ಪ್ರಸ್ತುತ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ (ಇಲ್ಲಿ, ಇಲ್ಲಿ), ಇಲ್ಲೊಂದು ವಿಡಿಯೋದಲ್ಲಿ ಹಲವಾರು ಜನರು ರಸ್ತೆಯ ಮೇಲೆ ಬಿದ್ದಿರುವುದು, ಸತ್ತ ಅಥವಾ ಗಾಯಗೊಂಡಿರುವಂತಹ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಮರು ಹಿಂದೂಗಳನ್ನು ಕೊಂದಿರುವುದನ್ನು ಈ ದೃಶ್ಯಗಳು ತೋರಿಸುತ್ತಿದೆ ಎಂದು ಕ್ಲೇಮ್ ನಲ್ಲಿ ಹೇಳಲಾಗಿದೆ. ಹಾಗಾದರೆ ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೈಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಇತ್ತೀಚಿಗೆ 2024 ರಲ್ಲಿ ಬಾಂಗ್ಲಾದೇಶದಲ್ಲಿ ನಡೆಯಿತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ಮುಸ್ಲಿಮರಿಂದ ಕೊಲ್ಲಲ್ಪಟ್ಟ ಹಿಂದೂಗಳ ದೃಶ್ಯಗಳು ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಫ್ಯಾಕ್ಟ್: ಬಾಂಗ್ಲಾದೇಶದಲ್ಲಿ ರಥಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಎಲೆಕ್ಟ್ರಾಕ್ಯುಷನ್ ಘಟನೆಯ ದೃಶ್ಯಗಳನ್ನು ವೈರಲ್ ವೀಡಿಯೊ ತೋರಿಸುತ್ತದೆ. ವರದಿಗಳ ಪ್ರಕಾರ, ಬೊಗುರಾ ಉತ್ತರ ಬಾಂಗ್ಲಾದೇಶದ ನಗರವಾಗಿದ್ದು, 07 ಜುಲೈ 2024 ರಂದು ಬೋಗುರಾದಲ್ಲಿ ಜಗನ್ನಾಥ ರಥ ಯಾತ್ರೆಯ ಸಂದರ್ಭದಲ್ಲಿ ಎಲೆಕ್ಟ್ರಾಕ್ಯುಷನ್ನಿಂದಾಗಿ ಐದು ಜನರು ಸಾವನ್ನಪ್ಪಿದ್ದು, ಸುಮಾರು 50 ಹೆಚ್ಚು ಜನರು ಗಾಯಗೊಂದಿದ್ದಾರೆ. ರಥದ ಮೆಟಲ್ ಡೋಮ್ ಹೈ-ವೋಲ್ಟೇಜ್ ಓವರ್ಹೆಡ್ ವೈರ್ ಗೆ ತಗುಲಿ ಈ ಘಟನೆ ಸಂಭವಿಸಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಬಾಂಗ್ಲಾದೇಶದಲ್ಲಿ ಜುಲೈ 2024 ರಲ್ಲಿ ಕೋಟಾ ವಿರೋಧಿ ಪ್ರತಿಭಟನೆಗಳು ಪ್ರಾರಂಭವಾದ ನಂತರ ಅನೇಕ ಮಾರಣಾಂತಿಕ ಪ್ರತಿಭಟನೆಗಳಿಗೆ ದೇಶ ಸಾಕ್ಷಿಯಾಗಿದೆ. ಇತ್ತೀಚಿಗೆ, ಸಂಭವಿಸಿದ ಈ ಸಾಮೂಹಿಕ ಪ್ರತಿಭಟನೆಗಳು ಸರ್ಕಾರದ ವಿರೋಧಿ ದಂಗೆಯಾಗಿ ಹುಟ್ಟಿಕೊಂಡಿದೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪರಾರಿಯಾದ ನಂತರದಿಂದ ಪರಿಸ್ಥಿತಿ ಉಲ್ಬಣಗೊಳ್ಳುವುದರ ಮೂಲಕ ನಿಯಂತ್ರಣವಿಲ್ಲದೆ ಸಾಗುತ್ತಿದೆ. ಪ್ರಧಾನಿ ಪರಾರಿಯಾದ ನಂತರ ಅಲ್ಲಿನ ಪ್ರತಿಭಟನಾಕಾರರು ಢಾಕಾದಲ್ಲಿನ ಅವರ ಅಧಿಕೃತ ನಿವಾಸವನ್ನು ಬಲವಂತವಾಗಿ ಪ್ರವೇಶಿಸಿ, ಆವರಣವನ್ನು ಲೂಟಿ ಮಾಡಿ ವಿಧ್ವಂಸಗೊಳಿಸಿದ್ದಾರೆ (ಇಲ್ಲಿ ಮತ್ತು ಇಲ್ಲಿ).
ಕೆಲ ಗುಂಪುಗಳು ಅಲ್ಪಸಂಖ್ಯಾತರ ಮನೆಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ಮಾಡಿದೆ ಎಂದು ವರದಿಗಳು ಹೇಳುತ್ತಿದೆ. ಅದರಲ್ಲೂ ವಿಶೇಷವಾಗಿ ಹಿಂದೂಗಳ ಬೆಲೆಬಾಳುವ ವಸ್ತುಗಳನ್ನು (ಇಲ್ಲಿ). ಹಿಂದೂ ಮನೆಗಳು ಮತ್ತು ದೇವಾಲಯಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ವರದಿಗಳೂ ಇವೆ (ಇಲ್ಲಿ).
ಇತ್ತೀಚಿನ ವರದಿಗಳ ಪ್ರಕಾರ, 05 ಆಗಸ್ಟ್ 2024 ರಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶದಿದ ಪರಾರಿಯಾದ ನಂತರದಿಂದ ಅಂದರೆ 09 ಆಗಸ್ಟ್ 2024 ರಂದು ರಾಜಧಾನಿ ಢಾಕಾದಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂಸಾಚಾರದ ವಿರುದ್ಧ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ).
ಈ ವೈರಲ್ ವೀಡಿಯೊದ ಕುರಿತು ತಿಳಿಯಲು, ನಾವು ವೀಡಿಯೊದಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ಸೆರ್ಚಿಂಗ್ ಅನ್ನು ನಡೆಸಿದ್ದೇವೆ. ಇದರ ಫಲವಾಗಿ 07 ಜುಲೈ 2024 ರಂದು ‘ಸಿರಾಜ್‌ಗಂಜ್ ಎಕ್ಸ್‌ಪ್ರೆಸ್’ ಹೆಸರಿನ ಫೇಸ್‌ಬುಕ್ ಪೇಜ್ನಲ್ಲಿ ಅಪ್‌ಲೋಡ್ ಮಾಡಿದ ವೈರಲ್ ವೀಡಿಯೊದ ವಿಸ್ತೃತ ಆವೃತ್ತಿಯನ್ನು (ಆರ್ಕೈವ್ ಮಾಡಿದ ಲಿಂಕ್) ನಾವು ಕಂಡುಕೊಂಡಿದ್ದೇವೆ. ಈ ಫೇಸ್‌ಬುಕ್ ಪೇಜ್ ಬಾಂಗ್ಲಾದೇಶದ ಸಿರಾಜ್‌ಗಂಜ್ ಮೂಲದ ‘ಮೀಡಿಯಾ/ನ್ಯೂಸ್ ಕಂಪನಿ’ ಎಂದು ಗುರುತಿಸಿಕೊಂಡಿದೆ. ಬೊಗುರಾ ಉತ್ತರ ಬಾಂಗ್ಲಾದೇಶದ ಒಂದು ನಗರವಾಗಿದೆ. ಈ ವೀಡಿಯೊದ ಕ್ಯಾಪ್ಶನ್ ಅನ್ನು ಗಮನಿಸಿದಾಗ ಅಲ್ಲಿ ಈ ರೀತಿ ಬರೆಯಲಾಗಿದೆ : ಬೊಗುರಾದಲ್ಲಿ ರಥಯಾತ್ರೆಯ ಸಂದರ್ಭದಲ್ಲಿ ಐದು ಜನರು ಸಾವನ್ನಪ್ಪಿದ್ದು, ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ (ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ). ಕೆಲವು ವೈರಲ್ ವೀಡಿಯೊಗಳ ಮೇಲಿನ ಎಡ ಮೂಲೆಯಲ್ಲಿ ಸಿರಾಜ್‌ಗಂಜ್ ಎಕ್ಸ್‌ಪ್ರೆಸ್‌ನ ಲೋಗೋವನ್ನು ಸಹ ನೋಡಬಹುದಾಗಿದೆ.
ಈ ಕ್ಲೂ ಆಗಿ ತೆಗೆದುಕೊಂಡು, ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ನಾವು ಬಂಗಾಳಿ ಭಾಷೆಯಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು ಜುಲೈ 2024 ರಲ್ಲಿ ಬಾಂಗ್ಲಾದೇಶದ ಮೀಡಿಯಾಗಳು ಪ್ರಕಟಿಸಿದ ಹಲವಾರು ಸುದ್ದಿ ರಿಪೋರ್ಟ್ ಗಳನ್ನು (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮಗೆ ನೀಡಿತು. ಈ ವರದಿಗಳ ಪ್ರಕಾರ, 7 ಜುಲೈ 2024 ರಂದು ಬೋಗುರಾದಲ್ಲಿ ನಡೆದ ಜಗನ್ನಾಥ ರಥ ಯಾತ್ರಾ ಸಮಯದಲ್ಲಿ ಎಲೆಕ್ಟ್ರಾಕ್ಯುಷನ್ ನಂದಾಗಿ ಸುಮಾರು ಐದು ಜನರು ಸಾವನ್ನಪ್ಪಿದ್ದು, ಸುಮಾರು 50 ಕ್ಕೋ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಅಲೋಕ್, ಅತಾಶಿ, ರಜಿಂತ, ನರೇಶ್ ಮತ್ತು ಸಬಿತಾ ಎಂದು ಗುರುತಿಸಲಾಗಿದೆ. ರಥದ ಮೆಟಲ್ ಡೋಮ್ ಹೈ-ವೋಲ್ಟೇಜ್ ಓವರ್ಹೆಡ್ ವೈರ್ ಗೆ ತಗುಲಿದ ಕಾರಣ ಈ ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಸಾವಿಗೀಡಾದವರು ಹಿಂದೂಗಳಾಗಿದ್ದರೂ, ಈ ಘಟನೆಗೂ ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಈ ವರದಿಗಳಿಂದ ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ರಥಯಾತ್ರೆಯ ಸಂದರ್ಭದಲ್ಲಿ ವಿದ್ಯುತ್ ಅವಘಡದ ವೀಡಿಯೊವನ್ನು ಕೋಮವಾದದ ರೂಪಕ್ಕೆ ತಿರುಗಿಸಿ ಸುಳ್ಳು ಸುದ್ದಿಯನ್ನು ಶೇರ್ ಮಾಡಲಾಗಿದೆ.