Fake News - Kannada
 

ಟ್ವಿಟರ್‌ನ ಮಾಜಿ ಅಧಿಕಾರಿ ವಿಜಯಾ ಗಡ್ಡೆ ಅವರನ್ನು ಎಲಾನ್ ಮಸ್ಕ್ ಅವರು ಲೈವ್‌ ಪ್ರಸಾರದಲ್ಲೆ ವಜಾಗೊಳಿಸಿದ ದೃಶ್ಯಗಳೆಂಬಂತೆ ವಿಡಂಬನೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ

0

ಟ್ವಿಟರ್‌ನ ಹೊಸ ಮಾಲೀಕ ಎಲಾನ್ ಮಸ್ಕ್ ಅವರು ಟ್ವಿಟರ್‌ನ ಈ ಹಿಂದಿನ ನೀತಿ ಮುಖ್ಯಸ್ಥೆ ವಿಜಯ ಗಡ್ಡೆ ಅವರನ್ನು ನೇರ ಪ್ರಸಾರ ಕಾರ್ಯಕ್ರಮದಲ್ಲೆ ವಜಾ ಮಾಡಿದ್ದಾರೆ ಎಂದು ಪ್ರತಿಪಾದಿಸಿ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಟ್ವಿಟರ್‌ನ ನೀತಿ ವಿಭಾಗದ ಮುಖ್ಯಸ್ಥರನ್ನು ನೇರ ಪ್ರಸಾರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಎಲಾನ್ ಮಸ್ಕ್‌‌, ಕಾರ್ಯಕ್ರಮ ನಡೆಯುತ್ತಿರುವ ವೇಳೆಯಲ್ಲೆ ಅವರನ್ನು ವಜಾ ಮಾಡಿದ್ದಾರೆ ಎಂದು ಈ ಪೋಸ್ಟ್ ಹೇಳುತ್ತದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಟ್ವಿಟರ್‌ನ ಹಿಂದಿನ ನೀತಿ ಮುಖ್ಯಸ್ಥೆ ವಿಜಯಾ ಗಡ್ಡೆ ಅವರನ್ನು ನೇರ ಪ್ರಸಾರದಲ್ಲೆ ಎಲಾನ್ ಮಸ್ಕ್ ಅವರು ವಜಾ ಮಾಡುತ್ತಿರುವ ವೀಡಿಯೊ.

ವಾಸ್ತವ: ಇದು ಡೆನ್ಮಾರ್ಕ್ ಮೂಲದ ಕಂಟೆಂಟ್ ಪ್ರೊಡ್ಯೂಸರ್ ಡಾಮನ್ ಇಮಾನಿ ರಚಿಸಿದ ವಿಡಂಬನೆ ವೀಡಿಯೊವಾಗಿದೆ. ಜೋ ರೋಗನ್ ಅವರೊಂದಿಗಿನ ಎಲಾನ್ ಮಸ್ಕ್ ಮತ್ತು ವಿಜಯಾ ಗಡ್ಡೆ ಅವರ ಹಳೆಯ ಪಾಡ್‌ಕ್ಯಾಸ್ಟ್ ಸಂದರ್ಶನಗಳ ವೀಡಿಯೊ ಕ್ಲಿಪ್‌ಗಳನ್ನು ಎಡಿಟ್‌ ಮಾಡುವ ಮೂಲಕ ಈ ವೀಡಿಯೊವನ್ನು ರಚಿಸಲಾಗಿದೆ. 44 ಬಿಲಿಯನ್‌ ಡಾಲರ್‌ಗೆ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಎಲಾನ್ ಮಸ್ಕ್ ಟ್ವಿಟರ್‌ನ ಮಾಜಿ ಸಿಇಒ ಪರೇಶ್ ಅಗರವಾಲ್, ವಿಜಯ ಗಡ್ಡೆ ಮತ್ತು ಟ್ವಿಟರ್‌ನ ಇತರ ಉನ್ನತ ಅಧಿಕಾರಿಗಳನ್ನು ವಜಾ ಮಾಡಿದ್ದರು. ಆದರೆ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ ನೇರ ಪ್ರಸಾರದ ಸಮಯದಲ್ಲಿ ಅವರು ವಿಜಯಾ ಗಡ್ಡೆ ಅವರನ್ನು ವಜಾಗೊಳಿಸಲಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.

ಎಲಾನ್ ಮಸ್ಕ್ ಮತ್ತು ಟ್ವಿಟರ್‌ನ ಮಾಜಿ ನೀತಿ ಮುಖ್ಯಸ್ಥೆ ವಿಜಯಾ ಗಡ್ಡೆ ಇತ್ತೀಚೆಗೆ ಯಾವುದಾದರೂ ನೇರ ಪ್ರಸಾರ ಸಂದರ್ಶನದಲ್ಲಿ ಒಟ್ಟಿಗೆ ಭಾಗವಹಿಸಿದ್ದಾರೆಯೆ ಎಂದು ಪರಿಶೀಲಿಸಲು ನಾವು ಹುಡುಕಿದಾಗ, ಇಂಟರ್ನೆಟ್‌ನಲ್ಲಿ ಇದನ್ನು ಖಚಿತಪಡಿಸುವ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ. ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಈ ವೀಡಿಯೊ ವಿವರಗಳನ್ನು ಹುಡುಕಿದಾಗ, ವೀಡಿಯೊದಲ್ಲಿ ವಿಜಯಾ ಗಡ್ಡೆ ಅವರ ಪ್ರತಿಕ್ರಿಯೆಯ ಕ್ಲಿಪ್‌ಗಳು 2019 ರ ಮಾರ್ಚ್ ತಿಂಗಳಲ್ಲಿ ಜೋ ರೋಗನ್ ಅವರೊಂದಿಗೆ ಗಡ್ಡೆ ಅವರು ನಡೆಸಿದ ಪಾಡ್‌ಕ್ಯಾಸ್ಟ್ ಸಂದರ್ಶನದಿಂದ ತೆಗೆದುಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಟ್ವಿಟರ್‌‌ನ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ಜ್ಯಾಕ್ ಡಾರ್ಸೆ, ವಿಜಯ ಗಡ್ಡೆ ಮತ್ತು ಟಿಮ್ ಪೂಲ್ ಎಂಬ ಸ್ವತಂತ್ರ ಪತ್ರಕರ್ತ ಜೋ ರೋಗನ್ ಅವರೊಂದಿಗೆ ಈ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ್ದರು. ವೀಡಿಯೊದಲ್ಲಿ 26:31 ನಿಮಿಷಗಳ ವೇಳೆ ವಿಜಯಾ ಗಡ್ಡೆ ಅವರು ಟ್ವಿಟರ್‌ನಲ್ಲಿ ಉಲ್ಲಂಘನೆ ನಿಯಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವಲ್ಲಿ ಮತ್ತು ಪಾರದರ್ಶಕವಾಗಿಲ್ಲದಿರುವಲ್ಲಿ ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳುವ ದೃಶ್ಯಗಳನ್ನು ಕಾಣಬಹುದಾಗಿದೆ. ಜೋ ರೋಗನ್ ಅವರೊಂದಿಗಿನ ಈ ಹಳೆಯ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ ಎಲೋನ್ ಮಸ್ಕ್ ಇರಲಿಲ್ಲ.

ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಮತ್ತೆ ಹುಡುಕಿದಾಗ, ಪೋಸ್ಟ್‌ನಲ್ಲಿ ಇರುವ ಎಲಾನ್ ಮಸ್ಕ್ ಅವರಿರುವ ವೀಡಿಯೊ ಕ್ಲಿಪ್‌ಗಳನ್ನು ಎಲೋನ್ ಮಸ್ಕ್ ಅವರ 2018 ರ ಪಾಡ್‌ಕ್ಯಾಸ್ಟ್ ಸಂದರ್ಶನದಿಂದ ತೆಗೆದುಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ವೀಡಿಯೊದ 24:21 ಮತ್ತು 25:12 ನಿಮಿಷಗಳಲ್ಲಿ, ವೈರಲ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ತೋರಿಸಿರುವಂತೆ ಎಲಾನ್ ಮಸ್ಕ್ ಅದೇ ರೀತಿಯ ಕೈ ಮತ್ತು ಕಣ್ಸನ್ನೆಗಳನ್ನು ಮಾಡುವುದನ್ನು ಕಾಣಬಹುದಾಗಿದೆ. ಈ ಸಂದರ್ಶನದ ಸಮಯದಲ್ಲಿ, ಎಲೋನ್ ಮಸ್ಕ್ ಪೆನಾಲ್ಟಿ ಪದವನ್ನು ಉಲ್ಲೇಖಿಸಿಲ್ಲ ಜೊತೆಗೆ ತನ್ನ ಕಂಪನಿಯಿಂದ ಉದ್ಯೋಗಿಯನ್ನು ವಜಾಗೊಳಿಸಲಿಲ್ಲ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ಎಚ್ಚರಿಕೆಯಿಂದ ಗಮನಿಸಿದಾಗ, ವೀಡಿಯೊ ಮೇಲಿನ ಎಡಭಾಗದಲ್ಲಿ ‘@damonimani’ ವಾಟರ್‌ಮಾರ್ಕ್ ಅನ್ನು ನೋಡಬಹುದು. ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೊವನ್ನು ಹುಡುಕಿದಾಗ, ಡೆನ್ಮಾರ್ಕ್ ಮೂಲದ ಕಂಟೆಂಟ್ ಪ್ರೊಡ್ಯೂಸರ್ ಡಾಮನ್ ಇಮಾನಿ ಅವರ ಇನ್ಸ್‌‌ಟಾಗ್ರಾಮ್‌‌ ಹ್ಯಾಂಡಲ್‌ನಲ್ಲಿ ನಾವು ಅದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಡ್ಯಾಮನ್ ಇಮಾನಿ ಅವರು ತಮ್ಮ ವಿಡಿಯೊ ವಿವರಣೆಯಲ್ಲಿ “ಫೂಟೇಜ್: ಎಲೋನ್ ಮಸ್ಕ್ ಟ್ವಿಟರ್‌ನ ಸೆನ್ಸಾರ್ಶಿಪ್ ಮುಖ್ಯಸ್ಥೆಯನ್ನು ನೇರ ಪ್ರಸಾರದಲ್ಲಿ ವಜಾಗೊಳಿಸಿದ್ದಾರೆ! – ವಿಡಂಬನೆ!” ಎಂದು ಬರೆದಿದ್ದಾರೆ.

44 ಬಿಲಿಯನ್‌ ಡಾಲರ್‌ಗೆ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಎಲಾನ್ ಮಸ್ಕ್ ಟ್ವಿಟರ್‌ನ ಮಾಜಿ ಸಿಇಒ ಪರಾಗ್ ಅಗರವಾಲ್ ಮತ್ತು ವಿಜಯ ಗಡ್ಡೆ ಸೇರಿದಂತೆ ಕಂಪೆನಿಯ ಇತರ ಉನ್ನತ ಮಟ್ಟದ ಅಧಿಕಾರಿಗಳನ್ನು ವಜಾ ಮಾಡಿದ್ದು, ಟ್ವಿಟರ್‌ನ ಏಕೈಕ ನಿರ್ದೇಶಕರಾಗಿದ್ದಾರೆ. ಆದರೆ, ಪೋಸ್ಟ್‌ನಲ್ಲಿ ಹೇಳಿಕೊಂಡಂತೆ ಅವರು ನೇರ ಪ್ರಸಾರದ ಸಮಯದಲ್ಲಿ ವಿಜಯಾ ಗಡ್ಡೆ ಅವರನ್ನು ವಜಾಗೊಳಿಸಲಿಲ್ಲ.

ಸಂಕ್ಷಿಪ್ತವಾಗಿ ಹೇಳಬಹುದಾದರೆ, ನೇರ ಪ್ರಸಾರದ ಸಮಯದಲ್ಲಿ ಎಲಾನ್ ಮಸ್ಕ್ ವಿಜಯಾ ಗಡ್ಡೆ ಅವರನ್ನು ಕೆಲಸದಿಂದ ವಜಾಗೊಳಿಸುವ ವಿಡಿಯೊ ವಿಡಂಬನೆಯ ದೃಶ್ಯವಾಗಿದ್ದು, ಅದು ಎಡಿಟ್‌ ಮಾಡಿ ರಚಿಸಲಾಗಿರುವ ವಿಡಿಯೊವಾಗಿದೆ.

Share.

Comments are closed.

scroll