ರಷ್ಯಾ ಅಧ್ಯಕ್ಷ 2025ರ ಡಿಸೆಂಬರ್ 4 ಮತ್ತು 5 ರಂದು 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಭಾರತಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ, ವಿಮಾನದೊಳಗೆ ಕುಳಿತು ಕಿಟಕಿಯಿಂದ ಬೆಂಗಾವಲು ಯುದ್ಧ ವಿಮಾನಗಳನ್ನು ನೋಡುತ್ತಿರುವಂತೆ ತೋರುವ ವಿಡಿಯೋ (ಇಲ್ಲಿ) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಮಾನವು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸುತ್ತಿದ್ದಾಗ ಭಾರತೀಯ ವಾಯುಪಡೆಯ ಜೆಟ್‌ಗಳು ಅವರ ವಿಮಾನಕ್ಕೆ ಬೆಂಗಾವಲು ನೀಡುತ್ತಿದ್ದವು ಎಂದು ಕ್ಲೇಮ್ ಮಾಡಲಾಗಿದೆ. ಈ ವಿಡಿಯೋದ ಹಿಂದಿನ ಸತ್ಯಾಂಶವನ್ನು ಪರಿಶೀಲಿಸೋಣ.

ಕ್ಲೇಮ್: ವೈರಲ್ ಆಗಿರುವ ವಿಡಿಯೋ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದಾಗ, ಭಾರತೀಯ ವಾಯುಪ್ರದೇಶಕ್ಕೆ ಪ್ರವೇಶಿಸುವಾಗ ಅವರ ವಿಮಾನಕ್ಕೆ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಬೆಂಗಾವಲು ನೀಡುತ್ತಿರುವುದನ್ನು ತೋರಿಸುತ್ತದೆ.
ಫ್ಯಾಕ್ಟ್: ಈ ವಿಡಿಯೋ ಡಿಸೆಂಬರ್ 2017 ರದ್ದಾಗಿದ್ದು, ಸಿರಿಯಾದ ಖ್ಮೆಯಿಮಿಮ್ ಏರ್ ಬೇಸ್‌ಗೆ ಭೇಟಿ ನೀಡಿದಾಗ ರಷ್ಯಾ ಅಧ್ಯಕ್ಷ ಪುಟಿನ್ ಅವರ ವಿಮಾನಕ್ಕೆ ರಷ್ಯಾದ Su-30 ಯುದ್ಧ ವಿಮಾನಗಳು ಬೆಂಗಾವಲು ನೀಡುತ್ತಿರುವುದನ್ನು ತೋರಿಸುತ್ತದೆ. ಆದ್ದರಿಂದ, ಈ ಕ್ಲೇಮ್ ಸುಳ್ಳು.
ಇದನ್ನು ಪರಿಶೀಲಿಸಲು ನಾವು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಅದು RIA ನೊವೊಸ್ಟಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಹಂಚಿಕೊಂಡಿರುವ ಇದೇ ರೀತಿಯ ದೃಶ್ಯಗಳಿಗೆ ನಮ್ಮನ್ನು ಕರೆದೊಯ್ಯಿತು. Getty Images ಪ್ರಕಟಿಸಿದ ಚಿತ್ರಗಳನ್ನು ಸಹ ನಾವು ಕಂಡುಕೊಂಡಿದ್ದೇವೆ. ಈ ಎಲ್ಲಾ ಪೋಸ್ಟ್‌ಗಳು ಡಿಸೆಂಬರ್ 2017ರ ದಿನಾಂಕ ಆಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭೇಟಿಗಾಗಿ ಪಶ್ಚಿಮ ಸಿರಿಯಾದ ಖ್ಮೆಯಿಮಿಮ್ ಏರ್ ಬೇಸ್‌ನಲ್ಲಿ ಇಳಿಯುತ್ತಿದ್ದರು, ಮತ್ತು ಅವರ ವಿಮಾನಕ್ಕೆ Su-35 ಯುದ್ಧ ವಿಮಾನಗಳು ಬೆಂಗಾವಲು ನೀಡಿದ್ದವು ಎಂದು ತಿಳಿಸಿವೆ.
ವೈರಲ್ ವಿಡಿಯೋ ಮತ್ತು ವ್ಲಾಡಿಮಿರ್ ಪುಟಿನ್ ಅವರ ಡಿಸೆಬಂರ್ 2017ರ ಸಿರಿಯಾ ಭೇಟಿಯ ದೃಶ್ಯಾವಳಿಗಳ ಅಕ್ಕಪಕ್ಕದ ಹೋಲಿಕೆಯು, ಇವೆರಡೂ ಒಂದೇ ಫೂಟೇಜ್ (ದೃಶ್ಯ) ಅನ್ನು ತೋರಿಸುತ್ತವೆ ಎಂಬುದನ್ನು ಖಚಿತಪಡಿಸುತ್ತದೆ.

ಹೆಚ್ಚಿನ ಹುಡುಕಾಟಗಳು ಡಿಸೆಂಬರ್ 2017ರ ಅನೇಕ ಸುದ್ದಿ ವರದಿಗಳಿಗೆ ನಮ್ಮನ್ನು ಕರೆದೊಯ್ದವು, ಅವೆಲ್ಲವೂ ವೈರಲ್ ವಿಡಿಯೋ ಮತ್ತು ಚಿತ್ರಗಳಿಗೆ ಹೋಲುವ ದೃಶ್ಯಗಳನ್ನು ಒಳಗೊಂಡಿದ್ದವು (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ರಷ್ಯಾ ಅಧ್ಯಕ್ಷರ ಅಧಿಕೃತ ವೆಬ್‌ಸೈಟ್ ಪ್ರಕಾರ, ವ್ಲಾಡಿಮಿರ್ ಪುಟಿನ್ ಅವರು ಪಶ್ಚಿಮ ಸಿರಿಯಾದ ಖ್ಮೆಯಿಮಿಮ್ ಏರ್ ಬೇಸ್‌ಗೆ ಭೇಟಿ ನೀಡಿದ್ದರು. ಅಲ್ಲಿ ಅವರನ್ನು ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಮತ್ತು ಹಿರಿಯ ರಷ್ಯಾ ಮಿಲಿಟರಿ ಅಧಿಕಾರಿಗಳು ಸ್ವಾಗತಿಸಿದರು. ಅವರ ವಿಮಾನಕ್ಕೆ ರಷ್ಯಾದ ಸುಖೋಯ್ Su-30 ಯುದ್ಧ ವಿಮಾನಗಳು ಬೆಂಗಾವಲು ನೀಡಿದ್ದವು ಎಂಬುದನ್ನು ಇತರ ಸುದ್ದಿ ವರದಿಗಳು ಸಹ ಖಚಿತಪಡಿಸುತ್ತವೆ.

ಇದಲ್ಲದೆ, ವ್ಲಾಡಿಮಿರ್ ಪುಟಿನ್ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದಾಗ ಭಾರತೀಯ ಯುದ್ಧ ವಿಮಾನಗಳು ಅವರಿಗೆ ಬೆಂಗಾವಲು ನೀಡಿದ ಬಗ್ಗೆ ವರದಿಗಳಿಗಾಗಿ ನಾವು ಹುಡುಕಿದೆವು, ಆದರೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ. ಇದು ವೈರಲ್ ವಿಡಿಯೋಗೆ ಅವರ ಇತ್ತೀಚಿನ ಭಾರತ ಭೇಟಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಮತ್ತಷ್ಟು ದೃಢಪಡಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಿರಿಯಾ ಪ್ರವಾಸದ ವೇಳೆ ರಷ್ಯಾ ಯುದ್ಧ ವಿಮಾನಗಳು ಅಧ್ಯಕ್ಷ ಪುಟಿನ್ ಅವರಿಗೆ ಬೆಂಗಾವಲಾಗಿ ಹೋಗುತ್ತಿದ್ದ 2017ರ ವಿಡಿಯೋವನ್ನು, ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದಾಗ ತೆಗೆದ ದೃಶ್ಯಾವಳಿಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

