ಕಾಂಚೀಪುರಂನ ಏಕಾಂಬರನಾಥ ದೇವಸ್ಥಾನದಲ್ಲಿರುವ ವಜ್ರದಿಂದ ಅಲಂಕೃತವಾದ ಶಿವಲಿಂಗ ಎಂಬ ಹೇಳಿಕೆಯೊಂದಿಗೆ ಒಂದು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: 1,00,008 ವಜ್ರಗಳಿಂದ ಅಲಂಕರಿಸಲ್ಪಟ್ಟ ಏಕಾಂಬರನಾಥ ದೇವಾಲಯದಲ್ಲಿರುವ ಶಿವಲಿಂಗದ ದೃಶ್ಯಗಳು.
ಸತ್ಯ: ಈ ವಿಡಿಯೋ ತಮಿಳುನಾಡಿನ ಶಿವಕಾಶಿಯ ಮುರುಗನ್ ದೇವಸ್ಥಾನದಲ್ಲಿ ವಜ್ರಗಳಿಂದ ಅಲಂಕೃತವಾದ ಶಿವಲಿಂಗದ್ದಾಗಿದೆ. 2018 ರಲ್ಲಿ, ಪ್ರದೋಷಮ್ ಆಚರಣೆಯ ಸಂದರ್ಭದಲ್ಲಿ ಶಿವಕಾಶಿಯ ಮುರುಗನ್ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ವಜ್ರ ಕವಚ (ರಕ್ಷಾಕವಚ)ದಿಂದ ಅಲಂಕರಿಸಲಾಗಿತ್ತು. ಈ ಶಿವಲಿಂಗವು ತಮಿಳುನಾಡಿನ ಏಕಂಬರನಾಥ ದೇವಾಲಯದಲ್ಲಿ ಇಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಹಂಚಿಕೊಳ್ಳಲಾಗಿರುವ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಹಳೆಯ ವೀಡಿಯೊಗಳು ದೊರೆತಿವೆ. ಆ ವಿಡಿಯೋಗಳಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಆಗಸ್ಟ್ 2018ರಲ್ಲಿ ಪ್ರಕಟಿಸಲಾಗಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ವಿಡಿಯೋವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ಆ ವಿಡಿಯೋ ತಮಿಳುನಾಡಿನ ಶಿವಕಾಶಿಯ ಮುರುಗನ್ ದೇವಸ್ಥಾನದಲ್ಲಿರುವ ಶಿವಲಿಂಗದ ಮೇಲೆ ವಜ್ರದ ಕವಚ (ರಕ್ಷಾಕವಚ)ವನ್ನು ಹೊದಿಸಿರುವ ದೃಶ್ಯಗಳು ಎಂದು ಉಲ್ಲೇಖಿಸಿದ್ದಾರೆ. ‘ಶ್ರೀ ಶ್ರೀ ರಾಶಸ್ಥಲಿ’ ಯೂಟ್ಯೂಬ್ ಚಾನೆಲ್ ಕೂಡ ಪ್ರದೋಷಮ್ ಬಗ್ಗೆ ವರದಿ ಮಾಡಿದ್ದು, 24 ಆಗಸ್ಟ್ 2018 ರಂದು ಅದೇ ವಿಡಿಯೋವನ್ನು ಹಂಚಿಕೊಂಡಿದೆ.
ಆ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, 22 ಸೆಪ್ಟೆಂಬರ್ 2018 ರಂದು ಪ್ರಕಟವಾದ ‘ನ್ಯೂಸ್ 18 ತೆಲುಗು’ ಸುದ್ದಿ ವೆಬ್‌ಸೈಟ್‌ನಲ್ಲಿ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊ ಕಂಡುಬಂದಿದೆ. ಈ ಸುದ್ದಿಯು ಶಿವಕಾಶಿಯ ಮುರುಗನ್ ದೇವಸ್ಥಾನದಲ್ಲಿ ವಜ್ರ ಕವಚವನ್ನು ಹೊದಿಸಲಾದ ಶಿವಲಿಂಗದ ದೃಶ್ಯಗಳು ಎಂದು ವರದಿ ಮಾಡಿದೆ. ಈ ಎಲ್ಲಾ ಸಾಕ್ಷ್ಯಗಳಿಂದ, ಇತ್ತೀಚೆಗೆ ಮತ್ತೆ ವೈರಲ್ ಆಗಿರುವ ವೀಡಿಯೊ ಶಿವಕಾಶಿ ಮುರುಗನ್ ದೇವಸ್ಥಾನದಲ್ಲಿ ಹಳೆಯ ಪ್ರದೋಷ ಆಚರಣೆಯ ಸಂದರ್ಭದ್ದು ಎಂದು ಸ್ಪಷ್ಟಪಡಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ವಜ್ರಗಳಿಂದ ಅಲಂಕರಿಸಲ್ಪಟ್ಟ ಈ ಶಿವಲಿಂಗವು ಶಿವಕಾಶಿಯ ಮುರುಗನ್ ದೇವಸ್ಥಾನದ್ದೇ ಹೊರತು ಕಾಂಚೀಪುರದ ಏಕಂಬರನಾಥ ದೇವಾಲಯದ್ದಲ್ಲ.