Fake News - Kannada
 

ಆಗಸ್ಟ್ 2022 ರಲ್ಲಿ ಭಾರತೀಯ ಸೇನೆ ಸೆರೆಹಿಡಿದ ಭಯೋತ್ಪಾದಕನ ಸಂದರ್ಶನದ ವೀಡಿಯೊವನ್ನು ಇತ್ತೀಚಿನ 2025 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

0

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಏಪ್ರಿಲ್ 22, 2025 ರಂದು ನಡೆದ ಭಯೋತ್ಪಾದಕ ದಾಳಿಯ ನಡುವೆ, ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ವ್ಯಕ್ತಿಯೊಬ್ಬರ ಮಾಧ್ಯಮ ಸಂದರ್ಶನವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ಹಂಚಿಕೊಳ್ಳಲಾಗುತ್ತಿದೆ. ಪಹಲ್ಗಾಮ್ ದಾಳಿಯ ನಂತರ ಭಾರತೀಯ ಸೇನೆಯಿಂದ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಭಯೋತ್ಪಾದಕ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಪಹಲ್ಗಾಮ್ ದಾಳಿಯ ನಂತರ ಭಾರತೀಯ ಸೇನೆಯಿಂದ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಭಯೋತ್ಪಾದಕನ ಮೀಡಿಯಾ ಸಂದರ್ಶನವನ್ನು ಈ ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ವೈರಲ್ ವೀಡಿಯೊ ಆಗಸ್ಟ್ 2022 ರಲ್ಲಿ ನಡೆದ ಘಟನೆಯಾಗಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಗೂ ಇದಕ್ಕೂ ಸಂಬಂಧವಿಲ್ಲ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ) ಉದ್ದಕ್ಕೂ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ಭಾರತೀಯ ಸೇನೆಯಿಂದ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಪಾಕಿಸ್ತಾನಿ ಭಯೋತ್ಪಾದಕ ತಬಾರಕ್ ಹುಸೇನ್ ಅನ್ನು ಇದು ತೋರಿಸುತ್ತದೆ. ಈ ಪ್ರಯತ್ನದ ಸಮಯದಲ್ಲಿ ಗುಂಡೇಟಿನಿಂದ ಗಾಯಗೊಂಡ ಹುಸೇನ್, ತೀವ್ರವಾಗಿ ಗಾಯಗೊಂಡ ನಂತರ ಸೇನಾ ವೈದ್ಯಕೀಯ ಸೌಲಭ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಸೆಪ್ಟೆಂಬರ್ 03, 2022 ರಂದು ಹೃದಯಾಘಾತದಿಂದ ನಿಧನರಾದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳಾಗಿದೆ. 

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಆಗಸ್ಟ್ 25, 2022 ರಂದು ಆಜ್ ತಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಶಾರ್ಟ್ ಆಗಿ ಪ್ರಕಟಿಸಿದ ಅದೇ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೊಗೆ “ಪಾಕಿಸ್ತಾನದ ಭಯೋತ್ಪಾದಕ ಪಾಕಿಸ್ತಾನ ಸೇನೆಯ ಬಗ್ಗೆ ರಹಸ್ಯಗಳನ್ನು ಬಹಿರಂಗಪಡಿಸಿದ್ದಾನೆ” ಎಂಬ ಶೀರ್ಷಿಕೆಯನ್ನು ನೀಡಲಾಯಿತು. ಈ ವೀಡಿಯೊಗೂ,  ಏಪ್ರಿಲ್ 22, 2025 ರಂದು ಪಹಲ್ಗಾಮ್ ನಲ್ಲಿ  ನಡೆದ ಭಯೋತ್ಪಾದಕ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಖಚಿತಪಡಿಸುತ್ತದೆ.

ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿದ್ದೇವೆ. ಈ ಮೂಲಕ ನಾವು ಆಗಸ್ಟ್ 25, 2022 ರಂದು ಆಜ್ ತಕ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯಲ್ಲಿನ ಪೂರ್ಣ ವೀಡಿಯೊವನ್ನು ಕಂಡುಕೊಂಡಿದ್ದೇವೆ. ವರದಿಯ ಪ್ರಕಾರ, ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ಲೈನ್ ಆಫ್ ಕಂಟ್ರೋಲ್ (LoC) ಉದ್ದಕ್ಕೂ ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿದೆ. ಈ ಕಾರ್ಯಾಚರಣೆಗಳಲ್ಲಿ, ಒಬ್ಬ ಪಾಕಿಸ್ತಾನಿ ಭಯೋತ್ಪಾದಕನನ್ನು ಜೀವಂತವಾಗಿ ಸೆರೆಹಿಡಿಯಲ್ಪಟ್ಟರೆ, ಇನ್ನಿಬ್ಬರು ಸ್ಫೋಟದಲ್ಲಿ ಸಾವನ್ನಪ್ಪಿದರು. ನೌಶೇರಾದ ಝಂಗಾರ್ ಸೆಕ್ಟರ್‌ನಲ್ಲಿ ಬೀಡುಬಿಟ್ಟಿದ್ದ ಸೈನಿಕರು ಆಗಸ್ಟ್ 21, 2022 ರ ಮುಂಜಾನೆ ಎಲ್‌ಒಸಿಯ ಉದ್ದಕ್ಕೂ 2-3 ಭಯೋತ್ಪಾದಕರ ಚಲನವಲನವನ್ನು ಗುರುತಿಸಿದರು. ಗಾಯಗೊಂಡ ಭಯೋತ್ಪಾದಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪಾಕಿಸ್ತಾನದಿಂದ ಭಾರತಕ್ಕೆ ಏಕೆ ಕಳುಹಿಸಲಾಗಿದೆ ಎಂದು ಕೇಳಿದಾಗ, ಭಯೋತ್ಪಾದಕನು ತಾನು ಐಎಸ್‌ಐ ಜೊತೆ ಸಂಬಂಧ ಹೊಂದಿದ್ದು, ಈ  ಕಾರ್ಯಾಚರಣೆಗಾಗಿ 30,000 ಪಾಕಿಸ್ತಾನಿ ರೂಪಾಯಿಗಳನ್ನು ಪಡೆದಿದ್ದೇನೆ ಎಂದು ಬಹಿರಂಗಪಡಿಸಿದನು.

ಈ ಘಟನೆಯನ್ನು ಒಳಗೊಂಡ ಆಗಸ್ಟ್ 2022 ರ ಹಲವಾರು ವರದಿಗಳನ್ನು ನಾವು ಕಂಡುಕೊಂಡಿದ್ದೇವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ವರದಿಗಳ ಪ್ರಕಾರ, ಜಮ್ಮು ಪ್ರದೇಶದ ನಿಯಂತ್ರಣ ರೇಖೆಯ/ ಲೈನ್ ಆಫ್ ಕಂಟ್ರೋಲ್ ಬಳಿ ಸಿಕ್ಕಿಬಿದ್ದ ಭಯೋತ್ಪಾದಕ, ಭಾರತದ ಮೇಲೆ ದಾಳಿಗಳನ್ನು ಯೋಜಿಸುವಲ್ಲಿ ಪಾಕಿಸ್ತಾನಿ ಸೇನಾ ಅಧಿಕಾರಿಯೊಬ್ಬರು ಭಾಗಿಯಾಗಿರುವ ಬಗ್ಗೆ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್ಜ್‌ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ ಎಂದು ಗುರುತಿಸಲ್ಪಟ್ಟಿದ್ದು, ಆತ ತೀವ್ರವಾಗಿ ಗಾಯಗೊಂಡ ನಂತರ ಸೇನಾ ವೈದ್ಯಕೀಯ ಸೌಲಭ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಚೇತರಿಸಿಕೊಳ್ಳುತ್ತಿದ್ದಂತೆ, ಪಾಕಿಸ್ತಾನಿ ಸೇನಾ ಅಧಿಕಾರಿ ಕರ್ನಲ್ ಯೂನಸ್ ಚೌಧರಿ ಭಾರತೀಯ ಸೈನಿಕರ ಮೇಲೆ ‘ಫಿದಾಯೀನ್’ (ಆತ್ಮಹತ್ಯಾ) ದಾಳಿ ನಡೆಸಲು ಮೂರರಿಂದ ನಾಲ್ಕು ಇತರ ಭಯೋತ್ಪಾದಕರೊಂದಿಗೆ ತಮ್ಮನ್ನು ಕಳುಹಿಸಿದ್ದಾರೆ ಎಂದು ಹುಸೇನ್ ಮಾಧ್ಯಮಗಳಿಗೆ ತಿಳಿಸಿದರು. ಹುಸೇನ್ ಈ ಪ್ರಯತ್ನದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದರೂ, ಅವರ ಸಹಚರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.ತದನಂತರ ಆತ ಸೆಪ್ಟೆಂಬರ್ 03, 2022 ರಂದು ಹೃದಯಾಘಾತದಿಂದ ನಿಧನರಾದರು.

ಒಟ್ಟಾರೆಯಾಗಿ ಹೇಳುವುದಾದರೆ, ಆಗಸ್ಟ್ 2022 ರಂದು ಭಾರತೀಯ ಸೇನೆಯಿಂದ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಭಯೋತ್ಪಾದಕನ ಮಾಧ್ಯಮ ಸಂದರ್ಶನವನ್ನು ತೋರಿಸುವ ವೀಡಿಯೊವನ್ನು ಇತ್ತೀಚಿನ 2025 ರ ಪಹಲ್ಗಾಮ್ ದಾಳಿಗೆ ಸಂಬಂದಿಸಿದ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll