Fake News - Kannada
 

CAA ಮತ್ತು NRC ವಿರೋಧಿ ಪ್ರತಿಭಟನೆಗಳ ಹಳೆಯ ವೀಡಿಯೊವನ್ನು ತ್ರಿಪುರಾ ಕೋಮು ಹಿಂಸಾಚಾರದ ವಿರುದ್ಧ ಕೇರಳ ಮುಸ್ಲಿಮರು ಪ್ರತಿಭಟಿಸುತ್ತಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

0

ತ್ರಿಪುರಾ ಹಿಂಸಾಚಾರದ ವಿರುದ್ಧ ಕೇರಳ ಮುಸ್ಲಿಮರು ಪ್ರತಿಭಟಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಪ್ರತಿಭಟನಾ ರ್ಯಾಲಿಯ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿದೆ. ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಘರ್ಷಣೆಗಳ ಹಿನ್ನಲೆಯಲ್ಲಿ  ಇದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೊ ಬಗ್ಗೆಗಿನ ಪ್ರತಿಪಾದನೆಯ ವಾಸ್ತವಾಂಶವನ್ನು ಈ ಲೇಖನದಲ್ಲಿ ಪರಿಶೀಲಿಸೋಣ.

ಪ್ರತಿಪಾದನೆ: ತ್ರಿಪುರಾ ಕೋಮು ಹಿಂಸಾಚಾರದ ವಿರುದ್ಧ ಕೇರಳದ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋ.

ವಾಸ್ತವ: 2020 ರ ಜನವರಿಯಲ್ಲಿ ಕೇರಳದ ಮನ್ನಾರ್‌ಕಾಡ್‌‌ನಲ್ಲಿ ಆಯೋಜಿಸಲಾದ CAA ಮತ್ತು NRC ವಿರೋಧಿ ಪ್ರತಿಭಟನೆಗಳ ವೀಡಿಯೊ ಇದಾಗಿದೆ. ಸ್ಥಳೀಯ ಸುದ್ದಿ ಸಂಸ್ಥೆಗಳು ಈ ಪ್ರತಿಭಟನೆಗಳನ್ನು ವರದಿ ಮಾಡಿವೆ. ಈ ವಿಡಿಯೊಗೂ ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಘರ್ಷಣೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

2020 ರ ಜನವರಿಯಲ್ಲಿ ಕೇರಳದ ಮನ್ನಾರ್‌‌ಕಾಡ್‌ನಲ್ಲಿ CAA ಮತ್ತು NRC ಅನುಷ್ಠಾನದ ವಿರುದ್ಧ ನಡೆಸುತ್ತಿರುವ ಪ್ರತಿಭಟನಾ ರ್ಯಾಲಿಯ ವಿಡಿಯೊ ಇದಾಗಿದೆ. ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ಗಳ ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ, ಈ ವಿಡಿಯೊದ ಸುದೀರ್ಘ ಆವೃತ್ತಿಯನ್ನು ಹಂಚಿಕೊಂಡ Instagram ಪೋಸ್ಟ್‌ ನಮಗೆ ಸಿಕ್ಕಿದೆ. ಈ ವೀಡಿಯೊವನ್ನು #rejectnrc, #rejectcaa & #Mannarkkad ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈ ದೃಶ್ಯಗಳು CAA ಮತ್ತು NRC ವಿರೋಧಿ ಪ್ರತಿಭಟನೆಗಳಾಗಿದೆ ಎಂದು ಈ ಹ್ಯಾಶ್‌ ಟ್ಯಾಗ್‌ಗಳಿಂದ ತಿಳಿದುಬರುತ್ತದೆ.

ಇದಲ್ಲದೆ, ವೈರಲ್ ವೀಡಿಯೊದಲ್ಲಿರುವ ಪ್ರತಿಭಟನಾಕಾರರು ಹಿಡಿದಿರುವ ಬ್ಯಾನರ್‌ನಲ್ಲಿ ‘ಸಾಂವಿಧಾನಿಕ ರಕ್ಷಣಾ ರ್ಯಾಲಿ’ ಮತ್ತು ‘03 ಜನವರಿ 2020’ ಎಂಬ ಪದಗಳನ್ನು ನಾವು ಗುರುತಿಸಬಹುದು.

ಇನ್ಸ್‌ಸ್ಟಾಗ್ರಾಂ ವಿಡಿಯೊದ 9:55 ರಿಂದ 10:27 ಸಮಯದವರೆಗೆ, ಪ್ರತಿಭಟನಾಕಾರರು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವುದನ್ನು ಕಾಣಬಹುದು. 2020 ರ ಜನವರಿ  06 ರಂದು ಪ್ರಕಟವಾದ ಮಲಯಾಳಿ ಸುದ್ದಿಯೊಂದು, ಕೇರಳದ ಮನ್ನಾರ್‌‌ಕಾಡ್‌ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳ ನಡುವೆ ಆಂಬ್ಯುಲೆನ್ಸ್ ಹಾದುಹೋಗುವ ಈ ನಿರ್ದಿಷ್ಟ ಘಟನೆಯನ್ನು ವರದಿ ಮಾಡಿದೆ. ಈ ಲೇಖನದಲ್ಲಿ ಘಟನೆಯ ಮತ್ತಷ್ಟು ಚಿತ್ರಗಳು ಮತ್ತು ವೀಡಿಯೊವನ್ನು ಪ್ರಕಟಿಸಲಾಗಿದೆ. ಆದ್ದರಿಂದ, ಇತ್ತೀಚಿಗೆ ತ್ರಿಪುರಾದಲ್ಲಿ ನಡೆದಿರುವ ಕೋಮು ಘರ್ಷಣೆಗೂ ವೈರಲ್ ಆಗಿರುವ ವಿಡಿಯೋಗೂ ಯಾವುದೇ ಸಂಬಂಧವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಮನ್ನಾರ್‌‌ಕಾಡ್‌ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಪ್ರತಿಭಟನೆಗಳ ನಡುವೆ ಹಾದುಹೋಗುವ ಆಂಬ್ಯುಲೆನ್ಸ್ ಬಗ್ಗೆ ವರದಿ ಮಾಡಿದ ಮತ್ತೊಂದು ಆನ್‌ಲೈನ್ ಸುದ್ದಿ ಲೇಖನವನ್ನು ಇಲ್ಲಿ ಓದಬಹುದು. ಇದಲ್ಲದೆ, ವೈರಲ್ ವೀಡಿಯೊದ ವಿಭಿನ್ನ ಆವೃತ್ತಿಯನ್ನು ಮನ್ನಾರ್‌ಕಾಡ್‌‌ಲೈವ್‌‌ ಎಂಬ ಯುಟ್ಯೂಬ್ ಚಾನೆಲ್ ‘ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮನ್ನಾರ್‌‌ಕಾಡ್‌ನಲ್ಲಿ ನಡೆದ ಮಹಾರ್‍ಯಾಲಿ’ ಎಂಬ ಶೀರ್ಷಿಕೆಯೊಂದಿಗೆ ಮಲಯಾಳಂ ಲಿಪಿಯಲ್ಲಿ ಅಪ್‌ಲೋಡ್ ಮಾಡಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕೇರಳದಲ್ಲಿ CAA ಮತ್ತು NRC ವಿರೋಧಿ ಪ್ರತಿಭಟನೆಗಳ ಹಳೆಯ ವೀಡಿಯೊವನ್ನು ಕೇರಳ ಮುಸ್ಲಿಮರು ತ್ರಿಪುರಾ ಕೋಮು ಹಿಂಸಾಚಾರದ ವಿರುದ್ಧ ಪ್ರತಿಭಟಿಸುತ್ತಿತ್ತಾರೆ ಎಂದು ತಪ್ಪಾಗಿ ಹಂಚಲಾಗುತ್ತಿದೆ.

Share.

About Author

Comments are closed.

scroll