ಕಾನ್ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 8 ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಯನ್ನು ಕೊಂದ ಆಪಾದಿತ ಅಪರಾಧಿ ಎಂದು ಹೇಳಿ, ಉತ್ತರ ಪ್ರದೇಶದ ಬಿಜೆಪಿ ನಾಯಕ ವಿಕಾಸ್ ದುಬೆ ಅವರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. 2020 ರ ಜುಲೈ 02 ರಂದು ಕಾನ್ಪುರದ ದರೋಡೆಕೋರ ವಿಕಾಸ್ ದುಬೆ ಅವರ ಮುಂದಾಳತ್ವದಲ್ಲಿ ಕೆಲಸ ಮಾಡುತ್ತಿದ್ದ ಗುಂಪಿನೊಂದಿಗೆ ಮುಖಾಮುಖಿಯಾಗಿ, ಹಿಂಸಾಚಾರದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು 3 ಸಬ್ ಇನ್ಸ್ಪೆಕ್ಟರ್‌ಗಳು ಸೇರಿದಂತೆ ಎಂಟು ಮಂದಿ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು. ಪೋಸ್ಟ್ ನಲ್ಲಿ ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಬಿಜೆಪಿ ಮುಖಂಡ ವಿಕಾಸ್ ದುಬೆ ಕಾನ್ಪುರದಲ್ಲಿ ನಡೆದ ಎನ್ಕೌಂಟರ್ನಲ್ಲಿ 8 ಯುಪಿ ಪೊಲೀಸ್ ಸಿಬ್ಬಂದಿಯನ್ನು ಕೊಂದಿದ್ದಾರೆ.
ನಿಜಾಂಶ: ಕಾನ್ಪುರದಲ್ಲಿ 8 ಪೊಲೀಸರನ್ನು ಕೊಂದ ಆರೋಪ ಹೊತ್ತಿರುವ ವಿಕಾಸ್ ದುಬೆ ಎಂಬ ಹೆಸರಿನ ದರೋಡೆಕೋರ, ಬಿಜೆಪಿ ನಾಯಕ ವಿಕಾಸ್ ದುಬೆ ಅಲ್ಲ. ಆ ಆರೋಪಿ ಕ್ರಿಮಿನಲ್ ಎಂದು ಆರೋಪಿಸಿ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಬಿಜೆಪಿ ಮುಖಂಡರು ಆ ಎನ್ಕೌಂಟರ್ ನಲ್ಲಿ ಭಾಗಿಯಾದ ವ್ಯಕ್ತಿ ಇವರಲ್ಲ ಎಂದು ಸ್ಪಷ್ಟಪಡಿಸಿದರು. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಕಾನ್ಪುರದಲ್ಲಿ ಜುಲೈ 02 ರಂದು ನಡೆದ ಎನ್‌ಕೌಂಟರ್‌ಗೆ ಸಂಬಂಧಿಸಿದ ಇತರ ಮಾಹಿತಿಗಾಗಿ ನಾವು ಹುಡುಕಿದಾಗ, ಜಾಗರಣ್ ಜಾಲತಾಣದಲ್ಲಿ ಆ ಘಟನೆಗೆ ಸಂಬಂಧಿಸಿದ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ಲೇಖನದಲ್ಲಿ ಆರೋಪಿ ವಿಕಾಸ್ ದುಬೆ ಅವರ ಫೋಟೋ ಇತ್ತು. ಆರೋಪಿಯು ಬಿಜೆಪಿ ನಾಯಕ ವಿಕಾಸ್ ದುಬೆ ಅಲ್ಲ, ಅದೇ ಹೆಸರಿರುವ ವಿಕಾಸ್ ದುಬೆ ಒಬ್ಬ ಕುಖ್ಯಾತ ಅಪರಾಧಿ ಎಂದು ತಿಳಿದುಬಂದಿದೆ. ಆರೋಪಿ ವಿಕಾಸ್ ದುಬೆ ಈ ಹಿಂದೆ ಬಹುಜನ ಸಮಾಜ ಪಕ್ಷಕ್ಕೆ (ಬಿ ಎಸ್ ಪಿ) ಸೇರಿದ್ದರು. ಅವರು 60 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಹಿಸ್ಟರಿ-ಶೀಟರ್.
ಕಾನ್ಪುರ ಎನ್ಕೌಂಟರ್ ನಲ್ಲಿ 8 ಪೊಲೀಸ್ ಸಿಬ್ಬಂದಿಯನ್ನು ಕೊಂದ ಆರೋಪಿ ಇವರು ಎಂದು ಆರೋಪಿಸಿ ಬಿಜೆಪಿ ನಾಯಕ ವಿಕಾಸ್ ದುಬೆ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ, ಬಿಜೆಪಿ ಮುಖಂಡ ತಾವೇ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ. ಅವರ ಸ್ಪಷ್ಟೀಕರಣದ ಬಗ್ಗೆ ಒಂದು ಲೇಖನವನ್ನು ಇಲ್ಲಿ ನೋಡಬಹುದು.
ಕಾನ್ಪುರದ ಚೌಬೆಪುರ ಗ್ರಾಮದಲ್ಲಿ ಕ್ರಿಮಿನಲ್ ವಿಕಾಸ್ ದುಬೆ ಅವರನ್ನು ಹುಡುಕುತ್ತಾ 2020 ರ ಜುಲೈ 02 ರಂದು 15 ರಿಂದ 16 ಪೊಲೀಸ್ ಸಿಬ್ಬಂದಿಗಳ ತಂಡವು ದಾಳಿ ಕಾರ್ಯಾಚರಣೆ ನಡೆಸಿತ್ತು. ಪೊಲೀಸ್ ತಂಡವು ಸ್ಥಳಕ್ಕೆ ತಲುಪುತ್ತಿದ್ದಂತೆ, ಶಸ್ತ್ರಾಸ್ತ್ರಗಳಿಂದ ಹಿಡಿದು ತಯಾರಾಗಿದ್ದ ದುಬೆ ಅವರ ತಂಡದವರು ಹೊಂಚು ಹಾಕಿ, ದಾಳಿ ಮಾಡಿ ಅವರನ್ನು ಕೊಂದರು. ಆ ಎನ್‌ಕೌಂಟರ್‌ನಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ, 3 ಸಬ್ ಇನ್ಸ್ಪೆಕ್ಟರ್‌ಗಳು ಸೇರಿದಂತೆ ಒಟ್ಟು 8 ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿ ನಾಯಕ ವಿಕಾಸ್ ದುಬೆ ಅವರನ್ನು ಕಾನ್ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 8 ಉತ್ತರ ಪ್ರದೇಶದ ಪೊಲೀಸ್ ಸಿಬ್ಬಂದಿಯನ್ನು ಕೊಂದ ಆರೋಪಿ ಕ್ರಿಮಿನಲ್ ವಿಕಾಸ್ ದುಬೆ ಎಂದು ತಪ್ಪಾಗಿ ಚಿತ್ರಿಸಲಾಗಿದೆ.