Fake News - Kannada
 

ಪ್ಲಾಸ್ಟಿಕ್ ಕಣಗಳ ಉತ್ಪಾದನಾ ಪ್ರಕ್ರಿಯೆಯನ್ನು ‘ಪ್ಲಾಸ್ಟಿಕ್ ಅಕ್ಕಿ ಉತ್ಪಾದನೆ ಮಾಡುತ್ತಿದ್ದಾರೆ’ ಎಂದು ಹಂಚಿಕೊಳ್ಳಲಾಗಿದೆ

0

ಅಕ್ಕಿ ಗಿರಣಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಉತ್ಪಾದನೆ ಮಾಡಲಾಗುತ್ತಿರುವ ದೃಶ್ಯಗಳು ಎಂದು ಪ್ರತಿಪಾದಿಸಿ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಹಾಳೆಗಳನ್ನು ಧಾನ್ಯಗಳ ಆಕಾರದಲ್ಲಿ ಸಣ್ಣ ಪ್ಲಾಸ್ಟಿಕ್ ಉಂಡೆಗಳಾಗಿ ಪರಿವರ್ತಿಸುವ ಯಂತ್ರವನ್ನು ಈ ವೀಡಿಯೊ ತೋರಿಸುತ್ತದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಅಕ್ಕಿ ಗಿರಣಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ತಯಾರಿಸುತ್ತಿರುವ ವಿಡಿಯೊ.

ವಾಸ್ತವ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಕೊರಿಯಾ ಮೂಲದ ಕಂಪನಿಯಲ್ಲಿ ‘ಪ್ಲಾಸ್ಟಿಕ್ ಗ್ರ್ಯಾನ್ಯುಲೇಷನ್’(ಪ್ಲಾಸ್ಟಿಕ್‌ ಕಣಗಳ ಉತ್ಪಾದನಾ ಪ್ರಕ್ರಿಯೆ) ಪ್ರಕ್ರಿಯೆಯನ್ನು ತೋರಿಸುತ್ತದೆ. ಹಲವಾರು ಪ್ಲಾಸ್ಟಿಕ್ ಉತ್ಪಾದನಾ ಕಂಪನಿಗಳು ಮರು-ಬಳಕೆ ಮಾಡಿದ ಸಣ್ಣ ಪ್ಲಾಸ್ಟಿಕ್ ಕಣಗಳನ್ನು ಉತ್ಪಾದಿಸುತ್ತವೆ. ಸರಕುಗಳನ್ನು ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡುವ ಸಮಯದಲ್ಲಿ ಅದು ಒಡೆಯದಿರಲು ಮತ್ತು ಮುರಿಯದೇ ಇರಲು ಬೇಕಾಗಿ ಕುಶನ್ ಮಾಡಲು ಬಳಸಬಹುದು. ಈ ವಿಡಿಯೋದಲ್ಲಿ ಪ್ಲಾಸ್ಟಿಕ್ ಅಕ್ಕಿ ಉತ್ಪಾದನೆಯಾಗುತ್ತಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ರಿವರ್ಸ್‌ ಇಮೇಜ್‌ ಹುಡುಕಾಟ ನಡೆಸಿದಾಗ, ಚೀನಾದ ಸುದ್ದಿ ವೆಬ್‌ಸೈಟ್ ‘Xinhuanet.com’ ಪ್ರಕಟಿಸಿದ ಲೇಖನದಲ್ಲಿ ಕೂಡಾ ಇದೇ ರೀತಿಯ ಚಿತ್ರಗಳು ಕಂಡುಬಂದಿದೆ. ಪ್ಲಾಸ್ಟಿಕ್‌ ಅಕ್ಕಿ ತಯಾರಿಸಲಾಗುತ್ತಿದೆ ಎಂಬ ಸುದ್ದಿಯೊಂದಿಗೆ ಈ ವೀಡಿಯೊ 2011 ರಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ ಎಂದು ವರದಿಯಾಗಿದೆ. ‘Xinhuanet.com’ ಇದನ್ನು ಪ್ಲಾಸ್ಟಿಕ್ ಉತ್ಪಾದನಾ ಕಂಪನಿಯಲ್ಲಿ ಪ್ಲಾಸ್ಟಿಕ್ ಗ್ರ್ಯಾನ್ಯುಲೇಷನ್ ಪ್ರಕ್ರಿಯೆಯ ದೃಶ್ಯಗಳು ಎಂದು ವರದಿ ಮಾಡಿದೆ.

ಲೇಖನದಲ್ಲಿ ಒದಗಿಸಲಾದ ವಿವರಗಳ ಪ್ರಕಾರ, ಹಲವಾರು ಪ್ಲಾಸ್ಟಿಕ್ ಉತ್ಪಾದನಾ ಕಂಪನಿಗಳು ಪ್ಲಾಸ್ಟಿಕ್ ಪೆಲೆಟೈಜರ್ ಯಂತ್ರಗಳನ್ನು ಬಳಸಿಕೊಂಡು ಈ ಮರು-ಬಳಕೆಯ ಪ್ಲಾಸ್ಟಿಕ್ ಉಂಡೆಗಳನ್ನು ಉತ್ಪಾದಿಸುತ್ತವೆ. ಈ ಅರೆ-ಸಿದ್ಧಪಡಿಸಿದ ಕಚ್ಚಾ ಪ್ಲಾಸ್ಟಿಕ್ ಕಣಗಳನ್ನು ಸಾಮಾನ್ಯವಾಗಿ ಸಂಗ್ರಹಣೆ ಮತ್ತು ಸಾಗಣೆಯ ಸಮಯದಲ್ಲಿ ವಸ್ತುಗಳನ್ನು ಒಡೆಯದೇ ಇರಲು ಅಥವಾ ಮುರಿಯದೇ ಇರಲು ಕುಶನ್ ಮಾಡಲು ಬಳಸಲಾಗುತ್ತದೆ. ಪ್ಲಾಸ್ಟಿಕ್ ಉತ್ಪಾದನಾ ಕಂಪನಿಯಲ್ಲಿ ಪ್ಲಾಸ್ಟಿಕ್ ಕಣಗಳ ಉತ್ಪಾದನೆ ಮಾಡುತ್ತಿರುವ ಇದೇ ರೀತಿಯ ವೀಡಿಯೊವನ್ನು ಇಲ್ಲಿ ನೋಡಬಹುದು.

ಅಲ್ಲದೆ, ಇನ್ನೊಬ್ಬ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ವೀಡಿಯೊದ ಸ್ಪಷ್ಟ ಆವೃತ್ತಿಯನ್ನು ನಾವು ಗಮನಿಸಿದ್ದೇವೆ. ಇದರಲ್ಲಿ ಪ್ಲಾಸ್ಟಿಕ್ ಕಣಗಳನು ತುಂಬಿಸಿರುವ ಬ್ಯಾಗ್ ಮೇಲೆ ಬರೆದಿರುವ ‘ಇವಿಎ’ ಅನ್ನು ನಾವು ನೋಡಿದ್ದೇವೆ. ಎಥಿಲೀನ್ ವಿನೈಲ್ ಅಸಿಟೇಟ್ (ಇವಿಎ) ಪ್ಲಾಸ್ಟಿಕ್ ಕೈಗಾರಿಕೆಯಲ್ಲಿ ಈ ಪ್ಲಾಸ್ಟಿಕ್‌ ಕಣಗಳನ್ನು ತಯಾರಿಸಲಾಗುತ್ತದೆ. ಇದೇ ರೀತಿಯ ಬ್ಯಾಗ್ ವಿವಿಧ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಕಂಡುಬಂದಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಬ್ಯಾಗ್‌ನಲ್ಲಿ, ನಾವು ‘ಹನ್ವಾ ಟೋಟಲ್ ಪೆಟ್ರೋಕೆಮಿಕಲ್ ಕಂಪನಿ ಲಿಮಿಟೆಡ್’ ಲೋಗೋವನ್ನು ಕೂಡಾ ನೋಡಬಹುದು. ಹನ್ವಾ ಟೋಟಲ್‌ ಪೆಟ್ರೋಕೆಮಿಕಲ್ ಕಂ. ಲಿಮಿಟೆಡ್ ದಕ್ಷಿಣ ಕೊರಿಯಾ ಮೂಲದ ರಾಸಾಯನಿಕ ಕಂಪನಿಯಾಗಿದೆ. ಹನ್ವಾ ಟೋಟಲ್ ಪೆಟ್ರೋಕೆಮಿಕಲ್ ಕಂ. ಲಿಮಿಟೆಡ್‌ನಲ್ಲಿ EVA ಪ್ಲಾಸ್ಟಿಕ್ ಗ್ರ್ಯಾನ್ಯೂಲ್ ಉತ್ಪಾದನೆಯ ವಿವರಗಳನ್ನು ಇಲ್ಲಿ ನೋಡಬಹುದು.

2016 ರಲ್ಲಿ ನೈಜೀರಿಯಾ ಕಸ್ಟಮ್ಸ್ ಅಧಿಕಾರಿಗಳು 25 ಕೆಜಿಯ 102 ಅಕ್ಕಿ ಚೀಲಗಳನ್ನು “ಪ್ಲಾಸ್ಟಿಕ್ ಅಕ್ಕಿ” ತುಂಬಿದ್ದಾರೆ ಎಂದು ಆರೋಪಿಸಿ ವಶಪಡಿಸಿಕೊಂಡಿದ್ದರು. ನಂತರ, ನೈಜೀರಿಯಾ ಸರ್ಕಾರವು ವಶಪಡಿಸಿಕೊಂಡ ಅಕ್ಕಿ ಚೀಲಗಳಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ಹೊಂದಿಲ್ಲ ಎಂದು ಅಧಿಕೃತವಾಗಿ ಘೋಷಿಸಿತು. ಹಲವಾರು ಸುದ್ದಿ ವೆಬ್‌ಸೈಟ್‌ಗಳು ‘ಪ್ಲಾಸ್ಟಿಕ್ ಅಕ್ಕಿ’ ಪರಿಕಲ್ಪನೆಯು ಸುಳ್ಳು ಎಂದು ವರದಿ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಪ್ಲಾಸ್ಟಿಕ್ ಕಣಗಳ ಉತ್ಪಾದನಾ ಪ್ರಕ್ರಿಯೆಯನ್ನು ತೋರಿಸುತ್ತದೆಯೇ ಹೊರತು ಪ್ಲಾಸ್ಟಿಕ್ ಅಕ್ಕಿ ಅಲ್ಲ ಎಂದು ತೀರ್ಮಾನಿಸಬಹುದು.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸಹ ತನ್ನ ಸುಳ್ಳು ಬಸ್ಟರ್ಸ್‌ ವಿಭಾಗದಲ್ಲಿ ಪ್ಲಾಸ್ಟಿಕ್ ಅಕ್ಕಿಯ ಪ್ರತಿಪಾದನೆಯನ್ನು ತಳ್ಳಿಹಾಕಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ಲಾಸ್ಟಿಕ್ ಕಣಗಳ ಉತ್ಪಾದನಾ ಪ್ರಕ್ರಿಯೆಯ ವೀಡಿಯೊವನ್ನು ಅಕ್ಕಿ ಗಿರಣಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಉತ್ಪಾದನೆಯ ದೃಶ್ಯಗಳಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll