Fake News - Kannada
 

ಮಹಾರಾಷ್ಟ್ರದ ಸತಾರಾದಲ್ಲಿ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಚಾಕು ತೋರಿಸಿ ಹಿಡಿದುಕೊಂಡಿರುವ ವೀಡಿಯೊವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

0

ಶಾಲಾ ಸಮವಸ್ತ್ರ ಧರಿಸಿದ ಯುವತಿಯನ್ನು, ಯಾರಾದರೂ ಹತ್ತಿರ ಬಂದರೆ ಕೊಲ್ಲುವುದಾಗಿ ಯುವಕನೊಬ್ಬ ಚಾಕು ತೋರಿಸಿ ಬೆದರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಕೆಲವು ಕ್ಷಣಗಳ ನಂತರ, ಹಿಂದಿನಿಂದ ಮತ್ತೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಚಾಕುವನ್ನು ಕಸಿದುಕೊಂಡು ಅಲ್ಲಿದ ಜನರು ಹುಡುಗಿಯನ್ನು ದಾಳಿಕೋರನಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾಗುತ್ತದೆ. ನಂತರ ಸಾರ್ವಜನಿಕರು ಆ ವ್ಯಕ್ತಿಯನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಮಹಾರಾಷ್ಟ್ರದಲ್ಲಿ ಮುಸ್ಲಿಂ ಯುವಕನೊಬ್ಬ ತನ್ನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದಾಗ ಹುಡುಗಿಯ ಕತ್ತು ಸೀಳಲು ಪ್ರಯತ್ನಿಸಿದ ನಂತರ ನೋಡುಗರು ಅವನನ್ನು ಕೊಂದಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಮಹಾರಾಷ್ಟ್ರದ ಮುಸ್ಲಿಂ ಯುವಕನೊಬ್ಬ ಶಾಲಾ ಬಾಲಕಿಯೊಬ್ಬಳು ತನ್ನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದಾಗ ಆಕೆಯ ಕತ್ತು ಸೀಳಲು ಯತ್ನಿಸಿದ ನಂತರ, ಅಲ್ಲಿದ್ದ ಜನರು ಆತನನ್ನು ಕೊಂದಿರುವುದನ್ನು ಈ ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಈ ಘಟನೆ ಜುಲೈ 21, 2025 ರಂದು ಮಹಾರಾಷ್ಟ್ರದ ಸತಾರಾ ನಗರದ ಬಸಪ್ಪ ಪೇಟ್‌ನಲ್ಲಿ ನಡೆದಿತ್ತು. ಆರೋಪಿ ಆರ್ಯನ್ ವಾಘ್ಮಾಲೆ 14 ವರ್ಷದ ಬಾಲಕಿಯ ಮೇಲೆ ಏಕಪಕ್ಷೀಯ ಪ್ರೇಮಿಯಾಗಿದ್ದು, ಈ ಘಟನೆಗೆ ಕಾರಣವಾಗಿತ್ತು. ಅವನು ಹುಡುಗಿಯನ್ನು ಚಾಕು ತೋರಿಸಿ ಹಿಡಿದುಕೊಂಡಾಗ ಆ ಪ್ರದೇಶದಲ್ಲಿ  ಜನ ಭಯಭೀತನರಾದರು. ಸ್ಥಳೀಯರು ಮಧ್ಯಪ್ರವೇಶಿಸಿ, ಹುಡುಗಿಯನ್ನು ರಕ್ಷಿಸಿ, ಆತನನ್ನು ಥಳಿಸಿದರು, ಆದರೆ ಆತನನ್ನು ಕೊಂದಿಲ್ಲ. ಶಹುಪುರಿ ಪೊಲೀಸ್ ಠಾಣೆ ಅಧಿಕಾರಿಗಳು ಆರ್ಯನ್ ವಾಘ್ಮಾಲೆ ಮುಸ್ಲಿಂ ಅಲ್ಲ, ಹಿಂದೂ ಎಂದು ದೃಢಪಡಿಸಿದ್ದು,   ಪ್ರಕರಣಕ್ಕೆ ಯಾವುದೇ ಕೋಮು ಕೋನವಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಅದೇ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡ ಹಲವಾರು ಮಾಧ್ಯಮ ವರದಿಗಳು ನಮಗೆ ಸಿಕ್ಕವು (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ವರದಿಗಳ ಪ್ರಕಾರ, ಈ ಘಟನೆ ಜುಲೈ 21, 2025 ರಂದು ಮಹಾರಾಷ್ಟ್ರದ ಸತಾರಾ ನಗರದ ಬಸಪ್ಪ ಪೇಟ್ ಪ್ರದೇಶದಲ್ಲಿ ಸಂಭವಿಸಿದೆ. ಹಗಲು ಹೊತ್ತಿನಲ್ಲಿ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಚಾಕು ತೋರಿಸಿ ಹಿಡಿದುಕೊಂಡಿದ್ದು, ಆ ಪ್ರದೇಶದಲ್ಲಿ ಭೀತಿ ಮೂಡಿಸಿತು. ಏಕಪಕ್ಷೀಯ ಪ್ರೀತಿಯಿಂದ ಈ ಪರಿಸ್ಥಿತಿ ಉದ್ಭವಿಸಿತು, ಆದರೆ ಹತ್ತಿರದ ನಿವಾಸಿಗಳು ಮತ್ತು ಸತಾರಾ ನಗರ ಪೊಲೀಸರ ತ್ವರಿತ ಪ್ರತಿಕ್ರಿಯೆಯಿಂದಾಗಿ, ಹುಡುಗಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ನಂತರ ದಾಳಿಕೋರನನ್ನು ಜನಸಮೂಹ ಬಲವಂತವಾಗಿ ಹಿಡಿದು ಥಳಿಸಿದೆ ಎಂದು ತಿಳಿದು ಬಂದಿದೆ. 

ಸತಾರ ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ದೋಷಿ ಪ್ರಕಾರ, ಆರೋಪಿಯನ್ನು ಆರ್ಯನ್ ವಾಘ್ಮಲೆ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಪೋಕ್ಸೋ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಿರುಕುಳ ಮತ್ತು ಉದ್ದೇಶಪೂರ್ವಕ ಗಾಯಕ್ಕೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರ್ಯನ್ ಈ ಹಿಂದೆ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, ಹುಡುಗಿಯ ಮೇಲೆ ಮೋಹ ಹೊಂದಿದ್ದ ಎಂದು ವರದಿಗಳು ಉಲ್ಲೇಖಿಸುತ್ತವೆ. ಆಕೆಯ ಕುಟುಂಬದಿಂದ ಎಚ್ಚರಿಕೆ ನೀಡಿದ್ದರೂ, ಶಾಲೆ ಮುಗಿದ ನಂತರ ಆಕೆಯ ನಿವಾಸದ ಬಳಿ ಆಕೆಯನ್ನು ನೋಡಿದ್ದಾನೆ. ಅವನು ಚಾಕುವನ್ನು ಹೊರತೆಗೆದಾಗ ಪರಿಸ್ಥಿತಿ ಉಲ್ಬಣಗೊಂಡಿತು, ಆದರೆ ಪಕ್ಕದಲ್ಲಿದ್ದ ವ್ಯಕ್ತಿಯ ಸಮಯಪ್ರಜ್ಞೆ ಪರಿಸ್ಥಿತಿಯನ್ನು  ಶಾಂತಗೊಳಿಸಲು ಸಹಾಯ ಮಾಡಿತು. ಯಾವುದೇ ಮಾಧ್ಯಮ ವರದಿಗಳು ಅಥವಾ ಅಧಿಕೃತ ಪೊಲೀಸ್ ಹೇಳಿಕೆಗಳು ಯುವಕನನ್ನು ಅಲ್ಲಿದ್ದವರು  ಕೊಂದಿದ್ದಾರೆ ಎಂದು ಉಲ್ಲೇಖಿಸುವುದಿಲ್ಲ. ಹೆಚ್ಚುವರಿಯಾಗಿ, ಪ್ರಕರಣದಲ್ಲಿ ಯಾವುದೇ ಕೋಮು ಕೋನದ ಉಲ್ಲೇಖವಿಲ್ಲ.

ಇದರಲ್ಲಿ ಯಾವುದಾದರು ಕೋಮು ಕೋನವಿದೆಯೇ ಎಂದು ಪರಿಶೀಲಿಸಲು, ನಾವು ಪ್ರಕರಣದ ತನಿಖಾ ಅಧಿಕಾರಿ, ಶಾಹುಪುರಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಸಿ. ಬಾಬರ್ ಅವರನ್ನು ಸಂಪರ್ಕಿಸಿದ್ದೇವೆ. ಘಟನೆಗೆ ಯಾವುದೇ ಕೋಮು ಕೋನವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ, ಆರೋಪಿ ಮುಸ್ಲಿಂ ಅಲ್ಲ ಹಿಂದೂ ಎಂದು ದೃಢಪಡಿಸಿದ್ದಾರೆ. ಬಾಲಕಿ 14 ವರ್ಷದ ಅಪ್ರಾಪ್ತ ವಯಸ್ಕಳಾಗಿದ್ದು, ಪೋಕ್ಸೋ ಕಾಯ್ದೆಯಡಿಯಲ್ಲಿ ಎಫ್‌ಐಆರ್ ಸಂಖ್ಯೆ 201 ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ತನಿಖೆ ನಡೆಯುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದಲ್ಲಿ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಚಾಕು ತೋರಿಸಿ ಹಿಡಿದ ಘಟನೆಗೆ ಸಂಬಂಧಿಸಿದ ವೀಡಿಯೊವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll