Fake News - Kannada
 

ಮ್ಯಾಂಚೆಸ್ಟರ್‌ನ ಹಳೆಯ ಪ್ಯಾಲೆಸ್ಟೈನ್ ಪರ ರ್ಯಾಲಿಯ ವೀಡಿಯೊವನ್ನು, ಸಿಡ್ನಿ ಭಯೋತ್ಪಾದನಾ ದಾಳಿಯನ್ನು ಬೆಂಬಲಿಸಿ ನಡೆದ ರ್ಯಾಲಿಯ ದೃಶ್ಯಗಳೆಂದು ಹಂಚಿಕೊಳ್ಳಲಾಗುತ್ತಿದೆ

0

ಡಿಸೆಂಬರ್ 14 ರಂದು ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಯಹೂದಿ ವಿರೋಧಿ  ಭಯೋತ್ಪಾದನಾ ದಾಳಿಯಲ್ಲಿ, ಸಜಿದ್ ಅಕ್ರಮ್ ಮತ್ತು ನವೀದ್ ಅಕ್ರಮ್ ಎಂಬ ತಂದೆ-ಮಗ ಹನುಕ್ಕಾ ಆಚರಣೆಯ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಿದರು. ಈ ಘಟನೆಯಲ್ಲಿ ಒಬ್ಬ ಬಂದೂಕುಧಾರಿ ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಜನರು ಗಾಯಗೊಂಡಿದ್ದಾರೆ. ಪೊಲೀಸರು ಸಜಿದ್ ಅಕ್ರಮ್‌ನನ್ನು ಸ್ಥಳದಲ್ಲೇ ಹೊಡೆದುರುಳಿಸಿದರು, ಆದರೆ ನವೀದ್ ಅಕ್ರಮ್ ಗಂಭೀರ ಸ್ಥಿತಿಯಲ್ಲಿದ್ದು, ಪೊಲೀಸ್ ಕಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ; ಒಂದು ವೇಳೆ ಆತ ಬದುಕುಳಿದರೆ ಕಾನೂನು ಕ್ರಮ ಎದುರಿಸುವ ಸಾಧ್ಯತೆಯಿದೆ. ಅಧಿಕಾರಿಗಳು ಈ ಘಟನೆಯನ್ನು ಇಸ್ಲಾಮಿಕ್ ಸ್ಟೇಟ್ (ISIS) ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದನಾ ದಾಳಿ ಎಂದು ಗುರುತಿಸಿದ್ದಾರೆ. ತನಿಖೆಯ ವೇಳೆ ಐಸಿಸ್ ಧ್ವಜ ಮತ್ತು ಸುಧಾರಿತ ಸ್ಫೋಟಕ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ).

ಈ ಹಿನ್ನೆಲೆಯಲ್ಲಿ, ಪ್ಯಾಲೆಸ್ಟೈನ್ ಪರ ಬೆಂಬಲದ ರ್ಯಾಲಿಯ ವೀಡಿಯೊವೊಂದು (ಇಲ್ಲಿ) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ಸಿಡ್ನಿ ದಾಳಿಯನ್ನು ಬೆಂಬಲಿಸಿ ಯುಕೆಯಲ್ಲಿ  ನಡೆದ ಪ್ಯಾಲೆಸ್ಟೈನ್ ಪರ ರ್ಯಾಲಿಯನ್ನು ತೋರಿಸುತ್ತದೆ ಎಂಬ ಕ್ಲೇಮ್ ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದ ಹಿಂದಿರುವ ಅಸಲಿ ಫ್ಯಾಕ್ಟ್ಅನ್ನು ಪರಿಶೀಲಿಸೋಣ.

ಕ್ಲೇಮ್: ವೈರಲ್ ವೀಡಿಯೊ ಸಿಡ್ನಿ ಭಯೋತ್ಪಾದನಾ ದಾಳಿಯನ್ನು ಬೆಂಬಲಿಸಿ ಯುಕೆಯಲ್ಲಿ  ನಡೆದ ಪ್ಯಾಲೆಸ್ಟೈನ್ ಪರ ರ್ಯಾಲಿಯನ್ನು ತೋರಿಸುತ್ತದೆ.

ಫ್ಯಾಕ್ಟ್: ಈ ವೀಡಿಯೊ ಸಿಡ್ನಿ ದಾಳಿಗಿಂತ ಹಲವಾರು ತಿಂಗಳುಗಳ ಮೊದಲು ಮ್ಯಾಂಚೆಸ್ಟರ್‌ನಲ್ಲಿ ನಡೆದ ಪ್ಯಾಲೆಸ್ಟೈನ್ ಪರ ರ್ಯಾಲಿಯದ್ದಾಗಿದೆ, ಆದ್ದರಿಂದ ಈ ಕ್ಲೇಮ್ ದಾರಿ ತಪ್ಪಿಸುವಂತಿದೆ.

ಈ ಕ್ಲೇಮ್ ಅನ್ನು ಪರಿಶೀಲಿಸಲು, ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಇದು ನಮಗೆ 09 ಜೂನ್ 2025 ರಂದು  X ಥ್ರೆಡ್‌ನಲ್ಲಿ ಪೋಸ್ಟ್ ಮಾಡಲಾದ ಅದೇ ವೀಡಿಯೊಗೆ ಕರೆದೊಯ್ಯಿತು. ಈ ಘಟನೆಯು ಸಿಡ್ನಿ ದಾಳಿಗಿಂತ ಹಲವಾರು ತಿಂಗಳುಗಳ ಮೊದಲು ಮ್ಯಾಂಚೆಸ್ಟರ್‌ನಲ್ಲಿ ನಡೆದಿದೆ ಎಂದು ಅಲ್ಲಿ ತಿಳಿಸಲಾಗಿದೆ. ಇದೇ ಘಟನೆಗೆ ಸಂಬಂಧಿಸಿದ ಹಲವಾರು ವೀಡಿಯೊಗಳು ಅದೇ X ಖಾತೆಯಲ್ಲಿ ಹಂಚಿಕೆಯಾಗಿರುವುದು ನಮಗೆ ಕಂಡುಬಂದಿದೆ, ಇದು ಈ ದೃಶ್ಯಾವಳಿಗಳಿಗೂ ಸಿಡ್ನಿ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಖಚಿತಪಡಿಸುತ್ತದೆ.

ಹೆಚ್ಚುವರಿಯಾಗಿ, ಲಭ್ಯವಿರುವ ಮಾಹಿತಿಯನ್ನು ಬಳಸಿಕೊಂಡು ನಾವು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ, 10 ಜೂನ್ 2025 ರಂದು ‘ಮಿಡಲ್ ಈಸ್ಟ್ ಮಾನಿಟರ್’ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ನಮಗೆ ಕಂಡುಬಂದಿತು. ಈ ವೀಡಿಯೊ ವೈರಲ್ ಕ್ಲಿಪ್‌ಗೆ ಬಹುತೇಕ ಹೋಲಿಕೆಯಾಗುತ್ತಿದ್ದು, ಹಲವಾರು ಜನರು ಪ್ಯಾಲೆಸ್ಟೈನ್ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುತ್ತದೆ. ಅದರ ಶೀರ್ಷಿಕೆಯ  ಪ್ರಕಾರ, ಈ ದೃಶ್ಯಾವಳಿಯು ಯುಕೆಯ ಮ್ಯಾಂಚೆಸ್ಟರ್‌ನಲ್ಲಿರುವ ಪಿಕಾಡಿಲಿ ರೈಲ್ವೆ ನಿಲ್ದಾಣಕ್ಕೆ  ಸಂಬಂಧಿಸಿದ್ದಾಗಿದೆ.

ಅದರೊಂದಿಗೆ, ಯುಟ್ಯೂಬ್‌ನಲ್ಲಿ ಲಭ್ಯವಿರುವ ಪೂರ್ಣ ಪ್ರಮಾಣದ ವೀಡಿಯೊ ಸೇರಿದಂತೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಇಂತಹದೇ ಇತರ ವೀಡಿಯೊಗಳು ನಮಗೆ ಕಂಡುಬಂದಿವೆ. ಅವುಗಳಲ್ಲಿ ವೈರಲ್ ಕ್ಲಿಪ್‌ನಲ್ಲಿರುವಂತೆಯೇ ಅದೇ ರೀತಿಯ ಜನಸಂದಣಿ ಮತ್ತು ಬ್ಯಾನರ್‌ಗಳು ಕಾಣಿಸುತ್ತಿದ್ದು, ಈ ದೃಶ್ಯಾವಳಿಗಳು ಸಿಡ್ನಿ ದಾಳಿಗಿಂತ ಮೊದಲಿನವು ಎಂಬುದನ್ನು ಮತ್ತಷ್ಟು ಖಚಿತಪಡಿಸುತ್ತವೆ. ಕೀವರ್ಡ್ ಸರ್ಚ್ ನಡೆಸಿದಾಗಲೂ, ಸಿಡ್ನಿ ದಾಳಿಯ ನಂತರ ಯುಕೆಯಲ್ಲಿ ಈ ರೀತಿಯ ಯಾವುದೇ ಘಟನೆ ನಡೆದಿರುವ ಬಗ್ಗೆ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಇದು ವೈರಲ್ ವೀಡಿಯೊಗೂ ಆ ಘಟನೆಗೂ ಸಂಬಂಧವಿಲ್ಲ ಎಂಬುದನ್ನು ಪುಷ್ಟೀಕರಿಸುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮ್ಯಾಂಚೆಸ್ಟರ್‌ನ ಹಳೆಯ ಪ್ಯಾಲೆಸ್ಟೈನ್ ಪರ ರ್ಯಾಲಿಯ ವೀಡಿಯೊವನ್ನು, ಸಿಡ್ನಿ ಭಯೋತ್ಪಾದನಾ ದಾಳಿಯನ್ನು ಬೆಂಬಲಿಸಿ ನಡೆದ ರ್ಯಾಲಿಯ ದೃಶ್ಯಗಳೆಂದು ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll