ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ಪಶ್ಚಿಮ ಬಂಗಾಳದ ಪೊಲೀಸ್ ಸಿಬ್ಬಂದಿಗಳು ಮಸೀದಿ ಸ್ವಚ್ಛಗೊಳಿಸುತ್ತಿರುವ ದೃಶ್ಯಗಳು ಎಂದು ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ
ಪ್ರತಿಪಾದನೆ: ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ಪಶ್ಚಿಮ ಬಂಗಾಳದ ಪೊಲೀಸ್ ಸಿಬ್ಬಂದಿಗಳು ಮಸೀದಿ ಸ್ವಚ್ಛಗೊಳಿಸುತ್ತಿರುವ ದೃಶ್ಯಗಳು
ನಿಜಾಂಶ; ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಈ ಚಿತ್ರವು ತೆಲಂಗಾಣ ಪೊಲೀಸ್ ಸಿಬ್ಬಂದಿ ಭೈಂಸಾದಲ್ಲಿನ ಪಂಜೆಶಾ ಮಸೀದಿಯನ್ನು ಸ್ವಚ್ಛಗೊಳಿಸುತ್ತಿರುವ ಹಳೆಯ ಫೋಟೋವಾಗಿದೆ. 2016 ರಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದ ಭಾಗವಾಗಿ, ಆದಿಲಾಬಾದ್ ಜಿಲ್ಲೆಯ ಪೊಲೀಸರು ತಮ್ಮ ಜಿಲ್ಲೆಯ ದೇವಸ್ಥಾನಗಳು ಮತ್ತು ಮಸೀದಿಗಳನ್ನು ಸ್ವಚ್ಛಗೊಳಿಸಿದರು. ಈ ಫೋಟೋಗೂ ಪಶ್ಚಿಮ ಬಂಗಾಳಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಚಿತ್ರವನ್ನು ಗೂಗಲ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ 2016ರ ಜೂನ್ 26 ರಂದು ಎಕೆ ನ್ಯೂಸ್ ಚಾನೆಲ್ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಇದೇ ರೀತಿಯ ಫೋಟೊವೊಂದು ಕಂಡುಬಂದಿದೆ. ರಂಜಾಬ್ ಹಬ್ಬದ ಹಿನ್ನೆಲೆಯಲ್ಲಿ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಭೈಂಸಾದಲ್ಲಿನ ಪಂಜೆಶಾ ಮಸೀದಿಯನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯಗಳು ಎಂದು ಚಾನೆಲ್ ವರದಿ ಮಾಡಿದೆ. ಹಲವಾರು ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಆದಿಲಾಬಾದ್ ಪೊಲೀಸರು ದೇವಾಸ್ಥಾನಗಳು ಮತ್ತು ಮಸೀದಿಗಳನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಇದೇ ರೀತಿಯ ಫೊಟೊಗಳನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೀ ವರ್ಡ್‌ಗಳನ್ನು ಬಳಸಿ ಹುಡುಕಿದಾಗ 2016ರ ಜೂನ್ 20 ರಂದು ತೆಲಂಗಾಣ ರಾಜ್ಯ ಪೊಲೀಸ್ ಪ್ರಕಟಿಸಿ ಫೇಸ್‌ಬುಕ್ ಪೋಸ್ಟ್ ಒಂದು ಕಂಡುಬಂದಿದೆ. ಅದರಲ್ಲಿ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಆದಿಲಾಬಾದ್ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಗಿಡಗಳನ್ನು ನೆಟ್ಟು, ದೇವಾಸ್ಥಾನ ಮತ್ತು ಮಸೀದಿಗಳನ್ನು ಸ್ವಚ್ಚಗೊಳಿಸಿದರು ಎಂದು ವಿವರಣೆ ನೀಡಲಾಗಿದೆ.
ಈಟಿವಿ ತೆಲಂಗಾಣ ನ್ಯೂಸ್ ಚಾನೆಲ್ ಆದಿಲಾಬಾದ್ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಸ್ವಚ್ಛ ಭಾರತ ಅಭಿಯಾನ ನಡೆಸಿದ್ದರ ಕುರಿತು ಹಲವು ವಿಡಿಯೋಗಳನ್ನು ಪ್ರಕಟಿಸಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ‘ಈಟಿವಿ ತೆಲಂಗಾಣ’ ಸುದ್ದಿ ವಾಹಿನಿ ಪ್ರಕಟಿಸಿದ ವಿಡಿಯೋದಲ್ಲಿ ನಿರ್ಮಲ್ ಪೊಲೀಸರು ದೇವಸ್ಥಾನವನ್ನು ಸ್ವಚ್ಛಗೊಳಿಸುತ್ತಿರುವುದನ್ನು ನೋಡಬಹುದು. ಈ ಎಲ್ಲಾ ಸಾಕ್ಷಿಗಳಿಂದ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋ ಹಳೆಯದಾಗಿದೆ ಮತ್ತು ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿಲ್ಲ ಎಂದು ತೀರ್ಮಾನಿಸಬಹುದು, ಆದರೆ ತಪ್ಪುದಾರಿಗೆಳೆಯುವ ಕೋಮುವಾದಿ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ 2016ರ ತೆಲಂಗಾಣದಲ್ಲಿನ ಸ್ವಚ್ಛ ಭಾರತ ಅಭಿಯಾನದ ದೃಶ್ಯಗಳನ್ನು ಬಂಗಾಳದಲ್ಲಿ ಪೊಲೀಸರು ಮಸೀದಿ ಸ್ವಚ್ಛಗೊಳಿಸುತ್ತಿರುವುದು ಎಂದು ಹಂಚಿಕೊಳ್ಳಲಾಗಿದೆ.