿಂಗ್ ಮಾಡಲಾಗಿದೆ. ಎಲ್ಲಾ ಸಿಬ್ಬಂದಿ ಮತ್ತು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಘಟನೆಯ ಬಗ್ಗೆ ಮಾಡಿದ ಸುದ್ದಿಯಲ್ಲಿ ಇದೇ ರೀತಿಯ ಚಿತ್ರವನ್ನು ಪ್ರಕಟಿಸಿದ ಮತ್ತೊಂದು ಸುದ್ದಿ ವರದಿಯನ್ನು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಜನರಲ್ ಬಿಪಿನ್ ರಾವತ್ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತದ ವಿಡಿಯೊ ಎಂದು ಹಳೆಯ ಮತ್ತು ಸಂಬಂಧವಿಲ್ಲದ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll