Fake News - Kannada
 

ಈ ಪೋಸ್ಟ್‌ನಲ್ಲಿ ಹೇಳಿರುವಂತೆ ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನ್ ಅವರನ್ನು ಜಿಹಾದಿ ಅಥವಾ ಅತ್ಯಾಚಾರಿ ಎಂದು ಘೋಷಿಸಿಲ್ಲ

0

‘ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನನನ್ನು ಜಿಹಾದಿ ಎಂದು ಘೋಷಿಸಿದೆ ಮತ್ತು ಸ್ವಾತಂತ್ರ್ಯ ಹೋರಾಟಗಾರನಲ್ಲ’ ಎಂದು ಹೇಳಿದೆ ಎಂದು ಬರೆಯಲಾಗಿರುವ ಪೋಸ್ಟ್‌ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ಪೋಸ್ಟ್‌ನಲ್ಲಿ ‘ಟಿಪ್ಪು ಸುಲ್ತಾನ್ ಹಿಂದೂಗಳನ್ನು ಹತ್ಯೆಗೈದ, ಅತ್ಯಾಚಾರ ಮಾಡಿದ, ಮತ್ತು ಮತಾಂತರ ಮಾಡುತ್ತಿದ್ದ’ ಎಂದು ಕೂಡ ಕರ್ನಾಟಕ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಅವರು ಹೇಳಿದ್ದಾರೆ’ ಎಂದು ಬರೆಯಲಾಗಿದೆ. ಪೋಸ್ಟ್‌ನಲ್ಲಿನ ಪ್ರತಿಪಾದನೆ ನಿಜವೆ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಟಿಪ್ಪು ಸುಲ್ತಾನ್ ಜಿಹಾದಿ, ಅವರು ಹತ್ಯಾಕಾಂಡ, ಅತ್ಯಾಚಾರ ಮತ್ತು ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದರು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಸತ್ಯ: 2016ರಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದ ಪಿಐಎಲ್‌ನ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಅಂದಿನ ಸಿಜೆ ಸುಭ್ರೋ ಕಮಲ್ ಮುಖರ್ಜಿ ಅವರು ‘ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಲ್ಲ. ಆದರೆ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಎದುರಾಳಿಗಳ ವಿರುದ್ಧ ಹೋರಾಡಿದ ರಾಜ’ ಎಂದು ಅಭಿಪ್ರಾಯಪಟ್ಟಿದ್ದರು. ಟಿಪ್ಪು ಸುಲ್ತಾನ್ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಯಾವುದೇ ಟೀಕೆಗಳನ್ನು ಮಾಡಿಲ್ಲ. ಆದಾಗ್ಯೂ, ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ದಕ್ಷಿಣ ಕೊಡಗು ಮೂಲದ ಕೆ ಪಿ ಮಂಜುನಾಥ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ್ದ ಹೈಕೋರ್ಟ್‌, 2016ರಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುವ ಕರ್ನಾಟಕ ಸರ್ಕಾರದ ಕ್ರಮದ ಬಗ್ಗೆ ಉತ್ತರ ಕೇಳಿತ್ತು. ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯನ್ನು ಆಚರಿಸುವುದರ ಹಿಂದಿನ ರಾಜ್ಯ ಸರ್ಕಾರದ ತರ್ಕವೇನು ಎಂದು ಕೇಳಿತ್ತು. ವಿಚಾರಣೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ, ‘ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಲ್ಲ, ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಎದುರಾಳಿಗಳ ವಿರುದ್ಧ ಹೋರಾಡಿದ ರಾಜ’ ಎಂದು ಗಮನ ಸೆಳೆದಿದ್ದರು.

ಆದಾಗ್ಯೂ, 03 ನವೆಂಬರ್ 2016ರಂದು ಪ್ರಕರಣದ ಎರಡೂ ಕಡೆಯ ವಾದವನ್ನು ಆಲಿಸಿದ ನಂತರ, ಅರ್ಜಿದಾರರು ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗಳ ವಿರುದ್ಧ ಎತ್ತಿರುವ ಆಕ್ಷೇಪಣೆಗಳನ್ನು ಪರಿಗಣಿಸಲು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪ್ರಾತಿನಿಧ್ಯ ನೀಡುವಂತೆ ಸೂಚಿಸುವ ಮೂಲಕ ಅರ್ಜಿಯನ್ನು ವಜಾಗೊಳಿಸಿತ್ತು. ನ್ಯಾಯಾಲಯವು ಈ ತೀರ್ಪಿನಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳು ಪೋಸ್ಟ್‌ನಲ್ಲಿ ಆರೋಪಿಸಲಾಗಿರುವಂತೆ ಟಿಪ್ಪುವಿನ ವಿರುದ್ಧ ಯಾವುದೇ ಟೀಕೆಗಳನ್ನು ಮಾಡಿಲ್ಲ.

ಆ ವರ್ಷ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಸರ್ಕಾರ ಮುಂದಾಗಿತ್ತು. ಟಿಪ್ಪು ಸುಲ್ತಾನ್ 1785ರಲ್ಲಿ ತಮ್ಮ ಪೂರ್ವಜರನ್ನು ಕೊಂದರು ಎಂದು ಕೊಡಗು ಜನರು ನಂಬಿದ್ದಾರೆ. ಹೀಗಾಗಿ, ಈ ಕಾರ್ಯಕ್ರಮಗಳು ಸ್ಥಳೀಯ ಕೊಡಗು ಜನರನ್ನು ಕೆರಳಿಸಿತ್ತು. ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2015ರಲ್ಲಿ ಟಿಪ್ಪು ಸುಲ್ತಾನ್ ಜನ್ಮದಿನವನ್ನು ಆಚರಿಸುವುದಾಗಿ ಘೋಷಿಸಿದಾಗಿನಿಂದ ಪ್ರತಿ ನವೆಂಬರ್‌ನಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಆದಾಗ್ಯೂ ಜುಲೈ 2019ರಲ್ಲಿ, ಆಗ ಹೊಸದಾಗಿ ರಚನೆಯಾದ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಅದರಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಪೋಸ್ಟ್‌ನಲ್ಲಿ ಹೇಳಿರುವಂತೆ ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನ್ ಅವರನ್ನು ಜಿಹಾದಿ ಅಥವಾ ಅತ್ಯಾಚಾರಿ ಎಂದು ಕರೆದಿಲ್ಲ.

Share.

About Author

Comments are closed.

scroll