ಉತ್ತರ ಪ್ರದೇಶದ ಪೊಲೀಸರು ರಸ್ತೆಯಲ್ಲಿ ಪ್ರತಿಭಟಿಸುತ್ತಿರುವವರ ಮೇಲೆ ದಾಳಿ ಮಾಡುತ್ತಿರುವ ದೃಶ್ಯ ಎಂದು ಹೇಳಲಾದ ಒಂದು ವಿಡಿಯೋ (ಇಲ್ಲಿ) ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯಗಳಲ್ಲಿ ಭದ್ರತಾ ಪಡೆಗಳು ಜನಸಮೂಹವನ್ನು ಎದುರಿಸುವುದು, ಜೊತೆಗೆ ಸ್ಫೋಟಗಳು ಮತ್ತು ಹೊಗೆ ಕಾಣಿಸುತ್ತವೆ. ಈ ಲೇಖನದ ಮೂಲಕ ನಾವು ಈ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ವೈರಲ್ ಆಗಿರುವ ಈ ವಿಡಿಯೋ ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರ ಮೇಲೆ ಯುಪಿ ಪೊಲೀಸರು ನಡೆಸಿದ ದಾಳಿಯನ್ನು ತೋರಿಸುತ್ತದೆ.
ಫ್ಯಾಕ್ಟ್: ಈ ವೈರಲ್ ವಿಡಿಯೋ ಉತ್ತರ ಪ್ರದೇಶದ ಯಾವುದೇ ನೈಜ ಪ್ರತಿಭಟನೆಗೆ ಸಂಬಂಧಿಸಿಲ್ಲ. ಇದು ಜಾರ್ಖಂಡ್‌ನ ಬೊಕಾರೊದಲ್ಲಿ ನಡೆದ ಅಣಕು ಪ್ರದರ್ಶನದ್ದಾಗಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳು .
ವೈರಲ್ ಕ್ಲೈಮ್ ಸತ್ಯಾಸತ್ಯತೆಯನ್ನು ಪರಿಶೀಲಿಸುವಾಗ, ಈ ವಿಡಿಯೋ ಜಾರ್ಖಂಡ್‌ನ ಬೊಕಾರೊದಲ್ಲಿ ನಡೆದ ಅಣಕು ಪ್ರದರ್ಶನವನ್ನು ತೋರಿಸುತ್ತದೆ ಎಂದು ‘X’ ನಲ್ಲಿನ ಪೋಸ್ಟ್‌ಗೆ ಬಳಕೆದಾರರೊಬ್ಬರು ಮಾಡಿದ ಕಾಮೆಂಟ್ ನಮಗೆ ಕಂಡುಬಂದಿದೆ. ವೈರಲ್ ವಿಡಿಯೋದಲ್ಲಿ ಸುಮಾರು 7ನೇ ಸೆಕೆಂಡಿನ ಸಮಯದಲ್ಲಿ ಜನರು ಜಾರ್ಖಂಡ್‌ಗೆ ಸಂಬಂಧಿಸಿದ ಘೋಷಣೆಗಳನ್ನು ಕೂಗುವುದು ನಮಗೆ ಕೇಳಿಸುತ್ತದೆ.

ಇದನ್ನು ಇನ್ನಷ್ಟು ಪರಿಶೀಲಿಸಲು, ನಾವು ಮೊದಲು ಇಂಟರ್ನೆಟ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಇದು, ಅದೇ ಸ್ಥಳ, ಭದ್ರತಾ ಸಿಬ್ಬಂದಿ ಮತ್ತು ಭಾಗವಹಿಸುವವರನ್ನು ತೋರಿಸುವ, ಸೆಪ್ಟೆಂಬರ್ 28, 2025 ರಂದು ಅಪ್‌ಲೋಡ್ ಮಾಡಲಾದ ಯೂಟ್ಯೂಬ್ ವಿಡಿಯೋ ಒಂದಕ್ಕೆ ನಮ್ಮನ್ನು ಕರೆದೊಯ್ಯಿತು. ಈ ವಿಡಿಯೋ ತನ್ನನ್ನು ಬೊಕಾರೊದ ರಿತುಡಿಹ್ (ರೆಡಿಟಿಹ್) ಪ್ರದೇಶದಲ್ಲಿ ನಡೆಸಲಾದ ಪೊಲೀಸ್ ಅಣಕು ಪ್ರದರ್ಶನ ಎಂದು ತಿಳಿಸಿತು.
ವೈರಲ್ ವಿಡಿಯೋದಲ್ಲಿ, ಪೊಲೀಸರು ಜನರ ಮೇಲೆ ಹೊಗೆ ಬಾಂಬ್‌ಗಳು ಅಥವಾ ಅಶ್ರುವಾಯು ಎಸೆಯುವುದನ್ನು ಕಾಣಬಹುದಾದ ದೃಶ್ಯಗಳು 1-ನಿಮಿಷದ ಗುರುತಿನಿಂದ ಗೋಚರಿಸುತ್ತವೆ. ಈ ಹುಡುಕಾಟದ ಸಮಯದಲ್ಲಿ, ನಾವು ಇದೇ ರೀತಿಯ ವಿಡಿಯೋಗಳನ್ನು ಒಳಗೊಂಡಿರುವ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ಕಂಡುಕೊಂಡೆವು, ಅವು ಇದನ್ನು ಜಾರ್ಖಂಡ್‌ನ ಬೊಕಾರೊದಲ್ಲಿ ನಡೆದ ಅಣಕು ಪ್ರದರ್ಶನದ ಘಟನೆ ಎಂದು ವಿವರಿಸಿದ್ದವು.

ಇದಲ್ಲದೆ, ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ದುರ್ಗಾ ಪೂಜೆಗೂ ಮುನ್ನ ಬೊಕಾರೊ ನಗರ ಪೊಲೀಸರು ನಡೆಸಿದ್ದಾರೆ ಎನ್ನಲಾದ ಅಣಕು ಪ್ರದರ್ಶನದ ಕುರಿತು ಸೆಪ್ಟೆಂಬರ್ 2025 ರ ಕೆಲವು ಸುದ್ದಿ ವರದಿಗಳು (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ನಮಗೆ ದೊರೆತವು.

ಹೆಚ್ಚುವರಿಯಾಗಿ, ನಾವು ಗೂಗಲ್ ಮ್ಯಾಪ್ಸ್ ಬಳಸಿ ವೈರಲ್ ವಿಡಿಯೋವನ್ನು ಚಿತ್ರೀಕರಿಸಿದ ಸ್ಥಳವನ್ನು ಪತ್ತೆಹಚ್ಚಿದೆವು. ಇದು ಜಾರ್ಖಂಡ್‌ನ ಬೊಕಾರೊ, ಸೋನಾತಡ್‌ನಲ್ಲಿರುವ ರಿತುಡಿಹ್‌ನಲ್ಲಿರುವ ‘ಶ್ರೀ ಶ್ರೀ ಸರ್ವಜನಿಕ ದುರ್ಗಾ ಮಂದಿರ’ದ ಮುಂಭಾಗದಲ್ಲಿರುವ NH 320 ರ ಮೇಲೆ ಚಿತ್ರೀಕರಿಸಲ್ಪಟ್ಟಿದೆ. ಇದರಿಂದ ಈ ವಿಡಿಯೋ ಉತ್ತರ ಪ್ರದೇಶಕ್ಕೆ ಯಾವುದೇ ಸಂಬಂಧ ಹೊಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಇದಕ್ಕಿಂತ ಹೆಚ್ಚಾಗಿ, ದಸರಾಕ್ಕೂ ಮುನ್ನ ಪೆರೇಡ್ ಗ್ರೌಂಡ್ ಮತ್ತು ರಿತುಡಿಹ್ ಪ್ರದೇಶಗಳಲ್ಲಿ ನಡೆಸಿದ ಅಣಕು ಪ್ರದರ್ಶನದ ಕುರಿತು, ಬೊಕಾರೊ ಪೊಲೀಸರ ಅಫೀಸಿಯಲ್ ‘X’ ಅಕೌಂಟ್ ನಲ್ಲಿ ದಿನಾಂಕ ಸೆಪ್ಟೆಂಬರ್ 27, 2025 ರ ಒಂದು ಪೋಸ್ಟ್ ಸಹ ನಮಗೆ ಲಭ್ಯವಾಯಿತು. ಆ ಪೋಸ್ಟ್‌ನಲ್ಲಿರುವ ದೃಶ್ಯಗಳು ವೈರಲ್ ಕ್ಲಿಪ್‌ನ ದೃಶ್ಯಗಳಿಗೆ ಹೊಂದಿಕೆಯಾಗುತ್ತವೆ.
ಕೊನೆಯದಾಗಿ ಹೇಳುವುದಾದರೆ, ಜಾರ್ಖಂಡ್‌ನ ಅಣಕು ಪ್ರದರ್ಶನದ ವಿಡಿಯೋವನ್ನು ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ದಾಳಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
 
  
 
 
 