Fake News - Kannada
 

2012 ರಲ್ಲಿ ಲಂಡನ್‌ನಲ್ಲಿ ನಡೆದ ಚಲನಚಿತ್ರವೊಂದರ ವಿರುದ್ಧ ನಡೆದ ಪ್ರತಿಭಟನೆಯ ವೀಡಿಯೊವನ್ನು, ಬ್ರಿಟನ್ ಅನ್ನು ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಬೇಕೆಂದು ಮುಸ್ಲಿಮರು ಒತ್ತಾಯಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

0

ಇಂಗ್ಲೆಂಡ್ ಅನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡುವಂತೆ ಮುಸ್ಲಿಮರು ಬ್ರಿಟಿಷ್ ಸರ್ಕಾರಕ್ಕೆ ಬೆದರಿಕೆ ಹಾಕುತ್ತಿರುವುದನ್ನು ತೋರಿಸುತ್ತಿರುವ ಪ್ರತಿಭಟನಾ  ವಿಡಿಯೋವನ್ನು ಚಿತ್ರಿಸಲಾಗಿದೆ  ಎಂದು ವಿಡಿಯೋವೊಂದನ್ನು (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ.  ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ವಿಡಿಯೋದಲ್ಲಿ ಮುಸ್ಲಿಮರು ಇಂಗ್ಲೆಂಡ್ ಅನ್ನು ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಬೇಕೆಂದು ಒತ್ತಾಯಿಸಿದರು.

ಫ್ಯಾಕ್ಟ್: ಈ ವೈರಲ್ ವೀಡಿಯೊದಲ್ಲಿರುವ ದೃಶ್ಯಗಳು 2012 ರಲ್ಲಿ ಲಂಡನ್‌ನಲ್ಲಿ ಮುಸ್ಲಿಮರು ವೆಸ್ಟ್‌ಮಿನಿಸ್ಟರ್‌ನಲ್ಲಿರುವ ಯುಕೆ ಸಂಸತ್ತಿನ ಹೊರಗೆ ‘ಇನೊಸೆನ್ಸ್ ಆಫ್ ಮುಸ್ಲಿಮ್ಸ್’ ಚಲನಚಿತ್ರದ ವಿರುದ್ಧ ನಡೆಸಿದ ಪ್ರತಿಭಟನೆಯಿಂದ ಬಂದಿವೆ. ಆದ್ದರಿಂದ, ಈ  ಪೋಸ್ಟ್ ತಪ್ಪು.

ವೈರಲ್ ಕ್ಲೇಮ್ ಅನ್ನು ಪರಿಶೀಲಿಸಲು ನಾವು, ಯುಕೆಯಲ್ಲಿ ಮುಸ್ಲಿಮರು ಇತ್ತೀಚೆಗೆ ಇಂಗ್ಲೆಂಡ್ ಅನ್ನು ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಬೇಕೆಂದು ಒತ್ತಾಯಿಸಿ ಅಂತಹ ಪ್ರತಿಭಟನೆಗಾಗಿ ಒಟ್ಟುಗೂಡಿದ್ದಾರೆಯೇ ಎಂದು ನೋಡಲು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಾಟ ನಡೆಸಿದ್ದೇವೆ. ವೈರಲ್ ಕ್ಲೇಮ್ ಅನ್ನು ಸೂಚಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ. ಯುಕೆಯಲ್ಲಿ ಅಂತಹ ಪ್ರತಿಭಟನೆಗಳು ನಡೆದಿದ್ದರೆ, ಅನೇಕ ಮುಖ್ಯವಾಹಿನಿಯ ಮಾಧ್ಯಮಗಳು ಈ ವಿಷಯದ ಬಗ್ಗೆ ವರದಿ ಮಾಡುತ್ತಿದ್ದವು.

ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವೀಡಿಯೊದಲ್ಲಿನ ದೃಶ್ಯಗಳು ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅರಮನೆಯ ಸುತ್ತಲಿನ ಪ್ರದೇಶವನ್ನು ತೋರಿಸುತ್ತವೆ ಎಂದು ನಾವು ಗುರುತಿಸಿದ್ದೇವೆ. ವೀಡಿಯೊದಲ್ಲಿ ಕಂಡುಬರುವ ರಿಚರ್ಡ್ ಕೊಯೂರ್ ಡಿ ಲಯನ್ ಅಥವಾ ಸ್ಟ್ಯಾಚು ಆಫ್  ರಿಚರ್ಡ್ ದಿ ಲಯನ್‌ಹಾರ್ಟ್ (ಕುದುರೆಯ ಮೇಲೆ ಕುಳಿತ ಯೋಧ) ಪ್ರತಿಮೆಯ ಆಧಾರದ ಮೇಲೆ ನಾವು ಇದನ್ನು ಕಂಡುಹಿಡಿಯಲು ಸಾಧ್ಯವಾಯಿತು.

ಇದನ್ನೇ ಸುಳಿವು ಎಂದು ಭಾವಿಸಿ, ನಾವು ಸೂಕ್ತ ಕೀವರ್ಡ್‌ಗಳನ್ನು ಬಳಸಿ ಇಂಟರ್ನೆಟ್‌ನಲ್ಲಿ ಹುಡುಕಿದಾಗ, ಅಕ್ಟೋಬರ್ 19, 2012 ರಂದು ‘ತಕ್ಬೀರ್ಟಿವಿ‘ (ಇಲ್ಲಿ, ಇಲ್ಲಿ, ಇಲ್ಲಿ) ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ಪ್ರತಿಭಟನೆಯ ಹಲವಾರು ವೀಡಿಯೊಗಳು ಕಂಡುಬಂದವು.

ಈ ವೀಡಿಯೊಗಳ ವಿವರಣೆಯ ಪ್ರಕಾರ, ಈ ವೀಡಿಯೊ ಲಂಡನ್‌ನಲ್ಲಿ ಮುಸ್ಲಿಮರು ಚಲನಚಿತ್ರದ ವಿರುದ್ಧ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ್ದು, ಈ ಪ್ರತಿಭಟನೆಯನ್ನು 2012 ರಲ್ಲಿ ಬ್ರಿಟಿಷ್ ಸಂಸತ್ ಭವನದಲ್ಲಿ ನಡೆಸಲಾಯಿತು.

ಒಂದು ವೀಡಿಯೊದಲ್ಲಿ, ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಅದೇ ದೃಶ್ಯಗಳನ್ನು ನಾವು ನೋಡಬಹುದು, ಇದನ್ನು ಇನ್ನೊಂದು ಆಂಗಲ್ ನಿಂದ  ಚಿತ್ರೀಕರಿಸಲಾಗಿದೆ. ವೈರಲ್ ವೀಡಿಯೊವನ್ನು ಈ ಯೂಟ್ಯೂಬ್  ವೀಡಿಯೊದೊಂದಿಗೆ ಹೋಲಿಸಿದರೆ, ವೈರಲ್ ವೀಡಿಯೊದಲ್ಲಿನ ದೃಶ್ಯಗಳು ಅದೇ ಪ್ರತಿಭಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿವೆ ಎಂದು ನಾವು ತೀರ್ಮಾನಿಸಬಹುದು.

ಈ ಪ್ರತಿಭಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕುತ್ತಿರುವಾಗ, ಅಲಾಮಿ ಸ್ಟಾಕ್ ಇಮೇಜ್ ವೆಬ್‌ಸೈಟ್‌ನಲ್ಲಿ (ಇಲ್ಲಿ, ಇಲ್ಲಿ) ಅದೇ ಪ್ರತಿಭಟನೆಯ ಹಲವಾರು ಫೋಟೋಗಳನ್ನು ನಾವು ನೋಡಿದ್ದೇವೆ. ಈ ಫೋಟೋಗಳ ವಿವರಣೆಯ ಪ್ರಕಾರ, ಅಕ್ಟೋಬರ್ 6, 2012 ರಂದು, ಲಂಡನ್‌ನ ಮುಸ್ಲಿಮರು ಲಂಡನ್‌ನ ವೆಸ್ಟ್‌ಮಿನಿಸ್ಟರ್‌ನಲ್ಲಿರುವ ಯುಕೆ ಸಂಸತ್ತಿನ ಹೊರಗೆ ‘ಇನ್ನೊಸೆನ್ಸ್ ಆಫ್ ಮುಸ್ಲಿಮ್ಸ್’ ಚಿತ್ರದ ವಿರುದ್ಧ ಪ್ರತಿಭಟಿಸಿದರು. ಪ್ರವಾದಿ ಮುಹಮ್ಮದ್ ಬಗ್ಗೆ ಆಕ್ಷೇಪಾರ್ಹ ದೃಶ್ಯಗಳ ವಿರುದ್ಧ ಮುಸ್ಲಿಮರು ಪ್ರತಿಭಟಿಸಿದರು. 2012 ರಲ್ಲಿ ಈ ಪ್ರತಿಭಟನೆಗಳ ಕುರಿತು ಹೆಚ್ಚಿನ ಸುದ್ದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, 2012 ರಲ್ಲಿ ಲಂಡನ್‌ನಲ್ಲಿ ನಡೆದ ‘ಇನ್ನೊಸೆನ್ಸ್ ಆಫ್ ಮುಸ್ಲಿಮ್ಸ್’ ಚಿತ್ರದ ವಿರುದ್ಧ ನಡೆದ ಪ್ರತಿಭಟನೆಯ ವೀಡಿಯೊವನ್ನು ಇಂಗ್ಲೆಂಡ್‌ನ ಮುಸ್ಲಿಮರು ಇತ್ತೀಚೆಗೆ ಇಂಗ್ಲೆಂಡ್ ಅನ್ನು ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. 

Share.

Comments are closed.

scroll