ಎರಡು ಬೇರೆ ಬೇರೆ ಸಮಯದಲ್ಲಿ ಸೆರೆಹಿಡಿದ ಒಂದು ರಸ್ತೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಕೊರೊನಾವೈರಸ್ ಬಗ್ಗೆ ಹೆಚ್ಚು ಭಯವಿದ್ದ ಸಮಯದಲ್ಲಿಯೇ ಭಾರಿ ದಟ್ಟಣೆಯಿದ್ದ ರಸ್ತೆಯನ್ನು ಸೆರೆಹಿಡಿಯಲಾಗಿದೆ ಎಂದು ಹೇಳುತ್ತ, ಖಾಲಿ ರಸ್ತೆಗಳಿರುವ ಇನ್ನೊಂದು ಭಾಗವನ್ನು 2020 ರ ಜೂನ್ 21 ರಂದು ಸೂರ್ಯಗ್ರಹಣ ದಿನವೆಂದು ಹೇಳಲಾಗಿದೆ. ಫೋಟೋ ಸೆರೆಹಿಡಿಯಲಾದ ಸಮಯದ ಬಗ್ಗೆ ಪ್ರತಿಪಾದಿಸಿರುವುದನ್ನು ಪರಿಶೀಲಿಸೋಣ.
ಪ್ರತಿಪಾದನೆ: ಕೊರೊನಾವೈರಸ್ ಮತ್ತು ಸೂರ್ಯಗ್ರಹಣ ದಿನದ ಸಮಯದಲ್ಲಿ ರಸ್ತೆಯ ಸಂಚಾರ ದಟ್ಟಣೆಯನ್ನು ಹೋಲಿಸುವ ಫೋಟೋ.
ನಿಜಾಂಶ: ಭಾರೀ ದಟ್ಟಣೆಯನ್ನು ತೋರಿಸುವ ಫೋಟೋದ ಭಾಗವನ್ನು 2020ರ ಫೆಬ್ರವರಿ 5 ರಂದು ಸೆರೆಹಿಡಿಯಲಾಗಿದ್ದು, ಅದು ಭಾರತದಲ್ಲಿ ಕೋವಿಡ್-19 ಹರಡುವ ಮೊದಲು ಸೆರೆಹಿಡಿದಿರುವುದಾಗಿದೆ. ಖಾಲಿ ರಸ್ತೆಗಳನ್ನು ತೋರಿಸುವ ಇನ್ನೊಂದು ಭಾಗವನ್ನು 2020ರ ಮಾರ್ಚ್ 22 ರಂದು ತೆಗೆದಿದ್ದು, ಅದು ಜನತಾ ಕರ್ಫ್ಯೂ ಇದ್ದ ದಿನ. ಅಂದು ಭಾರತ ಸರ್ಕಾರ ಇಡೀ ದೇಶದಲ್ಲಿ ಜನತಾ ಕರ್ಫ್ಯೂ ವಿಧಿಸಿತ್ತು. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪು.
ರಿವರ್ಸ್ ಇಮೇಜ್ ಹುಡುಕಾಟದಲ್ಲಿ, ಈ ಫೋಟೋಗಳನ್ನು ಬೆಂಗಳೂರು ಮೂಲದ ಛಾಯಾಗ್ರಾಹಕ ಮಂಜುನಾಥ್ ಕಿರಣ್ ಅವರು ಸೆರೆಹಿಡಿದಿದ್ದಾರೆ ಮತ್ತು ಪ್ರಕಟಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಜನತಾ ಕರ್ಫ್ಯೂನ ಪರಿಣಾಮವನ್ನು ತೋರಿಸಲು, ಅವರು ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯ ಈ ಎರಡು ವಿಭಿನ್ನ ಸನ್ನಿವೇಶಗಳನ್ನು ಹಂಚಿಕೊಂಡಿದ್ದರು. ಜನತಾ ಕರ್ಫ್ಯೂ ದಿನ ಹಗಲಿನಲ್ಲಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಿರುತ್ತಿದ್ದ ಪ್ರದೇಶವು ನಿರ್ಜನವಾಗಿದೆ ಎಂದು ಈ ಫೋಟೋಗಳು ಹೇಳುತ್ತವೆ. 22 ಮಾರ್ಚ್ 2020 ರಂದು, ಭಾರತದಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಭಾರತ ಸರ್ಕಾರ ಸಂಪೂರ್ಣ ದೇಶಾದ್ಯಂತ ಜನತಾ (ನಾಗರಿಕ) ಕರ್ಫ್ಯೂ ವಿಧಿಸಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಜನತಾ ಕರ್ಫ್ಯೂ ಸಂದರ್ಭದಲ್ಲಿ ಹಂಚಿಕೊಂಡ ಫೋಟೋಗಳನ್ನು ಸೂರ್ಯಗ್ರಹಣದ ಬಗ್ಗೆ ಸಾರ್ವಜನಿಕರ ಭಯ ಎಂದು ತಪ್ಪಾಗಿ ಚಿತ್ರಿಸಲಾಗಿದೆ.