Fake News - Kannada
 

ಜೂನ್ 2025 ರಲ್ಲಿ ನಡೆದ ಅಹಮದಾಬಾದ್ ವಿಮಾನ ಅಪಘಾತದ ದೃಶ್ಯಾವಳಿ ಎಂದು ಹೇಳಿಕೊಂಡು ಲೆಬನಾನ್‌ನ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ

0

ಜೂನ್ 12, 2025 ರಂದು, ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ AI 171, ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹತ್ತಿರದ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್‌ಗೆ ಅಪ್ಪಳಿಸಿತು. ವಿಮಾನದಲ್ಲಿದ್ದ ಓರ್ವರನ್ನು ಹೊರತುಪಡಿಸಿ ಉಳಿದೆಲ್ಲಾ 241 ಜನರು ಮತ್ತು ಹಾಸ್ಟೆಲ್ ಕಟ್ಟಡದಲ್ಲಿ ತಂಗಿದ್ದ ಇತರ ಹಲವರು ಈ ಘಟನೆಯಲ್ಲಿ ಸಾವನ್ನಪ್ಪಿದರು. ಈ ಸಂದರ್ಭದಲ್ಲಿ, ವಿಮಾನ ಅಪಘಾತಕ್ಕೀಡಾದ ಸಿಸಿಟಿವಿ ದೃಶ್ಯಾವಳಿಗಳೆಂದು ಹೇಳಲಾಗುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಜೂನ್ 12, 2025 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತವನ್ನು ತೋರಿಸುವ ವೀಡಿಯೊ.

ಫ್ಯಾಕ್ಟ್: ಈ ವೀಡಿಯೊ ಅಕ್ಟೋಬರ್ 2024 ರಲ್ಲಿ ಲೆಬನಾನ್‌ನ ಶೇಖ್ ರಘೇಬ್ ಹರ್ಬ್ ಆಸ್ಪತ್ರೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ತೋರಿಸುತ್ತದೆ. ಈ ವೀಡಿಯೊಗೆ ಜೂನ್ 12, 2025 ರಂದು ಅಹಮದಾಬಾದ್ ವಿಮಾನ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ಮೊದಲನೆಯದಾಗಿ, ವೈರಲ್ ವೀಡಿಯೊದಲ್ಲಿರುವ ದೃಶ್ಯಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅದೇ ದೃಶ್ಯಗಳನ್ನು ಹೊಂದಿರುವ ಫುಲ್ ವೀಡಿಯೊ ನಮಗೆ ಕಂಡುಬಂದಿದೆ. ಈ ವೀಡಿಯೊವನ್ನು ಲೆಬನಾನ್‌ನ ಶೇಖ್ ರಘೇಬ್ ಹರ್ಬ್ ಆಸ್ಪತ್ರೆಯು 05 ಫೆಬ್ರವರಿ 2025 ರಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ (ಇಲ್ಲಿ ಮತ್ತು ಇಲ್ಲಿ) ಹಂಚಿಕೊಂಡಿದೆ.

ದಾಳಿಯ ನಂತರ ಆಸ್ಪತ್ರೆಯನ್ನು ಪುನಃಸ್ಥಾಪಿಸಲಾಗಿದೆ ಮತ್ತು ಸೇವೆಗಳು ಪುನರಾರಂಭಗೊಂಡಿವೆ ಎಂದು ವೀಡಿಯೊ ಹೇಳುತ್ತದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ), ಅಕ್ಟೋಬರ್ 2024 ರಲ್ಲಿ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಇಸ್ರೇಲ್ ಪದೇ ಪದೇ ದಾಳಿ ಮಾಡಿತು. ಆಸ್ಪತ್ರೆಯ ಹೆಸರನ್ನು ಪೂರ್ತಿ ವೀಡಿಯೊದಲ್ಲಿ ಸಹ ಕಾಣಬಹುದು. ಇದು ಲೆಬನಾನ್‌ನ ಟೌಲ್ ಪಟ್ಟಣದಲ್ಲಿದೆ.

ಮೇಲಿನ ಪುರಾವೆಗಳ ಆಧಾರದ ಮೇಲೆ, ವೈರಲ್ ವೀಡಿಯೊವು ಜೂನ್ 12, 2025 ರಂದು ನಡೆದ ಅಹಮದಾಬಾದ್ ವಿಮಾನ ಅಪಘಾತಕ್ಕೆ ಸಂಬಂಧಿಸಿಲ್ಲ ಎಂದು ತೀರ್ಮಾನಿಸಬಹುದು.  ಅಹಮದಾಬಾದ್ ವಿಮಾನ ಅಪಘಾತದ ದೃಶ್ಯಗಳು ಎಂದು ಹೇಳಿಕೊಂಡು ಕೆಲವು ಸಂಬಂಧವಿಲ್ಲದ ಫೋಟೋಗಳು ಮತ್ತು ವೀಡಿಯೊಗಳು ಸಹ ವೈರಲ್ ಮಾಡಲಾಗುತ್ತಿದೆ. ಅವುಗಳಿಗೆ ಸಂಬಂಧಿಸಿದ ಫ್ಯಾಕ್ಟ್ – ಚೆಕಿಂಗ್  ಲೇಖನಗಳನ್ನು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಲೆಬನಾನ್‌ನ ಹಳೆಯ ವೀಡಿಯೊವನ್ನು ಅಹಮದಾಬಾದ್ ವಿಮಾನ ಅಪಘಾತದ ದೃಶ್ಯಗಳಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll