Fake News - Kannada
 

ಟ್ರಂಪ್ ಪಾಕಿಸ್ತಾನವನ್ನು ನಾಶಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ವಿಡಿಯೋ ಸುಳ್ಳು; ಇದು 2016 ರ ಅವರ ಭಾಷಣದ ಕ್ಲಿಪ್‌ ಅನ್ನು ಬಳಸಿ AI- ರಚಿತವಾದ ಆಡಿಯೊವನ್ನು ಉಪಯೋಗಿಸಲಾಗಿದೆ

0

ಏಪ್ರಿಲ್ 22, 2025 ರಂದು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು, ಅಸುನೀಗಿದವರನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ‘ದಿ ರೆಸಿಸ್ಟೆನ್ಸ್ ಫ್ರಂಟ್’ ಆರಂಭದಲ್ಲಿ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರೂ, ನಂತರ ಅದು ಭಾಗಿಯಾಗಿರುವುದನ್ನು ನಿರಾಕರಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತವು ಪಾಕಿಸ್ತಾನದ ವಿರುದ್ಧ ಬಲವಾದ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಸಿಂಧೂ ಜಲ ಒಪ್ಪಂದವನ್ನು ಅಮಾನತು, ಮಿಲಿಟರಿ ಸಲಹೆಗಾರರನ್ನು ಹೊರಹಾಕುವುದು, ಗಡಿ ಮುಚ್ಚುವುದು ಮತ್ತು ಕಟ್ಟುನಿಟ್ಟಾದ ವೀಸಾ ನಿರ್ಬಂಧಗಳನ್ನು ವಿಧಿಸಲಾಗಿದೆ. 

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಕ್ಲಿಪ್‌ನಲ್ಲಿ, ಅವರು “ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದರೆ, ನಾನು ಹಿಂದೆ ಕುಳಿತು ನೋಡುವುದಿಲ್ಲ. ನಾನು ಪಾಕಿಸ್ತಾನವನ್ನು ನಾಶಮಾಡುತ್ತೇನೆ ಏಕೆಂದರೆ ಮೋದಿಜಿ ನನ್ನ ಸ್ನೇಹಿತ, ಮತ್ತು ನಾನು ಭಾರತೀಯರನ್ನು ಪ್ರೀತಿಸುತ್ತೇನೆ” ಎಂದು ಹೇಳುತ್ತಿರುವುದು ಕೇಳಬಹುದು. ಕೆಲವು ವರ್ಷನ್ ಗಳಲ್ಲಿ, ಅವರು “erase Pakistan/ ಪಾಕಿಸ್ತಾನವನ್ನು ಅಳಿಸಿಹಾಕಿ” ಎಂದು ಹೇಳುತ್ತಿರುವುದು ಕೇಳಬಹುದು. ಹಾಗಾದರೆ ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಕ್ಲೇಮ್: ವೈರಲ್ ಆಗಿರುವ ವೀಡಿಯೊದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಸವಾಲು ಹಾಕುತ್ತಿರುವುದನ್ನು ತೋರಿಸಲಾಗಿದೆ, ಭಾರತದ ಮೇಲೆ ದಾಳಿ ಮಾಡಿದರೆ ದೇಶವನ್ನು ನಾಶಮಾಡುತ್ತೇನೆ ಎಂದು ಹೇಳಿದ್ದಾರೆ.

ಫ್ಯಾಕ್ಟ್: ಈ ವೀಡಿಯೊ ಸೆಪ್ಟೆಂಬರ್ 2016 ರಲ್ಲಿ ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್‌ನಲ್ಲಿ ಟ್ರಂಪ್ ಆರ್ಥಿಕ ಸುಧಾರಣೆಗಳ ಕುರಿತು ಚರ್ಚಿಸಿದ ಕಾರ್ಯಕ್ರಮದ್ದಾಗಿದೆ. ನಿಜ ದೃಶ್ಯಾವಳಿಯಲ್ಲಿ ಅಂತಹ ಯಾವುದೇ ಹೇಳಿಕೆಗಳಿಲ್ಲ. HIVE ನಿಂದ AI ಪತ್ತೆಹಚ್ಚುವಿಕೆ ವೀಡಿಯೊ ಅಫೀಷಿಯಲ್ ಎಂದು ದೃಢಪಡಿಸಿದೆ, ಆದರೆ ಆಡಿಯೊ AI-ರಚಿತವಾಗಿದೆ. ವಾಸ್ತವವಾಗಿ, ಟ್ರಂಪ್ ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದರು ಮತ್ತು ಭಾರತ ಮತ್ತು ಪಾಕಿಸ್ತಾನ ಎರಡನ್ನೂ ಸ್ನೇಹಿತರಾಗಿದ್ದು,  ಕಾಶ್ಮೀರ ಕಲಹಕ್ಕೆ ಶಾಂತಿಯುತ ಪರಿಹಾರಕ್ಕಾಗಿ ಆಶಿಸುತ್ತಾ ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಆದ್ದರಿಂದ, ಈ ಪೋಸ್ಟ್ನಲ್ಲಿ ಹೇಳಿರುವುದು ಸುಳ್ಳಾಗಿದೆ

ವೈರಲ್ ವೀಡಿಯೊದ ಹಿಂದಿನ ಸತ್ಯವನ್ನು ಪರಿಶೀಲಿಸಲು, ನಾವು ಕ್ಲಿಪ್‌ನ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಸೆಪ್ಟೆಂಬರ್ 16, 2016 ರಂದು CNN ತನ್ನಅಫೀಷಿಯಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊವನ್ನು ನಮಗೆ ತೋರಿಸಿದೆ. ಸೂಕ್ಷ್ಮ ಪರೀಕ್ಷೆಯು ಡೊನಾಲ್ಡ್ ಟ್ರಂಪ್ ಅವರ ಉಡುಗೆ  ಮತ್ತು ವೈರಲ್ ವೀಡಿಯೊದಲ್ಲಿನ ಬ್ಯಾಕ್ಗ್ರೌಂಡ್ ದೃಶ್ಯಗಳಿಗೆ ಹೊಂದಿಕೆಯಾಗುತ್ತಿದೆ ಎಂದು ದೃಢಪಡಿಸಿತು. ವೀಡಿಯೊ ವಿವರಣೆಯಲ್ಲಿ ಅದು ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್‌ನಲ್ಲಿ ಟ್ರಂಪ್ ಅವರ ಭಾಷಣದಿಂದ ಬಂದಿದೆ ಎಂದು ಉಲ್ಲೇಖಿಸಲಾಗಿದೆ.

ರಾಯಿಟರ್ಸ್ ವರದಿ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸೇರಿದಂತೆ ಈ ಘಟನೆಯ ಕುರಿತು ಹೆಚ್ಚಿನ ಸಂಶೋಧನೆಯು, ವೈರಲ್ ಆಗಿರುವ ವೀಡಿಯೊ ಸೆಪ್ಟೆಂಬರ್ 2016 ರಲ್ಲಿ ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್‌ನಲ್ಲಿ ಡೊನಾಲ್ಡ್ ಟ್ರಂಪ್ ಮಾಡಿದ ಭಾಷಣದಾಗಿದೆ ಎಂದು ದೃಢಪಡಿಸಿದೆ. ಈ ಭಾಷಣವು ತೆರಿಗೆ ಕಡಿತ, ಕಡಿಮೆ ನಿಯಮಗಳು ಮತ್ತು ಕಠಿಣ ವ್ಯಾಪಾರ ನೀತಿಗಳು ಸೇರಿದಂತೆ ದೇಶೀಯ ಆರ್ಥಿಕ ಸುಧಾರಣೆಗಳ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಿದೆ. ಈ ಯೋಜನೆಯು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಟ್ರಂಪ್ ಹೇಳಿದ್ದರು, ಆದರೆ ಆ ಸಮಯದಲ್ಲಿ ತಜ್ಞರು ಸಂಶಯ ವ್ಯಕ್ತಪಡಿಸಿದರು, ಇದು ಅತಿಯಾದ ಆಶಾವಾದಿ ಮತ್ತು ಅಮೆರಿಕದ ಆರ್ಥಿಕತೆಗೆ ಅಪಾಯಕಾರಿ ಎಂದು ತಿಳಿಸಿದರು. ವೈರಲ್ ಆಗಿರುವ ವೀಡಿಯೊದಲ್ಲಿ ಕೇಳಿಬರುವ ಹೇಳಿಕೆಗಳು, ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನವನ್ನು ಉಲ್ಲೇಖಿಸುವ ಹೇಳಿಕೆಗಳು ಮೂಲ ಭಾಷಣದಲ್ಲಿ ಇಲ್ಲ.

ವೈರಲ್ ಕ್ಲಿಪ್‌ನಲ್ಲಿ ಕೇಳಿಬಂದ ಆಡಿಯೊ ಮೂಲ ವೀಡಿಯೊದಲ್ಲಿ ಇಲ್ಲದಿರುವುದರಿಂದ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಾವು AI ಪತ್ತೆ ಸಾಧನ HIVE ಅನ್ನು ಬಳಸಿದ್ದೇವೆ. ಈ ಮೂಲಕ ವೀಡಿಯೊ ಸ್ವತಃ ನಿಜವಾದದ್ದಾಗಿದ್ದರೂ, ಆಡಿಯೊ 99% AI- ರಚಿತವಾಗಿರುವ ಸಾಧ್ಯತೆ ಇದೆ ಎಂದು ದೃಢಪಡಿಸಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಭಾರತ-ಪಾಕಿಸ್ತಾನ ಉದ್ವಿಗ್ನತೆಯನ್ನು ಚರ್ಚಿಸುವಾಗ (ಇಲ್ಲಿ, ಇಲ್ಲಿ ಮತ್ತು ಇಲ್ಲಿ), “ಎರಡೂ ದೇಶಗಳು ಸಾವಿರ ವರ್ಷಗಳಿಂದ ಕಾಶ್ಮೀರದಲ್ಲಿ ಹೋರಾಡುತ್ತಿವೆ.” ಅವರು ತಪ್ಪಾಗಿ ಹೇಳಿದರು. ಟ್ರಂಪ್ ಈ ದಾಳಿಯನ್ನು “ನೀಚ” ಎಂದು ಹೇಳುವುದರ ಜೊತೆಗೆ ಗಡಿಯಲ್ಲಿನ ಉದ್ವಿಗ್ನತೆ “1,500 ವರ್ಷಗಳ ಕಾಲ” ಮುಂದುವರೆದಿದೆ ಎಂದು ಹೇಳಿದರು. ಇದರ ಜೊತೆಗೆ  ಎರಡು ದೇಶದ ನಾಯಕರು ಈ  ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಯಾವಾಗಲೂ ಅಸ್ತಿತ್ವದಲ್ಲಿದೆ ಎಂದು ತಿಳಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಟ್ರಂಪ್ ಪಾಕಿಸ್ತಾನವನ್ನು ನಾಶಮಾಡುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ತೋರಿಸುವ ವೀಡಿಯೊ ಎಡಿಟೆಡ್ ಆಗಿದ್ದು; ಇದು 2016 ರ ಅವರ ಭಾಷಣದ ಕ್ಲಿಪ್‌ನಲ್ಲಿ AI- ರಚಿತವಾದ ಆಡಿಯೊವನ್ನು ಬಳಸಲಾಗಿದೆ.

Share.

Comments are closed.

scroll