ಮುಸ್ಲಿಂ ಶಿಕ್ಷಕಿಯು ತನ್ನ ವಿದ್ಯಾರ್ಥಿನಿಯರಿಗೆ ಕೇಸರಿ ಶಾಲು ತೊಡಿಸುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಒತ್ತಾಯಿಸಿರುವ ದೃಶ್ಯಾವಳಿಗಳು ಎಂದು ಪ್ರತಿಪಸಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕ್ರಿಶ್ಚಿಯನ್ ಶಾಲೆಯಲ್ಲಿ ಮುಸ್ಲಿಂ ಶಿಕ್ಷಕಿಯು ತನ್ನ ವಿದ್ಯಾರ್ಥಿನಿಯರಿಗೆ ನಮಾಜ್ ಪಠಿಸುವಂತೆ ಒತ್ತಾಯಿಸಿದ ನಂತರ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಈ ಪೋಸ್ಟ್ ಹೇಳುತ್ತದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಪ್ರತಿಪಾದನೆ: ಮುಸ್ಲಿಂ ಶಿಕ್ಷಕಿಯೊಬ್ಬರು ತನ್ನ ವಿದ್ಯಾರ್ಥಿನಿಯರಿಗೆ ಕೇಸರಿ ಶಾಲು ಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಒತ್ತಾಯಿಸಿದ ವಿಡಿಯೋ.
ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿರುವ ಘಟನೆಯು ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಥಿಯೇಟರ್‍ವೊಂದರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಪ್ರದರ್ಶನದ ಸಂದರ್ಭದಲ್ಲಿ ನಡೆದಿದೆ. 23 ಮಾರ್ಚ್ 2022 ರಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಕೇಸರಿ ಶಾಲುಗಳನ್ನು ಧರಿಸಿ ಆಗಮಿಸಿದ್ದರು. ಆಗ ಶಾಲುಗಳನ್ನು ತೆಗೆದು ಚಿತ್ರಮಂದಿರ ಪ್ರವೇಶಿಸುವಂತೆ ತಾಕೀತು ಮಾಡಲಾಯ್ತು ಎಂದು ಆರೋಪಿಸಿ ವಾಗ್ವಾದ ನಡೆದಿತ್ತು. ಕೆಲವುರ ಹಣ ಸ್ಪಾನ್ಸರ್ ಮಾಡಿ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಲು ಕೆಲವು ಮಹಿಳೆಯರನ್ನು ಕರೆತಂದಿದ್ದರು ಮತ್ತು ಆ ಮಹಿಳೆಯರನ್ನು ಗುರುತಿಸಲು ಈ ಕೇಸರಿ ಶಾಲುಗಳನ್ನು ಅವರಿಗೆ ನೀಡಿತ್ತು. ಘಟನೆಯಲ್ಲಿ ಯಾವುದೇ ಕೋಮು ದ್ವೇಷವಾಗಲಿ, ಕೋಮು ನಿರೂಪಣೆಯಾಗಲಿ ಇಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮಾರ್ಚ್ 2022 ರ ಕೊನೆಯ ವಾರದಲ್ಲಿ ಹಲವು Facebook ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಎಂದು ಕಂಡುಬಂದಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ನಾಸಿಕ್‌ನ ಚಿತ್ರಮಂದಿರದ ನಿರ್ವಹಣಾ ತಂಡವು ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ವೀಕ್ಷಿಸಲು ಒಟ್ಟಾಗಿ ಬಂದ ಮಹಿಳೆಯರು ಧರಿಸಿದ್ದ ಕೇಸರಿ ಶಾಲುಗಳನ್ನು ಬಲವಂತವಾಗಿ ತೆಗೆದಿದೆ ಎಂದು ವಿಡಿಯೋ ವಿವರಣೆಯಲ್ಲಿ ಉಲ್ಲೇಖಿಸಿದ್ದಾರೆ.
ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ವಿಶ್ವಾಸಾರ್ಹ ಮೂಲಗಳನ್ನು ಹುಡುಕಿದಾಗ, ವೈರಲ್ ವೀಡಿಯೊದಲ್ಲಿರುವ ಅದೇ ವ್ಯಕ್ತಿಯನ್ನು ತೋರಿಸುವ ಫೋಟೋವನ್ನು 23 ಮಾರ್ಚ್ 2022 ರಂದು ‘ANI’ ಟ್ವೀಟ್ ಮಾಡಿರುವುದು ಕಂಡುಬಂದಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪ್ರದರ್ಶನದ ಸಮಯದಲ್ಲಿ ನಾಸಿಕ್‌ನಲ್ಲಿ ಥಿಯೇಟರ್ ಪ್ರವೇಶಿಸುವ ಮೊದಲು ಕೇಸರಿ ಶಾಲುಗಳನ್ನು ತೆಗೆದುಹಾಕುವಂತೆ ಚಿತ್ರಮಂದಿರ ನಿರ್ವಹಣಾ ತಂಡವು ಮಹಿಳೆಯರ ಗುಂಪಿಗೆ ಒತ್ತಾಯಿಸಿದ ನಂತರ ಈ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.
ಈ ಗುಂಪಿನ ಮಹಿಳೆಯೊಬ್ಬರು ಕೇಸರಿ ಶಾಲು ವಿಷಯದ ಕುರಿತು ‘ANI’ ನೊಂದಿಗೆ ಮಾತನಾಡಿದ್ದು, “ ‘ದಿ ಕಾಶ್ಮೀರ ಫೈಲ್ಸ್’ ವೀಕ್ಷಿಸಲು ಕೆಲವರು ನಮಗೆ ಟಿಕೆಟ್ ಖರೀದಿಸಿಕೊಟ್ಟಿದ್ದಾರೆ. ನಮ್ಮನ್ನು ಕಂಡು ಹಿಡಿಯುವುದಕ್ಕಾಗಿ ಕೇಸರಿ ಶಾಲು ಧರಿಸಿದ್ದೇವೆ ಎಂದು ಹೇಳಿದ್ದಾರೆ. ಆದ್ದರಿಂದ, ವೀಡಿಯೊದಲ್ಲಿ ಕೇಸರಿ ಶಾಲುಗಳನ್ನು ನೀಡುತ್ತಿರುವ ವ್ಯಕ್ತಿ ಈ ಮಹಿಳೆಯರಿಗಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ಪ್ರಾಯೋಜಿಸಿದ ಈ ಗುಂಪಿನ ಸಂಘಟಕರಲ್ಲಿ ಒಬ್ಬರು ಎಂದು ಖಚಿತಪಡಿಸಬಹುದು. ಈ ಘಟನೆಯ ಸಂಪೂರ್ಣ ವಿವರಗಳನ್ನು ವರದಿ ಮಾಡುತ್ತಾ, ಹಲವು ವೆಬ್‌ಸೈಟ್‌ಗಳು ಮಾರ್ಚ್ 2022 ರಲ್ಲಿ ಲೇಖನಗಳನ್ನು ಪ್ರಕಟಿಸಿದವು. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ವಿಡಿಯೋದಲ್ಲಿ ಈ ಮಹಿಳೆಯರಿಗೆ ಕೇಸರಿ ಶಾಲು ಹಾಕುತ್ತಿರುವ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ಎಲ್ಲಿಯೂ ವರದಿಯಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ನಾಸಿಕ್‌ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನದ ಸಂದರ್ಭದಲ್ಲಿ ಕೇಸರಿ ಶಾಲುಗಳನ್ನು ಒಳಗೊಂಡ ಘಟನೆಯ ವೀಡಿಯೊವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.