Fake News - Kannada
 

2025 ರ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳ ವಿರುದ್ಧ ಬಿಹಾರದ ಜನರು ದೊಡ್ಡ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿಕೊಂಡು ಸಂಬಂಧವಿಲ್ಲದ ವೀಡಿಯೊಗಳನ್ನು ಶೇರ್ ಮಾಡಲಾಗುತ್ತಿದೆ

0

ನವೆಂಬರ್ 14, 2025 ರಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದವು. ಈ ಚುನಾವಣೆಯಲ್ಲಿ ಬಿಜೆಪಿಯ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ರಾಜ್ಯದ 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್, ಆರ್‌ಜೆಡಿ ಮತ್ತು ಇತರ ಪಕ್ಷಗಳ ಮೈತ್ರಿಕೂಟವಾದ ಎಂಜಿಬಿ ಮೈತ್ರಿಕೂಟವು 35 ಸ್ಥಾನಗಳನ್ನು ಗೆದ್ದಿದೆ. ಇತರೆ 5 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಭಾರತದ ಚುನಾವಣಾ ಆಯೋಗ (ECI) ಘೋಷಿಸಿದ 2025 ರ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ವಿರೋಧಿಸಿ ಬಿಹಾರದ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ (ಇಲ್ಲಿ).  ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ನವೆಂಬರ್ 14, 2025 ರಂದು ಇಸಿಐ  ಘೋಷಿಸಿದ 2025 ರ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ವಿರೋಧಿಸಿ ಬಿಹಾರದ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಫ್ಯಾಕ್ಟ್: ನವೆಂಬರ್ 14, 2025 ರಂದು ಇಸಿಐ ಘೋಷಿಸಿದ 2025 ರ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ವಿರೋಧಿಸಿ ಬಿಹಾರದ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ವರದಿಗಳು/ಆಧಾರಗಳು ಲಭ್ಯವಿಲ್ಲ. ಅಲ್ಲದೆ, ಈ ವೈರಲ್ ವೀಡಿಯೊಗಳು 2025 ರ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಘೋಷಿಸುವ ಮೊದಲಿನಿಂದಲೂ  ಇಂಟರ್ನೆಟ್ ನಲ್ಲಿ ಲಭ್ಯವಿವೆ. ಆದುದರಿಂದ, ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪು

ಮೊದಲಿಗೆ, ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ, ನವೆಂಬರ್ 14, 2025 ರಂದು ಇಸಿಐ  ಘೋಷಿಸಿದ 2025 ರ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ವಿರೋಧಿಸಿ ಬಿಹಾರದ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆಯೇ ಎಂದು ತಿಳಿಯಲು ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿ  ಇಂಟರ್ನೆಟ್ ನಲ್ಲಿ ಹುಡುಕಿದಾಗ, ವೈರಲ್  ಕ್ಲೈಮನ್ನು ಸಮರ್ಥಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು/ಆಧಾರಗಳು ಲಭ್ಯವಾಗಲಿಲ್ಲ. ಒಂದು ವೇಳೆ 2025 ರ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ವಿರೋಧಿಸಿ ಬಿಹಾರದ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರೆ, ಆ ವಿಷಯವನ್ನು ಅನೇಕ ಮಾಧ್ಯಮ ಸಂಸ್ಥೆಗಳು ಖಂಡಿತವಾಗಿ ವರದಿ ಮಾಡುತ್ತಿದ್ದವು.

ಮುಂದೆ, ಮೊದಲ ವೈರಲ್ ವೀಡಿಯೊಗೆ ಸಂಬಂಧಿಸಿದ ವಿವರಗಳಿಗಾಗಿ, ಆ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ವೀಡಿಯೊ ನವೆಂಬರ್ 14, 2025 ರಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಘೋಷಣೆಯಾಗುವ ಮೊದಲೇ ಇಂಟರ್ನೆಟ್ ನಲ್ಲಿ ಲಭ್ಯವಿತ್ತು ಎಂದು ತಿಳಿದುಬಂದಿದೆ. ಇದೇ ದೃಶ್ಯಗಳನ್ನು ಸೆಪ್ಟೆಂಬರ್ 2025 ರಲ್ಲಿ ಹಲವಾರು ಜನರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಸೆಪ್ಟೆಂಬರ್ 2025 ರಲ್ಲಿ ನಿಧನರಾದ ಪ್ರಸಿದ್ಧ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಅವರ ಅಂತಿಮ ಯಾತ್ರೆಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ (ಇಲ್ಲಿ, ಇಲ್ಲಿ, ಇಲ್ಲಿ, & ಇಲ್ಲಿ). ನಾಗಾಲ್ಯಾಂಡ್‌ನ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವರು ಸಹ ಜುಬೀನ್ ಗಾರ್ಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಇದೇ ವೀಡಿಯೊವನ್ನು ಶೇರ್ ಮಾಡಿದ್ದು, ಜುಬೀನ್ ಗಾರ್ಗ್ ಅವರು ಸೆಪ್ಟೆಂಬರ್ 19, 2025 ರಂದು ಸಿಂಗಾಪುರದಲ್ಲಿ ನಿಧನರಾಗಿದ್ದರು.

ಅದೇ ರೀತಿ, ಮೊದಲ ವೀಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ‘ವೋಟ್ ಚೋರಿ’ ಬಗ್ಗೆ ಮಾತನಾಡುತ್ತಿರುವುದನ್ನು ನಾವು ನೋಡಬಹುದು. ಈ ದೃಶ್ಯಗಳು ಸಹ 2025 ರ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಘೋಷಣೆಯಾಗುವ ಮೊದಲಿನಿಂದಲೂ (ಕನಿಷ್ಠ ನವೆಂಬರ್ 09, 2025 ರಿಂದಲೇ)  ಇಂಟರ್ನೆಟ್ ನಲ್ಲಿ ಲಭ್ಯವಿವೆ.

ಎರಡನೇ ವೈರಲ್ ವೀಡಿಯೊಗೆ ಸಂಬಂಧಿಸಿದ ವಿವರಗಳಿಗಾಗಿ, ಆ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ವೀಡಿಯೊ ಕೂಡ ನವೆಂಬರ್ 14, 2025 ರಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಘೋಷಣೆಯಾಗುವ ಮೊದಲಿನಿಂದಲೇ  ಇಂಟರ್ನೆಟ್ ನಲ್ಲಿ ಲಭ್ಯವಿತ್ತು ಎಂದು ತಿಳಿದುಬಂದಿದೆ.

ಈ ವೀಡಿಯೊವನ್ನು RJD ಅಭ್ಯರ್ಥಿ ಕೇಸರಿ ಲಾಲ್ ಯಾದವ್ ಅವರು ನವೆಂಬರ್ 09, 2025 ರಂದು ಬಿಹಾರದ ನಹಾಸ್ ರೂಪೌಲಿಯ ಖಂಗ್ರೈತಾ ಪ್ರೌಢಶಾಲೆ ಬಳಿ ನಡೆಸಿದ ಚುನಾವಣಾ ಪ್ರಚಾರ ಸಭೆಗೆ ಸಂಬಂಧಿಸಿದೆ ಎಂದು ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ (ಇಲ್ಲಿ, ಇಲ್ಲಿ). ಅಲ್ಲದೆ, ಈ ವೀಡಿಯೊದಲ್ಲಿ ನಾವು ಆರ್‌ಜೆಡಿ ಪಕ್ಷದ ಧ್ವಜಗಳನ್ನು ನೋಡಬಹುದು.  ಆದರೆ, ಈ ವೀಡಿಯೊವು ಕೇಸರಿ ಲಾಲ್ ಯಾದವ್ ಅವರ ಚುನಾವಣಾ ಸಭೆಗೆ ಸಂಬಂಧಿಸಿದ್ದೇ ಅಥವಾ ಇಲ್ಲವೇ ಎಂಬುದನ್ನು ನಾವು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಿಲ್ಲ.

​ಕೊನೆಯದಾಗಿ  ಹೇಳುವುದಾದರೆ, ನವೆಂಬರ್ 14, 2025 ರಂದು ಇಸಿಐ ಘೋಷಿಸಿದ 2025 ರ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳಿಗೆ ವಿರೋಧವಾಗಿ ಬಿಹಾರದ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿಕೊಂಡು ಸಂಬಂಧವಿಲ್ಲದ ವೀಡಿಯೊಗಳನ್ನು  ಶೇರ್ ಮಾಡಲಾಗಿದೆ. 

Share.

Comments are closed.

scroll