ಭಾರತದ ಚುನಾವಣಾ ಆಯೋಗವು ನವೆಂಬರ್ 4, 2025 ರಂದು ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಪಶ್ಚಿಮ ಬಂಗಾಳವನ್ನೂ ಒಳಗೊಂಡು, ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಯ ಹಂತ 2 ಅನ್ನು ಪ್ರಾರಂಭಿಸಿತು (ಇಲ್ಲಿ ಮತ್ತು ಇಲ್ಲಿ). ಇದೇ ಸಮಯದಲ್ಲಿ, ಹಲವಾರು ಜನರು ನದಿಯನ್ನು ದಾಟುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು (ಇಲ್ಲಿ), SIR ಪ್ರಕ್ರಿಯೆಯ ಕಾರಣದಿಂದಾಗಿ ಅಕ್ರಮ ಬಾಂಗ್ಲಾದೇಶಿ ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಹಿಂತಿರುಗುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ವೈರಲ್ ವೀಡಿಯೊವು ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದಾಗಿ ಅಕ್ರಮ ಬಾಂಗ್ಲಾದೇಶಿ ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಮರಳುತ್ತಿರುವುದನ್ನು ತೋರಿಸುತ್ತದೆ.
ಫ್ಯಾಕ್ಟ್: ಈ ವೀಡಿಯೊಗೆ ರೋಹಿಂಗ್ಯಾಗಳು ಅಥವಾ SIR ಪ್ರಕ್ರಿಯೆಗೆ ಯಾವುದೇ ಸಂಬಂಧವಿಲ್ಲ. ಇದನ್ನು ಬಾಂಗ್ಲಾದೇಶದ ಬಾಗೇರ್‌ಹಾಟ್ ಜಿಲ್ಲೆಯ ಮೊಂಗ್ಲಾ ಘಾಟ್‌ನಲ್ಲಿ ಚಿತ್ರೀಕರಿಸಲಾಗಿದೆ, ಇದು ಪಶ್ಚಿಮ ಬಂಗಾಳ ಅಥವಾ ಭಾರತದೊಂದಿಗೆ ಯಾವುದೇ ಭೌಗೋಳಿಕ ಸಂಪರ್ಕವನ್ನು ಹೊಂದಿಲ್ಲ. SIR ಕಾರಣದಿಂದಾಗಿ ರೋಹಿಂಗ್ಯಾ ವಲಸಿಗರು ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾದೇಶಕ್ಕೆ ತೆರಳುತ್ತಿರುವ ಬಗ್ಗೆ ಯಾವುದೇ ವರದಿಗಳು ಕಂಡುಬಂದಿಲ್ಲ. ಆದ್ದರಿಂದ, ಈ ಕ್ಲೇಮ್ ಸುಳ್ಳು.
ಸತ್ಯವನ್ನು ಕಂಡುಹಿಡಿಯಲು, ನಾವು ಮೊದಲು ಗೂಗಲ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿ, SIR ಕಾರಣದಿಂದಾಗಿ ರೋಹಿಂಗ್ಯಾ ವಲಸಿಗರು ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ ಎಂದು ಉಲ್ಲೇಖಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳಿವೆಯೇ ಎಂದು ಪರಿಶೀಲಿಸಿದ್ದೇವೆ. ಅಂತಹ ಯಾವುದೇ ಮಾಹಿತಿ ಅಥವಾ ವರದಿಗಳು ಕಂಡುಬಂದಿಲ್ಲ. ನಂತರ ನಾವು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ಸ್ಥಳವನ್ನು ತೋರಿಸುವ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಫೇಸ್‌ಬುಕ್ ಮತ್ತು ಟಿಕ್‌ಟಾಕ್‌ನಲ್ಲಿನ ಇದೇ ರೀತಿಯ ವೀಡಿಯೊಗಳು ಸಿಕ್ಕಿವೆ. ಈ ಪೋಸ್ಟ್‌ಗಳು ಈ ವೀಡಿಯೊವನ್ನು ಬಾಂಗ್ಲಾದೇಶದ ಮೊಂಗ್ಲಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ಸೂಚಿಸಿವೆ. ಈ ವೀಡಿಯೊಗಳನ್ನು ಮೊಂಗ್ಲಾದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಖುಲ್ನಾದಿಂದ ಬಂದ ಬಾಂಗ್ಲಾದೇಶಿ ಬಳಕೆದಾರರು ಅಪ್‌ಲೋಡ್ ಮಾಡಿದ್ದಾರೆ (ಇಲ್ಲಿ ಮತ್ತು ಇಲ್ಲಿ).

ಮೊಂಗ್ಲಾ ಪ್ರದೇಶವನ್ನು ನಾವು ಮತ್ತಷ್ಟು ಪರಿಶೀಲಿಸಿದಾಗ, ಅದು ಬಾಂಗ್ಲಾದೇಶದ ನೈಋತ್ಯ ಪ್ರದೇಶದಲ್ಲಿದೆ ಮತ್ತು ಖುಲ್ನಾ ವಿಭಾಗದ ಬಾಗೇರ್‌ಹಾಟ್ ಜಿಲ್ಲೆಯ ಮೊಂಗ್ಲಾ ಉಪಜಿಲಾ ಪುರಸಭೆಯ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿದುಬಂದಿದೆ. ಭೌಗೋಳಿಕವಾಗಿ, ಈ ಸ್ಥಳವು ಭಾರತದೊಂದಿಗೆ ಯಾವುದೇ ಸಂಪರ್ಕ ಅಥವಾ ಗಡಿಯನ್ನು ಹಂಚಿಕೊಂಡಿಲ್ಲ. ವೈರಲ್ ವೀಡಿಯೊದಲ್ಲಿ ಕಾಣುವ ನದಿಯನ್ನು ಸಾಮಾನ್ಯವಾಗಿ ಮೊಂಗ್ಲಾ ನದಿ ಎಂದು ಕರೆಯಲಾಗುತ್ತದೆ, ಆದರೆ ಇದು ಪ್ರತ್ಯೇಕವಾದ, ಸ್ವತಂತ್ರ ನದಿಯಲ್ಲ. ಬದಲಾಗಿ, ಇದು ಮೊಂಗ್ಲಾ ನಗರದ ಬಳಿ ನದೀಮುಖವನ್ನು ರೂಪಿಸುವ ಪಾಶುರ್ ನದಿಯ ಒಂದು ಭಾಗವಾಗಿದ್ದು, ಇಲ್ಲಿ ಮೊಂಗ್ಲಾ ಬಂದರು ನೆಲೆಗೊಂಡಿದೆ.

ಇದರ ಜೊತೆಗೆ, ಪ್ರದೇಶದ ಭೌಗೋಳಿಕ ವಿನ್ಯಾಸವನ್ನು ಪರಿಶೀಲಿಸಿದಾಗ, ಮೊಂಗ್ಲಾವು ಪಾಶುರ್ (ಸ್ಥಳೀಯವಾಗಿ ಮೊಂಗ್ಲಾ ಎಂದು ಕರೆಯಲ್ಪಡುವ) ನದಿ ಮತ್ತು ರೂಪ್ಸಾ ನದಿಗಳ ನಡುವೆ ಇದೆ ಎಂದು ನಾವು ಗಮನಿಸಿದ್ದೇವೆ. ಮುಖ್ಯ ಪಟ್ಟಣದ ಬಹುಭಾಗವು ಈ ಜಲಮಾರ್ಗಗಳ ಬದಿಯಲ್ಲಿದೆ, ಅಂದರೆ ಇಲ್ಲಿನ ನಿವಾಸಿಗಳು ತಮ್ಮ ದೈನಂದಿನ ಕೆಲಸಗಳು, ಉದ್ಯೋಗ ಮತ್ತು ಇತರ ಅಗತ್ಯ ಚಟುವಟಿಕೆಗಳಿಗಾಗಿ ಆಗಾಗ್ಗೆ ನದಿಯನ್ನು ದಾಟಬೇಕಾಗುತ್ತದೆ.

ಇದಲ್ಲದೆ, ಗೂಗಲ್ ಮ್ಯಾಪ್ಸ್‌ನಲ್ಲಿ ಮೊಂಗ್ಲಾದ ಸ್ಯಾಟಲೈಟ್ ಮತ್ತು ಸ್ಟ್ರೀಟ್ ವೀಕ್ಷಣೆಗಳು ಈ ಪ್ರದೇಶದಲ್ಲಿ ಹಲವಾರು ಜೆಟ್ಟಿಗಳು ಮತ್ತು ದೋಣಿ ಘಾಟ್‌ಗಳನ್ನು ತೋರಿಸುತ್ತವೆ. ಈ ದೃಶ್ಯಗಳು ಸಹ ವೈರಲ್ ವೀಡಿಯೊದಲ್ಲಿ ಕಂಡ ರೀತಿಯಲ್ಲಿಯೇ ಜನರು ದೋಣಿಗಳನ್ನು ಹತ್ತಲು ಸರದಿಯಲ್ಲಿ ನಿಂತಿರುವುದನ್ನು ತೋರಿಸುತ್ತವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಸುದ್ದಿ ವರದಿಗಳ ಪ್ರಕಾರ ಬಾಂಗ್ಲಾದೇಶದ ಎರಡನೇ ಅತಿದೊಡ್ಡ ಬಂದರು ಇಲ್ಲಿ ಇರುವುದರಿಂದ, ಈ ಬಂದರಿನ ಉಪಸ್ಥಿತಿಯು ಈ ಪ್ರದೇಶದಲ್ಲಿ ಜನರು ಮತ್ತು ಸರಕುಗಳ ದೈನಂದಿನ ಆಗುಹೋಗುಗಳನ್ನು ಮತ್ತಷ್ಟು ವಿವರಿಸುತ್ತದೆ.

ಸಂಬಂಧಿತ ಪದಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಮೈನ್ ಸ್ಟ್ರೀಮ್ ಮೀಡಿಯಾ ಮತ್ತು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಹಲವಾರು ವರದಿಗಳು (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಈ ನದಿ ಪ್ರದೇಶವನ್ನು ತಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿ ದಾಟುವಾಗ ಜನರು ಎದುರಿಸುವ ಕಷ್ಟಗಳನ್ನು ಎತ್ತಿ ತೋರಿಸುತ್ತವೆ. ಈ ವರದಿಗಳು ಸ್ಪಷ್ಟಪಡಿಸುವುದೆಂದರೆ, ಇಂತಹ ನದಿ ದಾಟುವಿಕೆಗಳು ಕೆಲಸ ಮತ್ತು ವೈಯಕ್ತಿಕ ಅಗತ್ಯಗಳಿಗಾಗಿ ಪ್ರಯಾಣಿಸುವ ಸ್ಥಳೀಯ ನಿವಾಸಿಗಳಿಗೆ ಸಾಮಾನ್ಯವಾದ ಅಭ್ಯಾಸವಾಗಿದೆ ಮತ್ತು ಇದು ಭಾರತದಲ್ಲಿನ ಯಾವುದೇ ರಾಜಕೀಯ ಘಟನೆಗಳಿಗೆ ಸಂಬಂಧಿಸಿಲ್ಲ.

ಇದರ ಜೊತೆಗೆ, ಬಾಂಗ್ಲಾದೇಶದ ಫ್ಯಾಕ್ಟ್-ಚೆಕರ್ ತನ್ವೀರ್ ಮೆಹ್ತಾಬ್ ಅಬೀರ್ ಅವರು ಲೈಟ್‌ಹೌಸ್ ಜರ್ನಲಿಸಮ್ ಎಂಬ ಮಾಧ್ಯಮ ಸಂಸ್ಥೆಗೆ, ಈ ವೈರಲ್ ವೀಡಿಯೊವನ್ನು ಬಾಗೇರ್‌ಹಾಟ್‌ನ ಮೊಂಗ್ಲಾ ಘಾಟ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ವೈರಲ್ ವೀಡಿಯೊದಲ್ಲಿ ಕಾಣುವ ಜನರು ನಿಯಮಿತವಾಗಿ ತಮ್ಮ ಕೆಲಸದ ಸ್ಥಳಗಳಿಗೆ ಪ್ರಯಾಣಿಸುವ ಗಾರ್ಮೆಂಟ್ ಕಾರ್ಮಿಕರು ಎಂದು ಅವರು ವಿವರಿಸಿದ್ದಾರೆ. ಇದು ಈ ವೀಡಿಯೊಗೆ ಪಶ್ಚಿಮ ಬಂಗಾಳದೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ದೃಢಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಚಿತ್ರೀಕರಿಸಿದ ವೀಡಿಯೊವನ್ನು, ವಿಶೇಷ ತೀವ್ರ ಪರಿಷ್ಕರಣೆ ಪ್ರಾರಂಭವಾದ ನಂತರ ಪಶ್ಚಿಮ ಬಂಗಾಳದಿಂದ ಅಕ್ರಮ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳು ಹೊರಡುತ್ತಿದ್ದಾರೆ ಎಂಬ ದೃಶ್ಯಗಳೆಂದು ತಪ್ಪಾಗಿ ಶೇರ್ ಮಾಡಲಾಗುತ್ತಿದೆ.

