Fake News - Kannada
 

ಭಾರತ ಸರ್ಕಾರವು ಯಾವುದೇ ಉಚಿತ ಎಲೆಕ್ಟ್ರಿಕ್ ಸೈಕಲ್ ಯೋಜನೆಯನ್ನು ಜಾರಿಗೊಳಿಸಿಲ್ಲ

0

ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಇವುಗಳಲ್ಲಿ, ಭಾರತ ಸರ್ಕಾರವು ಶಾಲಾ ಮಕ್ಕಳು ಅಥವಾ ವಿದ್ಯಾರ್ಥಿಗಳಿಗೆ ಉಚಿತ ಎಲೆಕ್ಟ್ರಿಕ್ ಸೈಕಲ್‌ಗಳನ್ನು ನೀಡುತ್ತಿದೆ ಎಂಬ ಕ್ಲೈಂ ಅನ್ನು ಮಾಡಲಾಗಿದೆ. ಕೆಲವು ಪೋಸ್ಟ್‌ಗಳಲ್ಲಿ (ಇಲ್ಲಿ) ಒಂದು ವೀಡಿಯೊ ಕೂಡ ಇದೆ. ಇದು ಪ್ರಧಾನಮಂತ್ರಿ ಮೋದಿ ಅವರು ಶಾಲಾ ಮಕ್ಕಳಿಗೆ ಉಚಿತ ಎಲೆಕ್ಟ್ರಿಕ್ ಸೈಕಲ್ ಯೋಜನೆಯನ್ನು ಘೋಷಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವೀಡಿಯೊದಲ್ಲಿ, ಬಿಹಾರ ಚುನಾವಣೆಯಲ್ಲಿ NDA ಗೆದ್ದಿರುವುದರಿಂದ, ಶಾಲೆಗೆ ಹೋಗುವ ಪ್ರತಿಯೊಬ್ಬ ಮಗುವಿಗೆ ಶಾಲೆಗೆ ಹೋಗಲು ಉಚಿತ ಎಲೆಕ್ಟ್ರಿಕ್ ಸೈಕಲ್ ನೀಡಲಾಗುವುದು ಎಂದು ಪ್ರಧಾನಿ ಮೋದಿ ಹೇಳುವುದನ್ನು ಕೇಳಬಹುದು. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮನ್ನು ಪರಿಶೀಲಿಸೋಣ. 

ಕ್ಲೇಮ್: ಭಾರತ ಸರ್ಕಾರವು ಶಾಲಾ ಮಕ್ಕಳು ಅಥವಾ ವಿದ್ಯಾರ್ಥಿಗಳಿಗೆ ಉಚಿತ ಎಲೆಕ್ಟ್ರಿಕ್ ಸೈಕಲ್‌ಗಳನ್ನು ನೀಡುತ್ತಿದೆ.  

ಫ್ಯಾಕ್ಟ್: ಭಾರತ ಸರ್ಕಾರವಾಗಲಿ ಅಥವಾ ಯಾವುದೇ ರಾಜ್ಯ ಸರ್ಕಾರವಾಗಲಿ ಶಾಲಾ ಮಕ್ಕಳು ಅಥವಾ ವಿದ್ಯಾರ್ಥಿಗಳಿಗೆ ಉಚಿತ ಎಲೆಕ್ಟ್ರಿಕ್ ಸೈಕಲ್ ಅನ್ನು ನೀಡುತ್ತಿಲ್ಲ. ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಉಚಿತ ಎಲೆಕ್ಟ್ರಿಕ್ ಸೈಕಲ್ ಯೋಜನೆಯನ್ನು ಘೋಷಿಸಿದ್ದಾರೆ ಎಂದು ಹೇಳುವ ವೀಡಿಯೊ ನಕಲಿಯಾಗಿದ್ದು, ಅದನ್ನು ಡಿಜಿಟಲ್ ಆಗಿ ತಿರುಚಲಾಗಿದೆ. ಭಾರತದಲ್ಲಿ ಯಾವುದೇ ರಾಜ್ಯ ಸರ್ಕಾರವು ಶಾಲಾ ಮಕ್ಕಳು ಅಥವಾ ವಿದ್ಯಾರ್ಥಿಗಳಿಗೆ ಉಚಿತ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಒದಗಿಸುತ್ತಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಆದರೆ, ಹಲವಾರು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಉಚಿತ ಸಾಮಾನ್ಯ ಸೈಕಲ್‌ಗಳನ್ನು ನೀಡುತ್ತವೆ. ಮಧ್ಯಪ್ರದೇಶ ಸರ್ಕಾರವು ಸರ್ಕಾರಿ ಶಾಲೆಗಳ ಪ್ರತಿಭಾವಂತ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡುತ್ತಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳು .

ಭಾರತ ಸರ್ಕಾರವು ಶಾಲಾ ಮಕ್ಕಳು ಅಥವಾ ವಿದ್ಯಾರ್ಥಿಗಳಿಗೆ ಉಚಿತ ಎಲೆಕ್ಟ್ರಿಕ್ ಸೈಕಲ್‌ಗಳನ್ನು ನೀಡುತ್ತಿದೆಯೇ ಎಂದು ಪರಿಶೀಲಿಸಲು ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆದರೆ, ಈ ಕ್ಲೈಮನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಅಥವಾ ಅಧಿಕೃತ ಪ್ರಕಟಣೆಗಳು ನಮಗೆ ಕಂಡುಬಂದಿಲ್ಲ. ಭಾರತ ಸರ್ಕಾರವು ಅಂತಹ ಯೋಜನೆಯನ್ನು ನಿಜವಾಗಿಯೂ ಘೋಷಿಸಿದ್ದರೆ, ಅದನ್ನು ಅನೇಕ ಮಾಧ್ಯಮ ಸಂಸ್ಥೆಗಳು ವರದಿ ಮಾಡುತ್ತಿದ್ದವು.

ಯಾವುದೇ ಹೊಸ ಯೋಜನೆಯನ್ನು ಇತ್ತೀಚೆಗೆ ಘೋಷಿಸಲಾಗಿದೆಯೇ ಅಥವಾ ಪ್ರಾರಂಭಿಸಲಾಗಿದೆಯೇ ಎಂದು ಪರಿಶೀಲಿಸಲು ನಾವು ಭಾರತ ಸರ್ಕಾರದ MyScheme ಪೋರ್ಟಲ್ ಮತ್ತು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಗಳನ್ನು ಸಹ ಪರಿಶೀಲಿಸಿದ್ದೇವೆ. ಆದರೆ ಅಲ್ಲಿಯೂ ಈ ಕ್ಲೈಮನ್ನು ಬೆಂಬಲಿಸುವ ಯಾವುದೇ ಸಂಬಂಧಿತ ಮಾಹಿತಿಯನ್ನು ನಾವು ಕಂಡುಕೊಂಡಿಲ್ಲ.

ಪ್ರಧಾನಿ ಮೋದಿ ಶಾಲಾ ಮಕ್ಕಳಿಗೆ ಉಚಿತ ಎಲೆಕ್ಟ್ರಿಕ್ ಸೈಕಲ್ ಯೋಜನೆಯನ್ನು ಘೋಷಿಸುತ್ತಿರುವ ವೈರಲ್ ವೀಡಿಯೊದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು, ನಾವು ವೀಡಿಯೊದ ಪ್ರಮುಖ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು 24 ಫೆಬ್ರವರಿ 2019 ರಂದು ಪ್ರಧಾನ ಮಂತ್ರಿಗಳ ಕಚೇರಿ (PMO) ಇಂಡಿಯಾದ ಅಫೀಸಿಯಲ್ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು, ಅದರ ಶೀರ್ಷಿಕೆ “PM Modi’s speech at the launch of PM Kisan Samman Nidhi Yojana in Gorakhpur, UP.” ಈ ವೀಡಿಯೊವನ್ನು ಸಂಸತ್ತು, ಉತ್ತರ ಪ್ರದೇಶ ಸರ್ಕಾರ, ಆಲ್ ಇಂಡಿಯಾ ರೇಡಿಯೋ ಮತ್ತು ಭಾರತೀಯ ಜನತಾ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ಗಳಿಂದ ಅದೇ ದಿನಾಂಕದಂದು ನೇರ ಪ್ರಸಾರ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಈ ಭಾಷಣದಲ್ಲಿ, ಪ್ರಧಾನ ಮಂತ್ರಿ ಮೋದಿ ಅವರು ರೈತರ ಬಗ್ಗೆ, PM-KISAN ಯೋಜನೆ ಮತ್ತು ಇತರ ಕೃಷಿ-ಸಂಬಂಧಿತ ಉಪಕ್ರಮಗಳ ಬಗ್ಗೆ ಮಾತನಾಡುತ್ತಾರೆ. ಭಾಷಣದ ಯಾವುದೇ ಹಂತದಲ್ಲಿ ಅವರು ಯಾವುದೇ ಉಚಿತ ಎಲೆಕ್ಟ್ರಿಕ್ ಸೈಕಲ್ ಬಗ್ಗೆ ಪ್ರಸ್ತಾಪಿಸಿಲ್ಲ. ಈ ಭಾಷಣದ ಪೂರ್ಣ ಇಂಗ್ಲಿಷ್ ಲಿಪಿಯನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಹಂಚಿಕೊಂಡಿದ್ದು, ಅದನ್ನು ಇಲ್ಲಿ ನೋಡಬಹುದು. 

ನಂತರ ನಾವು Resemble AI ಮತ್ತು Hiya ಸೇರಿದಂತೆ ಅನೇಕ AI ಧ್ವನಿ-ಪತ್ತೆ ಸಾಧನಗಳನ್ನು ಬಳಸಿಕೊಂಡು ವೈರಲ್ ವೀಡಿಯೊವನ್ನು ವಿಶ್ಲೇಷಿಸಿದ್ದೇವೆ. ವೈರಲ್ ವೀಡಿಯೊದಲ್ಲಿನ ಆಡಿಯೋ AI-ಜನರೇಟೆಡ್ ಆಗಿರಬಹುದು ಎಂದು ಫಲಿತಾಂಶಗಳು ಸೂಚಿಸಿವೆ. ಈ ಮಾಹಿತಿಯ ಆಧಾರದ ಮೇಲೆ, ವೈರಲ್ ವೀಡಿಯೊ ನಕಲಿ ಮತ್ತು ಡಿಜಿಟಲ್ ಆಗಿ ತಿರುಚಲಾಗಿದೆ ಎಂಬುದು ಸ್ಪಷ್ಟವಾಗಿದೆ. ಇದನ್ನು ಮೂಲ ವೀಡಿಯೊದ ಆಡಿಯೊವನ್ನು ಮಾರ್ಪಡಿಸುವ ಮೂಲಕ ರಚಿಸಲಾಗಿದೆ.

ಈ ಕ್ಲೈಮನ್ನು ಪೋಸ್ಟ್ ಮಾಡಿದ ಅಕೌಂಟ್ ನಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಪರಿಶೀಲಿಸಿದಾಗ, ಈ ಅಕೌಂಟ್ ಸಾಕಷ್ಟು ತಪ್ಪು ಮಾಹಿತಿಯನ್ನು ಮತ್ತು ಪ್ರಧಾನಿ ಮೋದಿಯವರ AI-ಜನರೇಟೆಡ್ ವೀಡಿಯೊಗಳನ್ನು ಹಂಚಿಕೊಳ್ಳುತ್ತವೆ ಎಂದು ನಾವು ಕಂಡುಕೊಂಡಿದ್ದೇವೆ. ಇವುಗಳಲ್ಲಿ ಉಚಿತ ರೀಚಾರ್ಜ್ ಯೋಜನೆ ಸೇರಿದಂತೆ ಹಲವಾರು ಉಚಿತ ಯೋಜನೆಗಳನ್ನು ಅವರು ಘೋಷಿಸಿದ್ದಾರೆ ಎಂದು ಸುಳ್ಳು ಹೇಳಲಾಗಿದೆ.

ಭಾರತದಲ್ಲಿ ಯಾವುದೇ ರಾಜ್ಯ ಸರ್ಕಾರವು ಶಾಲಾ ಮಕ್ಕಳು ಅಥವಾ ವಿದ್ಯಾರ್ಥಿಗಳಿಗೆ ಉಚಿತ ಎಲೆಕ್ಟ್ರಿಕ್ ಸೈಕಲ್‌ಗಳನ್ನು ನೀಡುತ್ತಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಆದರೆ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿನ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಸಾಮಾನ್ಯ ಸೈಕಲ್‌ಗಳನ್ನು ಒದಗಿಸುತ್ತವೆ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಮಧ್ಯಪ್ರದೇಶ ಸರ್ಕಾರವು ಸರ್ಕಾರಿ ಶಾಲೆಗಳ ಪ್ರತಿಭಾವಂತ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡುತ್ತಿದೆ.

​ ಕೊನೆಯದಾಗಿ ಹೇಳುವುದಾದರೆ, ಭಾರತ ಸರ್ಕಾರವಾಗಲಿ ಅಥವಾ ಯಾವುದೇ ರಾಜ್ಯ ಸರ್ಕಾರವಾಗಲಿ ವಿದ್ಯಾರ್ಥಿಗಳಿಗೆ ಉಚಿತ ಎಲೆಕ್ಟ್ರಿಕ್ ಸೈಕಲ್‌ಗಳನ್ನು ನೀಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಉಚಿತ ಎಲೆಕ್ಟ್ರಿಕ್ ಸೈಕಲ್ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ ಎಂದು ಹೇಳುವ ವೀಡಿಯೊ ಸುಳ್ಳಾಗಿದೆ.

Share.

Comments are closed.

scroll