ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಮಹಿಳೆಯರ ಮೇಲೆ ಕಬ್ಬಿಣದ ರಾಡ್ಗಳನ್ನು ಬಳಸಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ತಮ್ಮ ಮನೆಯ ಮುಂದೆ ಕಸವನ್ನು ಎಸೆಯಬೇಡಿ ಎಂದು ಹೇಳಿದ್ದಕ್ಕಾಗಿ ಪಕ್ಕದ ಮನೆಯಲ್ಲಿದ್ದ ಹಿಂದೂ ಕುಟುಂಬದ ಮೇಲೆ ಅಬ್ದುಲ್ ಎಂಬ ವ್ಯಕ್ತಿ ಹಲ್ಲೆ ನಡೆಸಿದ್ದಾನೆ ಎಂದು ಈ ಪೋಸ್ಟ್ನಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಪ್ರತಿಪಾದನೆ : ಮಿರ್ಜಾಪುರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಮಹಿಳೆಯರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ವಿಡಿಯೋ.
ನಿಜಾಂಶ : ಪೋಸ್ಟ್ನಲ್ಲಿ ಹಂಚಿಕೊಂಡ ಘಟನೆಯು ಜನವರಿ 2022 ರಲ್ಲಿ ಉತ್ತರ ಪ್ರದೇಶದ ಮಿರ್ಜಾಪುರದ ಕೊತ್ವಾಲಿ ಕತ್ರಾ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯಲ್ಲಿ ಹಲ್ಲೆ ಮಾಡಿದ ವ್ಯಕ್ತಿ ಮತ್ತು ಸಂತ್ರಸ್ತರು ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಮಿರ್ಜಾಪುರ ಪೊಲೀಸರು ಈ ಮಾಹಿತಿಯನ್ನು 06 ಏಪ್ರಿಲ್ 2022 ರಂದು ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಕೋಮು ವೈಷಮ್ಯದ ಹಿನ್ನಲೆ ಇಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವೀಡಿಯೊದಲ್ಲಿನ ಸ್ಕ್ರೀನ್ಶಾಟ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು, ಹಲವು ಸ್ಥಳೀಯ ಸುದ್ದಿ ವಾಹಿನಿಗಳು ಜನವರಿ 2022 ರಲ್ಲಿ ಅದೇ ವೀಡಿಯೊವನ್ನು ಪ್ರಕಟಿಸಿರುವುದು ಕಂಡುಬಂದಿದೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಸ್ಥಳೀಯ ಸುದ್ದಿ ವಾಹಿನಿಗಳು ಕೊತ್ವಾಲಿ ಕತ್ರಾ ಪ್ರದೇಶದಲ್ಲಿ ಕಸ ವಿಲೇವಾರಿ ಪ್ರಾರಂಭವಾದ ಜಗಳ ಮಾತಿಗೆ ಮಾತು ನಡೆದು ವಿಕೋಪಕ್ಕೆ ತಿರುಗಿ ಯುವಕನೊಬ್ಬ ಮಹಿಳೆಯರ ಮೇಲೆ ಕಬ್ಬಿಣದ ರಾಡ್ಗಳಿಂದ ಹಲ್ಲೆ ನಡೆಸಿದ್ದಾನೆ ಎಂದು ವರದಿ ಮಾಡಿದೆ. ಸಂತ್ರಸ್ತ ಮಹಿಳೆ ಹಿಂದೂ ಕುಟುಂಬಕ್ಕೆ ಸೇರಿದವರು ಎಂದು ಈ ಸುದ್ದಿ ವಾಹಿನಿಗಳು ಎಲ್ಲಿಯೂ ವರದಿ ಮಾಡಿಲ್ಲ.

ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ವೈಷಮ್ಯದ ನಿರೂಪಣೆಯೊಂದಿಗೆ ವೈರಲ್ ಮಾಡಲಾಗಿದ್ದು ಇದರ ಸತ್ಯಾಸತ್ಯೆಗಳನ್ನು ತಿಳಿಯಲು‘ಮಿರ್ಜಾಪುರ ಅಧಿಕೃತ’ ಮಾಧ್ಯಮ ಚಾನೆಲ್ ಈ ಮಿರ್ಜಾಪುರ ಪೊಲೀಸರನ್ನು ಸಂಪರ್ಕಿಸಿತ್ತು. ಮಿರ್ಜಾಪುರ ಹೆಚ್ಚುವರಿ ಎಸ್ಪಿ ಸಂಜಯ್ ಕುಮಾರ್ ಅವರು ಘಟನೆಯು 16 ಜನವರಿ 2022 ರಂದು ನಡೆದಿದೆ ಎಂದು ದೃಢಪಡಿಸಿದರು ಮತ್ತು ಈ ಘಟನೆಯ ಆರೋಪಿಗಳು ಮತ್ತು ಸಂತ್ರಸ್ತರು ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಮುಖ ಆರೋಪಿಯ ಹೆಸರು ಸಲ್ಮಾನ್ ಎಂದು ಉಲ್ಲೇಖಿಸಿದ ಅವರು, ಅಕ್ಕ ಪಕ್ಕದ ಮನೆಗಳಲ್ಲಿ ವಾಸಿಸುತ್ತಿರುವ ಇವರು ಕಸ ವಿಲೇವಾರಿ ಕಾರಣಕ್ಕೆ ಸಣ್ಣ ಜಗಳ ಶುರುವಾಗಿ ನಂತರ ವಿಕೋಪಕ್ಕೆ ತಿರುಗಿದ್ದು ಆಗ ಯುವಕನೊಬ್ಬ ರಾಡ್ ನಿಂದ ಮಹಿಳೆ ಮೇಲೆ ಹಲ್ಲೆ ನೆಡೆಸಿದ್ದಾನೆ ಎಂದು ಹೇಳಿದರು. ಈ ಘಟನೆಗೆ ಸಂಬಂಧಿಸಿದಂತೆ ಕೋಟ್ವಾಲಿ ಕತ್ರಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಸಂಜಯ್ ಕುಮಾರ್ ಒತ್ತಿ ಹೇಳಿದರು. ಮಿರ್ಜಾಪುರ ಪೊಲೀಸರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಅದೇ ಸ್ಪಷ್ಟೀಕರಣದ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.
‘UPCOP’ ಮೊಬೈಲ್ ಅಪ್ಲಿಕೇಶನ್ನಲ್ಲಿ ಈ ಘಟನೆಯ ಎಫ್ಐಆರ್ ಪ್ರತಿಗಳಲ್ಲಿ ಒಂದು ಲಭ್ಯವಾಗಿದ್ದು ಎಫ್ಐಆರ್ ನಲ್ಲಿ ದೂರುದಾರರ (ಸಂತ್ರಸ್ತರ) ಹೆಸರನ್ನು ನಸ್ರೀನ್ ಬೇಗಂ ಎಂದು ನಮೂದಿಸಲಾಗಿದ್ದು, ಆರೋಪಿಗಳ ಹೆಸರು ಸಲ್ಮಾನ್, ಅಂಜುಮ್, ತಹ್ವರ್ ಪೈತಾರ್, ಬಿತ್ತಿ ತಮನ್ನಾ ಮತ್ತು ಉರ್ಫ್ ಆಯೇಶಾ ಎಂದು ನಮೂದಿಸಲಾಗಿದೆ. ಈ ಎಲ್ಲಾ ಆಧಾರಗಳಿಂದ ಪೋಸ್ಟ್ನಲ್ಲಿ ಹಂಚಿಕೊಂಡ ವೀಡಿಯೊವು ಎರಡು ಮುಸ್ಲಿಂ ಕುಟುಂಬಗಳ ನಡುವಿನ ವಿವಾದ ಎಂದು ದೃಢವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಿರ್ಜಾಪುರದಲ್ಲಿ ಎರಡು ಮುಸ್ಲಿಂ ಕುಟುಂಬಗಳ ನಡುವಿನ ವಿವಾದದ ವೀಡಿಯೊವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.