ಡಿಸೆಂಬರ್ 14 ರಂದು ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಯಹೂದಿ ವಿರೋಧಿ ಭಯೋತ್ಪಾದನಾ ದಾಳಿಯಲ್ಲಿ, ಸಜಿದ್ ಅಕ್ರಮ್ ಮತ್ತು ನವೀದ್ ಅಕ್ರಮ್ ಎಂಬ ತಂದೆ-ಮಗ ಹನುಕ್ಕಾ ಆಚರಣೆಯ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಿದರು. ಈ ಘಟನೆಯಲ್ಲಿ ಒಬ್ಬ ಬಂದೂಕುಧಾರಿ ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಜನರು ಗಾಯಗೊಂಡಿದ್ದಾರೆ. ಪೊಲೀಸರು ಸಜಿದ್ ಅಕ್ರಮ್‌ನನ್ನು ಸ್ಥಳದಲ್ಲೇ ಹೊಡೆದುರುಳಿಸಿದರು, ಆದರೆ ನವೀದ್ ಅಕ್ರಮ್ ಗಂಭೀರ ಸ್ಥಿತಿಯಲ್ಲಿದ್ದು, ಪೊಲೀಸ್ ಕಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ; ಒಂದು ವೇಳೆ ಆತ ಬದುಕುಳಿದರೆ ಕಾನೂನು ಕ್ರಮ ಎದುರಿಸುವ ಸಾಧ್ಯತೆಯಿದೆ. ಅಧಿಕಾರಿಗಳು ಈ ಘಟನೆಯನ್ನು ಇಸ್ಲಾಮಿಕ್ ಸ್ಟೇಟ್ (ISIS) ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದನಾ ದಾಳಿ ಎಂದು ಗುರುತಿಸಿದ್ದಾರೆ. ತನಿಖೆಯ ವೇಳೆ ಐಸಿಸ್ ಧ್ವಜ ಮತ್ತು ಸುಧಾರಿತ ಸ್ಫೋಟಕ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ).
ಈ ಘಟನೆಯ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದನ್ನು (ಇಲ್ಲಿ) ಹಂಚಿಕೊಳ್ಳಲಾಗುತ್ತಿದ್ದು, ಬೋಂಡಿ ಬೀಚ್ ಭಯೋತ್ಪಾದನಾ ದಾಳಿಯ ಸುದ್ದಿ ಹೊರಬಂದ ನಂತರ ಪಾಕಿಸ್ತಾನದ ಪಟ್ಟಣವೊಂದರಲ್ಲಿ ಸಂಭ್ರಮಾಚರಣೆ ನಡೆಯುತ್ತಿರುವುದನ್ನು ಇದು ತೋರಿಸುತ್ತದೆ ಎಂಬ ಕ್ಲೇಮ್ ಮಾಡಲಾಗುತ್ತಿದೆ. ಈ ಲೇಖನದಲ್ಲಿ ಆ ವೀಡಿಯೊದ ಹಿಂದಿರುವ ಅಸಲಿ ಫ್ಯಾಕ್ಟ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಈ ವೀಡಿಯೊ ಬೋಂಡಿ ಬೀಚ್ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ತಾನದ ಪಟ್ಟಣವೊಂದರಲ್ಲಿ ನಡೆದ ಸಂಭ್ರಮಾಚರಣೆಯನ್ನು ತೋರಿಸುತ್ತದೆ.
ಫ್ಯಾಕ್ಟ್: ಈ ವೀಡಿಯೊ 14 ಡಿಸೆಂಬರ್ 2025 ರ ಬೋಂಡಿ ಬೀಚ್ ದಾಳಿಯ ನಂತರ ಪಾಕಿಸ್ತಾನದಲ್ಲಿ ನಡೆದ ಸಂಭ್ರಮಾಚರಣೆಯನ್ನು ತೋರಿಸುವುದಿಲ್ಲ. ಇದು ವಾಸ್ತವವಾಗಿ ಅಕ್ಟೋಬರ್ 2023 ರಲ್ಲಿ ಇಸ್ರೇಲ್-ಗಾಜಾ ಸಂಘರ್ಷದ ಸಮಯದಲ್ಲಿ ಇಮಾಮಿಯಾ ಸ್ಟೂಡೆಂಟ್ಸ್ ಆರ್ಗನೈಸೇಶನ್ ಕರಾಚಿಯಲ್ಲಿ ಆಯೋಜಿಸಿದ್ದ ಪ್ಯಾಲೆಸ್ಟೈನ್ ಪರ ರ್ಯಾಲಿಯ ದೃಶ್ಯವಾಗಿದೆ. ಈ ವೀಡಿಯೊ ಸಿಡ್ನಿ ದಾಳಿಗಿಂತ ಎರಡು ವರ್ಷಗಳಿಗಿಂತಲೂ ಹಳೆಯದಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳಾಗಿದೆ.
ವೈರಲ್ ವೀಡಿಯೊದ ಪ್ರಮುಖ ಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಅಕ್ಟೋಬರ್ 2023 ರ ಹಲವಾರು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು (ಇಲ್ಲಿ, ಇಲ್ಲಿ,ಮತ್ತು ಇಲ್ಲಿ) ನಮಗೆ ಕಂಡುಬಂದಿವೆ. ಇವುಗಳಲ್ಲಿ ಅದೇ ವೀಡಿಯೊವನ್ನು ಬಳಸಲಾಗಿದೆ. ಇದರಿಂದಾಗಿ, ಈ ವೀಡಿಯೊ 14 ಡಿಸೆಂಬರ್ 2025 ರಂದು ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಗಿಂತ ಎರಡು ವರ್ಷಗಳ ಮೊದಲೇ ಇಂಟರ್ನೆಟ್‌ನಲ್ಲಿ ಲಭ್ಯವಿತ್ತು ಎಂಬುದು ಖಚಿತವಾಗುತ್ತದೆ. ಇಸ್ರೇಲ್ ಮೇಲಿನ ದಾಳಿಯನ್ನು ಸಂಭ್ರಮಿಸಲು ಪಾಕಿಸ್ತಾನದ ಕರಾಚಿಯಲ್ಲಿ ಪ್ಯಾಲೆಸ್ಟೈನ್ ಪರ ಬೆಂಬಲಿಗರು ಜಮಾಯಿಸಿರುವುದನ್ನು ಈ ಪೋಸ್ಟ್‌ಗಳು ತೋರಿಸಿವೆ ಎಂದು ಆಗ ಕ್ಲೈಮ್ ಮಾಡಲಾಗಿತ್ತು. ಈ ಕಾರ್ಯಕ್ರಮವನ್ನು ಇಮಾಮಿಯಾ ಸ್ಟೂಡೆಂಟ್ಸ್ ಆರ್ಗನೈಸೇಶನ್ ಆಯೋಜಿಸಿದೆ ಎಂದು ಒಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ನಂತರ ನಾವು ಗೂಗಲ್ ಸರ್ಚ್ ನಡೆಸಿದಾಗ ಇಮಾಮಿಯಾ ಸ್ಟೂಡೆಂಟ್ಸ್ ಆರ್ಗನೈಸೇಶನ್‌ನ ಫೇಸ್‌ಬುಕ್ ಪೇಜ್ ಪತ್ತೆಯಾಯಿತು. ಆ ಪೇಜ್ ಅನ್ನು ಪರಿಶೀಲಿಸಿದಾಗ, ವೈರಲ್ ವೀಡಿಯೊ ಸುಳ್ಳು ಎಂದು ಸಾಬೀತುಪಡಿಸುವ ಪೋಸ್ಟ್ ನಮಗೆ ಕಂಡುಬಂದಿತು. ಕರಾಚಿಯ ನುಮೈಶ್ ಚೌಕ್‌ನಲ್ಲಿ ಅಕ್ಟೋಬರ್ 2023 ರಲ್ಲಿ ನಡೆದ ಐಎಸ್‌ಒ (ISO) ಸಂಘಟನೆಯ “ಹಮಾಸ್ ವಿಜಯೋತ್ಸವ” ಕಾರ್ಯಕ್ರಮದ ವೀಡಿಯೊವನ್ನು ಸಿಡ್ನಿಯ ಭಯೋತ್ಪಾದನಾ ಘಟನೆಗೆ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ ಎಂದು ಆ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ), ಅಕ್ಟೋಬರ್ 2023 ರಲ್ಲಿ ಇಸ್ರೇಲ್-ಗಾಜಾ ಸಂಘರ್ಷ ಪ್ರಾರಂಭವಾದ ನಂತರ, ಕರಾಚಿಯಲ್ಲಿ ಬೃಹತ್ ಪ್ಯಾಲೆಸ್ಟೈನ್ ಪರ ರ್ಯಾಲಿಗಳನ್ನು ನಡೆಸಲಾಗಿತ್ತು. ಈ ಮೆರವಣಿಗೆ ಮತ್ತು ಪ್ರತಿಭಟನೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಜಮಾತ್-ಎ-ಇಸ್ಲಾಮಿ ನೇತೃತ್ವದಲ್ಲಿ ಶಾರಾ-ಎ-ಫೈಸಲ್‌ನಲ್ಲಿ ಪ್ರಮುಖ ರ್ಯಾಲಿಗಳು ನಡೆದವು ಮತ್ತು ಇತರ ಗುಂಪುಗಳು ನಗರದ ಪ್ರಮುಖ ಪ್ರದೇಶಗಳಲ್ಲಿ ಇಸ್ರೇಲಿ ದಾಳಿಗಳನ್ನು ಖಂಡಿಸಿ ಭಾಷಣಗಳನ್ನು ಒಳಗೊಂಡ ಪ್ರತಿಭಟನೆಗಳನ್ನು ನಡೆಸಿದ್ದವು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಕರಾಚಿಯ 2023ರ ಪ್ಯಾಲೆಸ್ಟೈನ್ ಪರ ರ್ಯಾಲಿಯ ವೀಡಿಯೊವನ್ನು, ಬೋಂಡಿ ಬೀಚ್ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ತಾನದಲ್ಲಿ ನಡೆದ ಆಚರಣೆ ಎಂದು ಹಂಚಿಕೊಳ್ಳಲಾಗುತ್ತಿದೆ.

