Fake News - Kannada
 

ರಾಮಸೇತು ಮಾನವ ನಿರ್ಮಿತವೋ ಅಥವಾ ಸಹಜವೋ ಎಂಬ ಬಗ್ಗೆ ಇಸ್ರೋ ಯಾವುದೇ ಹೇಳಿಕೆ ನೀಡಿಲ್ಲ

0

ಇತ್ತೀಚೆಗೆ ISRO ದ ಹೈದರಾಬಾದ್ ಮತ್ತು ಜೋಧ್‌ಪುರ ನಾಶನಲ್ ರಿಮೋರ್ಟ್ ಸೆನ್ಸಿನ್ಗ್ ಸೆಂಟ್ರಲ್ (NRSC) ವಿಜ್ಞಾನಿಗಳು ರಾಮಸೇತು/ಆಡಮ್ಸ್ ಸೇತುವೆಯ ಕುರಿತು ತಮ್ಮ ಸಂಶೋಧನಾ ಫಲಿತಾಂಶಗಳನ್ನು ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ. ಆಡಮ್ಸ್ ಸೇತುವೆಯ ಕೆಲವು ನಕ್ಷೆಗಳನ್ನು ಬಿಡುಗಡೆ ಮಾಡಿದ್ದು,  ಈ ಸಂದರ್ಭದಲ್ಲಿ, ರಾಮಸೇತುವನ್ನು ಮಾನವ ನಿರ್ಮಿತ ಎಂದು ಇಸ್ರೋ ಘೋಷಿಸಿದೆ ಎಂದು ಹೇಳುವ ಅನೇಕ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ಪರಿಶೀಲಿಸೋಣ. 

ಕ್ಲೇಮ್: ರಾಮಸೇತು ಮಾನವ ನಿರ್ಮಿತ ಎಂದು ಇಸ್ರೋ ಘೋಷಿಸಿದೆ.

ಫ್ಯಾಕ್ಟ್: ರಾಮಸೇತು/ಆಡಮ್ಸ್ ಸೇತುವೆ ಮಾನವ ನಿರ್ಮಿತವೇ ಅಥವಾ ಸಹಜ/ ನೈಸರ್ಗಿಕವೋ ಎಂಬ ಬಗ್ಗೆ ಇಸ್ರೋ ಯಾವುದೇ ಹೇಳಿಕೆ ನೀಡಿಲ್ಲ. ಇತ್ತೀಚೆಗೆ, ಹೈದರಾಬಾದ್‌ನ ಜೋಧ್‌ಪುರದಲ್ಲಿರುವ ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ವಿಜ್ಞಾನಿಗಳು ಆಡಮ್ಸ್ ಬ್ರಿಡ್ಜ್ ಕುರಿತು ತಮ್ಮ ಸಂಶೋಧನೆಗಳನ್ನು ಸೈಂಟಿಫಿಕ್ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ. ಆಡಮ್ಸ್ ಸೇತುವೆಯ ಕೆಲವು ನಕ್ಷೆಗಳನ್ನು ಈ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ವಾಸ್ತವವಾಗಿ, ಈ ಸಂಶೋಧನೆಯಲ್ಲಿ ಇಸ್ರೋ ವಿಜ್ಞಾನಿಗಳು ಈ ಸೇತುವೆಯನ್ನು ಆಡಮ್ಸ್ ಬ್ರಿಡ್ಜ್ ಎಂದು ಕರೆದಿದ್ದಾರೆ. ಇದಲ್ಲದೆ, ಈ ಸಂಶೋಧನೆಯಲ್ಲಿ ಈ ಸೇತುವೆ ಹೇಗೆ ರೂಪುಗೊಂಡಿತು ಎಂಬುದರ ಕುರಿತು ಇಸ್ರೋ ವಿಜ್ಞಾನಿಗಳು ಪ್ರತಿಕ್ರಿಯಿಸಲಿಲ್ಲ. ಹಾಗಾಗಿ ಪೋಸ್ಟ್ ಹೇಳಿರುವುದು ತಪ್ಪು ತಪ್ಪಾಗಿದೆ.

ಇತ್ತೀಚೆಗೆ, ಹೈದರಾಬಾದ್‌ನ ಜೋಧ್‌ಪುರದಲ್ಲಿರುವ ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ಯ ವಿಜ್ಞಾನಿಗಳು ಆಡಮ್ಸ್ ಸೇತುವೆ (ರಾಮಸೇತು) ಕುರಿತು ತಮ್ಮ ಸಂಶೋಧನೆಗಳನ್ನು ಸೈಂಟಿಫಿಕ್ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ನಕ್ಷೆಗಳನ್ನು ಸಹ ಈ ಪತ್ರಿಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ವಾಸ್ತವವಾಗಿ, ಈ ಸಂಶೋಧನೆಯಲ್ಲಿ ಇಸ್ರೋ ವಿಜ್ಞಾನಿಗಳು ಈ ಸೇತುವೆಯನ್ನು ಆಡಮ್ಸ್ ಬ್ರಿಡ್ಜ್ ಎಂದು ಕರೆದಿದ್ದಾರೆ. ಇದಲ್ಲದೆ, ಈ ಸಂಶೋಧನೆಯಲ್ಲಿ ಈ ಸೇತುವೆ ಹೇಗೆ ರೂಪುಗೊಂಡಿತು ಎಂಬುದರ ಕುರಿತು ಇಸ್ರೋ ವಿಜ್ಞಾನಿಗಳು ಪ್ರತಿಕ್ರಿಯಿಸಲಿಲ್ಲ. ಹಿಂದೂ ಪುರಾಣಗಳ ಪ್ರಕಾರ ಆಡಮ್ಸ್ ಸೇತುವೆಯನ್ನು ‘ರಾಮಸೇತು’ ಎಂದು ಕರೆಯಲಾಗುತ್ತದೆ.  ಪರ್ಷಿಯನ್ ನಾವಿಕರು ‘ಸೇತು ಬಂಧೈ’ ಎಂದು  ಕರೆದರೆ,  ಈಸ್ಟ್ ಇಂಡಿಯಾ ಕಂಪನಿ ಮತ್ತು ಯುರೋಪಿಯನ್ ನ್ಯಾವಿಗೇಟರ್‌ಗಳು ಈ ಸೇತುವೆಯನ್ನು ಆಡಮ್ಸ್ ಸೇತುವೆ ಎಂದು ಉಲ್ಲೇಖಿಸಿದ್ದಾರೆ ಎಂದು ಜರ್ನಲ್ ನಲ್ಲಿ ಹೇಳಲಾಗಿದೆ.  

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ICESat-2 (ICESat-2) ಉಪಗ್ರಹದ ಡಾಟಾ ಸಹಾಯದಿಂದ ಇಸ್ರೋ ವಿಜ್ಞಾನಿಗಳು ರಾಮಸೇತು/ಆಡಮ್ಸ್ ಸೇತುವೆಯ ನಕ್ಷೆಯನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿ ಅಕ್ಟೋಬರ್ 2018 ರಿಂದ ಅಕ್ಟೋಬರ್ 2023 ರ ನಡುವೆ ಆರು ವರ್ಷಗಳ ಕಾಲ ನಾಸಾ ISSAT-2 ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಿನ ಈ ಸೇತುವೆಯ ಉದ್ದ 29 ಕಿಮೀ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಅದರ ಎತ್ತರ ಸಮುದ್ರದ ತಳದಿಂದ ಸುಮಾರು 8 ಮೀಟರ್ ಎಂದು ಈ ಜರ್ನಲ್ನಲ್ಲಿ ಹೇಳಲಾಗಿದೆ. ಈ ಸೇತುವೆಯು ತಮಿಳುನಾಡಿನ ರಾಮೇಶ್ವರಂ ದ್ವೀಪದ ಆಗ್ನೇಯ (ಸೌತ್ ಈಸ್ಟ್) ದಿಕ್ಕಿನಲ್ಲಿ ಧನುಷ್ಕೋಡಿಯಿಂದ ಶ್ರೀಲಂಕಾದ ಮಾಲಿನಿನ್ ದ್ವೀಪದ ವಾಯುವ್ಯ (ನಾರ್ತ್ ಈಸ್ಟ್ ) ದಿಕ್ಕಿನಲ್ಲಿ ತಲೈಮನ್ನಾರ್ ವರೆಗೆ ವಿಸ್ತರಿಸಿದೆ ಎಂದು ದೃಢಪಡಿಸಲಾಗಿದೆ. ಸೇತುವೆಯನ್ನು ಸುಣ್ಣದ ಕಲ್ಲಿನಿಂದ ನಿರ್ಮಿಸಲಾಗಿದೆ ಮತ್ತು ಸೇತುವೆಯು ಪ್ರಸ್ತುತ 99.98 ರಷ್ಟು ಮುಳುಗಿದೆ ಎಂದು ಇಸ್ರೋ ವಿಜ್ಞಾನಿಗಳು ಈ ಜರ್ನಲ್‌ನಲ್ಲಿ ತಿಳಿಸಿದ್ದಾರೆ.

ಸೇತುವೆಯು ಮಾನವ ನಿರ್ಮಿತವೇ ಅಥವಾ ಪ್ರಕೃತಿಯಲ್ಲಿನ ನೈಸರ್ಗಿಕ ಬದಲಾವಣೆಯೇ ಎಂಬುದು ವರ್ಷಗಳಿಂದ ಚರ್ಚೆಯಾಗುತ್ತಿದೆ. ರಾಮಸೇತು/ಆಡಮ್ಸ್ ಸೇತುವೆಯ ಅಸ್ತಿತ್ವದ ಬಗ್ಗೆ ಈ ಹಿಂದೆ ಹಲವು ಸಂಶೋಧನೆಗಳು ನಡೆದಿವೆ. ಆದರೆ, ಈ ಸೇತುವೆ ಮಾನವ ನಿರ್ಮಿತವೋ ಅಥವಾ ನೈಸರ್ಗಿಕವೋ ಎಂಬುದು ಸ್ಪಷ್ಟವಾಗಿಲ್ಲ. ಈಗಲೂ ಇಸ್ರೋ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಈ ಸೇತುವೆ ಹೇಗೆ ರೂಪುಗೊಂಡಿತು ಎಂಬುದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಮಿಳುನಾಡು ರಾಜ್ಯ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನ ಪ್ರಕಾರ, ರಾಮೇಶ್ವರಂ ದೇವಾಲಯದ ದಾಖಲೆಗಳು ಆಡಮ್ಸ್ ಸೇತುವೆ ಅಥವಾ ರಾಮಸೇತುವು 1480 AD ವರೆಗೆ ಸಮುದ್ರ ಮಟ್ಟದಿಂದ ಮೇಲಿತ್ತು ಎಂದು ಸೂಚಿಸುತ್ತದೆ. ಪ್ರಕೃತಿ ವಿಕೋಪದಿಂದ ಈ ಸೇತುವೆ ಸಮುದ್ರ ಪಾಲಾಗಿರುವುದು ತಿಳಿಯುತ್ತದೆ. 

2023 ರಲ್ಲಿ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್, “ನಾವು ಉಪಗ್ರಹ ಚಿತ್ರಗಳ ಮೂಲಕ ಆಡಮ್ಸ್ ಸೇತುವೆ ಅಥವಾ ರಾಮಸೇತುವನ್ನು ವೀಕ್ಷಿಸಬಹುದು, ಆದರೆ ಇದು ಮಾನವ ನಿರ್ಮಿತವೋ ಅಥವಾ ನೈಸರ್ಗಿಕವೋ ಎಂಬುದನ್ನು ಖಚಿತಪಡಿಸಲು ನಮಗೆ ಭಾರತೀಯ ಪುರಾತತ್ವ ಸಮೀಕ್ಷೆ ಮತ್ತು ಇತರ ಇಲಾಖೆಗಳ ತಜ್ಞರು ಅಗತ್ಯವಿದೆ ” ಎಂದು ಹೇಳಿದ್ದಾರೆ. 

ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣ್ಯಸ್ವಾಮಿ ಅವರು 2007ರಲ್ಲಿ ರಾಮಸೇತು/ಆಡಮ್ಸ್ ಸೇತುವೆಯನ್ನು ರಾಷ್ಟ್ರೀಯ ಪಾರಂಪರಿಕ ತಾಣವನ್ನಾಗಿ ಘೋಷಿಸುವಂತೆ ಕೋರಿ  ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು.  ಸೇತು ಸಮುದ್ರಂ ಯೋಜನೆಯು ರಾಮಸೇತು/ಆಡಮ್ಸ್ ಸೇತುವೆಯ ಮೇಲೆ ಪರಿಣಾಮ ಬೀರುತ್ತದೆ, ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್‌ನಲ್ಲಿ (ಇಲ್ಲಿ) ಈ ಅರ್ಜಿ ಇನ್ನೂ ಬಾಕಿಯಾಗಿ ಹಾಗೆ  ಇದೆ.

ಜನವರಿ 2023 ರಲ್ಲಿ, ರಾಮಸೇತು/ಆಡಮ್ಸ್ ಸೇತುವೆಗೆ ಸಂಬಂಧಿಸಿದ ಹಲವಾರು ಪ್ರಕರಣಗಳ ಜೊತೆಗೆ ಸುಬ್ರಮಣ್ಯಸ್ವಾಮಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ವಿಚಾರಣೆಯ ಸಂದರ್ಭದಲ್ಲಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ  ಪ್ರಸ್ತುತ ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ತಾಣವಾಗಿ ಸೇರಿಸಲು ಸಂಸ್ಕೃತಿ ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. 

ಮಾಜಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯಸ್ವಾಮಿ ಅವರು 2022 ರಲ್ಲಿ ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ತಾಣವಾಗಿ ಘೋಷಿಸಲು ಅಗತ್ಯ ವ್ಯವಸ್ಥೆಗಳನ್ನು ಪ್ರಾರಂಭಿಸಿದ್ದಾರೆಯೇ? ಇಲ್ಲವೇ ಎಂಬ ರಾಜ್ಯಸಭೆಯಲ್ಲಿನ ಪ್ರಶ್ನೆಗೆ, ಅಂದಿನ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಅವರು, ‘ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ, ಹಾಗಾಗಿ ನಾವು ಈ ಬಗ್ಗೆ ಪ್ರತಿಕ್ರಿಯಿಸಲಾರೆ’ ಎಂದು ಉತ್ತರಿಸಿದ್ದರು

ಒಟ್ಟಾರೆಯಾಗಿ ಹೇಳುವುದಾದರೆ, ರಾಮಸೇತು/ಆಡಮ್ಸ್ ಸೇತುವೆ ಮಾನವ ನಿರ್ಮಿತವೇ ಅಥವಾ ನೈಸರ್ಗಿಕವೇ ಎಂಬುದರ ಕುರಿತು ಇಸ್ರೋ ಯಾವುದೇ ಹೇಳಿಕೆ ನೀಡಿಲ್ಲ.

Share.

Comments are closed.

scroll