Fake News - Kannada
 

ಪ್ರಸ್ತುತ ಬಾಂಗ್ಲಾದೇಶದ ನಡೆಯುತ್ತಿರುವ ಪ್ರತಿಭಟನೆಯಲ್ಲಿ, ವಿದ್ಯಾರ್ಥಿಯ ಆತ್ಮಹತ್ಯೆಗೆ ಸಂಬಂಧಿಸಿದ ಪ್ರತಿಭಟನಾ ವೀಡಿಯೊವನ್ನು ಹಿಂದೂ ಮಹಿಳೆಯ ಮೇಲಿನ ಹಲ್ಲೆ ಎಂದು ಹಂಚಿಕೊಳ್ಳಲಾಗುತ್ತಿದೆ

0

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನಲೆಯಲ್ಲಿ ಅಲ್ಲಿನ  ಹಿಂದೂಗಳ ಮೇಲೆ ಅನೇಕ ದಾಳಿಗಳು ವರದಿಯಾಗಿವೆ. ಇದರ ನಡುವೆ ಇತ್ತೀಚಿಗೆ ಮಹಿಳೆಯೊಬ್ಬರ ಕೈ ಕಟ್ಟಿ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ರಸ್ತೆಯಲ್ಲಿ ಕುಳಿತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದೆ. ವೀಡಿಯೊದಲ್ಲಿರುವ ಯುವತಿಯನ್ನು ಬಾಂಗ್ಲಾದೇಶಿ ಹಿಂದೂ ಹೇಳಲಾಗಿದೆ. ಪ್ರಸ್ತುತ ಅಲ್ಲಿ ನಡೆಯುತ್ತಿರುವ ಪತಿಭಟನೆಯಲ್ಲಿ ಆಕೆಯನ್ನು  ಮುಸ್ಲಿಮರು ಹಿಂಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಬಾಂಗ್ಲಾದೇಶದಳ್ಳಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹಿಂದೂ ಯುವತಿಯೊಬ್ಬಳನ್ನು ಕೈ ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ರಸ್ತೆಯಲ್ಲಿ ಬಿಟ್ಟಿರುವ ವಿಡಿಯೋ.

ಫ್ಯಾಕ್ಟ್: ಈ ವಿಡಿಯೋದಲ್ಲಿರುವ ದೃಶ್ಯಗಳಿಗೂ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಗಳಿಗೂ ಯಾವುದೇ ಸಂಬಂಧವಿಲ್ಲ. ಮಾರ್ಚ್ 2024 ರಲ್ಲಿ, ಬಾಂಗ್ಲಾದೇಶದ ಜಗನ್ನಾಥ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ, ಅಲ್ಲಿನ ಕೆಲವು ವಿದ್ಯಾರ್ಥಿಗಳು ಕೈ ಕಟ್ಟಿ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ವಿರುದ್ಧ ಮೌನ ಪ್ರತಿಭಟನೆ ನಡೆಸಿದ್ದಾರೆ. ಈ ವೀಡಿಯೊ ಆ ಘಟನೆಯ  ಪ್ರತಿಭಟನೆಗೆ ಸಂಬಂಧಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.

ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧ ಹಿಂಸಾತ್ಮಕ ಘರ್ಷಣೆಗಳು ನಡೆಯುತ್ತಿವೆ. ಹಲವಾರು ವರದಿಗಳ ಪ್ರಕಾರ, ನಡೆಯುತ್ತಿರುವ ಗಲಭೆಗಳಲ್ಲಿ ಕೆಲವು ಸ್ಥಳಗಳಲ್ಲಿ ಪ್ರತಿಭಟನಾಕಾರರು ಅಲ್ಪಸಂಖ್ಯಾತರ ಮನೆಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ಮಾಡಿದ್ದಾರೆ, ವಿಶೇಷವಾಗಿ ಹಿಂದೂಗಳು ಮತ್ತು ಅವರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಇತರ ಕೆಲವು ವರದಿಗಳು ಹಿಂದೂ ಮನೆಗಳು, ದೇವಾಲಯಗಳ ಧ್ವಂಸ, ಸುಡುವಿಕೆ, ಮಹಿಳೆಯರ ಮೇಲೆ ಹಲ್ಲೆ (ಇಲ್ಲಿ ಮತ್ತು ಇಲ್ಲಿ) ಮುಂತಾದ ಘಟನೆಗಳನ್ನು ಉಲ್ಲೇಖಿಸುತ್ತವೆ.

ಪ್ರಸ್ತುತ  ಶೇರ್ ಆಗಿರುವ ವಿಡಿಯೋಗೂ, ಈಗ ನಡೆಯುತ್ತಿರುವ ಗಲಭೆಗಳಿಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ, ಈ ವಿಡಿಯೋದಲ್ಲಿ ಘಟನೆಗೆ ಯಾವುದೇ ಧಾರ್ಮಿಕ ಕೋನವಿಲ್ಲ. ಈ ವೀಡಿಯೊದ ಸ್ಕ್ರೀನ್‌ಶಾಟ್‌ಗಳು ಮತ್ತು ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಹುಡುಕಾಡಿದಾಗ ಮಾರ್ಚ್ 2024 ರಲ್ಲಿ ಇದೇ ವೀಡಿಯೊದ ದೃಶ್ಯಗಳನ್ನು ಬಾಂಗ್ಲಾದೇಶದ ಸುದ್ದಿ ವಾಹಿನಿಗಳು ವರದಿ ಮಾಡಿರುವುದು ಕಂಡುಕೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಭಿನ್ನ ಆಯಾಮಗಳಿಂದ ತೆಗೆದ ಫೋಟೋಗಳನ್ನು ಈ ಲೇಖನದಲ್ಲಿ ವರದಿ ಮಾಡಲಾಗಿದೆ.

ಆದರೆ, ಈ ಲೇಖನದ ಪ್ರಕಾರ, ಬಾಂಗ್ಲಾದೇಶದ ಜಗನ್ನಾಥ್ ವಿಶ್ವವಿದ್ಯಾಲಯದ ಆತ್ಮಹತ್ಯೆಗೆ ಸಂಬಂಧಿಸಿದಂತೆ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಡಳಿತದ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದರು. ಇದರ ಸಲುವಾಗಿ ಕೆಲ ವಿದ್ಯಾರ್ಥಿಗಳು ತಮ್ಮ ಕೈ ಕಟ್ಟಿ ಬಾಯಿಗೆ ಪ್ಲಾಸ್ಟರ್ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ಪ್ರಸ್ತುತ ಹಂಚಿಕೊಳ್ಳಲಾದ ವೀಡಿಯೊ ಈ  ಪ್ರತಿಭಟನೆಗಳಿಗೆ ಸಂಬಂಧಿಸಿದೆ.  ಈ ಆತ್ಮಹತ್ಯೆಗೆ ಸಂಬಂಧಿಸಿದಂತೆ ಆ ಸಮಯದಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳನ್ನು ವರದಿ ಆಗಿರುವ ಕೆಲವು ಸುದ್ದಿ ಲೇಖನಗಳು ಇಲ್ಲಿ ಕಾಣಬಹುದಾಗಿದೆ.  ಮಾರ್ಚ್ 2024 ರಲ್ಲಿ, ಸ್ಥಳೀಯ ಚಾನೆಲ್‌ಗಳು ಪ್ರಸಾರ ಮಾಡಿದ ಈ ಪ್ರತಿಭಟನೆಗಳ ಕುರಿತು ಲೇಖನವನ್ನು ಇಲ್ಲಿ ನೋಡಬಹುದು. ಇದರಲ್ಲೂ ವೈರಲ್ ವಿಡಿಯೋದಲ್ಲಿ ಇರುವ ಅದೇ ದೃಶ್ಯಗಳನ್ನು ನೋಡಬಹುದು.

ಇನ್ನು ಹೆಚ್ಚಿಗೆ  ಹುಡುಕಾಡಿದಾಗ,  ಜಗನ್ನಾಥ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ವಿಡಿಯೋಗೆ ಸಂಬಂಧಿಸಿದಂತೆ ವಿವರಣೆ ನೀಡುತ್ತಿರುವ ಒಂದು  ಫೇಸ್‌ಬುಕ್ ಪೇಜ್ ನಮಗೆ ಸಿಕ್ಕಿತು.ಇಲ್ಲಿ ನೀಡಿದ  ವಿವರಣೆಯಲ್ಲಿ, ವೀಡಿಯೊದಲ್ಲಿನ ದೃಶ್ಯಗಳು ಮೇಲೆ ತಿಳಿಸಿದಂತೆ ಹಿಂದೆ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಆತ್ಮಹತ್ಯೆಗೆ ಸಂಬಂಧಿಸಿದ ಪ್ರತಿಭಟನೆಗಳಿಗೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ ಪ್ರಸ್ತುತ ಇದನ್ನು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪತಿಭಟನೆಯ ವಿಡಿಯೋ ಎಂದು ಬಳಸಿಕೊಳ್ಳಲಾಗುತ್ತಿದೆ, ಹಾಗಾಗಿ ಇದು ಯಾವುದು ನಿಜವಲ್ಲ  ಎಂದು ತಿಳಿಸಿದ್ದಾರೆ. 

ರೂಮರ್‌ಸ್ಕ್ಯಾನರ್ ಎನ್ನುವ ಬಾಂಗ್ಲಾದೇಶಿ  ಫ್ಯಾಕ್ಟ್ ಚೆಕಿಂಗ್ ಸಂಸ್ಥೆಯ ಸ್ಥಳೀಯ ಪತ್ರಕರ್ತರು ಈ ವೀಡಿಯೊದಲ್ಲಿರುವ ವಿದ್ಯಾರ್ಥಿಯೊಂದಿಗೆ ಮಾತನಾಡಿದೆ ಮತ್ತು ಪಸ್ತುತ ನಡೆಯುತ್ತಿರುವ ಆಂದೋಲನಕ್ಕೂ ವೀಡಿಯೊಗೂ ಯಾವುದೇ ಸಂಬಂಧವಿಲ್ಲ ಎಂದು ದೃಢಪಡಿಸಿದೆ.

ಕೊನೆಯದಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹಿಂದೂ ಮಹಿಳೆಯರ ಮೇಲಿನ ದಾಳಿ ಎಂದು ಯಾವುದೋ ಸಂಬಂಧವಿಲ್ಲದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll